ಕಾರಿನೊಳಕ್ಕೆ ಸಿಗರೇಟ್‌ ತಂದು ಕೊಡದಕ್ಕೆ ಸಿಟ್ಟಿಗೆದ್ದು ಬೈಕ್‌ಗೆ ಕಾರು ಡಿಕ್ಕಿ : ಸವಾರ ಟೆಕಿ ಸಾವು

| N/A | Published : May 18 2025, 01:09 AM IST / Updated: May 18 2025, 04:21 AM IST

Dhar road accident
ಕಾರಿನೊಳಕ್ಕೆ ಸಿಗರೇಟ್‌ ತಂದು ಕೊಡದಕ್ಕೆ ಸಿಟ್ಟಿಗೆದ್ದು ಬೈಕ್‌ಗೆ ಕಾರು ಡಿಕ್ಕಿ : ಸವಾರ ಟೆಕಿ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಕಾರಿನೊಳಕ್ಕೆ ಸಿಗರೇಟ್‌ ತಂದು ಕೊಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಕೋಪಗೊಂಡ ಕಾರು ಚಾಲಕ ದ್ವಿಚಕ್ರ ವಾಹನಕ್ಕೆ ತನ್ನ ಕಾರಿನಿಂದ ಗುದ್ದಿಸಿದ ಪರಿಣಾಮ ಸವಾರ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಕಾರಿನೊಳಕ್ಕೆ ಸಿಗರೇಟ್‌ ತಂದು ಕೊಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಕೋಪಗೊಂಡ ಕಾರು ಚಾಲಕ ದ್ವಿಚಕ್ರ ವಾಹನಕ್ಕೆ ತನ್ನ ಕಾರಿನಿಂದ ಗುದ್ದಿಸಿದ ಪರಿಣಾಮ ಸವಾರ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗಾಣಿಗರಪಾಳ್ಯ ನಿವಾಸಿ ಸಂಜಯ್‌ (29) ಮೃತ ಸವಾರ. ಜೆ.ಪಿ.ನಗರದ ಚೇತನ್‌ (30) ಗಾಯಗೊಂಡಿರುವ ಹಿಂಬದಿ ಸವಾರ. ಮೇ 10ರಂದು ಮುಂಜಾನೆ ಸುಮಾರು 4 ಗಂಟೆಗೆ ಕೋಣನಕುಂಟೆ ಕ್ರಾಸ್‌ ಸಮೀಪದ ವಸಂತಪುರ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ರಾಜರಾಜೇಶ್ವರಿನಗರ ನಿವಾಸಿ ಕಾರು ಚಾಲಕ ಆರ್‌.ಪ್ರತೀಕ್‌(32) ಎಂಬಾತನನ್ನು ಬಂಧಿಸಲಾಗಿದೆ.

ಘಟನೆ ವಿವರ:

ಹಾಸನ ಮೂಲದ ಸಂಜಯ್‌ ಮತ್ತು ಹುಬ್ಬಳ್ಳಿಯ ಚೇತನ್‌ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ಗಳು. ನಗರದ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ವರ್ಕ್‌ ಫ್ರಮ್‌ ಹೋಮ್‌ ಇದ್ದುದ್ದರಿಂದ ಮೇ 9ರ ರಾತ್ರಿ ಗಾಣಿಗರಪಾಳ್ಯದಲ್ಲಿನ ಸಂಜಯ್‌ ನಿವಾಸಕ್ಕೆ ಚೇತನ್‌ ಬಂದಿದ್ದರು. ಇಬ್ಬರು ರಾತ್ರಿ ಕೆಲಸ ಮಾಡಿದ್ದಾರೆ.

ಮೇ 10ರಂದು ಮುಂಜಾನೆ 4 ಗಂಟೆಗೆ ಟೀ ಕುಡಿಯಲು ದ್ವಿಚಕ್ರ ವಾಹನದಲ್ಲಿ ಕೋಣನಕುಂಟೆ ಕ್ರಾಸ್‌ ವಸಂತಪುರ ಮುಖ್ಯರಸ್ತೆಯ ತಳ್ಳುವ ಗಾಡಿ ಬಳಿ ಬಂದಿದ್ದಾರೆ. ಈ ವೇಳೆ ಟೀ ಹಾಗೂ ಸಿಗರೇಟ್‌ ತೆಗೆದುಕೊಂಡು ಸೇವಿಸುವಾಗ, ಅಪರಿಚಿತ ಪ್ರತೀಕ್‌ ಹಾಗೂ ಆತನ ಪತ್ನಿ ಕಾರಿನಲ್ಲಿ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಪ್ರತೀಕ್‌ ಕಾರಿನೊಳಗೆ ಕುಳಿತು ಚೇತನ್‌ಗೆ ಉದ್ದೇಶಿಸಿ, ಸಿಗರೇಟ್‌ ತಂದು ಕೊಡುವಂತೆ ಕೂಗಿದ್ದಾನೆ. ಇದರಿಂದ ಕೋಪಗೊಂಡ ಚೇತನ್‌, ನಾನು ಸಿಗರೇಟ್‌ ತಂದು ಕೊಡುವುದಿಲ್ಲ. ಬೇಕಿದ್ದರೇ ನೀವೇ ಕಾರಿನಿಂದ ಕೆಳಗೆ ಇಳಿದು ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ.

ಇಬ್ಬರೊಂದಿಗೆ ವಾಗ್ವಾದ:

ಇದರಿಂದ ಕೋಪಗೊಂಡ ಪ್ರತೀಕ್‌, ಕಾರಿನಿಂದ ಕೆಳಗೆ ಇಳಿದು ಚೇತನ್‌ ಜತೆಗೆ ವಾಗ್ವಾದಕ್ಕೆ ಮುಂದಾಗಿದ್ದಾನೆ. ಈ ವೇಳೆ ಸಂಜಯ್‌ ಮಧ್ಯಪ್ರವೇಶಿಸಿದ್ದಾನೆ. ಸ್ಥಳೀಯರು ಸಹ ಪ್ರತೀಕ್‌ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಜಗಳ ಬಿಡಿಸಿದ್ದಾರೆ. ಈ ವೇಳೆ ಕಾರಿನಿಂದ ಕೆಳಗೆ ಇಳಿದು ಬಂದ ಪತ್ನಿ ಸಹ ಪ್ರತೀಕ್‌ನನ್ನು ಸಮಾಧಾನಪಡಿಸಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಪ್ರತೀಕ್‌ ಕಾರು ತೆಗೆದುಕೊಂಡು ಸ್ವಲ್ಪ ಮುಂದಕ್ಕೆ ಹೋಗಿದ್ದಾನೆ.

ಕಾದು ಬೈಕ್‌ಗೆ ಡಿಕ್ಕಿಗೆ ಹೊಡೆದ:

ಅಷ್ಟರಲ್ಲಿ ಟೀ ಕುಡಿದು ಸಂಜಯ್‌ ಮತ್ತು ಚೇತನ್‌ ಮನೆಗೆ ವಾಪಸ್‌ ಹೊರಟಿದ್ದಾರೆ. ಟೀ ಅಂಗಡಿಯಿಂದ ಸುಮಾರು 200 ಮೀಟರ್‌ ಮುಂದಕ್ಕೆ ದ್ವಿಚಕ್ರ ವಾಹನ ಚಲಾಯಿಸಿ ಯು ಟರ್ನ್‌ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಸಮಯದಲ್ಲೇ ಕಾರು ಚಾಲಕ ಪ್ರತೀಕ್‌ ಹಿಂದಿನಿಂದ ವೇಗವಾಗಿ ಕಾರು ಚಲಾಯಿಸಿ ಉದ್ದೇಶ ಪೂರ್ವಕವಾಗಿ ಸಂಜಯ್‌ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಅಂಗಡಿಯೊಂದರ ರೋಲಿಂಗ್‌ ಶೆಟರ್‌ಗೆ ದ್ವಿಚಕ್ರ ವಾಹನ ಸಹಿತ ಸಂಜಯ್‌ ಹಾಗೂ ಹಿಂಬದಿ ಸವಾರ ಚೇತನ್‌ ಗುದ್ದಿಕೊಂಡು ಬಿದ್ದಿದ್ದಾರೆ.

ಕಾರು ಚಾಲಕನ ಬಂಧನ:

ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಂಜಯ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಹಿಂಬದಿ ಸವಾರ ಚೇತನ್‌ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಚೇತನ್‌ ನೀಡಿದ ದೂರಿನ ಮೇರೆಗೆ ಸುಬ್ರಮಣ್ಯಪುರ ಠಾಣೆ ಪೊಲೀಸರು ಕಾರು ಚಾಲಕ ಪ್ರತೀಕ್‌ ವಿರುದ್ಧ ಕೊಲೆಗೆ ಯತ್ನ ಪ್ರಕರಣ ದಾಖಲಿಸಿದ್ದರು. ಈ ನಡುವೆ ಮೇ 13ರಂದು ಟೆಕಿ ಸಂಜಯ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹೀಗಾಗಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಕಾರು ಚಾಲಕ ಪ್ರತೀಕ್‌ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆ:

ಕಾರು ಚಾಲಕ ಪ್ರತೀಕ್‌, ಸಂಜಯ್‌ ಹಾಗೂ ಚೇತನ್‌ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದಿರುವ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರರಾದ ಸಂಜಯ್‌ ಮತ್ತು ಚೇತನ್‌ ದ್ವಿಚಕ್ರ ವಾಹನ ಸಮೇತ ಅಂಗಡಿಯೊಂದರ ರೋಲಿಂಗ್‌ ಶೆಟರ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಸಂಜಯ್‌ ಪ್ರಜ್ಞೆ ಕಳೆದುಕೊಂಡಿದ್ದಾರೆ. ಹಿಂಬದಿ ಸವಾರ ಚೇತನ್‌ ಕಾರಿನ ಬಾನೆಟ್‌ ಮೇಲೆ ಎಗರಿ ಬಿದ್ದು ಗಾಯಗೊಂಡಿದ್ದಾರೆ. ಈ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಪ್ರತೀಕ್‌ನನ್ನು ಬಂಧಿಸಿದ್ದಾರೆ.

ಘಟನೆ ದಿನವೇ ಕಾರು ಚಾಲಕ ಪ್ರತೀಕ್‌ ವಿರುದ್ಧ ಕೊಲೆಗೆ ಯತ್ನ ಪ್ರಕರಣ ದಾಖಲಾಗಿತ್ತು. ಇದೀಗ ಸಂಜಯ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದರಿಂದ ಕೊಲೆ ಪ್ರಕರಣವಾಗಿ ಪರಿವರ್ತಿಸಿ ಕಾರು ಚಾಲಕ ಪ್ರತೀಕ್‌ನನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಪ್ರತೀಕ್‌ನ ಪತ್ನಿಯ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ

- ಲೋಕೇಶ್‌ ಜಗಲಾಸಾರ್‌, ದಕ್ಷಿಣ ವಿಭಾಗದ ಡಿಸಿಪಿ 

Read more Articles on