ಸಮಾಜ ಸೇವೆಗೆ ಯುವ ಸ್ವಯಂ ಸೇವಕರ ಅವಶ್ಯಕತೆ ಇದೆ

| Published : Apr 05 2024, 01:03 AM IST

ಸಮಾಜ ಸೇವೆಗೆ ಯುವ ಸ್ವಯಂ ಸೇವಕರ ಅವಶ್ಯಕತೆ ಇದೆ
Share this Article
  • FB
  • TW
  • Linkdin
  • Email

ಸಾರಾಂಶ

ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ, ದೇಶದಲ್ಲಿನ ಯುವ ಸಮುದಾಯ ಸ್ವಯಂ ಸೇವಕರಾಗಿ ಸಮಾಜ ಸೇವೆಗೆ ತೊಡಗಿಸಿಕೊಳ್ಳಬೇಕಾದದ್ದು ತೀರ ಅವಶ್ಯವಿದೆ ಎಂದು ಪಿರಾಮಲ್ ಸಂಸ್ಥೆಯ ಯಾದಗಿರಿ ವಿಭಾಗದ ಪ್ರೊಗ್ರಾಮ್ ಮ್ಯಾನೇಜರ್ ಮಹೇಶ್ ಕುಮಾರ್ ಅವರು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ, ದೇಶದಲ್ಲಿನ ಯುವ ಸಮುದಾಯ ಸ್ವಯಂ ಸೇವಕರಾಗಿ ಸಮಾಜ ಸೇವೆಗೆ ತೊಡಗಿಸಿಕೊಳ್ಳಬೇಕಾದದ್ದು ತೀರ ಅವಶ್ಯವಿದೆ ಎಂದು ಪಿರಾಮಲ್ ಸಂಸ್ಥೆಯ ಯಾದಗಿರಿ ವಿಭಾಗದ ಪ್ರೊಗ್ರಾಮ್ ಮ್ಯಾನೇಜರ್ ಮಹೇಶ್ ಕುಮಾರ್ ಅವರು ಕರೆ ನೀಡಿದರು.

ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸಮಾಜಕಾರ್ಯ ವಿಭಾಗ ಹಾಗೂ ಪಿರಾಮಲ್ ಫೌಂಡೇಷನ್ ಸಂಯುಕ್ತಾಶ್ರಯಗಳಲ್ಲಿ ನಡೆದ ಒಂದು ದಿನದ ‘ಅಭಿಶಿಕ್ಷಣ’ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ಯುವಕರು ಈ ದೇಶದಲ್ಲಿನ ಬಹುದೊಡ್ಡ ಶಕ್ತಿ ಸಂಪನ್ಮೂಲ. ಅದನ್ನು ಸೂಕ್ತ ಸಂದರ್ಭಗಳಲ್ಲಿ ಬಳಕೆಯಾಗಬೇಕು ಎನ್ನುವ ಮಹತ್ವಕಾಂಕ್ಷೆಯನ್ನಿಟ್ಟುಕೊಂಡು ಪಿರಾಮಲ್ ಫೌಂಡೇಷನ್ ದೇಶದ ಹಲವು ಗ್ರಾಮ ಪಂಚಾಯತ್‌ಗಳ ಮಟ್ಟದಲ್ಲಿ ಯುವ ಸಬಲೀಕರಣ, ಸಮುದಾಯ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಕಳೆದ 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತ ಬಂದಿದೆ. ಅದರಂತಯೇ ಯಾದಗಿರಿಯ ಯುವ ಸಮುದಾಯ ತಮ್ಮ ಯುವಶಕ್ತಿಯನ್ನು ಸಮಾಜ ಸೇವೆಗೆ ಸಲ್ಲಿಸುವುದರ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.

ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಉಮೇಶ್ ತೇಜಪ್ಪ ಮಾತನಾಡಿ; ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಯಾದಗಿರಿ ಜಿಲ್ಲೆ ಮೊದಲನೆಯದಾಗಿದೆ. ಈ ಹಣೆಪಟ್ಟಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ಮತ್ತು ಸರ್ಕಾರದ ಅನೇಕ ಇಲಾಖೆಗಳು, ಸಂಘಸಂಸ್ಥೆಗಳು ಮತ್ತು ಸ್ವಯಂ ಸೇವಕರಾಗಿ ಹಲವು ಸಾಹಿತಿಗಳು, ಸಮಾಜದ ಚಿಂತಕರು ಚಿಂತನೆಯನ್ನು ಮಾಡುತ್ತಿದ್ದಾರೆ. ಅದರಂತೆಯೇ ಸಮಾಜಕಾರ್ಯ ವಿಭಾಗದ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ತಮ್ಮ ಅಮೂಲ್ಯವಾದ ಸಮಯವನ್ನು ಈ ತರಹದ ಕೆಲಸಗಳಿಗೆ ನೀಡುವುದರ ಮೂಲಕ ಇಂತಹ ಸಂಸ್ಥೆಗಳಿಗೆ ಸಹಾಯ ಸಹಕಾರ ಮಾಡುವುದು ಒಂದು ಮುಖ್ಯವಾದ ಜವಾಬ್ದಾರಿಯಾಗಿದೆ ಎಂದು ಸಾಮಾಜಿಕ ಹೊಣೆಗಾರಿಕೆಯ ಮಾತುಗಳನ್ನು ಹೇಳಿದರು.

ಕಾರ್ಯಗಾರದಲ್ಲಿ ವಿಭಾಗದ ಅಧ್ಯಾಪಕರಾದ ಲಿಂಗರಾಜ್ ಸಿನ್ನೂರು, ಸಾಬರೆಡ್ಡಿ ಬಂಗಾರಿ, ಡಾ. ಸಿ. ಆರ್. ಕಂಬಾರ, ಶೆಟ್ಟಿಕೇರಾ, ಭೌತಶಾಸ್ತ್ರ ವಿಭಾಗದ ಗೌರೀಶ್ವರಯ್ಯ, ಪಿರಾಮಲ್ ಫೌಂಡೇಷನ್‌ನ ಸಿಬ್ಬಂದಿಗಳಾದ ವಿಶಾಲ ಪಾಟೀಲ್, ಅನೀಲ್ ರೆಡ್ಡಿ, ಪಿರಾಮಲ್ ಗಾಂಧಿ ಫೆಲೋಗಳು ಸೇರಿದಂತೆ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.