ಚುನಾವಣಾ ಕಾರ್ಯದಲ್ಲಿ ಕಾರ್ಮಿಕರು: ನಿರ್ಮಾಣ ಕಾರ್ಯಕ್ಕೆ ಕೆಲಸಗಾರರ ಕೊರತೆ

| Published : Apr 02 2024, 02:18 AM IST / Updated: Apr 02 2024, 04:22 AM IST

ಚುನಾವಣಾ ಕಾರ್ಯದಲ್ಲಿ ಕಾರ್ಮಿಕರು: ನಿರ್ಮಾಣ ಕಾರ್ಯಕ್ಕೆ ಕೆಲಸಗಾರರ ಕೊರತೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಪ್ರಚಾರದ ಭರಾಟೆ ನಿಧಾನವಾಗಿ ಹೆಚ್ಚಾಗುತ್ತಿದ್ದಂತೆ ಚುನಾವಣಾ ಕಾರ್ಯದಲ್ಲಿ ತೊಡಗಿಕೊಳ್ಳುವ ಕೂಲಿಕಾರ್ಮಿಕರ ಸಂಖ್ಯೆಯೂ ಜಾಸ್ತಿಯಾಗುತ್ತಿರುವ ಪರಿಣಾಮ ಬೆಂಗಳೂರಿನಲ್ಲಿ ನಿರ್ಮಾಣ ಕಾರ್ಯಗಳಿಗೆ ಕಾರ್ಮಿಕರ ಕೊರತೆ ಉಂಟಾಗುತ್ತಿದೆ.

 ಬೆಂಗಳೂರು :  ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಪ್ರಚಾರದ ಭರಾಟೆ ನಿಧಾನವಾಗಿ ಹೆಚ್ಚಾಗುತ್ತಿದ್ದಂತೆ ಚುನಾವಣಾ ಕಾರ್ಯದಲ್ಲಿ ತೊಡಗಿಕೊಳ್ಳುವ ಕೂಲಿಕಾರ್ಮಿಕರ ಸಂಖ್ಯೆಯೂ ಜಾಸ್ತಿಯಾಗುತ್ತಿರುವ ಪರಿಣಾಮ ಬೆಂಗಳೂರಿನಲ್ಲಿ ನಿರ್ಮಾಣ ಕಾರ್ಯಗಳಿಗೆ ಕಾರ್ಮಿಕರ ಕೊರತೆ ಉಂಟಾಗುತ್ತಿದೆ.

ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಕಟ್ಟಡ ಮತ್ತು ಇತರ ಕಾರ್ಮಿಕರಿದ್ದಾರೆ. ಜತೆಗೆ 3 ಲಕ್ಷಕ್ಕೂ ಹೆಚ್ಚಿನ ಅಸಂಘಟಿತ ಕಾರ್ಮಿಕರಿದ್ದಾರೆ. ಅದರಲ್ಲಿ ಬೆಂಗಳೂರಿನಲ್ಲಿಯೇ 7 ಲಕ್ಷಕ್ಕೂ ಹೆಚ್ಚಿನ ಕಟ್ಟಡ ನಿರ್ಮಾಣ, ಗಾರ್ಮೆಂಟ್ಸ್‌ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿದ್ದಾರೆ. ಆದರೆ, ಕಳೆದೊಂದು ವಾರದಿಂದ ಈಚೆಗೆ ಈ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಚುನಾವಣಾ ಪ್ರಚಾರ ಸೇರಿದಂತೆ ಇನ್ನಿತರ ಕಾರ್ಯಗಳಲ್ಲಿ ತೊಡಗುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಪ್ರಮುಖವಾಗಿ ನಿರ್ಮಾಣ ಕಾಮಗಾರಿಗಳಿಗೆ ಕಾರ್ಮಿಕರ ಕೊರತೆ ಉಂಟಾಗುತ್ತಿದೆ.

ರಾಜ್ಯದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯುವ 14 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಸಾರ್ವಜನಿಕ ಸಭೆ, ಪ್ರಚಾರ ಮೆರವಣಿಗೆ, ಸಮಾವೇಶಗಳು ನಡೆಯುತ್ತಿವೆ. ಆ ಕಾರ್ಯಗಳಿಗೆ ಪಕ್ಷಗಳ ಕಾರ್ಯಕರ್ತರ ಜತೆಗೆ ಜನರನ್ನು ಒಟ್ಟು ಮಾಡಲು ರಾಜಕೀಯ ಪಕ್ಷಗಳು ಕಾರ್ಮಿಕರ ಮೊರೆ ಹೋಗುತ್ತಿವೆ. ಹೀಗಾಗಿಯೇ ಬೆಂಗಳೂರಿನಲ್ಲಿ 7 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರಲ್ಲಿ ಶೇ. 60ಕ್ಕಿಂತ ಹೆಚ್ಚಿನ ಮಂದಿ ತಮ್ಮತಮ್ಮ ಜಿಲ್ಲೆಗಳಿಗೆ ತೆರಳಿ ಚುನಾವಣಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಹೀಗಾಗಿ ನಗರದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳ ಪೈಕಿ 6 ಸಾವಿರಕ್ಕೂ ಹೆಚ್ಚಿನ ಕಾಮಗಾರಿಗಳಿಗೆ ಕಾರ್ಮಿಕರ ಕೊರತೆ ಉಂಟಾಗುವಂತಾಗಿದೆ.

700 ರು.ನಿಂದ 2 ಸಾವಿರ ರು. ಸಂಪಾದನೆ:

ಸಾಮಾನ್ಯವಾಗಿ ಕಟ್ಟಡ ಕಾರ್ಮಿಕರು ಒಂದು ದಿನಕ್ಕೆ 1 ಸಾವಿರ ರು.ವರೆಗೆ ಸಂಪಾದನೆ ಮಾಡುತ್ತಾರೆ. ಅದಕ್ಕಾಗಿ ಬೆಳಗ್ಗೆಯಿಂದ ಸಂಜೆಯವರೆಗೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಅದೇ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡರೆ ಅನಾಯಾಸವಾಗಿ ದಿನಕ್ಕೆ 2 ಸಾವಿರ ರು.ವರೆಗೆ ದುಡಿಯಬಹುದಾಗಿದೆ. ಸದ್ಯ ರಾಜಕೀಯ ಪಕ್ಷಗಳು ನಿಗದಿ ಮಾಡಿರುವಂತೆ ಮನೆಮನೆ ಪ್ರಚಾರ ಕಾರ್ಯಕ್ಕಾಗಿ 700 ರು. ಮತ್ತು ಊಟ, ಚುನಾವಣಾ ರ್‍ಯಾಲಿಗೆ 1 ಸಾವಿರ ರು. ಮತ್ತು ಊಟ ಹಾಗೂ ಸಮಾವೇಶಕ್ಕೆ 2 ಸಾವಿರ ರು. ನೀಡುತ್ತಿವೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾರ್ಮಿಕರು ಚುನಾವಣಾ ಪ್ರಚಾರ ಸೇರಿದಂತೆ ಇನ್ನಿತರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ನಿರ್ಮಾಣ ಕಾಮಗಾರಿಗಳಲ್ಲಿನ ಶೇ. 60ಕ್ಕೂ ಹೆಚ್ಚಿನ ಕಾರ್ಮಿಕರು ಚುನಾವಣೆಗಾಗಿ ತಮ್ಮತಮ್ಮ ಊರುಗಳಿಗೆ ತೆರಳಿದ್ದಾರೆ. ಇದರ ಪರಿಣಾಮ ನಿರ್ಮಾಣ ಕಾಮಗಾರಿ ಸೇರಿದಂತೆ ಇನ್ನಿತರ ಕೆಲಸಗಳಿಗೆ ಸಮಸ್ಯೆಯಾಗುತ್ತಿದೆ.

- ರವಿ, ಕಟ್ಟಡ ಕೂಲಿ ಕಾರ್ಮಿಕರ ಸಂಘಟನೆ ಅಧ್ಯಕ್ಷ