ಸಂವಿಧಾನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

| N/A | Published : May 04 2025, 01:33 AM IST / Updated: May 04 2025, 05:30 AM IST

ಸಂವಿಧಾನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನದ ರಕ್ಷಣೆಯಾದರೆ ನಮ್ಮ ಹಕ್ಕುಗಳೂ ರಕ್ಷಣೆಯಾಗುತ್ತವೆ. ಹೀಗಾಗಿ, ಸಂವಿಧಾನಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 ಬೆಂಗಳೂರು : ಸಂವಿಧಾನದ ರಕ್ಷಣೆಯಾದರೆ ನಮ್ಮ ಹಕ್ಕುಗಳೂ ರಕ್ಷಣೆಯಾಗುತ್ತವೆ. ಹೀಗಾಗಿ, ಸಂವಿಧಾನಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶನಿವಾರ ಯಲಹಂಕ ಮಿನಿ ವಿಧಾನಸೌಧ ಎದುರು 14 ಅಡಿ ಎತ್ತರದ ಡಾ। ಅಂಬೇಡ್ಕರ್ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಮ್ಮ ದೇಶ, ಸಮಾಜಕ್ಕೆ ಬೇಕಾಗಿದ್ದ ಅತ್ಯುತ್ತಮ ಸಂವಿಧಾನವನ್ನು ಅಂಬೇಡ್ಕರ್ ನೀಡಿದರು. ಸಾಮಾಜಿಕ ಮತ್ತು ಜಾತಿ ವ್ಯವಸ್ಥೆಯನ್ನು ಅವರು ಅರ್ಥ ಮಾಡಿಕೊಂಡಷ್ಟು ಬೇರೆಯವರು ಮಾಡಿಕೊಂಡಿಲ್ಲ. ಜಾತಿ ವ್ಯವಸ್ಥೆ ಇದ್ದಷ್ಟೂ ಕಾಲ ಮೀಸಲಾತಿ ಇರಲೇಬೇಕು ಎಂಬುದನ್ನು ಅವರು ಬಲವಾಗಿ ನಂಬಿದ್ದರು ಎಂದರು.

ನಮ್ಮ ದೇಶದ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಶ್ರೀಮಂತ ಬಡವನಾದರೂ, ಬಡವ ಶ್ರೀಮಂತನಾದರೂ ಕಡೆಯವರೆಗೆ ಉಳಿಯುವುದು ಜಾತಿ ಮಾತ್ರ. ಇದನ್ನು ಮನಗಂಡಿದ್ದ ಅಂಬೇಡ್ಕರ್, ದೇಶದ ಅವಕಾಶ ವಂಚಿತರು, ಶೋಷಿತರು, ದೌರ್ಜನ್ಯಕ್ಕೆ ಒಳಗಾದವರಿಗೆಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾದಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿಕ ಶಾಸಕ ವಿಶ್ವನಾಥ್ ಹೇಳಿಕೆಯನ್ನು ಸ್ವಾಗತಿಸಿದ ಮುಖ್ಯಮಂತ್ರಿಯವರು, ಯಲಹಂಕದಲ್ಲಿ ದಲಿತರು ಹಿಂದುಳಿದವರೇ ಹೆಚ್ಚಿದ್ದಾರೆ. ಎಲ್ಲರಿಗೂ ನ್ಯಾಯ ದೊರಕಿಸುವ ಕೆಲಸವನ್ನು ವಿಶ್ವನಾಥ್ ಮಾಡುತ್ತಿದ್ದಾರೆ. ಈ ಕ್ಷೇತ್ರಕ್ಕೆ ಕೋರಿರುವ ಅನುದಾನದ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.

ಸಮಗ್ರ ಸಾಮಾಜಿಕ ವ್ಯವಸ್ಥೆ ಬದಲಾಗಬೇಕು. ಅಂಬೇಡ್ಕರ್ ದಲಿತರಾಗಿ ಹುಟ್ಟಿದರೂ ಎಲ್ಲರ ನಾಯಕರಾಗಿದ್ದರು. ಸಾಮಾಜಿಕ ನ್ಯಾಯದಿಂದ ವಂಚಿತರಾದವರ ನಾಯಕರಾಗಿದ್ದರು. ಈ ದೇಶದಲ್ಲಿ ಅವರು ಹುಟ್ಟಿರುವುದೇ ನಮಗೆ ಹೆಮ್ಮೆಯ ಸಂಗತಿ. ಅಂಬೇಡ್ಕರ್ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಪ್ರತಿಮೆಗಳು ಸಂಕೇತಗಳಾದರೂ, ಇವುಗಳಿಂದ ಅಂಬೇಡ್ಕರ್ ಅವರ ವಿಚಾರಗಳು ಇನ್ನಷ್ಟು ಪಸರಿಸಲಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಎಚ್.ಸಿ.ಮಹದೇವಪ್ಪ, ಕೃಷ್ಣಬೈರೇಗೌಡ, ಶಾಸಕರಾದ ಎಸ್.ಆರ್.ವಿಶ್ವನಾಥ, ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಎಂ.ಆರ್.ಸೀತಾರಂ ಹಾಗೂ ನಸೀರ್ ಅಹ್ಮದ್ ಉಪಸ್ಥಿತರಿದ್ದರು.