ಸಾರಾಂಶ
ಬೆಂಗಳೂರು : ಬಜೆಟ್ ಅಧಿವೇಶನದ ವೇಳೆ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ್ದ ಹಿನ್ನೆಲೆಯಲ್ಲಿ 18 ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಸದನದಿಂದ ಅಮಾನತು ಮಾಡಿ ಮಾ.21 ರಂದು ಹೊರಡಿಸಿದ್ದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ. ಈ ಮೂಲಕ ಬಿಜೆಪಿ ಶಾಸಕರಿಗೆ ಎರಡು ತಿಂಗಳ ಬಳಿಕ ಅಮಾನತು ಶಿಕ್ಷೆಯಿಂದ ಮುಕ್ತಿ ಸಿಕ್ಕಂತಾಗಿದೆ.
ಅಮಾನತು ಆದೇಶದ ವಿರುದ್ಧ ಬಿಜೆಪಿ ಶೀಘ್ರದಲ್ಲೇ ಹೈಕೋರ್ಟ್ ಮೆಟ್ಟಿಲು ಹತ್ತಲು ಸಿದ್ಧತೆ ನಡೆಸಿತ್ತು. ಇದರ ಬೆನ್ನಲ್ಲೇ ಭಾನುವಾರ ಸಂಜೆ ವಿಧಾನಸೌಧದಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಅಮಾನತುಗೊಂಡಿರುವ ಶಾಸಕರು ಈಗಾಗಲೇ ವಿಷಾದ ವ್ಯಕ್ತಪಡಿಸಿರುವುದರಿಂದ ಅಮಾನತು ಹಿಂಪಡೆಯುವಂತೆ ಸಲಹೆ ನೀಡಿದರು.
ಈ ಹಿನ್ನೆಲೆಯಲ್ಲಿ ಮಾ.21 ರಿಂದ ಅನ್ವಯವಾಗುವಂತೆ ಆರು ತಿಂಗಳ ಅವಧಿಗೆ ಸದನದಿಂದ ಅಮಾನತುಗೊಂಡಿದ್ದ 18 ಮಂದಿ ಶಾಸಕರ ಅಮಾನತು ಕ್ರಮವನ್ನು ಎರಡು ತಿಂಗಳಲ್ಲೇ ಹಿಂಪಡೆಯಲಾಗಿದೆ. ಜತೆಗೆ ಅಮಾನತು ಅವಧಿಯಲ್ಲಿ ವಿಧಿಸಿದ್ದ ಷರತ್ತುಗಳನ್ನು ತಕ್ಷಣದಿಂದ ರದ್ದುಗೊಳಿಸಲಾಗಿದೆ. ಅಮಾನತು ಹಿಂಪಡೆದ ಸಭೆಯ ನಿರ್ಣಯದ ಬಗ್ಗೆ ಮುಂದಿನ ಸದನದಲ್ಲಿ ಘಟನೋತ್ತರ ಅನುಮೋದನೆ ಪಡೆಯಲು ತೀರ್ಮಾನಿಸಲಾಗಿದೆ.
ಇದರಿಂದ ವಿರೋಧ ಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್, ವಿಧಾನಸಭೆ ಸದಸ್ಯರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಎಸ್.ಆರ್. ವಿಶ್ವನಾಥ್, ಬೈರತಿ ಬಸವರಾಜು, ಎಂ.ಆರ್.ಪಾಟೀಲ್, ಚನ್ನಬಸಪ್ಪ, ಬಿ.ಸುರೇಶ್ ಗೌಡ, ಉಮಾನಾಥ್ ಎ. ಕೋಟ್ಯಾನ್, ಶರಣು ಸಲಗರ, ಡಾ. ಶೈಲೇಂದ್ರ ಬೆಲ್ದಾಳೆ, ಸಿ.ಕೆ. ರಾಮಮೂರ್ತಿ, ಯಶಪಾಲ್ ಎ. ಸುವರ್ಣ, ಬಿ.ಪಿ.ಹರೀಶ್, ಡಾ.ವೈ.ಭರತ್‌ಶೆಟ್ಟಿ, ಮುನಿರತ್ನ, ಬಸವರಾಜ್ ಮತ್ತಿಮೂಡ್, ಧೀರಜ್ ಮುನಿರಾಜು ಮತ್ತು ಡಾ.ಚಂದ್ರು ಲಮಾಣಿ ಅವರ ಅಮಾನತು ಹಿಂಪಡೆಯಲಾಗಿದ್ದು, ಎಂದಿನಂತೆ ಸದನದ ಒಳಗೆ ಹಾಗೂ ಹೊರಗೆ ಶಾಸಕರಾಗಿ ಎಲ್ಲಾ ಹಕ್ಕು, ಅಧಿಕಾರ ಚಲಾಯಿಸಲು ಅವರಿಗೆ ಅಧಿಕಾರ ದೊರೆತಿದೆ.
ಏನಿದು ಅಮಾನತು ವಿವಾದ?:
ಬಜೆಟ್ ಅಧಿವೇಶನದ ಕೊನೆಯ ದಿನವಾದ ಮಾ.21 ರಂದು ಕೆ.ಎನ್.ರಾಜಣ್ಣ ಆರೋಪಿಸಿದ್ದ ಹನಿಟ್ರ್ಯಾಪ್ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ಗದ್ದಲ ಸೃಷ್ಟಿಸಿದ್ದರು. ಚರ್ಚೆಗೆ ಅವಕಾಶ ನೀಡದ ಸ್ಪೀಕರ್ ಮೇಲೆ ಆಕ್ರೋಶಗೊಂಡು ಸ್ಪೀಕರ್ ಪೀಠದತ್ತ ನುಗ್ಗಿ ಕಾಗದದ ಚೂರುಗಳನ್ನು ಸ್ಪೀಕರ್‌ರತ್ತ ತೂರಿದ್ದರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 348ರ ಪ್ರಕಾರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದ ನಿರ್ಣಯ ಅಂಗೀಕರಿಸಿ 18 ಶಾಸಕರನ್ನು ಅಮಾನತು ಮಾಡಲಾಗಿತ್ತು. ಈ ವೇಳೆ ಅಶ್ವತ್ಥನಾರಾಯಣ್ ಮಾತ್ರ ಸ್ವತಃ ಹೊರ ಹೋಗಿದ್ದು, ಉಳಿದವರನ್ನು ಮಾರ್ಷಲ್‌ಗಳು ಹೊರ ಹಾಕಿದ್ದರು. ಬಳಿಕ ಸ್ಪೀಕರ್ ತೀರ್ಮಾನದ ವಿರುದ್ಧ ಬಿಜೆಪಿಯವರು ಪ್ರತಿಭಟನೆಗಳನ್ನು ನಡೆಸಿ ರಾಜ್ಯಪಾಲರಿಗೂ ದೂರು ನೀಡಿದ್ದರು.
ವಿಷಾದ ವ್ಯಕ್ತಪಡಿಸಿದ್ದರಿಂದ ಅಮಾನತು ವಾಪಸ್: ಖಾದರ್
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್, ಸಾಂವಿಧಾನಿಕ ಪೀಠಕ್ಕೆ ಅಗೌರವ ತೋರಿದ್ದರಿಂದ ಸದನದಿಂದ ಅವರನ್ನು ಆರು ತಿಂಗಳ ಕಾಲ ಅಮಾನತು ಮಾಡಲಾಗಿತ್ತು. ಈಗ ಅವರಿಗೆ ತಮ್ಮ ತಪ್ಪಿನ ಅರಿವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜತೆಗೆ ಅವರು ಮತ್ತೊಮ್ಮೆ ಇಂತಹ ತಪ್ಪು ಮಾಡುವುದಿಲ್ಲ ಎಂಬ ವಿಶ್ವಾಸದಿಂದ ಅಮಾನತು ವಾಪಸು ಪಡೆದಿದ್ದೇವೆ. ಈ ಸಂಬಂಧ ಶಾಸಕರಿಗೆ ಆದೇಶ ಕಳುಹಿಸಲಾಗುವುದು ಎಂದು ಹೇಳಿದರು.
ಅಮಾನತು ವಾಪಸ್ ಪಡೆದಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿ, ಘಟನೆಗೆ ಎಲ್ಲಾ ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ. ಉದ್ದೇಶಪೂರ್ವಕ ಅಗೌರವ ಅಲ್ಲ ಎಂದು ಹೇಳಿದ್ದಾರೆ. ಜತೆಗೆ ಆರ್.ಅಶೋಕ್ ಅವರು ಹಲವು ಬಾರಿ ಭೇಟಿ ಮಾಡಿ, ಪತ್ರ ಬರೆದು ಅಮಾನತು ವಾಪಸ್ ಪಡೆಯುವಂತೆ ಮನವಿ ಮಾಡಿದ್ದರು. ಜತೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ, ಎಸ್.ಸುರೇಶ್ ಕುಮಾರ್ ಅವರೂ ಮನವಿ ಮಾಡಿದ್ದರು. ಹೀಗಾಗಿ ಅಮಾನತು ವಾಪಸು ಪಡೆಯಲಾಗಿದೆ ಎಂದು ಯು.ಟಿ. ಖಾದರ್ ತಿಳಿಸಿದರು.
ರಾಜ್ಯಪಾಲರಿಗೆ ದೂರು ನೀಡಿದ್ದರಿಂದ ಹಾಗೂ ಕೋರ್ಟ್‌ಗೆ ಹೋಗುವ ಸಿದ್ಧತೆ ನಡೆಸಿರುವುದರಿಂದ ಅಮಾನತು ಹಿಂಪಡೆದಿದ್ದೀರಿ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಸ್ಪೀಕರ್ ಅವರಿಗೆ ಈ ಅಧಿಕಾರ ಇದೆ. ಎರಡು ತಿಂಗಳು ಕಾಲಾವಕಾಶ ಇತ್ತು. ಯಾರೂ ನ್ಯಾಯಾಲಯಕ್ಕೆ ಹೋಗಿಲ್ಲ. ಸ್ಪೀಕರ್ ತೀರ್ಮಾನದ ಬಗ್ಗೆ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಆ 18 ಶಾಸಕರೂ ನಮ್ಮ ಸನ್ಮಿತ್ರರೇ. ಹೀಗಾಗಿ ಯಾವುದೇ ಷರತ್ತು ಇಲ್ಲದೆ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೇರಿ ಹಲವರು ಹಾಜರಿದ್ದರು.ಅಮಾನತಾಗಿದ್ದ ಶಾಸಕರ ಪಟ್ಟಿ
ವಿರೋಧಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್, ವಿಧಾನಸಭೆ ಸದಸ್ಯರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಎಸ್.ಆರ್. ವಿಶ್ವನಾಥ್, ಬೈರತಿ ಬಸವರಾಜು, ಎಂ.ಆರ್. ಪಾಟೀಲ್, ಚನ್ನಬಸಪ್ಪ, ಬಿ. ಸುರೇಶ್ ಗೌಡ, ಉಮಾನಾಥ್ ಎ ಕೋಟ್ಯಾನ್, ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ, ಸಿ.ಕೆ. ರಾಮಮೂರ್ತಿ, ಯಶಪಾಲ್ ಎ. ಸುವರ್ಣ, ಬಿ.ಪಿ. ಹರೀಶ್, ಡಾ. ವೈ. ಭರತ್‌ಶೆಟ್ಟಿ, ಮುನಿರತ್ನ, ಬಸವರಾಜ್ ಮತ್ತಿಮೂಡ್, ಧೀರಜ್ ಮುನಿರಾಜು ಮತ್ತು ಡಾ.ಚಂದ್ರು ಲಮಾಣಿ.
ಅಮಾನತುಗೊಂಡಿದ್ದ ಶಾಸಕರಿಗೆ ವಿಧಿಸಿದ್ದ ಷರತ್ತುಗಳೇನು?-
ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವಂತಿರಲಿಲ್ಲ.
- ವಿಧಾನಮಂಡಲದ ಅಥವಾ ವಿಧಾನಸಭೆಯ ಸ್ಥಾಯಿಸಮಿತಿ ಸಭೆಗಳಲ್ಲಿ ಭಾಗವಹಿಸುವಂತಿರಲಿಲ್ಲ.
- ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರ ಹೆಸರಿನಲ್ಲಿ ಯಾವುದೇ ವಿಷಯ ನಮೂದು ಮಾಡುವಂತಿರಲಿಲ್ಲ.
- ಅಮಾನತಿನ ಅವಧಿಯಲ್ಲಿ ಅವರು ನೀಡುವ ಯಾವುದೇ ಸೂಚನೆ ವಿಧಾನಸಭೆ ಸಚಿವಾಲಯ ಸ್ವೀಕರಿಸುವಂತಿರಲಿಲ್ಲ.
- ಅಮಾನತಿನ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವನೆಯಲ್ಲಿ ಮತದಾನ ಮಾಡುವಂತಿರಲಿಲ್ಲ.
- ಆ ಅಮಾನತಿನ ಅವಧಿಯಲ್ಲಿ ಯಾವುದೇ ದಿನಭತ್ಯೆ ಪಡೆಯಲು ಅರ್ಹತೆ ಇರಲಿಲ್ಲ.
ರದ್ದತಿಗೆ ಕಾರಣವೇನು?
- ಹನಿಟ್ರ್ಯಾಪ್ ಬಗ್ಗೆ ಗದ್ದಲ ಏರ್ಪಟ್ಟು 18 ಶಾಸಕರ ಅಮಾನತಾಗಿತ್ತು
- ಅಮಾನತಿಗೆ ಬಿಜೆಪಿ ವಿರೋಧಿಸಿ ಕೋರ್ಟಿಗೆ ಹೋಗಲು ಚಿಂತಿಸಿತ್ತು
- ಇದರ ಬೆನ್ನಲ್ಲೇ ಸ್ಪೀಕರ್, ಸಿಎಂ, ವಿಪಕ್ಷ ನಾಯಕರ ಮಧ್ಯೆ ಸಭೆ
- ಅಮಾನತಿನಿಂದ ಶಾಸಕರ ಕರ್ತವ್ಯಕ್ಕೆ ಅಡ್ಡಿ ಎಂದು ಸಭೆಗೆ ಮನವರಿಕೆ
- ಮತ್ತೆ ಗದ್ದಲ ಹಾಕುವ ನಡವಳಿಕೆ ತೋರಲ್ಲ ಎಂದು ಸಭೆಗೆ ಭರವಸೆ
- ಇದೇ ವಿಶ್ವಾಸದಿಂದ ಎಲ್ ಶಾಸಕರ ಅಮಾನತು ತಕ್ಷಣವೇ ರದ್ದು
ಸ್ಪೀಕರ್‌ಗೆ ಧನ್ಯವಾದ
ಶಾಸಕರ ಅಮಾನತು, ಅವರ ಸಂವಿಧಾನದತ್ತ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟು ಮಾಡಿತ್ತು. ನಮ್ಮ ಆಗ್ರಹ ಮನ್ನಿಸಿ ಶಾಸಕರ ಅಮಾನತು ಆದೇಶ ಹಿಂಪಡೆದಿರುವ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಧನ್ಯವಾದಗಳು
-ಆರ್.ಅಶೋಕ್, ವಿಧಾನಸಭೆ ಪ್ರತಿಪಕ್ಷ ನಾಯಕ
ಅಮಾನತಾಗಿದ್ದ ಶಾಸಕರ ಪಟ್ಟಿದೊಡ್ಡನಗೌಡ ಪಾಟೀಲ್, ಡಾ.ಸಿ.ಎನ್. ಅಶ್ವತ್ಥನಾರಾಯಣ, ಎಸ್.ಆರ್. ವಿಶ್ವನಾಥ್, ಬೈರತಿ ಬಸವರಾಜು, ಎಂ.ಆರ್. ಪಾಟೀಲ್, ಚನ್ನಬಸಪ್ಪ, ಬಿ. ಸುರೇಶ್ ಗೌಡ, ಉಮಾನಾಥ್ ಎ ಕೋಟ್ಯಾನ್, ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ, ಸಿ.ಕೆ. ರಾಮಮೂರ್ತಿ, ಯಶಪಾಲ್ ಎ. ಸುವರ್ಣ, ಬಿ.ಪಿ. ಹರೀಶ್, ಡಾ. ವೈ. ಭರತ್‌ಶೆಟ್ಟಿ, ಮುನಿರತ್ನ, ಬಸವರಾಜ್ ಮತ್ತಿಮೂಡ್, ಧೀರಜ್ ಮುನಿರಾಜು ಮತ್ತು ಡಾ.ಚಂದ್ರು ಲಮಾಣಿ.