ಸಾರಾಂಶ
- ಇದು ಕೈ ಸರ್ಕಾರ ದಲಿತರಿಗೆ ಮಾಡಿದ ಮೋಸ, ಅನ್ಯಾಯ - ಈ ಬಜೆಟ್‌ನಲ್ಲೂ ದುರ್ಬಳಕೆಯಾದರೆ ತಡೆ ತರ್ತೇವೆ: ಛಲವಾದಿ
- ಇದು ಕೈ ಸರ್ಕಾರ ದಲಿತರಿಗೆ ಮಾಡಿದ ಮೋಸ, ಅನ್ಯಾಯ - ಈ ಬಜೆಟ್‌ನಲ್ಲೂ ದುರ್ಬಳಕೆಯಾದರೆ ತಡೆ ತರ್ತೇವೆ: ಛಲವಾದಿ
ವಿಜಯ್ ಮಲಗಿಹಾಳ
ಕನ್ನಡಪ್ರಭ ವಾರ್ತೆ ಬೆಂಗಳೂರು ರಾಜ್ಯದಲ್ಲಿ ಈಗ ಪರಿಶಿಷ್ಟ ವರ್ಗ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಮೀಸಲಿಟ್ಟ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ದುರ್ಬಳಕೆ ಬಗ್ಗೆ ಚರ್ಚೆ ಜೋರಾಗಿದೆ. ಕೇವಲ ಈ ಸಮುದಾಯಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂಬ ಕಾಯ್ದೆ ರೂಪಿಸಿದ ಬಳಿಕವೂ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಪ್ರಮುಖ ಪ್ರತಿಪಕ್ಷ ಬಿಜೆಪಿ ಸೇರಿ ಹಲವು ಸಂಘ-ಸಂಸ್ಥೆಗಳು ಧ್ವನಿ ಎತ್ತಿವೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಪರಿಶಷ್ಟ ವರ್ಗದವರೂ ಇದ್ದಾರಲ್ಲವೇ ಎಂಬುದು ಸರ್ಕಾರದ ಸಮಜಾಯಿಷಿ. ಒಟ್ಟಾರೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ದುರ್ಬಳಕೆ ಕುರಿತು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ.
ರಾಜ್ಯದಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ದುರ್ಬಳಕೆ ಬಗ್ಗೆ ಚರ್ಚೆ ನಡೆಯುತ್ತಿದೆಯಲ್ವಾ?
ಏನಿದು ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ? ಇದು ಸ್ಪೆಷಲ್ ಕಾಂಪೋನೆಂಟ್ ಪ್ರೋಗ್ರಾಂ. ರಾಷ್ಟ್ರೀಯ ನೀತಿ ಆಯೋಗದ ಅಡಿ ಮಾಡುವಂಥದ್ದು. ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ಗೆ ನಿಗದಿಪಡಿಸುವ ಮೊತ್ತದಲ್ಲಿ ಶೇ.24.1ರಷ್ಟು ಹಣವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಆಸ್ತಿ ಸೃಷ್ಟಿಗೆ ಕೊಡುವುದು. ಏನೋ ಸುಮ್ಮನೆ ಪುಕ್ಕಟೆಯಾಗಿ ಕೊಟ್ಟು ಬಿಡುವುದು ಅಲ್ಲ. ಇದು ಬೇರೆ ಯಾವುದೇ ಉದ್ದೇಶಕ್ಕೆ ವರ್ಗಾವಣೆ ಆಗಬಾರದು, ದುಂದುವೆಚ್ಚ ಆಗಬಾರದು.
ಇಂಥ ಅನುದಾನ ದುರ್ಬಳಕೆ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಆಗುತ್ತಿದೆಯೇ?
ದೇಶದಲ್ಲಿ ಇತರ ಎಲ್ಲ ರಾಜ್ಯಗಳಲ್ಲೂ ಈ ರೀತಿ ಅನುದಾನ ನೀಡಲಾಗುತ್ತದೆ. ಕರ್ನಾಟಕದಲ್ಲಿ ವಿಶೇಷವೇನೆಂದರೆ, ಅದೇ ಉದ್ದೇಶಕ್ಕೆ ಬಳಕೆಯಾಗಬೇಕು, ಅದೇ ಸಮುದಾಯಕ್ಕೆ ಸಿಗಬೇಕು, ಬೇರೆಯದಕ್ಕೆ ಅನುದಾನ ಬಳಸಬಾರದು ಎಂದು ಕಾಯ್ದೆಯನ್ನೇ ರೂಪಿಸಲಾಗಿದೆ. ಈ ರೀತಿಯ ಕಾಯ್ದೆ ಇರುವುದು ದೇಶದ ಮೂರು ರಾಜ್ಯಗಳಲ್ಲಿ ಮಾತ್ರ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ. ನಾವು ಕಾಯ್ದೆ ರೂಪಿಸಿ ಪರಿಶಿಷ್ಟ ಸಮುದಾಯಗಳಿಗೆ ಹಣ ವಿನಿಯೋಗ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತದೆ. ಬೇರೆ ರಾಜ್ಯಗಳಲ್ಲಿ ಕಾಯ್ದೆ ಇಲ್ಲದಿದ್ದರೂ ಪರಿಶಿಷ್ಟ ಸಮುದಾಯಕ್ಕೆ ನಿರ್ದಿಷ್ಟ ಹಣ ವೆಚ್ಚ ಮಾಡಲಾಗುತ್ತದೆ. ಆದರೆ, ಕರ್ನಾಟಕದಲ್ಲಿ ಕಾಯ್ದೆ ಜಾರಿಗೆ ತಂದಿರುವ ಉದ್ದೇಶವೇ ಈಡೇರುತ್ತಿಲ್ಲ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸುವಂತಿಲ್ಲ, ವರ್ಗಾವಣೆ ಮಾಡುವಂತಿಲ್ಲ ಎಂಬುದು ಕಾಯ್ದೆಯಲ್ಲಿದ್ದರೂ ಗ್ಯಾರಂಟಿ ಯೋಜನೆಗಳಿಗೆ ಈ ಹಣ ಬಳಸಲಾಗುತ್ತಿದೆ. ಇದು ಕಾಂಗ್ರೆಸ್ ಸರ್ಕಾರ ದಲಿತರಿಗೆ ಮಾಡಿದ ಮೋಸ, ಅನ್ಯಾಯ.
ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಬಳಸಿಕೊಂಡರೆ ತಪ್ಪೇನು?
ಗ್ಯಾರಂಟಿ ಯೋಜನೆಗಳಿಗಾಗಿ ಕಾಂಗ್ರೆಸ್ ಸರ್ಕಾರ 52 ಸಾವಿರ ಕೋಟಿ ರು. ಬಜೆಟ್‌ನಲ್ಲಿ ನಿಗದಿಪಡಿಸಿದೆ. ಈ ಯೋಜನೆಗಳು ಸರ್ವರಿಗೂ ಅನ್ವಯವಾಗಲಿದೆ. ಕಾಕಾ ಪಾಟೀಲ್ ನಿನಗೂ ಫ್ರೀ, ಮಹಾದೇವಪ್ಪ ನಿನಗೂ ಫ್ರೀ, ನನಗೂ ಫ್ರೀ ಮತ್ತು ನನ್ನ ಹೆಂಡತಿಗೂ ಫ್ರೀ ಎಂಬ ಮಾತನ್ನು ಗ್ಯಾರಂಟಿ ಯೋಜನೆ ಜಾರಿಗೆ ತರುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು. ಈಗ ಕಾಕಾ ಪಾಟೀಲ್‌ಗೆ ಫ್ರೀ ಕೊಟ್ಟಿದ್ದಾರೆ. ಆದರೆ, ಮಹಾದೇವಪ್ಪನಿಗೆ ಯಾಕೆ ಫ್ರೀ ಇಲ್ಲ? ಅಂದರೆ, ಪರಿಶಿಷ್ಟ ವರ್ಗಕ್ಕೆ ಸೇರಿದವರಿಗೆ ಈ ಗ್ಯಾರಂಟಿ ಯೋಜನೆಗಳಿಗೆ ನಿಗದಿಪಡಿಸಿದ ಹಣದಲ್ಲಿ ಸೌಲಭ್ಯ ನೀಡುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಂದ ಆ ವರ್ಗವನ್ನು ವಂಚಿತಗೊಳಿಸಿದಂತಾಯಿತು.
ಪರಿಶಿಷ್ಟ ವರ್ಗದವರಿಗೂ ಗ್ಯಾರಂಟಿ ಯೋಜನೆಗಳ ಲಾಭ ದೊರಕುತ್ತಿರುವುದರಿಂದ ಅನುದಾನ ವರ್ಗಾವಣೆ ಮಾಡಿಕೊಳ್ಳಬಹುದಲ್ಲವೇ?
ಇಲ್ಲ. ಪರಿಶಿಷ್ಟರ ಕಲ್ಯಾಣಕ್ಕೆ ಶಾಲೆ, ಹಾಸ್ಟೆಲ್, ವಿದ್ಯಾರ್ಥಿ ವೇತನ, ಸ್ವಯಂ ಉದ್ಯೋಗಕ್ಕೆ ಸಾಲ, ಕಾರ್ಖಾನೆ ಪ್ರಾರಂಭಕ್ಕೆ ಜಾಗ, ಸಾಲ ನೀಡಿಕೆ, ಟ್ಯಾಕ್ಸಿ ವಿತರಣೆ, ಭೂಹೀನರಿಗೆ ನಿಗಮಗಳ ಮೂಲಕ ಭೂಮಿ ನೀಡುವುದು, ಮನೆ ನಿರ್ಮಾಣ, ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆಸುವುದು ಮತ್ತಿತರ ಕಾರ್ಯಗಳಿಗೆ ಈ ಹಣ ಬಳಸಬೇಕು. ಗ್ಯಾರಂಟಿ ಯೋಜನೆಗಳಿಂದ ಆಸ್ತಿ ಸೃಷ್ಟಿ (ಅಸ್ಸೆಟ್ ಕ್ರೀಯೇಷನ್) ಆಗುವುದಿಲ್ಲ. ಪರಿಶಿಷ್ಟ ವರ್ಗದ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರು. ನೀಡಿದರೆ, ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದರೆ ಆಸ್ತಿ ಗಳಿಸಿಕೊಟ್ಟಂತೆ ಅಗುವುದಿಲ್ಲ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ, 75 ಯೂನಿಟ್‌ವರೆಗೆ ವಿದ್ಯುತ್ ಉಚಿತ ಸೌಲಭ್ಯ ಇರುವಾಗ ಈಗ ಗೃಹಜ್ಯೋತಿ ಯೋಜನೆ ನೀಡುವ ಅಗತ್ಯ ಇರಲಿಲ್ಲ.
ಹಾಗಿದ್ದರೆ ಸರ್ಕಾರ ಯಾವ ಲೆಕ್ಕಾಚಾರದ ಮೇಲೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ?
ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ವರ್ಗದವರನ್ನು ಪರಿಗಣಿಸಿ ಅಷ್ಟು ಹಣವನ್ನು ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದಿಂದ ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದ್ದಾರೆ. ನಮ್ಮ ಸಮುದಾಯದ ಹೆಣ್ಣು ಮಕ್ಕಳು ಸರ್ಕಾರಿ ಬಸ್ಸುಗಳಲ್ಲಿ ಅಷ್ಟಾಗಿ ಓಡಾಡುವುದಿಲ್ಲ. ಅವರು ಬೆಳಗ್ಗೆಯಿಂದ ಸಂಜೆವರೆಗೆ ಕೂಲಿ ಮಾಡುವವರು. ಆದರೂ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ವರ್ಗದ ಹೆಣ್ಣು ಮಕ್ಕಳನ್ನು ಗಣನೆಗೆ ತೆಗೆದುಕೊಂಡು ಹಣವನ್ನು ಆ ಖಾತೆಗೆ ಹಾಕಿಕೊಂಡು ಬಿಡುತ್ತಿದ್ದಾರೆ. ನಮ್ಮ ಸಮುದಾಯದ ಹೆಸರಿನಲ್ಲಿ ಬೇರೆಯವರು ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ. ಇದು ಅನ್ಯಾಯ. ನಮಗಿದ್ದ ಉಚಿತ ವಿದ್ಯುತ್ ಅನ್ನು ಬೇರೆಯವರು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನು ತಿರುಗಿಸಿ ಪರಿಶಿಷ್ಟ ವರ್ಗದವರಿಗೆ ಮೀಸಲಿಟ್ಟ ಹಣ ಬೇರೆಯವರಿಗೆ ನೀಡಲು ಆಗುವುದಿಲ್ಲ, ಆ ವರ್ಗಕ್ಕೇ ನೀಡಬೇಕು ಎಂದು ಸರ್ಕಾರ ಹೇಳುತ್ತದೆ. ಸಾಮೂಹಿಕವಾಗಿ ಅಥವಾ ಸರ್ವರಿಗಾಗಿ ರೂಪಿಸಿರುವ ಯೋಜನೆಗೆ ಬೇರೆ ಹಣವನ್ನು ವಿನಿಯೋಗಿಸಬೇಕೇ ಹೊರತು ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಹಣವನ್ನು ಅಲ್ಲ.
ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂಬ ಕಾಯ್ದೆ ರೂಪಿಸಿದ್ದು ಇದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಲವೇ?
ಹೌದು. ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ವೇಳೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂಬ ಕಾಯ್ದೆ ರೂಪಿಸಲಾಯಿತು. ಇದನ್ನು ನಾವು ಅಲ್ಲಗಳೆಯುತ್ತಿಲ್ಲ. ಆದರೆ, ನೀವೇ ಕಾಯ್ದೆ ರೂಪಿಸಿ ಈಗ ಅದರ ವಿರುದ್ಧ ಕೆಲಸ ಮಾಡುತ್ತಿದ್ದೀರಲ್ಲ ಎಂಬುದೇ ನಮ್ಮ ಆಕ್ಷೇಪ. ಕಾಯ್ದೆ ರೂಪಿಸದೇ ಇದ್ದಿದ್ದರೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿದ್ದರೂ ನಾವು ಪ್ರಶ್ನೆ ಮಾಡಲು ಆಗುತ್ತಿರಲಿಲ್ಲ.
ಈಗ ಪ್ರತಿಪಕ್ಷವಾಗಿ ಬಿಜೆಪಿ ಈ ಕುರಿತ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತದೆಯೇ?
ನಾನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸದನದ ಒಳ ಮತ್ತು ಹೊರಗೆ ಬಹಳ ಪ್ರಯತ್ನ ಮಾಡಿದೆ. ಹೋರಾಟ ಮಾಡಿದೆ. ಆದರೆ, ಸರ್ಕಾರ ಬಗ್ಗಲಿಲ್ಲ. ಹೀಗಾಗಿ, ಪಕ್ಷದ ಮುಖಂಡರ ಜತೆ ಚರ್ಚಿಸಿ ಈ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ದುರ್ಬಳಕೆ ಕೇವಲ ಪರಿಶಿಷ್ಟ ವರ್ಗದವರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇಡೀ ದಲಿತ ಸಮುದಾಯದ ಪರವಾಗಿ ಪಕ್ಷ ನಿಲ್ಲಬೇಕು, ಆಂದೋಲನ ರೂಪಿಸಬೇಕು ಎಂಬ ಒತ್ತಾಯ ಮಾಡಿದೆ. ಅದಕ್ಕೆ ಪಕ್ಷದ ರಾಜ್ಯಾಧ್ಯಕ್ಷರು ಸೇರಿ ಎಲ್ಲ ನಾಯಕರು ಸಹಮತ ಸೂಚಿಸಿದರು. ಹೀಗಾಗಿ, ಈಗ ಅದು ಜನಾಂದೋಲನವಾಗಿ ರೂಪುಗೊಳ್ಳುತ್ತಿದೆ.
ಈ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ದುರ್ಬಳಕೆ ಬಗ್ಗೆ ರಾಜ್ಯದ ದಲಿತ ಸಂಘಟನೆಗಳು ಹೇಳಿಕೊಳ್ಳುವಂಥ ವಿರೋಧ ವ್ಯಕ್ತಪಡಿಸಲಿಲ್ಲವಲ್ಲ?
ಹೌದು. ಸಣ್ಣ ಸಣ್ಣ ವಿಚಾರಕ್ಕೂ ಬೀದಿಗಿಳಿದು ಹೋರಾಟ ದಲಿತ ಸಂಘಟನೆಗಳು ಈ ಬಗ್ಗೆ ಚಕಾರ ಎತ್ತಲಿಲ್ಲ. ಅಂಥ ಸಂಘಟನೆಗಳು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಜತೆ ಸೇರಿಕೊಂಡಿವೆ. ಸಮುದಾಯಕ್ಕೆ ಅನ್ಯಾಯವಾದಾಗಲೂ ಸಂಘಟನೆಗಳು ಧ್ವನಿ ಎತ್ತದಿದ್ದಾಗ ನಾವು ಪಕ್ಷವಾಗಿ ಹೋರಾಟ ಮಾಡುವ ನಿರ್ಧಾರಕ್ಕೆ ಕೈಗೊಳ್ಳಬೇಕಾಯಿತು. ಈಗ ಚರ್ಚೆ, ಹೋರಾಟ ಆರಂಭವಾಗಿದೆ. ಕಳೆದ ಭಾನುವಾರ ದಲಿತ ಸಂಘಟನೆಗಳ ದುಂಡು ಮೇಜಿನ ಸಭೆ ನಡೆಸಿದೆ. ಸುಮಾರು 60ರಿಂದ 70 ಸಂಘಟನೆಗಳ ಪದಾಧಿಕಾರಿಗಳು ಅದರಲ್ಲಿ ಪಾಲ್ಗೊಂಡು ಚರ್ಚೆ ನಡೆಸಿದರು. ಬಿಜೆಪಿ ದಲಿತರ ವಿರೋಧಿ ಎಂದು ಕಾಂಗ್ರೆಸ್ ಎತ್ತಿ ಕಟ್ಟಿದ್ದರು. ನಮ್ಮಲ್ಲಿನ ಕೆಲ ನಾಯಕರು ದಲಿತ ಸಂಘಟನೆಗಳ ಮುಖಂಡರನ್ನು ಹತ್ತಿರ ಕರೆದುಕೊಳ್ಳುವುದಾಗಲಿ, ಪ್ರೀತಿಯಿಂದ ಮಾತನಾಡುವುದಾಗಲಿ ಮಾಡುತ್ತಿರಲಿಲ್ಲ. ಈಗ ನಾನು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದೇನೆ.
ಬಿಜೆಪಿಯನ್ನು ದಲಿತ ವಿರೋಧಿ ಎನ್ನುವವರಿಗೆ ಕಾಂಗ್ರೆಸ್ ಸರ್ಕಾರದ ಈ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ದುರ್ಬಳಕೆ ತಪ್ಪು ಎನ್ನುವುದು ಗೊತ್ತಾಗಲಿಲ್ಲವೇ?
ಕೆಲ ದಲಿತ ಸಂಘಟನೆಗಳ ಮುಖಂಡರು ಕಾಂಗ್ರೆಸ್ಸಿನ ಅಡಿಯಾಳಾಗಿದ್ದಾರೆ. ಇತ್ತೀಚೆಗೆ ಅವರಿಗೂ ಅರಿವು ಮೂಡುತ್ತಿದೆ. ಇನ್ನಾದರೂ ಕಾಂಗ್ರೆಸ್ ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣವನ್ನು ನಮ್ಮ ದಲಿತ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು.
ಬಜೆಟ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ದಲಿತ ಸಂಘಟನೆಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ಚರ್ಚೆಯಾಗಲಿಲ್ಲವೇ?
ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ಜಾಣತನ ತೋರಿದೆ. ಬಜೆಟ್ ಪೂರ್ವಭಾವಿ ಸಭೆಗೆ ಆಯ್ದ 50ರಿಂದ 60 ದಲಿತ ಮುಖಂಡರನ್ನು ಕರೆದಿದ್ದರೆ ಈ ವಿಷಯವೂ ಸೇರಿ ಉತ್ತಮ ಚರ್ಚೆ, ಸಲಹೆಗಳು ಮೂಡುತ್ತಿದ್ದವು. ಆದರೆ, ಸರ್ಕಾರ ಉದ್ದೇಶಪೂರ್ವಕವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರನ್ನು ಆಹ್ವಾನಿಸಿತ್ತು. ಪರಿಣಾಮ ಗದ್ದಲ ಉಂಟಾಯಿತು. ಕರೆದಂತೂ ಆಯಿತು, ಮುಖ್ಯವಾದ ವಿಷಯ ಚರ್ಚೆಗೆ ಬರದಂತೆ ನೋಡಿಕೊಂಡಂತೆಯೂ ಆಯಿತು.
ಅಂದರೆ, ಸರ್ಕಾರ ಈ ಬಾರಿಯ ಬಜೆಟ್ ಬಳಿಕವೂ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವುದು ನಿಶ್ಚತವಾದಂತಾಗಿದೆ?
ಒಂದು ವೇಳೆ ಸರ್ಕಾರ ಈ ಬಾರಿಯೂ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡರೆ ನಾವು ನ್ಯಾಯಾಲಯದ ಮೆಟ್ಟಿಲು ಏರುತ್ತೇವೆ. ತಡೆಯಾಜ್ಞೆಯನ್ನೂ ತರುತ್ತೇವೆ.
ಈ ವಿಷಯದಲ್ಲಿ ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಅವಕಾಶವಿದೆಯೇ?
ಖಂಡಿತ ಅವಕಾಶ ಇದೆ. ಇದು ಕಾಯ್ದೆ. ಈ ಕಾಯ್ದೆಯನ್ನು ಯಾರು ಉಲ್ಲಂಘಿಸಿದರೂ ತಪ್ಪೇ. ಕಾಯ್ದೆ ಇರದೇ ಇದ್ದಲ್ಲಿ ನಾವು ಏನೂ ಮಾಡಲು ಆಗುತ್ತಿರಲಿಲ್ಲ. ಈ ಹಣವನ್ನು ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ನಾವು ಸರ್ಕಾರವನ್ನು ಆಗ್ರಹಿಸಬಹುದೇ ಹೊರತು ಕುತ್ತಿಗೆ ಪಟ್ಟಿ ಹಿಡಿದು ಕೇಳುವುದಕ್ಕೆ ಆಗುವುದಿಲ್ಲ. ಹೀಗಾಗಿ, ಅಂತಿಮವಾಗಿ ನ್ಯಾಯಾಲಯದಿಂದ ಏನು ಆದೇಶ ಬರುತ್ತದೆ ಅದನ್ನು ಕಾದು ನೋಡಬೇಕಾಗುತ್ತದೆ
ಅಹಿಂದ ಪರ ನಿಲುವು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ದಲಿತ ವಿರೋಧಿ ಆಗಲು ಸಾಧ್ಯವೇ? ನೋಡಿ, ಸಿದ್ದರಾಮಯ್ಯ ಅವರು ಒಳಗಡೆಯೇ ವಿಷ ಇಟ್ಟುಕೊಂಡಿರುವ ವ್ಯಕ್ತಿ. ಮೊದಲಿನಿಂದಲೂ ದಲಿತ ವಿರೋಧಿ ನೀತಿಯನ್ನೇ ಅನುಸರಿಸಿಕೊಂಡು ಬಂದಿದ್ದಾರೆ. ಇದೊಂದು ರೀತಿ ನಯವಂಚಕತನ. ಮೇಲೆ ಪ್ರೀತಿ ತೋರಿಸಿ ಜೊತೆಯಲ್ಲಿ ಇಟ್ಟುಕೊಳ್ಳುತ್ತಾರೆ. ನಂಬಿಕೆ ಬಂದ ಮೇಲೆ ಅವರು ನಮಗೆ ಮೋಸ ಮಾಡುತ್ತಿದ್ದರೂ ಅದನ್ನು ಅನುಮಾನಿಸುವುದಕ್ಕೆ ಸಾಧ್ಯವಾಗುವುದಿಲ್ಲ.