ಮುದ್ದಾಪುರಕ್ಕೆ ಜಿಪಂ ಸಿಇಓ ಭೇಟಿ

| Published : Jul 28 2024, 02:01 AM IST

ಸಾರಾಂಶ

ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣ ಹೆಚ್ಚು ಕಂಡು ಬಂದ ಹಿನ್ನೆಲೆ ಜಿಪಂ ಸಿಇಓ ಸೋಮಶೇಖರ್ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಘಿ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಸೊಳ್ಳೆಗಳ ಉತ್ಪತ್ತಿ, ಸೊಳ್ಳೆಗಳ ಕಡಿತದಿಂದಾಗುವ ದುಷ್ಪರಿಣಾಮ, ಸೊಳ್ಳೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಂಡು ಆರೋಗ್ಯದ ಬಗ್ಗೆ ಸರ್ವೇ ಮಾಡಿಸಬೇಕು. ಜತೆಗೆ ಕರಪತ್ರದೊಂದಿಗೆ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಅರಿವು ಮೂಡಿಸಿ, ಕೀಟಜನ್ಯ ರೋಗಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮ ಪಂಚಾಯತಿ ಹಾಗೂ ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಘೀ ಜ್ವರದ ಪಾಸಿಟಿವ್ ಪ್ರಕರಣಗಳು ಹೆಚ್ಚು ಕಂಡು ಬಂದ ಹಿನ್ನೆಲೆ ಭೇಟಿ ನೀಡಿ, ಡೆಂಘೀ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಮಾತನಾಡಿದರು. ಸಾಜನಿಕರ ಮನೆಗಳಲ್ಲಿ ಸೊಳ್ಳೆಯ ಲಾರ್ವಾಗಳು ಉತ್ಪತ್ತಿಯಾಗುವುದನ್ನು ತಡೆಯಬೇಕು. ಇದರ ಜೊತೆಗೆ ಗುಣಮಟ್ಟದ ಲಾರ್ವಾ ಸಮೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಡೆಂಘೀ ಲಕ್ಷಣಗಳು ಕಂಡು ಬಂದ ದಿನದಿಂದ ಜ್ವರ ಕಂಡುಬಂದವರ ಆರೋಗ್ಯ ಸ್ಥಿತಿಯ ಕುರಿತು 14 ದಿನಗಳು ಅನುಪಾಲನೆ ಮಾಡುವುದು ಹಾಗೂ ನಿಗದಿತ ನಮೂನೆಯಲ್ಲಿ ವರದಿ ನೀಡಬೇಕು ಮತ್ತು ಜ್ವರ ಪ್ರಕರಣಗಳ ಸೂಕ್ತ ನಿರ್ವಹಣೆಗಾಗಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಟೆಸ್ಟಿಂಗ್ ಕಿಟ್‌ಗಳು, ಅಗತ್ಯ ಪ್ರಮಾಣದ ಔಷಧಿ ದಾಸ್ತಾನುಗಳ ಲಭ್ಯತೆ ಖಚಿತ ಪಡಿಸಿಕೊಳ್ಳಿ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಡಾ.ಎಸ್ ರಂಗಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್, ಹನುಮಂತಪ್ಪ, ತಾಲೂಕು ಆರೋಗ್ಯ ಅಧಿಕಾರಿ ಡಾ.ರೇಖಾ, ಡಾ. ಗಿರೀಶ್, ತಾಪಂ ಸಹಾಯಕ ನಿರ್ದೇಶಕ ನಿರಂಜನ್, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ರಂಜಿತಾ, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮುರಳಿ, ಕೇಶವಮೂರ್ತಿ ಇದ್ದರು.