ಒಳಮೀಸಲಾತಿಗೆ ಕಡೆಗೂ ರಾಜ್ಯ ಸರ್ಕಾರ ಸೂತ್ರವೊಂದನ್ನು ಘೋಷಿಸಿದ್ದು, ಶೇ.15ರ ಮೀಸಲಾತಿಯಲ್ಲಿ ಎಡಗೈ ಜಾತಿಗಳ ‘ಎ’ ಗುಂಪಿಗೆ ಶೇ.5.25, ಬಲಗೈ ಜಾತಿಗಳ ‘ಬಿ’ ಗುಂಪಿಗೆ ಶೇ.5.25 ಹಾಗೂ ಸ್ಪೃಶ್ಯ, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ‘ಸಿ’ ಗುಂಪಿಗೆ ಶೇ.4.5 ರಷ್ಟು ಒಳ ಮೀಸಲಾತಿ
ಬೆಂಗಳೂರು : ತೀವ್ರ ಚರ್ಚೆ ಹುಟ್ಟುಹಾಕಿದ್ದ ಒಳಮೀಸಲಾತಿಗೆ ಕಡೆಗೂ ರಾಜ್ಯ ಸರ್ಕಾರ ಸೂತ್ರವೊಂದನ್ನು ಘೋಷಿಸಿದ್ದು, ಶೇ.15ರ ಮೀಸಲಾತಿಯಲ್ಲಿ ಎಡಗೈ ಜಾತಿಗಳ ‘ಎ’ ಗುಂಪಿಗೆ ಶೇ.5.25, ಬಲಗೈ ಜಾತಿಗಳ ‘ಬಿ’ ಗುಂಪಿಗೆ ಶೇ.5.25 ಹಾಗೂ ಸ್ಪೃಶ್ಯ, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ‘ಸಿ’ ಗುಂಪಿಗೆ ಶೇ.4.5 ರಷ್ಟು ಒಳ ಮೀಸಲಾತಿ ಕಲ್ಪಿಸಿ ಐತಿಹಾಸಿಕ ತೀರ್ಮಾನ ಕೈಗೊಂಡಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಪರಿಷ್ಕೃತ ಒಳ ಮೀಸಲಾತಿ ಜಾರಿಗೆ ತಕ್ಷಣವೇ ಅಧಿಸೂಚನೆ ಹೊರಡಿಸಬೇಕು. ಜತೆಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆಗೆ ಸಿದ್ಧತೆ ನಡೆಸಿರುವ ವಿವಿಧ ಇಲಾಖೆಗಳ 56,432 ಹುದ್ದೆಗಳ ಭರ್ತಿ ವೇಳೆ ಪರಿಷ್ಕೃತ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ನಿರ್ಧರಿಸಲಾಗಿದೆ.
ಆ ಮೂಲಕ ರಾಜಕೀಯವಾಗಿ ಬಿಸಿತುಪ್ಪವಾಗಿ ಪರಿಣಮಿಸಿದ್ದ ಒಳಮೀಸಲಾತಿ ವಿವಾದಕ್ಕೆ ರಾಜ್ಯ ಸರ್ಕಾರ ಕೊನೆಗೂ ಪರಿಹಾರ ಕಂಡುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದ ತಾಂತ್ರಿಕ ಸಮಿತಿ ನೀಡಿದ ವರದಿ ಅನ್ವಯ ಚರ್ಚೆ ನಡೆಯಿತು.
ನ್ಯಾಯಾಲಯ ಒಟ್ಟು ಮೀಸಲಾತಿ ಮಿತಿಯನ್ನು ಶೇ.56 ರ ಬದಲಿಗೆ ಶೇ.50ಕ್ಕೆ ಸೀಮಿತಗೊಳಿಸಿರುವುದರಿಂದ ಪರಿಶಿಷ್ಟ ಜಾತಿಗೆ ಶೇ.17ರ ಬದಲು ಶೇ.15 ರಷ್ಟು ಮೀಸಲಾತಿ ನೀಡಲು ಮಾತ್ರ ಸಾಧ್ಯ. ಈ ಶೇ.15ರ ಮೀಸಲಾತಿ ಅಡಿ ಎ ಗ್ರೂಪಿಗೆ ಶೇ.5.3, ಬಿ ಗ್ರೂಪಿಗೆ ಶೇ.5.3 ಹಾಗೂ ಸಿ ಗ್ರೂಪಿಗೆ ಶೇ.4.4 ರಷ್ಟು ಒಳ ಮೀಸಲಾತಿ ಕಲ್ಪಿಸಬಹುದು. ಜತೆಗೆ ಇದನ್ನು ಅನುಷ್ಠಾನಗೊಳಿಸಲು ಯಾವ್ಯಾವ ಫಾರ್ಮೂಲಾ ಅನುಸರಿಸಬಹುದು ಎಂದು ನಾಲ್ಕು ಆಯ್ಕೆಗಳನ್ನು ತಾಂತ್ರಿಕ ಸಮಿತಿ ನೀಡಿತ್ತು.
ಇದನ್ನು ಕೂಲಂಕಷವಾಗಿ ಪರಿಶೀಲಿಸಿದ ಸಚಿವ ಸಂಪುಟ ಸಭೆ ಎ ಗ್ರೂಪಿಗೆ ಶೇ.5.25, ಬಿ ಗ್ರೂಪಿಗೆ ಶೇ.5.25 ಹಾಗೂ ಸಿ ಗ್ರೂಪಿಗೆ ಶೇ.4.5ರಷ್ಟು ಒಳ ಮೀಸಲಾತಿ ಕಲ್ಪಿಸಲು ಸರ್ವಾನುಮತದಿಂದ ತೀರ್ಮಾನ ಮಾಡಿದೆ.
ಐತಿಹಾಸಿಕ ತೀರ್ಮಾನ-ಸಿಎಂ:
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾವು ನೀಡಿದ ಮಾತಿನಂತೆ ನಡೆದುಕೊಂಡಿದ್ದೇವೆ. ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಒಕ್ಕೊರಲ ತೀರ್ಮಾನ ಮಾಡಿದ್ದೇವೆ. ನ್ಯಾಯಯುತ ನಿರ್ಧಾರಕ್ಕೆ ದಲಿತ ಸಂಘಟನೆಗಳು ಸೇರಿ ಎಲ್ಲಾ ಸಮುದಾಯಗಳು ಸ್ವಾಗತಿಸುವ ವಿಶ್ವಾಸವಿದೆ ಎಂದು ಹೇಳಿದರು.
ಒಳ ಮೀಸಲಾತಿಯ ದಶಕಗಳ ಬೇಡಿಕೆ ಈಡೇರಿಸಲು ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಆಯೋಗದ ವರದಿಯಲ್ಲಿ ಕೆಲ ಪರಿಷ್ಕರಣೆ ಮಾಡಿ ಶೇ.17ರಷ್ಟು ಎಸ್ಸಿ ಮೀಸಲಾತಿಗೆ ಅನುಗುಣವಾಗಿ 6:6:5ರ ಅನುಪಾತದಲ್ಲಿ ಒಳ ಮೀಸಲಾತಿ ಜಾರಿ ಮಾಡಲು ಹಿಂದೆ ತೀರ್ಮಾನಿಸಿದ್ದೆವು. ಅದಕ್ಕಾಗಿ ಕಾಯ್ದೆಯನ್ನೂ ಜಾರಿ ಮಾಡಿದ್ದೆವು. ಆದರೆ, ಅಲೆಮಾರಿಗಳು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ವೇಳೆ ನ್ಯಾಯಾಲಯವು ಒಟ್ಟು ಮೀಸಲಾತಿ ಮಿತಿಯನ್ನು ಶೇ.56 ಬದಲಿಗೆ ಶೇ.50ಕ್ಕೆ ಮಿತಿಗೊಳಿಸಿದೆ. ಹೀಗಾಗಿ ಪರಿಶಿಷ್ಟ ಜಾತಿಗೆ ಶೇ.50 ರಷ್ಟು ಮೀಸಲಾತಿ ಮಾತ್ರ ಸಿಗುತ್ತದೆ. ಹೀಗಾಗಿ ಎಡಗೈ ಸಂಬಂಧಿತ ಜಾತಿಗಳಿಗೆ ಶೇ. 5.25, ಬಲಗೈ ಜಾತಿಗಳಿಗೆ ಶೇ. 5.25, ಬೋವಿ, ಲಂಬಾಣಿ, ಕೊರಚ, ಕೊರಮ ಹಾಗೂ 59 ಅಲೆಮಾರಿ ಜಾತಿಗಳಿಗೆ ಶೇ. 4.5 ಮೀಸಲಾತಿ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದರು.
ಈ ಮೂಲಕ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಗೆ ಸಂಬಂಧಿಸಿ ರಾಷ್ಟ್ರದಲ್ಲೇ ಮಹತ್ವಪೂರ್ಣ ನಿರ್ಧಾರ ಮಾಡಿದ್ದೇವೆ. ರೋಸ್ಟರ್ ಸಂಬಂಧಿಸಿ ಸೂಕ್ತ ಪರಿಹಾರ ಕೈಗೊಂಡು ರಾಜ್ಯದ ಶೋಷಿತ ವರ್ಗಗಳ ಬದುಕಿನಲ್ಲಿ ತಿರುವು ನೀಡುತ್ತೇವೆ ಎಂದು ಹೇಳಿದರು.
ಶೀಘ್ರ ನೇಮಕಾತಿ ಪ್ರಕ್ರಿಯೆ ಆರಂಭ:
ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿರುವಂತೆ 56,432 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಶೀಘ್ರ ಅಧಿಸೂಚನೆ ಹೊರಡಿಸಿ, ತುರ್ತು ಕ್ರಮ ಕೈಗೊಳ್ಳಲಾಗುವುದು. ಈ ವೇಳೆ ಒಳ ಮೀಸಲಾತಿ ಕಲ್ಪಿಸಲಾಗುವುದು. ಮೊದಲ ಹಂತದಲ್ಲಿ 56,432 ಹುದ್ದೆಗಳನ್ನು ನೇಮಕ ಮಾಡುತ್ತಿದ್ದು, ಮುಂದಿನ ವರ್ಷ ಇನ್ನೂ ಹೆಚ್ಚು ನೇಮಕ ಮಾಡುತ್ತೇವೆ. ಅದರ ಮುಂದಿನ ವರ್ಷ ಇನ್ನೂ ಹೆಚ್ಚು ನೇಮಕ ಮಾಡಿ ಖಾಲಿ ಹುದ್ದೆ ಭರ್ತಿ ಭರವಸೆ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೀಸಲಾತಿ ಹೆಚ್ಚಳಕ್ಕೆ ಬದ್ಧ-ಸಿದ್ದು:
ನಮ್ಮ ಸರ್ಕಾರವು ಎಸ್ಸಿ,ಎಸ್ಟಿಗೆ ಶೇ.24 ಮೀಸಲಾತಿ ನೀಡಲು ಅಂದರೆ ಪರಿಶಿಷ್ಟ ಜಾತಿಗೆ ಶೇ.17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7 ಮೀಸಲಾತಿ ನೀಡಲು ಬದ್ಧವಾಗಿದೆ. ಭವಿಷ್ಯದಲ್ಲಿ ನ್ಯಾಯಾಲಯ ಅವಕಾಶ ನೀಡಿದರೆ ಶೇ.17ರಷ್ಟು ಎಸ್ಸಿ ಮೀಸಲಾತಿ ಅಡಿ ಒಳ ಮೀಸಲಾತಿ ಕಲ್ಪಿಸಿ ಜಾರಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಸರ್ವಾನುಮತದ ಐತಿಹಾಸಿಕ
ನಿರ್ಧಾರ-ಸಿಎಂ ಸಿದ್ದರಾಮಯ್ಯ
ಸಂಪುಟ ಸಭೆಯಲ್ಲಿ ಕೆ.ಎಚ್.ಮುನಿಯಪ್ಪ, ಡಾ.ಜಿ. ಪರಮೇಶ್ವರ್, ಆರ್.ಬಿ. ತಿಮ್ಮಾಪುರ, ಎಚ್.ಸಿ. ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ ಸೇರಿ ಎಲ್ಲರೂ ಯಾವುದೇ ಅಪಸ್ವರ ಇಲ್ಲದೆ ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ. ವಿಳಂಬವಾದರೂ ಐತಿಹಾಸಿಕ ನಿರ್ಧಾರ ಮಾಡಿದ್ದೇವೆ. ಒಳ ಮೀಸಲಾತಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿದ್ದೇವೆ. ಎಲ್ಲರೂ ಖುಷಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಶೇ.6ರಷ್ಟು ಹುದ್ದೆ ಬ್ಯಾಕ್‌ಲಾಗ್
ಇದೇ ವೇಳೆ ಸಚಿವ ಸಂಪುಟ ಸಭೆಯಲ್ಲಿ ಎಸ್ಸಿ ಮೀಸಲಾತಿಯ ಶೇ.15 ಉಪ ವರ್ಗೀಕರಣವು ನ್ಯಾಯಾಲಯದ ಮುಂದಿನ ಆದೇಶದವರೆಗೆ ಮಾತ್ರ ಅನ್ವಯವಾಗಬೇಕು. ನ್ಯಾಯಾಲಯ ಶೇ.50ರ ಬದಲು ಶೇ.56 ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸಬಹುದು. ಆಗ ಅನುಷ್ಠಾನಗೊಳಿಸಲು ಸುಲಭವಾಗುವಂತೆ ಪರಿಶಿಷ್ಟ ಜಾತಿಯ ಶೇ.2, ಪರಿಶಿಷ್ಟ ಪಂಗಡದ ಶೇ.4 ಸೇರಿ ಒಟ್ಟು ಶೇ.6 ರಷ್ಟು ಹುದ್ದೆಗಳನ್ನು ಬ್ಯಾಕ್‌ಲಾಗ್ ಎಂದು ಪರಿಗಣಿಸಿ ಖಾಲಿ ಉಳಿಸಲು ತೀರ್ಮಾನಿಸಲಾಗಿದೆ.
ಹೀಗಾಗಿ 54,642 ಹುದ್ದೆಗಳಲ್ಲಿ ಶೇ.94ರಷ್ಟು ಹುದ್ದೆಗಳನ್ನು ಮಾತ್ರ ತುಂಬಲಾಗುತ್ತದೆ. ಉಳಿದ ಶೇ.6 ರಷ್ಟು ಹುದ್ದೆಗಳ ನೇಮಕಾತಿ ಬಾಕಿ ಉಳಿಸಿಕೊಂಡು ನ್ಯಾಯಾಲಯ ಅವಕಾಶ ನೀಡಿದರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರನ್ನು ನೇಮಕ ಮಾಡಿಕೊಳ್ಳಲು ಸಂಪುಟ ನಿರ್ಧರಿಸಿದೆ.
ಅಲೆಮಾರಿಗಳಿಗೆ ಒಳ ಮೀಸಲಾತಿಯಲ್ಲಿ ಒಳ ಮೀಸಲು!
ತೀರಾ ಹಿಂದುಳಿದಿರುವ ಅಲೆಮಾರಿ, ಅರೆ ಅಲೆಮಾರಿಯ 59 ಜಾತಿಗಳನ್ನು ಸ್ಪೃಶ್ಯ ಬೋವಿ, ಲಂಬಾಣಿ, ಕೊರಮ, ಕೊರಚರ ಜತೆ ಸೇರಿಸಿ ಶೇ.4.5ರಷ್ಟು ಮೀಸಲಾತಿ ಹಂಚಲಾಗಿದೆ. ಆದರೆ ಅಲೆಮಾರಿಗಳು ಶೈಕ್ಷಣಿಕ, ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದು ಅವರಿಗೆ ಸ್ಪೃಶ್ಯರೊಂದಿಗೆ ಪೈಪೋಟಿ ನಡೆಸಲು ಸಾಧ್ಯವಿಲ್ಲ.
ಹೀಗಾಗಿ ಒಳ ಮೀಸಲಾತಿ ಕಲ್ಪಿಸುವ ವೇಳೆ ಶಿಕ್ಷಣ, ನೇಮಕಾತಿಯಲ್ಲಿ ‘ಸಿ’ ಗ್ರೂಪಿಗೆ ಸಿಗುವ ಪ್ರತಿ 5 ಸ್ಥಾನಗಳಲ್ಲಿ ಒಂದು ಸ್ಥಾನ (ಶೇ.20) ಕಡ್ಡಾಯವಾಗಿ 59 ಅಲೆಮಾರಿ ಜಾತಿಗಳಿಗೆ ಮೀಸಲಿಡಬೇಕು ಎಂದು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಒಂದು ವೇಳೆ ಅಲೆಮಾರಿಗಳಲ್ಲಿ ಯಾರೂ ಲಭ್ಯವಿಲ್ಲದಿದ್ದರೆ ಮಾತ್ರ ಅದನ್ನು ಸಿ ಗ್ರೂಪಿನ ಬೇರೆ ಜಾತಿಗಳಿಗೆ ಅರ್ಹತೆ ಆಧಾರದ ಮೇಲೆ ಹಂಚಬಹುದು.
101 ಎಸ್ಸಿ ಜಾತಿಗಳ ವಿವರ:
ಎ ಗ್ರೂಪ್- 18 ಪ್ರಮುಖ ಎಡಗೈ ಜಾತಿಗಳು ಹಾಗೂ ಉಪಜಾತಿಗಳು
ಬಿ ಗ್ರೂಪ್ - ಬಲಗೈನ 20 ಪ್ರಮುಖ ಜಾತಿಗಳು ಹಾಗೂ ಉಪಜಾತಿಗಳು
ಸಿ ಗ್ರೂಪ್- ಲಂಬಾಣಿ, ಬೋವಿ, ಕೊರಮ, ಕೊರಚ 4 ಸ್ಪೃಶ್ಯ ಜಾತಿಗಳು ಹಾಗೂ 59 ಅಲೆಮಾರಿ ಜಾತಿಗಳು (ಒಟ್ಟು 63)
ಜಾತಿಗಳು ಯಾವುವು?
ದಲಿತ ಎಡಗೈ ಜಾತಿಗಳು- ಶೇ.5.25 ಮೀಸಲಾತಿ
ಮಾದಿಗ, ಮಾದರ, ಪಂಚಮ, ಚಮಗಾರ, ಚಮರ್, ಭಾಂಬಿ, ಅಸದರು, ಅಸೋಡಿ, ಚಮಡಿಯಾ, ಚಂಬರ, ಹರಳಯ್ಯ, ಹರಳಿ, ಖಾಲ್ಪ, ಮಚಿಗಾರ, ಮೋಚಿಗಾರ, ಮೋಚಿ, ಮುಚ್ಚಿ, ತೆಲುಗು ಮೋಚಿ, ಕಾಮತಿ ಮೋಚಿ, ರಾಣಿಗಾರ್, ರೋಹಿದಾಸ್, ರೋಹಿತ್, ಸಮ್ಗರ್, ಹಕ್ಕಳಯ್ಯ, ಧೋರ್ಕ, ಹಕ್ಕಳಯ್ಯ, ಧೋರ್ಕಾ ಹಲಸ್ವರ, ಹಸ್ಲ, ಕಡಯ್ಯನ್, ಕೆಪ್ಮರಿಸ್, ಕೊಲುಪುಲ್ವಂಡಿಯು, ಕುಟುಂಬನ್, ಮಾವಿಲನ್, ಮೊಗೇರ್, ಪನ್ನಿಯಾಂಡಿ, ಪರಯ್ಯನ್, ಪರಯ, ಸಮಗಾರ, ಸಾಂಬನ್
ದಲಿತ ಬಲಗೈ ಜಾತಿಗಳು - (ಶೇ.5.25 ಮೀಸಲಾತಿ)
ಛಲವಾದಿ, ಚಲವಾದಿ, ಜಂಗಮ, ಹೊಲೆಯ, ಬಲಗೈ, ಅಣಮುಕ್, ಅರೆ ಮಾಳ, ಅರವ ಮಾಳ, ಚನ್ನಯ್ಯ, ಪಲ್ಲನ್, ಹೊಲಯ, ಮಹ್ಯವಂಶಿ, ಧೇಡ್, ವಂಕರ್, ಮಾರು ವಂಕರ್, ಮಾಳ, ಮಲ ಹಣ್ಣಾಯಿ, ಮಾಳ ಜಂಗಮ, ಮಾಳ ಮಾಸ್ತಿ, ಮಲ ಮಾರಾಟ, ನೆಟ್ಕಣಿ, ಮಹಾರ್, ತರಲ್, ಧೇಳು, ದೇಗುಲ ಮೇಗುಂದ, (ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಸೇರಿ)
ಸ್ಪೃಷ್ಯ ಹಾಗೂ ಅಲೆಮಾರಿ ಜಾತಿಗಳು: (ಶೇ.4.5 ಮೀಸಲಾತಿ)
ಲಂಬಾಣಿ, ಭೋವಿ, ಕೊರಮ, ಕೊರಚ ಹಾಗೂ 59 ಅಲೆಮಾರಿ ಜಾತಿಗಳು
ನುಡಿದಂತೆ ನಡೆದಿದ್ದೇವೆ
ನಾವು ನೀಡಿದ ಮಾತಿನಂತೆ ನಡೆದುಕೊಂಡಿದ್ದೇವೆ. ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಒಕ್ಕೊರಲ ತೀರ್ಮಾನ ಮಾಡಿದ್ದೇವೆ. ನ್ಯಾಯಯುತ ನಿರ್ಧಾರಕ್ಕೆ ದಲಿತ ಸಂಘಟನೆಗಳು ಸೇರಿ ಎಲ್ಲಾ ಸಮುದಾಯಗಳು ಸ್ವಾಗತಿಸುವ ವಿಶ್ವಾಸವಿದೆ.
- ಸಿದ್ದರಾಮಯ್ಯ, ಸಿಎಂ
--
5.25%
ಎ ಗ್ರೂಪ್- 18 ಪ್ರಮುಖ ಎಡಗೈ ಜಾತಿಗಳು ಹಾಗೂ ಉಪಜಾತಿಗಳು
--
5.25%
ಬಿ ಗ್ರೂಪ್ - ಬಲಗೈನ 20 ಪ್ರಮುಖ ಜಾತಿಗಳು ಹಾಗೂ ಉಪಜಾತಿಗಳು
--
4.5%
ಸಿ ಗ್ರೂಪ್- ಲಂಬಾಣಿ, ಬೋವಿ, ಕೊರಮ, ಕೊರಚ 4 ಸ್ಪೃಶ್ಯ ಜಾತಿಗಳು ಹಾಗೂ 59 ಅಲೆಮಾರಿ ಜಾತಿಗಳು (ಒಟ್ಟು 63)
