ರಸ್ತೆ ಅಗಲೀಕರಣಕ್ಕಾಗಿ ಅರಮನೆ ಮೈದಾನ ಜಾಗಕ್ಕೆ ಟಿಡಿಆರ್‌ : ಪರ್ಯಾಯ ಮಾರ್ಗಕ್ಕೆ ಸರ್ಕಾರ ಶೋಧ

| N/A | Published : Feb 21 2025, 01:45 AM IST / Updated: Feb 21 2025, 04:05 AM IST

ಸಾರಾಂಶ

ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.7 ಎಕರೆ ಜಾಗಕ್ಕೆ ₹3,011 ಕೋಟಿ ಟಿಡಿಆರ್ ಪರಿಹಾರ ನೀಡುವುದರಿಂದ ಪಾರಾಗಲು   ಸುಪ್ರೀಂ ಕೋರ್ಟ್‌ ಹಿರಿಯ ವಕೀಲರು ಹಾಗೂ ಕಾನೂನು ತಜ್ಞರೊಂದಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ.

 ಬೆಂಗಳೂರು : ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.7 ಎಕರೆ ಜಾಗಕ್ಕೆ ₹3,011 ಕೋಟಿ ಟಿಡಿಆರ್ ಪರಿಹಾರ ನೀಡುವುದರಿಂದ ಪಾರಾಗಲು ಸುಪ್ರೀಂಕೋರ್ಟ್‌ನಲ್ಲಿ ಮುಂದಿನ ಕಾನೂನು ಹೋರಾಟ ಹೇಗೆ ಮಾಡಬೇಕು ಎಂಬ ಕುರಿತು ಸುಪ್ರೀಂ ಕೋರ್ಟ್‌ ಹಿರಿಯ ವಕೀಲರು ಹಾಗೂ ಕಾನೂನು ತಜ್ಞರೊಂದಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ.

ಬಳ್ಳಾರಿ ರಸ್ತೆ ಹಾಗೂ ಜಯಮಹಲ್‌ ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.7 ಎಕರೆ ಜಾಗ ಬಳಕೆಗೆ ಬರೋಬ್ಬರಿ 3,011 ಕೋಟಿ ರು. ಮೊತ್ತದ ಟಿಡಿಆರ್ ಪರಿಹಾರ ನೀಡಲು ನ್ಯಾಯಾಲಯ ಆದೇಶ ನೀಡಿತ್ತು.

ಇಷ್ಟು ಮೊತ್ತದ ಪರಿಹಾರ ನೀಡಿದರೆ ಸರ್ಕಾರಕ್ಕೆ ಹೊರೆ ಆಗಲಿದೆ ಎಂಬ ಕಾರಣಕ್ಕೆ ಜ.23ರಂದು ತುರ್ತು ಸಚಿವ ಸಂಪುಟ ಸಭೆ ನಡೆಸಿದ್ದ ರಾಜ್ಯ ಸರ್ಕಾರ ರಸ್ತೆ ಅಗಲೀಕರಣ ಪ್ರಸ್ತಾಪವನ್ನೇ ಕೈಬಿಟ್ಟು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.

ಕಳೆದ ವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಪ್ರಕರಣದ ವಿಚಾರಣೆ ವೇಳೆ ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ನಿರ್ಣಯವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಿ ರಸ್ತೆ ಅಗಲೀಕರಣ ಪ್ರಸ್ತಾವನೆ ಕೈಬಿಟ್ಟಿದ್ದೇವೆ. ಹೀಗಾಗಿ ₹3,011 ಕೋಟಿ ಟಿಡಿಆರ್‌ ಪರಿಹಾರ ನೀಡುವುದಿಲ್ಲ ಎಂದು ಹೇಳಿತ್ತು.

ಆದರೆ, ಇದನ್ನು ಪುರಸ್ಕರಿಸದ ಸುಪ್ರೀಂ ಕೋರ್ಟ್‌ ₹3,011 ಕೋಟಿ ಟಿಡಿಆರ್‌ ಪರಿಹಾರ ನೀಡುವಂತೆ ನ್ಯಾಯಾಲಯ ಈಗಾಗಲೇ ಆದೇಶ ನೀಡಿದೆ. ಈ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಅಲ್ಲದೆ ನ್ಯಾಯಾಲಯದ ಆದೇಶದ ಪಾಲಿಸದಿದ್ದರೆ ನಿಮ್ಮ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಎಚ್ಚರಿಸಿರುವ ಸುಪ್ರೀಂ ಕೋರ್ಟ್‌ ಮುಂದಿನ ವಿಚಾರಣೆಗೆ ಬಿಬಿಎಂಪಿ ಹಾಗೂ ಬಿಡಿಎ ಆಯುಕ್ತರನ್ನು ಖುದ್ದು ಹಾಜರಾಗುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಂದಿಗ್ಧ ಸ್ಥಿತಿಗೆ ಸಿಲುಕಿರುವ ರಾಜ್ಯ ಸರ್ಕಾರವು ಮುಂದಿನ ಕಾನೂನು ಹೋರಾಟದ ಸಾಧ್ಯತೆಗಳ ಬಗ್ಗೆ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿದೆ.

ಮುಂದಿನ ಕಾನೂನು ಹೋರಾಟ ಬಗ್ಗೆ ಚರ್ಚೆ-ಎಚ್‌ಕೆಪಿ:

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಎರಡು ಕಿ.ಮೀ. ರಸ್ತೆ ಜಾಗಕ್ಕೆ ₹3,011 ಕೋಟಿ ಮೌಲ್ಯದ ಪರಿಹಾರ ನೀಡುವುದು ನ್ಯಾಯಬದ್ಧವಲ್ಲ. ಹೀಗಾಗಿ ರಸ್ತೆ ಅಗಲೀಕರಣ ಪ್ರಸ್ತಾವನೆ ಕೈಬಿಡಲು ತೀರ್ಮಾನಿಸಿದ್ದೇವೆ. ಆದರೆ ಸುಪ್ರೀಂ ಕೋರ್ಟ್‌ ಇದಕ್ಕೆ ಪೂರಕವಾಗಿ ಸ್ಪಂದಿಸಿಲ್ಲ. ಹೀಗಾಗಿ ಮುಂದೆ ಯಾವ ರೀತಿ ಮುಂದುವರೆಯಬೇಕು ಎಂಬ ಕುರಿತು ದೆಹಲಿ ವಕೀಲರು ಹಾಗೂ ಕಾನೂನು ತಜ್ಞರೊಂದಿಗೆ ಚರ್ಚಿಸಿದ್ದೇವೆ ಎಂದು ಹೇಳಿದರು.

₹3,000 ಕೋಟಿ ಪರಿಹಾರ ನೀಡುತ್ತೀರಾ? ಎಂಬ ಪ್ರಶ್ನೆಗೆ, ₹3,000 ಕೋಟಿ ಟಿಡಿಆರ್‌ ನೀಡುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದ್ದು, ನಾಗರಿಕರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈಗಾಗಲೇ ಇಡೀ ಅರಮನೆ ಮೈದಾನವನ್ನು ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಂಡಿರುವ 1997ರ ಕಾಯ್ದೆ ಇನ್ನೂ ಅಸ್ತಿತ್ವದಲ್ಲಿದೆ. ಸುಪ್ರೀಂ ಕೋರ್ಟ್‌ ಇದಕ್ಕೆ ತಡೆಯಾಜ್ಞೆಯನ್ನೂ ನೀಡಿಲ್ಲ. ಹೀಗಿರುವಾಗ ನಮ್ಮದೇ ಜಾಗಕ್ಕೆ ₹3,000 ಕೋಟಿ ಪರಿಹಾರ ನೀಡಲು ಸಾಧ್ಯವೇ? ಹೀಗಾಗಿ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.

ಏನಿದು ಟಿಡಿಆರ್‌ ಪರಿಹಾರ ವಿವಾದ?

ರಾಜ್ಯ ಸರ್ಕಾರವು ರಸ್ತೆ ಅಗಲೀಕರಣ ಉದ್ದೇಶಕ್ಕಾಗಿ 15.7 ಎಕರೆ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಿತ್ತು. ಈ ಜಮೀನಿನ ಪರಿಹಾರಕ್ಕಾಗಿ ಕೋರ್ಟ್‌ ಮೊರೆ ಹೋದ ರಾಜಮನೆತನಕ್ಕೆ ಬಳ್ಳಾರಿ ರಸ್ತೆಯಲ್ಲಿ ಪ್ರತಿ ಚದರ ಮೀ.ಗೆ 2.83 ಲಕ್ಷ ರು.ಗಳಂತೆ ಹಾಗೂ ಜಯಮಹಲ್‌ ರಸ್ತೆಯಲ್ಲಿ 2.04 ಲಕ್ಷ ರು.ಗಳಂತೆ ಒಟ್ಟು 3,011 ಕೋಟಿ ರು. ಮೌಲ್ಯದ ಟಿಡಿಆರ್‌ನ್ನು ಪರಿಹಾರದ ರೂಪದಲ್ಲಿ ನೀಡಲು 2014ರಲ್ಲಿ ಹೈಕೋರ್ಟ್‌ ತೀರ್ಪು ನೀಡಿತ್ತು. ರಾಜ್ಯ ಸರ್ಕಾರ ಆರ್ಥಿಕ ಹೊರೆ ಆಗುತ್ತದೆ ಎಂದು ಇದರ ವಿರುದ್ಧ ಅಪೀಲು ಸಲ್ಲಿಸಿದ್ದರೂ ಹೈಕೋರ್ಟ್‌ ರಾಜ್ಯ ಸರ್ಕಾರದ ಅಪೀಲು ತಿರಸ್ಕರಿಸಿತ್ತು.ಈ ಬಗ್ಗೆ ಡಿ.10 ರಂದು ನಡೆದ ವಿಚಾರಣೆಯಲ್ಲಿ ಆರು ವಾರಗಳ ಒಳಗಾಗಿ ಟಿಡಿಆರ್‌ ಹಕ್ಕು ನೀಡುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು.

 ಬಳಿಕ ರಾಜ ಮನೆತನ ಟಿಡಿಆರ್‌ ಪರಿಹಾರ ನೀಡದ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರಿಂದ ಸರ್ಕಾರದ ಅಧಿಕಾರಿಗಳಿಗೆ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿತ್ತು.ಹೀಗಾಗಿ ರಾಜ್ಯ ಸರ್ಕಾರವು ಟಿಡಿಆರ್‌ ನೀಡುವ ಅಥವಾ ರಸ್ತೆ ಅಗಲೀಕರಣ ಕೈಬಿಡುವ ಇಕ್ಕಟ್ಟಿಗೆ ಸಿಲುಕಿದ್ದಾಗ ಅಂತಿಮವಾಗಿ ಜ.23 ರಂದು ಸಚಿವ ಸಂಪುಟ ಸಭೆ ನಡೆಸಿ ರಸ್ತೆ ಅಗಲೀಕರಣ ಪ್ರಸ್ತಾವನೆಯನ್ನೇ ಕೈಬಿಟ್ಟು ಸುಗ್ರೀವಾಜ್ಞೆ ಹೊರಡಿಸಿತು.

ಇನ್ನು ಜಯಮಹಲ್‌ ರಸ್ತೆ ಅಂಡರ್‌ಪಾಸ್ ನಿರ್ಮಾಣಕ್ಕೆ 1,217 ಚದರ ಮೀಟರ್‌ ಜಾಗ ಹಿಂತಿರುಗಿಸಲು ಸಾಧ್ಯವಿಲ್ಲ. ಹೀಗಾಗಿ ಈ ಜಾಗಕ್ಕೆ ಮಾತ್ರ ಟಿಡಿಆರ್‌ ಪಾವತಿಸಲು ನಿರ್ಧರಿಸಲಾಗಿತ್ತು.ಸುಪ್ರೀಂ ಕೋರ್ಟ್‌ನಲ್ಲಿ ಕಳೆದ ವಾರ ನಡೆದ ವಿಚಾರಣೆ ವೇಳೆ ಸುಗ್ರೀವಾಜ್ಞೆಯನ್ನು ಸುಪ್ರೀಂ ಕೋರ್ಟ್‌ ಪುರಸ್ಕರಿಸಿಲ್ಲ. ಬದಲಿಗೆ ಟಿಡಿಆರ್‌ ಪರಿಹಾರ ನೀಡುವಂತೆ ಮಾಡಿರುವ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಇಕ್ಕಟ್ಟಿಗೆ ಸಿಲುಕಿರುವ ಸರ್ಕಾರವು ಹೊಸ ಕಾನೂನು ಹೋರಾಟದ ಆಯ್ಕೆಗಳನ್ನು ಹುಡುಕುತ್ತಿದೆ.