ಕಂಡಿದ್ದು- ಕಾಣದ್ದು : ಸಿದ್ದರಾಮಯ್ಯ ಸಂಪುಟದ ಕಿಲಾಡಿ ಮಂತ್ರಿ ಯಾರು ಅಂತ ಗೊತ್ತಾ ?

| Published : Oct 28 2024, 12:40 PM IST

Siddaramaiah

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ‘ಕಿಲಾಡಿ’ ಸಚಿವರೊಬ್ಬರಿದ್ದಾರಂತೆ! ತಮ್ಮ ಇಲಾಖೆಯ ವ್ಯಾಪ್ತಿಗೆ ಬರುವ ಯೋಜನೆಗಳಿಗೆ ಸರ್ಕಾರದಿಂದ ನಯವಾಗಿ ಅನುಮತಿ ಪಡೆಯುತ್ತಾರಂತೆ. ಅದಕ್ಕಾಗಿಯೇ ಅವರನ್ನು ಖುದ್ದು ಸಿದ್ದರಾಮಯ್ಯ ಅವರೇ ‘ಕಿಲಾಡಿ’ ಎಂದು ಬಣ್ಣಿಸಿದ್ದಾರೆ.

ಕಲಬುರಗಿ ಜೈಲು ಇದೀಗ ವಿಚಿತ್ರ ಚೆಂಡಿನಾಟದಿಂದ ಫೇಮಸ್‌ ಆಗಿದೆ. ಜೈಲಂದ್ರ ವಿಚಾರಣಾಧೀನ, ಸಜಾ ಕೈದಿಗಳಿರೋ ಜಾಗ. ಅಲ್ಲೇನು ಚೆಂಡಿನಾಟ ನಡೀತದ್ರಿ? ಅನ್ನೋದು ನಿಮ್ಮ ಪ್ರಶ್ನೆ ಆಗಿರ್ಬಹುದು. ಇದು ಅಂತಿಂಥಾ ಚೆಂಡಿನಾಟ ಅಲ್ರಿ, ನಿಷೇಧಿತ ವಸ್ತುಗಳಿಂದ ತುಂಬಿ ತುಳುಕೋ ಖತರ್‌ನಾಕ್‌ ಥ್ರೋಬಾಲ್‌ ಆಟ ಅನ್ನಬಹುದು!

ಜೈಲು ಸೇರಿರೋ ಪಾತಕಿಗಳಿಗೆ ಅವರ ಖಾಸಾ ಗೆಳ್ಯಾರು ಗಾಂಜಾ, ಮೊಬೈಲ್‌, ಡ್ರಗ್ಸ್‌ ಇರೋ ಟ್ಯಾಬ್ಲೆಟ್‌ನಂತಹ ನಿಷೇಧಿತ ವಸ್ತುಗಳನ್ನ ಹ್ಯಾಂಗಾದ್ರೂ ಮಾಡಿ ಸಪ್ಲೈ ಮಾಡಬೇಕು ಅಂತ ಸಂಕಲ್ಪ ಮಾಡಿ ಚೆಂಡಿನಾಟಕ್ಕೆ ಮುನ್ನುಡಿ ಬರೆದಾರ.

ಹೊರಗ ಕುಂತು ಹಾಳು ಮೂಳು ಪ್ಲಾಸ್ಟಿಕ್‌ ಪೇಪರ್‌ ಕಲೆಹಾಕಿ ಚೆಂಡನ್ನೇ ಹೋಲುವ ಆಕಾರ ಮಾಡಿ ಅದ್ರೊಳಗ ಮೊಬೈಲ್‌, ಗಾಂಜಾ, ಗುಟ್ಕಾ, ಬೀಡಿ, ಸಿಗರೇಟ್‌, ಸುಪಾರಿ... ಇನ್ನೇನೆನೋ ತುರುಕಿ ಪ್ಯಾಕ್‌ ಮಾಡಿ ಅದನ್ನ ಧಪ್ಪಾಧುಪ್ಪಿ ಆಟದ್ಹಂಗ ಹೊರಗಿನಿಂದ ಜೈಲೊಳಗ ತಮ್ಮವರು ಇರೋ ಸೆಲ್‌ಗಳ ಮುಂದೆ ಬೀಳೋವ್ಹಂಗ ಬಿಸಾಕ್ತಾರ.

ಹೀಂಗ ಬಿಸಾಕುವ ಥ್ರೋಬಾಲ್‌ ಆಟಕ್ಕಿಲ್ಲಿ ದಶಕದ ಇತಿಹಾಸ. ಕಸಾ ಬಳಿಯೋರ ಹಿಡ್ಕೊಂಡು ವಿವಿಧ ಹಂತದ ಸಿಬ್ಬಂದಿ ಈ ಚೆಂಡಾಟಕ್ಕ ತಮ್ದು ಕೈ ಹಚ್ಚಿ ಬೆಳಸ್ಯಾರನ್ನೋದು ತನಿಖೆಯಿಂದ ಹೊರಬಿದ್ದೈತಿ. ಕಸ ಗುಡಿಸೋಳಿಂದ ಹಿಡ್ದು ವಿವಿಧ ಹಂತದ ಸಿಬ್ಬಂದಿ ಕೈಚಳಕ ಈ ಥ್ರೋಬಾಲ್‌ ಆಟದೊಳ್ಗ ಅದ ಅನ್ನೋ ಗುಮಾನಿ ಕೂಡಾ ಕಾಡ್ಲಿಕತ್ತದ.

ಕಲಬುರಗಿ ಪೊಲೀಸ್ರು ಖತರ್‌ನಾಕ್‌ ಥ್ರೋಬಾಲ್‌ ಆಟದ ಹಿಂದಿರೋ ಗ್ಯಾಂಗ್‌ ಪತ್ತೆಹಚ್ಚಿ ಆ ಪೈಕಿ ನಾಲ್ವರ ಹೆಡಮುರಿ ಕಟ್ಯಾರ. ಅಂದ್ಹಂಗ ದಶಕದ ಹಿಂದ ದೀಪಾವಳಿ ಸುತ್ತಮುತ್ತ ಜೈಲ್ನಾಗ್‌ ಸ್ವೀಟ್‌ ಪ್ಯಾಕೆಟ್‌ ಜೊತೆಗೇ ಕಂಟ್ರಿ ಮೇಡ್‌ ಪಿಸ್ತೂಲ್‌ ಕೂಡಾ ಹೀಂಗೆ ಎಸೆಲ್ಪಟ್ಟು ಸುದ್ದಿಯಾಗಿತ್ತು. ಇಂತದ್ದು ನಡೆಯೋ ಮುಂದ ಪೊಲೀಸರು ಗ್ಯಾಂಗ್‌ಗೆ ಮಟ್ಟಹಾಕಿದರೆ ಬಂಧೀಖಾನೆಯೊಳಗೆ ಪಟಾಕಿ ಢಂ ಢಂ ಅನ್ನೋದು ತಪ್ಪತ್ತದ.

ಸಚಿವ ಸಂಪುಟದ ‘ಕಿಲಾಡಿ ಕಿಟ್ಟಮ್ಮ’!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ‘ಕಿಲಾಡಿ’ ಸಚಿವರೊಬ್ಬರಿದ್ದಾರಂತೆ! ತಮ್ಮ ಇಲಾಖೆಯ ವ್ಯಾಪ್ತಿಗೆ ಬರುವ ಯೋಜನೆಗಳಿಗೆ ಸರ್ಕಾರದಿಂದ ನಯವಾಗಿ ಅನುಮತಿ ಪಡೆಯುತ್ತಾರಂತೆ. ಅದಕ್ಕಾಗಿಯೇ ಅವರನ್ನು ಖುದ್ದು ಸಿದ್ದರಾಮಯ್ಯ ಅವರೇ ‘ಕಿಲಾಡಿ’ ಎಂದು ಬಣ್ಣಿಸಿದ್ದಾರೆ.

ಅಂದಹಾಗೇ ಈ ಕಿಲಾಡಿ ಹೆಸರು- ಲಕ್ಷ್ಮೀ ಹೆಬ್ಬಾಳ್ಕರ್‌. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವರು.

ಅಷ್ಟಕ್ಕೂ ಆಗಿದ್ದೇನೆಂದರೆ, ಇತ್ತೀಚೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಆಯೋಜಿಸಲಾಗಿತ್ತು. ಮೊದಲಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು, ನಮ್ಮ ಸರ್ಕಾರ ಮನೆಯ ಒಡತಿಗೆ ತಿಂಗಳಿಗೆ ತಲಾ 2000 ರು. ನೀಡುವ ‘ಗೃಹಲಕ್ಷ್ಮೀ’ ಯೋಜನೆ ಅನುಷ್ಠಾನಗೊಳಿಸಿದಂತೆ ಹಿರಿಯ ನಾಗರಿಕರ ಮಾಸಾಶನವನ್ನೂ ಹೆಚ್ಚಳ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿ ಕುಳಿತರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ‘ಲಕ್ಷ್ಮೀ ಹೆಬ್ಬಾಳ್ಕರ್‌ ಬಹಳ ಕಿಲಾಡಿ ಇದ್ದಾರೆ’ ಎಂದು ನಗುತ್ತಾ ಹೇಳಿ ಮಾತು ನಿಲ್ಲಿಸಿದರು. ಆಗ ಹೆಬ್ಬಾಳ್ಕರ್‌ ಅವರು ಒಂದು ಕ್ಷಣ ಕಕ್ಕಾಬಿಕ್ಕಿಯಾದರು.

ಮಾತು ಮುಂದುವರೆಸಿದ ಸಿದ್ದರಾಮಯ್ಯ ಅವರು, ‘ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸಲು ಹೆಬ್ಬಾಳ್ಕರ್‌ ಅವರು ಸರ್ಕಾರದಿಂದ ನಯವಾಗಿಯೇ ಒಪ್ಪಿಗೆ ಪಡೆದರು. ಇದೀಗ ಹಿರಿಯ ನಾಗರಿಕರ ಮಾಸಾಶನ ಹೆಚ್ಚಳಕ್ಕೆ ಪೀಠಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ನಗುನಗುತ್ತಲೇ ಹೇಳಿದಾಗ ಹೆಬ್ಬಾಳ್ಕರ್‌ ಅವರು ಸಹ ನಿರಾಳರಾಗಿ ಮಂದಸ್ಮಿತರಾದರು.

ಪುತ್ಥಳಿ ಮಾಯ ಮಾಡಿದ್ಯಾರು?

ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಕನ್ನಡ ಭುವನೇಶ್ವರಿಯ ಪುತ್ಥಳಿ ಮಾಯವಾಗಿದೆ. ಪುತ್ಥಳಿ ಹುಡುಕಿಕೊಡಿ ಎಂದು ಸಂಘಟನೆಯ ವ್ಯಕ್ತಿಯೋರ್ವ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದ.

ಈ ವಿಷಯ ಸ್ಥಳೀಯ ಪತ್ರಿಕೆಯೊಂದರಲ್ಲೂ ದೊಡ್ಡ ಸುದ್ದಿಯಾಯಿತು. ಸಾಮಾಜಿಕ ಜಾಲತಾಣದಲ್ಲಂತೂ ಭರ್ಜರಿ ಚರ್ಚೆಯ ವಿಷಯವಾಯ್ತು. ಭುವನೇಶ್ವರಿ ಪುತ್ಥಳಿ ಕಾಣೆಯಾದರೂ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಪುಂಖಾನುಪುಂಖ ಆರೋಪ ಮಾಡಲಾಯ್ತು.

ಅಸಲಿ ವಿಷಯವೆಂದರೆ, ಬಳ್ಳಾರಿಯ ಚಿತ್ರ ಕಲಾವಿದರೊಬ್ಬರಿಗೆ ಹಂಪಿ ಉತ್ಸವದಲ್ಲಿ ಉಡುಗೊರೆಯಾಗಿ ದೊರೆತ ಫೈಬರ್ ಪುತ್ಥಳಿಯನ್ನು ಮನೆಯಲ್ಲಿ ಜಾಗ ಇಲ್ಲ ಎಂಬ ಕಾರಣಕ್ಕೆ ಇಲಾಖೆಯ ಪ್ರವೇಶದ್ವಾರದ ಬಳಿ ಇರಿಸಿದ್ದರು. ಕೆಲ ಕಾಲದ ನಂತರ ಅದು ಹಾಳಾಗಿದ್ದರಿಂದ ದುರಸ್ತಿ ಮಾಡಿಸಲು ಸದರಿ ಕಲಾವಿದ ಒಯ್ದಿದ್ದರು.

ಈ ಹಿನ್ನೆಲೆ ಅರಿವಿಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೋ ಚರ್ಚೆ. ಕಡೆಗೆ ವಿಷಯ ಗೊತ್ತಾದಾಗ ಜಾಲತಾಣದ ವೀರರು ಮಂಗಮಾಯ!

- ಶೇಷಮೂರ್ತಿ ಅವಧಾನಿ

-ಸಿದ್ದು ಚಿಕ್ಕಬಳ್ಳೇಕೆರೆ

-ಮಂಜುನಾಥ ಕೆ.ಎಂ.