ಸಾರಾಂಶ
ಬೆಂಗಳೂರು : ನೂತನವಾಗಿ ರಚನೆಯಾಗಿರುವ ಐದು ನಗರ ಪಾಲಿಕೆಯ ಆಡಳಿತ ನಿರ್ವಹಣೆ, ಅಧಿಕಾರಿ ಸಿಬ್ಬಂದಿಯ ಮೂರು ತಿಂಗಳ ವೇತನಕ್ಕೆ 300 ಕೋಟಿ ರು. ಬಿಡುಗಡೆಯೊಂದಿಗೆ 500 ಎಂಜಿನಿಯರ್ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಂದ್ರ ಕಚೇರಿಯಲ್ಲಿ ಬುಧವಾರ ಪೂಜೆ ಸಲ್ಲಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ನಾಮಫಲಕ ಅನಾವರಣ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಪಾಲಿಕೆಗಳ ಗಡಿ ಗುರುತಿಸುವ ಕಾರ್ಯ ಬುಧವಾರದಿಂದಲೇ ಆರಂಭಿಸಲಾಗಿದೆ. ಎಲ್ಲಾ ಪಾಲಿಕೆಗಳ ಗಡಿ ಭಾಗಗಳಲ್ಲಿ ಗಡಿ ಗೋಪುರಗಳನ್ನು ನಿರ್ಮಾಣ ಮಾಡಲಾಗುವುದು. ಐದು ಪಾಲಿಕೆಗಳ ಆಡಳಿತಾತ್ಮಕ ವೆಚ್ಚ, ಸಂಬಳ ಹಾಗೂ ನಿವೃತ್ತಿ ವೇತನಕ್ಕೆ 300 ಕೋಟಿ ರು. ಮೊತ್ತವನ್ನು ಬಿಬಿಎಂಪಿಯಿಂದ ನೀಡಲಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಪ್ರತ್ಯೇಕವಾಗಿ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಐದು ನಗರ ಪಾಲಿಕೆಗೆ ನೇಮಿಸಿದ ಆಯುಕ್ತರು ಅಧಿಕಾರ ವಹಿಸಿಕೊಂಡಿದ್ದಾರೆ. ಐದು ನಗರ ಪಾಲಿಕೆಗೆ ಆಡಳಿತಾಧಿಕಾರಿಯಾಗಿ ಜಿಬಿಎ ಮುಖ್ಯ ಆಯುಕ್ತರಾಗಿರುವ ಎಂ.ಮಹೇಶ್ವರ್ ರಾವ್ ಅವರನ್ನು ನೇಮಕ ಮಾಡಲಾಗಿದೆ. ಐದು ಪಾಲಿಕೆಗೆ ಚುನಾವಣೆ ನಡೆದು ಮೇಯರ್ ಆಯ್ಕೆವರೆಗೆ ಮಹೇಶ್ವರ್ ರಾವ್ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಸದ್ಯಕ್ಕೆ ಹೊಸ ಪ್ರದೇಶ ಸೇರ್ಪಡೆ ಇಲ್ಲ:
ಬೆಂಗಳೂರಿಗೆ ಹೊಂದಿಕೊಂಡಿರುವ ಸ್ಥಳೀಯ ಸಂಸ್ಥೆಗಳನ್ನು ಜಿಬಿಎ ವ್ಯಾಪ್ತಿಗೆ ಈಗಲೇ ಸೇರಿಸಿದರೆ ಪ್ರಸ್ತುತ ಗ್ರಾಪಂ, ನಗರಸಭೆ, ಪುರಸಭೆಯ ಪ್ರತಿನಿಧಿಗಳನ್ನು ನಗರ ಪಾಲಿಕೆ ಸದಸ್ಯರು ಎಂದು ಪರಿಗಣಿಸಬೇಕಾಗುತ್ತದೆ. ಮೊದಲು ಈಗ ರಚನೆಯಾಗಿರುವ ಪಾಲಿಕೆಗಳಿಗೆ ಚುನಾವಣೆ ನಡೆದ ನಂತರ ಇತರೇ ಪ್ರದೇಶಗಳ ವಿಲೀನದ ಬಗ್ಗೆ ಭವಿಷ್ಯದಲ್ಲಿ ಯೋಚಿಸಲಾಗವುದು ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಬಿಡಿಎ ಅಧ್ಯಕ್ಷ ಎನ್.ಎ ಹ್ಯಾರೀಸ್, ಶಾಸಕರಾದ ರವಿ ಸುಬ್ರಮಣ್ಯ, ಉದಯ್ ಗರುಡಾಚಾರ್, ಎಸ್.ಟಿ ಸೋಮಶೇಖರ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತರು, ಐದು ನಗರ ಪಾಲಿಕೆ ಆಯುಕ್ತರಿದ್ದರು.
ಸಿಎಂ ಅಧ್ಯಕ್ಷತೆಯಲ್ಲಿ ಶೀಘ್ರ ಜಿಬಿಎ ಸಭೆ:
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಐದು ಪಾಲಿಕೆ ರಚನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದೇನೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಮಿತಿ ರಚನೆ ಮಾಡಲಾಗಿದ್ದು, ಶೀಘ್ರದಲ್ಲಿ ಪ್ರಾಧಿಕಾರದ 75 ಮಂದಿ ಸದಸ್ಯರೊಂದಿಗೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ದಿನಾಂಕವನ್ನು ನಿಗದಿಪಡಿಸಿ ಮಾಹಿತಿ ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.