ಸಾರಾಂಶ
- 7ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಉದ್ಘಾಟಿಸಿ ಶ್ರೀ ಬಸವಪ್ರಭು ಸ್ವಾಮೀಜಿ ।
- - - ಕನ್ನಡಪ್ರಭ ವಾರ್ತೆ ದಾವಣಗೆರೆಯೋಗ ಮತ್ತು ಪ್ರಕೃತಿ ಚಿಕಿತ್ಸೆಯು ಭಾರತೀಯ ಪರಂಪರೆ ಚಿಕಿತ್ಸೆಯಾಗಿದೆ. ಇಂತಹ ಪ್ರಕೃತಿ ಚಿಕಿತ್ಸೆಗಳು ಹೆಚ್ಚಾದರೆ ಕಾಯಿಲೆಗಳು ಬಾರದಂತೆ ತಡೆಯಲು ಸಾಧ್ಯ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.
ನಗರದ ವಿದ್ಯಾ ನಗರದ ಶ್ರೀಮತಿ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಸೋಮವಾರ 7ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಕೇವಲ ಪಾರ್ಶ್ವವಾಯು, ಸಯಾಟಿಕ, ಬೊಜ್ಜುತನ, ಸಂಧಿವಾದ ಇತ್ಯಾದಿ ದೀರ್ಘಕಾಲಿಕ ತೊಂದರೆ ಸರಿಪಡಿಸುವ ಪದ್ಧತಿಯಾಗಿದರೆ, ರೋಗಗಳು ಬಾರದಂತೆ ತಡೆಯುವ ಮತ್ತು ಆರೋಗ್ಯ ವೃದ್ಧಿಸುವ ಚಿಕಿತ್ಸಾ ಪದ್ಧತಿ ಇದಾಗಿದೆ ಎಂದರು.ಪ್ರಕೃತಿ ಚಿಕಿತ್ಸೆ ದೊಡ್ಡ ಕೇಂದ್ರಗಳಿಗೆ ಹೋಗಿ ಪಡೆಯಬೇಕೆಂದಿಲ್ಲ. ಕ್ಲಿನಿಕ್‌ಗಳಲ್ಲೇ ಪ್ರಕೃತಿ ಚಿಕಿತ್ಸಾ ಪದ್ಧತಿಯಿಂದ ಆರೋಗ್ಯ ಮರಳಿ ಪಡೆಯಬಹುದು. ಇಂದಿನ ಒತ್ತಡಯುಕ್ತ ಬದುಕಿನಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರಗಳಿಗೆ ಹೋಗಿ ತಿಂಗಳ ಕಾಲ ತಂಗುವುದು ಕಷ್ಟಸಾಧ್ಯ. ಹಾಗಾಗಿ, ಇಂತಹ ಯೋಗ, ಪ್ರಕೃತಿ ಚಿಕಿತ್ಸೆ ಆಸ್ಪತ್ರೆಗಳು ಹೆಚ್ಚಾಗುವ ಅಗತ್ಯವಿದೆ ಎಂದರು.
ಪುತ್ತೂರು ಶಲ್ಯ ವೈದ್ಯ ಬಿ.ರಾಮರಾಜು ಮಾತನಾಡಿ, ಪ್ರಕೃತಿ ಚಿಕಿತ್ಸಾ ಪದ್ಧತಿ ಹಳೆ ತಲೆಮಾರಿನಿಂದ ಬಂದ ಚಿಕಿತ್ಸಾ ಪದ್ಧತಿ. ಈ ಚಿಕಿತ್ಸೆ ಮನೆಮದ್ದಿನ ರೂಪದಲ್ಲಿ ಅದೆಷ್ಟೋ ಭಾರತೀಯರ ದೈನಂದಿನ ಭಾಗವಾಗಿದೆ. ಕೇಂದ್ರ ಸರ್ಕಾರವು ಈ ಚಿಕಿತ್ಸಾ ಪದ್ಧತಿ ಬಗ್ಗೆ ಹೆಚ್ಚು ಪ್ರಚುರಪಡಿಸುವ ಉದ್ದೇಶದೊಂದಿಗೆ ನ.18 ಅನ್ನು ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯಾಗಿ 7 ವರ್ಷಗಳ ಹಿಂದೆ ಘೋಷಿಸಲಾಗಿದೆ. ಇದು ಎಲ್ಲರೂ ಅಭಿಮಾನಪಡುವ ಸಂಗತಿ. ಆರೋಗ್ಯದ ದೃಷ್ಟಿಯಿಂದವಲೂ ಈ ಪದ್ಧತಿ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಕೆಲಸ ಇದಾಗಿದೆ ಎಂದರು.ಸಂಸ್ಥೆಯ ಡಾ.ಗಂಗಾಧರ ವರ್ಮ ಮಾತನಾಡಿ, ಪ್ರಕೃತಿ ಚಿಕಿತ್ಸೆಯಿಂದ ಮೂಳೆ, ನರ, ಶ್ವಾಸಕೋಶ, ಜೀರ್ಣಾಂಗ ವ್ಯೂಹ, ಚರ್ಮ, ದೀರ್ಘಕಾಲಿಕ, ಮುಟ್ಟಿನ ಸಮಸ್ಯೆ ಸಂಪೂರ್ಣ ಗುಣಮುವಾಗುತ್ತವೆ. ಇದು ಇಷ್ಟು ವರ್ಷಗಳ ನನ್ನ ಅನುಭವ. 7ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಧ್ಯೇಯವಾಕ್ಯವು ಪ್ರಕೃತಿ ಚಿಕಿತ್ಸೆಯಿಂದ ಆರೋಗ್ಯಯುತ ದೀರ್ಘಾಯುಷ್ಯ ಎಂಬುದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ವಿಂಧ್ಯ ಗಂಗಾಧರ ವರ್ಮ ಮಾತನಾಡಿ, ಪ್ರಕೃತಿ ಚಿಕಿತ್ಸೆ ಸಿದ್ಧಾಂತದ ಪ್ರಕಾರ ದೇಹದಲ್ಲಿ ವಿಷಕಾರಿ ವಸ್ತುಗಳ ಸಂಗ್ರಹಣೆಯಿಂದಾಗಿ ಕಾಯಿಲೆ ಬರುತ್ತವೆ. ವೈದ್ಯರು ಈ ಮೂಲಕಾರಣ ಹುಡುಕಿ ಇಡೀ ದೇಹವನ್ನು ಶುದ್ಧೀಕರಣಗೊಳಿಸುವ ಚಿಕಿತ್ಸೆ ನೀಡುತ್ತಾರೆ. ಅಕ್ಯುಪಂಕ್ಚರ್, ಮಸಾಜ್ ಚಿಕಿತ್ಸೆ, ಫಿಸಿಯೋಥೆರಪಿಯಂಥ ಚಿಕಿತ್ಸೆಗಳಿಂದ ತ್ವರಿತ ರೋಗ ಲಕ್ಷಣಗಳನ್ನು ಪರಿಹರಿಸುವ ಚಿಕಿತ್ಸೆಗಳನ್ನೂ ನೀಡುತ್ತಾರೆ. ವಿಶ್ವಾದ್ಯಂತ ನಮ್ಮ ಚಿಕಿತ್ಸಾ ಪದ್ಧತಿ ಬಗ್ಗೆ ಜಗತ್ತು ಆಸಕ್ತಿ ತೋರುತ್ತಿದೆ ಎಂದು ಹೇಳಿದರು.ಸಂಸ್ಥೆಯ ತುಳಸಿ ರಾಮರಾಜು, ಆಸ್ಪತ್ರೆಯ ವ್ಯವಸ್ಥಾಪಕ ಪ್ರಹ್ಲಾದ್, ಸುಧಾ ಜಾಧವ್, ಪವಿತ್ರಾ, ನಾಗಣ್ಣ, ಗಾಯತ್ರಿ, ಶಿಲ್ಪ, ಶ್ರೀಧರ್, ಅಬ್ದುಲ್ ಸಾಬ್, ಕನಕ ಬಿಂದು, ಸಾಧಕರು, ಸಾರ್ವಜನಿಕರು ಇದ್ದರು.
- - -ಕೋಟ್ ನಾವೆಲ್ಲರೂ ಪ್ರಕೃತಿಯನ್ನು ಕಾಪಾಡುವ, ನಾವು ತಿನ್ನುವ ಹಣ್ಣುಗಳ ಬೀಜಗಳನ್ನು ಮಣ್ಣಿಗೆ ಹಾಕುವ ಮುಖಾಂತರ ಮತ್ತಷ್ಟು ಗಿಡ-ಮರಗಳನ್ನು ಪ್ರಕೃತಿಯಲ್ಲಿ ಹೆಚ್ಚಿಸಿದರೆ ಮಾತ್ರ ಪ್ರಕೃತಿ ಚಿಕಿತ್ಸಾ ಪದ್ಧತಿಗೆ ಉಳಿಗಾಲ. ಪ್ರಕೃತಿಯೇ ಇಲ್ಲದೇ ನೀಡುವ ಪ್ರಕೃತಿ ಚಿಕಿತ್ಸೆ ವ್ಯರ್ಥ
- ತುಳಸಿ ರಾಮರಾಜು, ಸದಸ್ಯೆ, ಆಡಳಿತ ಮಂಡಳಿ- - -