ಸಾರಾಂಶ
ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ ತುಂಬಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಗಳು ತಂದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ವಿಶೇಷ ಲೇಖನವನ್ನು ಬರೆದಿದ್ದಾರೆ.
-ಸಿದ್ದರಾಮಯ್ಯ,
ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ನೆಲ, ಜಲ, ಭಾಷೆಯ ವಿಷಯಗಳಿಗೆ ಸಂಬಂಧಿಸಿದಂತೆ ಭವಿಷ್ಯದ ದಿನಗಳಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುತ್ತಾ, ಜಾಗತಿಕ ಭೂಪಟದಲ್ಲಿ ಸರ್ವಾಂಗೀಣ ಅಭಿವೃದ್ಧಿ, ಸಮಾನತೆಗೆ ಮತ್ತೊಂದು ಹೆಸರಾಗಿ ಕರ್ನಾಟಕವನ್ನು ರೂಪಿಸುವ ಗುರಿಯನ್ನು ಈಡೇರಿಸಲು ನಾವು ಬದ್ಧ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗಳಿಸಿದ ಗೆಲುವು ಹಲವು ಕಾರಣಗಳಿಂದಾಗಿ ಐತಿಹಾಸಿಕವಾದುದು. ಅದು ಭಾರತದ ರಾಜಕೀಯವನ್ನು ಇತ್ತೀಚೆಗೆ ರೋಗದಂತೆ ಕಾಡುತ್ತಾ ಬಂದಿರುವ ಕೋಮುವಾದ, ರಾಜಕೀಯ ಅಭದ್ರತೆ, ದುರಾಡಳಿತ ಮತ್ತು ಭ್ರಷ್ಟಾಚಾರವನ್ನು ರಾಜ್ಯದ ಪ್ರಜ್ಞಾವಂತ ಮತದಾರರು ಸ್ಪಷ್ಟವಾಗಿ ತಿರಸ್ಕರಿಸಿದ್ದ ಜನಾದೇಶ. ಇದು ಕೇವಲ ನಕಾರಾತ್ಮಕ ಫಲಿತಾಂಶ ಅಲ್ಲ, ಕಾಂಗ್ರೆಸ್ ಪಕ್ಷ ಮಾತ್ರ ಜಾತ್ಯತೀತ, ಸುಭದ್ರ, ಭ್ರಷ್ಟಾಚಾರ ಮುಕ್ತ ಮತ್ತು ದಕ್ಷ ಆಡಳಿತದ ಸರ್ಕಾರ ನೀಡಬಲ್ಲದು ಎಂಬ ಸಂದೇಶವನ್ನು ನೀಡಿದ್ದ ಫಲಿತಾಂಶ.
ರಾಜ್ಯದ ಜನರ ನಿತ್ಯದ ಬದುಕು ಬೆಲೆ ಏರಿಕೆ, ನಿರುದ್ಯೋಗ, ಸಾಮಾಜಿಕ ಅಭದ್ರತೆಗಳಿಂದ ದುರ್ಬರವಾಗಿತ್ತು. ಅನ್ನ, ಅಕ್ಷರ, ಆರೋಗ್ಯ, ಉದ್ಯೋಗದ ಬಗ್ಗೆ ಮಾತನಾಡಬೇಕಾದ, ಅಭಿವೃದ್ಧಿಯ ವಿಚಾರವನ್ನು ಚಿಂತಿಸಬೇಕಾದ, ಸಾಮಾಜಿಕ ಭದ್ರತೆಯನ್ನು ಕಲ್ಪಿಸಬೇಕಾದ ಪ್ರಭುತ್ವ ಅದರಿಂದ ವಿಮುಖವಾಗಿ ಸಮಾಜವನ್ನು ಒಡೆಯುವ ಭಾಷೆ, ಅಶಾಂತಿಯನ್ನು ಸೃಷ್ಟಿಸುವ ಕೆಲಸಗಳಿಗೆ ಕುಮ್ಮಕ್ಕು ನೀಡುತ್ತಿತ್ತು. ಕೋಮುದ್ವೇಷ ಭಾವನೆಗಳನ್ನು ಪ್ರಚೋದಿಸಿ ಸುಲಭವಾಗಿ ಅಧಿಕಾರವನ್ನು ಹಿಡಿಯುವ ಕುರಿತು ಕನಸು ಕಾಣುತ್ತಿತ್ತು. ಇಂತಹ ಕುಟಿಲ ಆಲೋಚನೆಯ ಶಕ್ತಿಗಳಿಗೆ ರಾಜ್ಯದ ಜನತೆ ಮರ್ಮಾಘಾತವಾಗುವಂತಹ ಪೆಟ್ಟನ್ನು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ನೀಡಿತ್ತು.
ಜನ ಮಾನಸದಲ್ಲಿ ಆಡಳಿತದ ರುಚಿ
2013ರಲ್ಲಿ ನನ್ನದೇ ನೇತೃತ್ವದ ಸರ್ಕಾರವು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಚಾಚೂ ತಪ್ಪದೆ ಜಾರಿಗೊಳಿಸಿದ್ದ ಉದಾಹರಣೆ ಜನತೆಯ ಮುಂದಿತ್ತು. ಕಾಂಗ್ರೆಸ್ ಸರ್ಕಾರವೆಂದರೆ ಅದು ನುಡಿದಂತೆ ನಡೆವ ಸರ್ಕಾರ ಎನ್ನುವ ಭಾವನೆ ಜನರ ಮನಸ್ಸಿನಿಂದ ಮಾಸಿರಲಿಲ್ಲ. ನಾವು ಈ ಹಿಂದಿನ ಅವಧಿಯಲ್ಲಿ ರೂಪಿಸಿ, ಕಾರ್ಯಗತಗೊಳಿಸಿದ್ದ ಯೋಜನೆಗಳ ಫಲಾನುಭವವನ್ನು ಜನತೆ ಕಂಡಿದ್ದರು. ಎಂತಹದ್ದೇ ಕಷ್ಟಗಳನ್ನು ಎದುರಿಸಿಯಾದರೂ ಸರಿ ತಾನು ನೀಡಿರುವ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಕಾಂಗ್ರೆಸ್ ಸಮರ್ಥವಾಗಿ ಅನುಷ್ಠಾನಗೊಳಿಸಲಿದೆ ಎನ್ನುವ ತುಂಬು ವಿಶ್ವಾಸದಿಂದ ಅವರು ನಮ್ಮನ್ನು ಅಭೂತಪೂರ್ವವಾಗಿ ಆಶೀರ್ವದಿಸಿ ಅಧಿಕಾರದ ಚುಕ್ಕಾಣಿಯನ್ನು ನಮ್ಮ ಕೈಗೆ ನೀಡಿದರು.
ಜನತೆ ನಮ್ಮ ಮೇಲೆ ಇರಿಸಿದ ಭರವಸೆಯನ್ನು ನಾವು ಹುಸಿಹೋಗಲು ಬಿಡಲಿಲ್ಲ. ರಾಜ್ಯದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನವೇ ಸಚಿವ ಸಂಪುಟ ಸಭೆ ನಡೆಸಿ ರಾಜ್ಯದ ಜನತೆಗೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ತಾತ್ವಿಕ ನಿರ್ಣಯವನ್ನು ಕೈಗೊಂಡೆವು. ಅದೇ ರೀತಿ, ಒಂದು ವರ್ಷದ ಅವಧಿಯಲ್ಲಿ ಎಲ್ಲ ಯೋಜನೆಗಳನ್ನು ಜಾರಿಗೊಳಿಸಿ ಫಲಾನುಭವಿಗಳು ಅವುಗಳ ಲಾಭವನ್ನು ಸಮರ್ಥವಾಗಿ ಪಡೆಯುವಂತೆ ಮಾಡಿದ್ದೇವೆ. ಈಗ ಮಧ್ಯವರ್ತಿಗಳಿಲ್ಲದೆ ನೇರವಾಗಿ ಜನರ ಬ್ಯಾಂಕ್ ಖಾತೆಗಳಿಗೆ ಸಹಾಯಧನ, ಪರಿಹಾರ, ಪ್ರೋತ್ಸಾಹಧನ ಮುಂತಾದವುಗಳನ್ನು ನೀಡಲಾಗುತ್ತಿದೆ.
ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯಡಿ (Universal Basic Income) ರೂಪಿತವಾದ ನಮ್ಮ ಗ್ಯಾರಂಟಿ ಯೋಜನೆಗಳು ಇಂದು ಅನ್ನಭಾಗ್ಯ ಯೋಜನೆಯ ಮೂಲಕ ಆಹಾರ ಭದ್ರತೆಯನ್ನು, ಗೃಹಜ್ಯೋತಿಯ ಮೂಲಕ ಇಂಧನ ಖಾತರಿಯನ್ನು ನಾಡಿನ ಜನತೆಗೆ ಒದಗಿಸಿವೆ. ಗೃಹಲಕ್ಷ್ಮೀ ಯೋಜನೆಯು ಆರ್ಥಿಕವಾಗಿ ಹಿಂದುಳಿದಿರುವ ಈ ನಾಡಿನ ಕುಟುಂಬಗಳ ಯಜಮಾನಿಯರಿಗೆ ಮಾಸಿಕ ₹2 ಸಾವಿರ ಒದಗಿಸುವ ಮೂಲಕ ಅವರ ಕನಿಷ್ಠ ಅಗತ್ಯಗಳಿಗೆ ಬೆಂಗಾವಲಾಗಿದೆ. ಅದೇ ರೀತಿ, ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಪ್ರಯಾಣದ ಖಾತರಿಯನ್ನು ನೀಡಿ ಅವರು ತಮ್ಮ ಓಡಾಟಗಳಿಗೆ ಮತ್ತೊಬ್ಬರನ್ನು ಆಶ್ರಯಿಸದಂತೆ ಸ್ವಾವಲಂಬಿಗಳಾಗಿಸಿದೆ. ಯುವನಿಧಿ ಯೋಜನೆಯು ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ₹3,000 ಹಾಗೂ ಡಿಪ್ಲೊಮಾ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ₹1,500 ನಿರುದ್ಯೋಗ ಭತ್ಯೆಯನ್ನು ನೀಡುವ ಮೂಲಕ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿ ಉತ್ತಮ ಉದ್ಯೋಗಾವಕಾಶಗಳಿಗೆ ತರಬೇತಿ ಪಡೆಯಲು ಅವಕಾಶ ಕಲ್ಪಿಸಿದೆ.
ನಮ್ಮ ಗ್ಯಾರಂಟಿ ಯೋಜನೆಗಳು ಎಷ್ಟೊಂದು ಪ್ರಭಾವಶಾಲಿಯೆಂದರೆ ಇದನ್ನು ಬಿಟ್ಟಿಭಾಗ್ಯ, ಜನರನ್ನು ಸೋಮಾರಿಗಳನ್ನಾಗಿ ಮಾಡುವ ದೌರ್ಭಾಗ್ಯ, ಸರ್ಕಾರದ ಖಜಾನೆಯನ್ನು ಖಾಲಿ ಮಾಡುವ ಲೂಟಿ ಭಾಗ್ಯ ಎಂದೆಲ್ಲ ನಂಜು ಕಾರುತ್ತಿದ್ದ ಭಾರತೀಯ ಜನತಾ ಪಕ್ಷ ಕೊನೆಗೆ ಇದೇ ಗ್ಯಾರಂಟಿ ಯೋಜನೆಗಳ ನಕಲು ಹೊಡೆದು ಚುನಾವಣಾ ಭರವಸೆಗಳಾಗಿ ಘೋಷಿಸತೊಡಗಿದೆ. ಇದು ನಮ್ಮ ಗ್ಯಾರಂಟಿ ಯೋಜನೆಗಳ ಯಶಸ್ಸಿಗೆ ಬೇರೆ ಸರ್ಟಿಫಿಕೆಟ್ ಬೇಕಿಲ್ಲ ಎಂದು ನಾನು ತಿಳಿದುಕೊಂಡಿದ್ದೇನೆ.
ನಮ್ಮ ಗ್ಯಾರಂಟಿ ಯೋಜನೆಗಳ ಯಶೋಗಾಥೆಯನ್ನು ಅಧ್ಯಯನ ಮಾಡಲು ದೇಶ ವಿದೇಶಗಳ ವಿಶ್ವವಿದ್ಯಾಲಯಗಳು, ವಿದ್ವಾಂಸರು ಬರತೊಡಗಿದ್ದಾರೆ. ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಸರ್ಕಾರದ ಸಚಿವರು ರಾಜ್ಯಕ್ಕೆ ಬಂದು ನಮ್ಮ ಶಕ್ತಿ ಮುಂತಾದ ಯೋಜನೆಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಕೇರಳದಿಂದ ಹಿರಿಯ ಅಧಿಕಾರಿಗಳ ತಂಡ ಬಂದು ಅಧ್ಯಯನ ಮಾಡಿಕೊಂಡು ಹೋಗಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಸಾರಿಗೆ ಸಚಿವರಾದ ಶ್ರೀಯುತ ಪ್ರತಾಪ್ ಸರನಾಯಕ್ ಸೇರಿದಂತೆ ಅಲ್ಲಿನ ಸಾರಿಗೆ ಸಂಸ್ಥೆಗಳ ಮುಖ್ಯಸ್ಥರು, ಅಧಿಕಾರಿಗಳು ಬಂದು ಅಧ್ಯಯನ ಮಾಡಿಕೊಂಡು ಹೋದರು.
ಕೇಂದ್ರ ಸರ್ಕಾರಕ್ಕೆ ಸೇರಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಷ್ಟ್ರೇಶನ್ ಸಂಸ್ಥೆ ಗೃಹಲಕ್ಷ್ಮೀ ಮತ್ತು ಶಕ್ತಿ ಯೋಜನೆಗಳ ಅಧ್ಯಯನ ಮಾಡಿ ಪ್ರಶಂಸೆಯ ಮಾತುಗಳೊಡನೆ ವರದಿ ನೀಡಿದೆ. ವಿಶ್ವ ಸಂಸ್ಥೆಯ ಮುಖ್ಯಸ್ಥರಾದ ಫಿಲೆಮಾನ್ ಯಾಂಗ್ ಅವರು ಕರ್ನಾಟಕಕ್ಕೆ ಬಂದು ನಮ್ಮ ಗ್ಯಾರಂಟಿ ಯೋಜನೆಗಳು ಹಾಗೂ ಮಹಿಳಾ ಪರವಾದ ಯೋಜನೆಗಳ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದೆ.
ನಮ್ಮ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಇಲ್ಲಿಯವರೆಗೆ ಸುಮಾರು ₹90,000 ಕೋಟಿ ಖರ್ಚಾಗಿದ್ದು, ಇದರಿಂದಾಗಿ ಪ್ರತಿಯೊಂದು ಕುಟುಂಬದ ಸರಾಸರಿ ಮಾಸಿಕ ಆದಾಯ ಐದರಿಂದ ಹತ್ತು ಸಾವಿರ ರುಪಾಯಿ ಹೆಚ್ಚಾಗಿದೆ.
ಈಗಲೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲೇಬೇಕೆಂದು ನರೇಂದ್ರ ಮೋದಿಯವರು ಹಠ ಹಿಡಿದು ಕೂತಿದ್ದಾರೆ. ಇದಕ್ಕಾಗಿ ತೆರಿಗೆ ಹಂಚಿಕೆಯಲ್ಲಿ ನಮ್ಮ ಪಾಲಿನ ಹಣದಲ್ಲಿ ಕಡಿತ ಮಾಡುತ್ತಿದ್ದಾರೆ, ಬರಪರಿಹಾರ ನೀಡದೆ ಸತಾಯಿಸುತ್ತಿದ್ದಾರೆ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಣ ಮಂಜೂರು ಮಾಡುತ್ತಿಲ್ಲ. ಈ ರೀತಿ ಕೇಂದ್ರ ಸರ್ಕಾರದಿಂದ ನ್ಯಾಯಬದ್ಧವಾಗಿ ನಮಗೆ ನೀಡಬೇಕಾದ ಹಣವನ್ನು ನೀಡದೆ ಆರ್ಥಿಕವಾಗಿ ರಾಜ್ಯ ಸರ್ಕಾರವನ್ನು ದಿವಾಳಿ ಸ್ಥಿತಿಗೆ ತಂದು ನಿಲ್ಲಿಸಬೇಕೆನ್ನುವುದು ನರೇಂದ್ರ ಮೋದಿಯವರ ಹುನ್ನಾರ.
ಗ್ಯಾರಂಟಿ ಯೋಜನೆ ನಿರಂತರ
ನಾನು ಹದಿನಾರು ಬಜೆಟ್‌ಗಳನ್ನು ಮಂಡಿಸಿದವನು. ಹಣಕಾಸು ನಿರ್ವಹಣೆಯನ್ನು ಹೇಗೆ ನಡೆಸಬೇಕೆನ್ನುವುದು ನನಗೆ ಗೊತ್ತಿದೆ. ಯಾವುದೇ ಕಾರಣಕ್ಕೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಇದೇ ವೇಳೆ ನಮ್ಮ ಪಾಲಿನ ಹಣಕ್ಕಾಗಿ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ನಾವು ಗ್ಯಾರಂಟಿ ಯೋಜನೆಗಳನ್ನು ಮಾತ್ರವೇ ಜಾರಿಗೊಳಿಸಲಿಲ್ಲ. ಬದಲಿಗೆ ರಾಜ್ಯದ ಆರ್ಥಿಕತೆಗೆ ಬಲ ನೀಡಲು ಅಗತ್ಯವಾದ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಹಿಂದೆ ಬೀಳಲಿಲ್ಲ. ಇಂದು ಕರ್ನಾಟಕ ಜಾಗತಿಕ ಬಂಡವಾಳ ಆಕರ್ಷಣೆಯಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ರಫ್ತಿನ ವಿಚಾರದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಜಗತ್ತಿನ 500 ಫಾರ್ಚ್ಯೂನ್ ಕಂಪನಿಗಳಲ್ಲಿ 400 ಕಂಪನಿಗಳು ಬೆಂಗಳೂರಿನಲ್ಲಿವೆ. ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ ಸ್ಥಾಪನೆಗೆ ಕರ್ನಾಟಕ ಪ್ರಶಸ್ತ ತಾಣವಾಗಿದ್ದು, ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಏರೋಸ್ಪೇಸ್ ಉದ್ಯಮದಲ್ಲಿ ಭಾರತಕ್ಕೆ ಮಾದರಿಯಾಗಿದೆ. ಜಗತ್ತಿನ ನಾಲ್ಕನೇ ಅತಿ ದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿ ಹೊರಹೊಮ್ಮಿದೆ. ಪುನರ್‌ನವೀಕರಣ ಇಂಧನದ ಮೂಲಗಳ ವಿಚಾರದಲ್ಲಿ ದೇಶದಲ್ಲಿಯೇ ಕರ್ನಾಟಕ ಮಾದರಿಯಾಗಿದೆ. ಕರ್ನಾಟಕದ ಅಭಿವೃದ್ಧಿ ಮಾದರಿಯೆಂದರೆ ಅದು ಸಾಮಾಜಿಕ - ಆರ್ಥಿಕ ಆಶಯಗಳೆರಡನ್ನೂ ಸಾಕಾರಗೊಳಿಸುವ ಸಮಗ್ರ, ಸರ್ವಾಂಗೀಣ ಅಭಿವೃದ್ಧಿಯೇ ಆಗಿದೆ.
ಅಭಿವೃದ್ಧಿಯ ವಿಚಾರದಲ್ಲಿ ಪ್ರಾಂತೀಯ ತಾರತಮ್ಯವನ್ನು ಹೋಗಲಾಡಿಸಲು ನಮ್ಮ ಸರ್ಕಾರ ಬಹುವಾಗಿ ಶ್ರಮಿಸಿದೆ. ಕಾಂಗ್ರೆಸ್ ಸರ್ಕಾರವು 2013-14 ರಿಂದ 2018ರ ಆಡಳಿತಾವಧಿಯಲ್ಲಿ ಕಲ್ಯಾಣ ಕರ್ನಾಟಕವೂ ಸೇರಿದಂತೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿತು. ಅನೇಕ ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡಿತು. ಈ ಎಲ್ಲ ಸಕಾರಾತ್ಮಕ ಕ್ರಮಗಳಿಂದಾಗಿ ಕಲ್ಯಾಣ ಕರ್ನಾಟಕದ ಜನತೆಯ ತಲಾವಾರು ಆದಾಯ 2012ರಲ್ಲಿ ₹43,237 ಇದ್ದದ್ದು, 2018ರ ವೇಳೆಗೆ ₹1,11,132 ಗೆ ಏರಿಕೆಯಾಯಿತು. ಅಂದರೆ ಈ ಹಿಂದಿನ ನಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ಕಲ್ಯಾಣ ಕರ್ನಾಟಕದ ಜನತೆಯ ತಲಾದಾಯದಲ್ಲಿ ₹67,895 ಹೆಚ್ಚಳವಾಯಿತು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಪ್ರಮಾಣ ಕುಸಿದು ಕೇವಲ ₹38 ಸಾವಿರ ಮಾತ್ರ ತಲಾದಾಯ ಏರಿಕೆಯಾಯಿತು. ಈಗ ಮತ್ತೊಮ್ಮೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈ ಭಾಗದ ಜನರ ಬದುಕಿನಲ್ಲಿ ಗಣನೀಯ ಸುಧಾರಣೆ ತರಲು ನಾವು ಕಟಿಬದ್ಧರಾಗಿದ್ದೇವೆ.
ನನ್ನ ತೆರಿಗೆ ನನ್ನ ಹಕ್ಕು
ಜಿಎಸ್‌ಟಿ ಪರಿಹಾರ, ತೆರಿಗೆ ಹಂಚಿಕೆ, ಸೆಸ್‌ನಲ್ಲಿ ಪಾಲು ಮತ್ತು ಹಣಕಾಸು ಆಯೋಗದ ವಿಶೇಷ ಪರಿಹಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದಿಂದ ₹1,87,000 ಕೋಟಿಗಳನ್ನು ಕರ್ನಾಟಕ ಕಳೆದುಕೊಂಡಿದೆ. ನಾವೇನು ಕೇಂದ್ರ ಸರ್ಕಾರದಿಂದ ಭಿಕ್ಷೆ ಕೇಳುತ್ತಿಲ್ಲ. ಇದು ಏಳುಕೋಟಿ ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ಕಟ್ಟಿದ ತೆರಿಗೆ ಹಣ. ಅದರಲ್ಲಿ ನಮ್ಮ ನ್ಯಾಯದ ಪಾಲನ್ನು ಕೇಳುತ್ತಿದ್ದೇವೆ.
ತೆರಿಗೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿರುದ್ಧ ನಮ್ಮ ಸರ್ಕಾರ ಗಂಭೀರವಾಗಿ ದನಿ ಎತ್ತಿದೆ. ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಕನ್ನಡಿಗರ ಘರ್ಜನೆ ಕೇಳಿಸಿದೆ. ‘ನನ್ನ ತೆರಿಗೆ ನನ್ನ ಹಕ್ಕು’ ಅಭಿಯಾನದಡಿ ರಾಜ್ಯವು ತನ್ನ ಪಾಲಿನ ನ್ಯಾಯಯುತ ತೆರಿಗೆ ಹಕ್ಕಿಗಾಗಿ ಹೋರಾಟವನ್ನು ಆರಂಭಿಸಿದೆ. ಎಲ್ಲಿಯವರೆಗೆ ತೆರಿಗೆ ವಿಚಾರದಲ್ಲಿ ಕರ್ನಾಟಕಕ್ಕೆ ಉಂಟಾಗಿರುವ ಅನ್ಯಾಯವನ್ನು ಸರಿಪಡಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಈ ಹೋರಾಟ ಮುಂದುವರಿಯಲಿದೆ.
ದೇಶದ ಸಾರ್ವಭೌಮತೆ, ಸಮಗ್ರತೆಯನ್ನು ಎತ್ತಿ ಹಿಡಿಯಬೇಕಾದರೆ, ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕಾದರೆ ದೇಶದ ಪ್ರತಿಯೊಂದು ರಾಜ್ಯದ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಂಡು ನ್ಯಾಯಯುತವಾದ ತೆರಿಗೆ ನೀತಿಯನ್ನು ಕೇಂದ್ರ ಸರ್ಕಾರ ಅಳವಡಿಸಿಕೊಳ್ಳುವುದು ಅತ್ಯಗತ್ಯ. ಈ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಬಲಿಕೊಡಲು ನಾವು ಬಿಡುವುದಿಲ್ಲ. ಸಾಂವಿಧಾನಿಕ ಚೌಕಟ್ಟಿನೊಳಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವವರೆಗೆ ನಾವು ಈ ವಿಚಾರದಲ್ಲಿ ವಿಶ್ರಮಿಸುವುದೂ ಇಲ್ಲ.
ನೆಲ, ಜಲ, ಭಾಷೆಯ ವಿಷಯಗಳಿಗೆ ಸಂಬಂಧಿಸಿದಂತೆ ಭವಿಷ್ಯದ ದಿನಗಳಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುತ್ತಾ, ಜಾಗತಿಕ ಭೂಪಟದಲ್ಲಿ ಸರ್ವಾಂಗೀಣ ಅಭಿವೃದ್ಧಿ, ಸಮಾನತೆಗೆ ಮತ್ತೊಂದು ಹೆಸರಾಗಿ ಕರ್ನಾಟಕವನ್ನು ರೂಪಿಸುವ ಗುರಿಯನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ.
ಗ್ಯಾರಂಟಿಗೆ ಜಾಗತಿಕ ಮನ್ನಣೆ
ಗ್ಯಾರಂಟಿ ಯೋಜನೆ ವಿವಿಧ ರಾಜ್ಯಗಳ, ವಿಶ್ವಸಂಸ್ಥೆಯ ಪ್ರಶಂಸೆಗೂ ಪಾತ್ರವಾಗಿದೆ
ಯೋಜನೆ ಯಶೋಗಾಥೆ ಅಧ್ಯಯನಕ್ಕೆ ವಿವಿಧ ವಿವಿಗಳ ತಜ್ಞರು, ವಿಧ್ವಾಂಸರ ಭೇಟಿ
ಇದುವರೆಗೂ ವಿವಿಧ ಗ್ಯಾರಂಟಿ ಯೋಜನೆ ಜಾರಿಗಾಗಿ 90000 ಕೋಟಿ ವೆಚ್ಚವಾಗಿದೆ
16 ಬಜೆಟ್ ಮಂಡಿಸಿದ ನನಗೆ ಹಣಕಾಸು ನಿರ್ವಹಣೆ ಗೊತ್ತಿದೆ. ಗ್ಯಾರಂಟಿ ನಿಲ್ಲಲ್ಲ
ಗ್ಯಾರಂಟಿ ಜೊತೆಜೊತೆಗೆ ರಾಜ್ಯದ ಆರ್ಥಿಕತೆ ಅಭಿವೃದ್ಧಿಗೂ ಹಲವು ಕ್ರಮ: ಸಿಎಂ