ಸಿಎಂ ಬದಲಾವಣೆ ಮತ್ತು ಅಧಿಕಾರ ಹಂಚಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನಡುವಿನ ಮುಸುಕಿನ ಗುದ್ದಾಟ ಮುಂದಿವರಿದಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಪರ ಅಹಿಂದ ಮತ್ತು ಡಿ.ಕೆ.ಶಿವಕುಮಾರ್‌ ಪರ ಒಕ್ಕಲಿಗರು ಮುಖ್ಯಮಂತ್ರಿ ಗಾದಿಗಾಗಿ ಬೇಡಿಕೆ 

 ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲು ಶ್ರಮಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಒಕ್ಕಲಿಗ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಜತೆಗೆ ಒಕ್ಕಲಿಗ ಶಾಸಕರ ರಾಜೀನಾಮೆಗೂ ಆಗ್ರಹಿಸಲಾಗುವುದು ಎಂದು ರಾಜ್ಯ ಒಕ್ಕಲಿಗರ ಸಂಘ ಎಚ್ಚರಿಕೆ ನೀಡಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಲ್‌.ಶ್ರೀನಿವಾಸ್‌, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌ ಅವರ ಶ್ರಮ ಸಾಕಷ್ಟಿದೆ. ಈ ಹಿಂದೆ ಸರ್ಕಾರ ರಚನೆಯಾಗುವಾಗ ಎರಡೂವರೆ ವರ್ಷಗಳ ನಂತರ ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಕಾಂಗ್ರೆಸ್ ಹೈಕಮಾಂಡ್‌ ಒಪ್ಪಂದ ಮಾಡಿತ್ತು. ಈಗ ಸರ್ಕಾರಕ್ಕೆ ಎರಡೂವರೆ ವರ್ಷವಾಗಿದ್ದು, ಹಿಂದಿನ ಮಾತಿನಂತೆ ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಕೆಲಸಕ್ಕೆ ಕೂಲಿ ನೀಡಿ:

ಡಿ.ಕೆ.ಶಿವಕುಮಾರ್‌ ಅವರ ಕೆಲಸಕ್ಕೆ ಕಾಂಗ್ರೆಸ್ ಹೈಕಮಾಂಡ್‌ ಕೂಲಿ ನೀಡಬೇಕು. ಈ ಬಗ್ಗೆ ಶಾಸಕರೂ ಹೈಕಮಾಂಡ್‌ ಅನ್ನು ಆಗ್ರಹಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿ ಸಮಾಜದ ಇತರ ಶ್ರೀಗಳೊಂದಿಗೆ ಸೇರಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಡಿ.ಕೆ.ಶಿವಕುಮಾರ್‌ ಅವರ ಜತೆಗೆ ಇಡೀ ಸಮಾಜ ಇದೆ. ಶಿವಕುಮಾರ್‌ ಅವರಿಗೆ ವಂಚನೆಯಾದರೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಲಾಗುವುದು ಎಂದರು.

ಒಕ್ಕಲಿಗ ಸಮಾಜದ ಬೇರೆ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಸಂಘ ಒಪ್ಪಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸ್‌, ಸದ್ಯಕ್ಕೆ ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು. ನಮ್ಮ ಸಮಾಜದವರಾದ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎನ್ನುವುದು ನಮ್ಮ ಆಗ್ರಹ. ಉಳಿದ ವಿಚಾರಗಳ ಬಗ್ಗೆ ನಾವು ಮಾತನಾಡುವುದಿಲ್ಲ ಎಂದು ತಿಳಿಸಿದರು.

ಶಾಸಕರ ರಾಜೀನಾಮೆಗೆ ಆಗ್ರಹ:

ಸಂಘದ ಮಾಜಿ ಅಧ್ಯಕ್ಷ ಬಿ.ಕೆಂಚಪ್ಪಗೌಡ ಮಾತನಾಡಿ, ಡಿ.ಕೆ.ಶಿವಕುಮಾರ್‌ ಅವರಿಗೆ ಈ ಬಾರಿ ಮುಖ್ಯಮಂತ್ರಿ ಸ್ಥಾನ ನೀಡಲೇಬೇಕು. ಅದಕ್ಕಾಗಿ ಒಕ್ಕಲಿಗರ ಸಂಘ ಎಲ್ಲ ರೀತಿಯ ಹೋರಾಟ ಮಾಡಲಿದೆ. ಡಿ.ಕೆ.ಶಿವಕುಮಾರ್‌ ಅವರಿಗೆ ಸಿಎಂ ಸ್ಥಾನ ನೀಡದಿದ್ದರೆ ಒಕ್ಕಲಿಗ ಶಾಸಕರು ರಾಜೀನಾಮೆ ನೀಡುವಂತೆ ಒತ್ತಡ ಹೇರುತ್ತೇವೆ ಎಂದು ತಿಳಿಸಿದರು.ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ

ಶ್ರೀನಿವಾಸ್ ಅವಿರೋಧ ಆಯ್ಕೆ

ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಕುರಿತು ಮಾತನಾಡಿದ ಕೆಂಚಪ್ಪಗೌಡ, ಒಕ್ಕಲಿಗರ ಸಂಘದ ಹಾಲಿ ಆಡಳಿತ ಮಂಡಳಿ ಅವಧಿ ಇನ್ನೂ ಕೆಲ ವರ್ಷ ಇದೆ. ಹೀಗಾಗಿ ಬೇರೆಯವರಿಗೂ ಅವಕಾಶ ಸಿಗಲಿ ಎಂಬ ಕಾರಣಕ್ಕಾಗಿ ಇತ್ತೀಚೆಗಷ್ಟೇ ಪದಾಧಿಕಾರಿಗಳನ್ನು ಬದಲಾಯಿಸಲಾಗಿದೆ. 35 ಸದಸ್ಯ ಬಲದ ಆಡಳಿತ ಮಂಡಳಿಯ ಎಲ್ಲರೂ ಒಮ್ಮತದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ. ಅಧ್ಯಕ್ಷರಾಗಿ ಎಲ್‌.ಶ್ರೀನಿವಾಸ್‌, ಉಪಾಧ್ಯಕ್ಷರಾಗಿ ಡಾ.ಕೆ.ವಿ.ರೇಣುಕಾಪ್ರಸಾದ್‌, ಎಂ.ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಜಿ.ಗಂಗಾಧರ್‌, ಸಹಾಯಕ ಕಾರ್ಯದರ್ಶಿಯಾಗಿ ಡಾ.ಡಿ.ಕೆ.ರಮೇಶ್‌ ಹಾಗೂ ಖಜಾಂಚಿಯಾಗಿ ಕೆ.ವಿ.ಶ್ರೀಧರ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.