ಸಾರಾಂಶ
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು : ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ನವೆಂಬರ್‌ನಲ್ಲಿ ಆಯೋಜಿಸಲಿರುವ ಬಹು ನಿರೀಕ್ಷಿತ ಕೃಷಿ ಮೇಳದಲ್ಲಿ ಕೃಷಿ ಇಂಜಿನಿಯರಿಂಗ್ ತಂತ್ರಜ್ಞಾನದಡಿ ಸೂರ್ಯಕಾಂತಿ, ಹರಳು, ಮುಸುಕಿನ ಜೋಳ ಸುಲಿಯುವ ಯಂತ್ರ ಸೇರಿ ಒಟ್ಟಾರೆ ಏಳು ಯಂತ್ರಗಳು ಅನಾವರಣಗೊಳ್ಳಲಿವೆ.ಹೆಬ್ಬಾಳದ ಜಿಕೆವಿಕೆಯಲ್ಲಿ ನ.13 ರಿಂದ 16 ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಕೃಷಿ ಮೇಳದಲ್ಲಿ ಕೊಯ್ಲೋತ್ತರ ಕ್ಷೇತ್ರದ ನೂತನ ಯಂತ್ರಗಳ ಪ್ರಾತ್ಯಕ್ಷಿಕೆಯೂ ಇದ್ದು, ಸಾರ್ವಜನಿಕರಿಗೆ ಇವುಗಳ ಉಪಯೋಗದ ಬಗ್ಗೆ ಮಾಹಿತಿ ದೊರೆಯಲಿದೆ. ಈಗಾಗಲೇ ನೀಲಿ ತಿರುಳನ್ನು ಹೊಂದಿರುವ ಕಪ್ಪು ಅರಿಶಿಣ, ಅಧಿಕ ಇಳುವರಿಯ ಸೂರ್ಯಕಾಂತಿ ಸೇರಿ ಐದು ತಳಿಗಳು ಲೋಕಾರ್ಪಣೆಗೆ ಸಿದ್ಧವಿದ್ದು, ಇವುಗಳ ಜೊತೆಯಲ್ಲೇ ಈ ಏಳು ನೂತನ ಯಂತ್ರಗಳ ಅನಾವರಣವೂ ನಡೆಯಲಿದೆ.
ಹರಳು ಸಿಪ್ಪೆ ಸುಲಿವ ಯಂತ್ರ:
ಗುಜರಾತ್‌ನಲ್ಲಿ ಹೆಚ್ಚಾಗಿ ಹರಳು ಬೆಳೆಯುತ್ತಿದ್ದು ಸದ್ಯ ರಾಜ್ಯದಲ್ಲೂ ಹರಳು ಬೆಳೆಯುವವರ ಸಂಖ್ಯೆ ಹೆಚ್ಚತೊಡಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿವಿಯು ಹರಳು ಸಿಪ್ಪೆ ಸುಲಿಯುವ ಯಂತ್ರವನ್ನು ಆವಿಷ್ಕರಿಸಿದೆ.45 ಕೆಜಿ ತೂಕವಿರುವ ಈ ಯಂತ್ರವನ್ನು ಒಬ್ಬರೇ ನಿರ್ವಹಿಸಬಹುದಾಗಿದ್ದು, ಕಾರ್ಯಕ್ಷಮತೆ ಶೇ.98ರಷ್ಟಿದೆ. 0.5 ಎಚ್.ಪಿ ಮೋಟಾರ್ ಅಳವಡಿಸಿದ್ದು ಸಿಂಗಲ್ ಫೇಸ್‌ನಲ್ಲೂ ಕಾರ್ಯ ನಿರ್ವಹಿಸಲಿದೆ. ಒಂದು ತಾಸಿಗೆ ಒಂದು ಕ್ವಿಂಟಲ್ ಬೀಜದ ಸಿಪ್ಪೆ ಸುಲಿಯಲಿದ್ದು, ಅಂದಾಜು ಮೌಲ್ಯ 30 ಸಾವಿರ ರು. ಆಗಿದೆ. ವಾಣಿಜ್ಯ ಉದ್ದೇಶಕ್ಕೆ ತಂತ್ರಜ್ಞಾನ ಲಭ್ಯವಿದೆ ಎನ್ನುತ್ತಾರೆ ಐಸಿಎಆರ್‌ನ ಜಿಕೆವಿಕೆ ಸಹಾಯಕ ಸಂಶೋಧನಾ ಇಂಜಿನಿಯರ್ ಡಾ.ದರ್ಶನ್.
ಮೊಳಕೆ ಖಾತ್ರಿ ಶೇ.95:
ಸೂರ್ಯಕಾಂತಿ ಒಕ್ಕಣೆ ಹಾಗೂ ಸಿಪ್ಪೆ ಸುಲಿಯುವ ಯಂತ್ರವನ್ನು ವಿವಿ ಆವಿಷ್ಕರಿಸಿದ್ದು, ಈ ಯಂತ್ರದಲ್ಲಿ ಒಕ್ಕಣೆ ಮಾಡಿದ ಕಾಳುಗಳು ಶೇ.95 ರಷ್ಟು ಪ್ರಮಾಣದಲ್ಲಿ ಮೊಳಕೆಯೊಡೆಯುವುದು ವಿಶೇಷ. 50 ಕೆ.ಜಿ. ತೂಕದ ಈ ಯಂತ್ರದ ಮೌಲ್ಯ ಸುಮಾರು 40 ಸಾವಿರ ರು. ಎಂದು ವಿವಿ ತಿಳಿಸಿದೆ.
ಒಬ್ಬರೇ ಇದನ್ನು ನಿರ್ವಹಿಸಬಹುದಾಗಿದ್ದು, ಒಂದು ಎಚ್.ಪಿ.ಮೋಟಾರ್ ಅಳವಡಿಸಿದ್ದು ಸಿಂಗಲ್ ಫೇಸ್ ನಲ್ಲಿ ಕಾರ್ಯನಿರ್ವಹಿಸಲಿದೆ. ಸೂರ್ಯಕಾಂತಿ ತೆನೆಯಿಂದ ಬೀಜ ತೆಗೆಯುವ ಜೊತೆಗೆ, ಬೀಜದಿಂದ ಸಿಪ್ಪೆಯನ್ನೂ ಸುಲಿಯಲಿದೆ. ಎಣ್ಣೆ ತೆಗೆಯಲು, ಬೀಜ ಹುರಿದು ಬಳಸಲು ಸಹಾಯಕವಾಗಲಿದೆ. ಗಂಟೆಗೆ 200 ರಿಂದ 250 ತೆನೆಯಲ್ಲಿ 15 ರಿಂದ 18 ಕೆ.ಜಿ. ಕಾಳು ಬೇರ್ಪಡಿಸಬಲ್ಲದು.
ದ್ವಿಮುಖ ಸಿಪ್ಪೆ ಸುಲಿತ
:ಎರಡೂ ಭಾಗದಿಂದಲೂ ಕಾರ್ಯನಿರ್ವಹಿಸುವ ಮುಸುಕಿನ ಜೋಳದ ದ್ವಿಮುಖ ಸಿಪ್ಪೆ ಸುಲಿಯುವ ಯಂತ್ರವನ್ನು ವಿವಿ ಸಂಶೋಧಿಸಿದೆ. 0.5 ಎಚ್.ಪಿ ಮೋಟರ್‌ನಿಂದ ಸಿಂಗಲ್ ಫೇಸ್ ವಿದ್ಯುತ್‌ನಲ್ಲಿ ಇದು ಕಾರ್ಯನಿರ್ವಹಿಸಲಿದೆ. ಅಂದಾಜು ಮೌಲ್ಯ 24 ಸಾವಿರ ರು. ಆಗಿದ್ದು, ಗಂಟೆಗೆ 600 ರಿಂದ 650 ತೆನೆಗಳಂತೆ, 50 ರಿಂದ 60 ಕೆ.ಜಿ. ಬೀಜ ಬಿಡಿಸಲಿದೆ.
ಕೊಯ್ಲಿನ ನಂತರದಲ್ಲಿ ಬಳಸುವ ಸಂಸ್ಕರಣ ಯಂತ್ರ ಇದಾಗಿದೆ. ಇದಲ್ಲದೆ ಕೈ ಚಾಲಿತ ರಾಗಿ ಕೂರಿಗೆ, ಜೇನುತುಪ್ಪ ತೆಗೆಯುವ ಯಂತ್ರ ಸೇರಿ ಏಳು ನೂತನ ಯಂತ್ರಗಳು ಕೃಷಿ ಮೇಳದಲ್ಲಿ ಲೋಕಾರ್ಪಣೆಗೊಳ್ಳಲಿವೆ.ಪ್ರಸಕ್ತ ನಗರಗಳಿಗೆ ವಲಸೆ ಹೆಚ್ಚಾಗಿದ್ದು, ಕೃಷಿ ಕೂಲಿ ಕಾರ್ಮಿಕರ ಕೊರತೆ ಕಾಡುತ್ತಿದೆ. ಕೃಷಿ ಲಾಭದಾಯಕವಾಗಬೇಕು ಎಂದರೆ ಯಂತ್ರೋಪಕರಣ ಬಳಸಬೇಕು. ಅದಕ್ಕಾಗಿ ವಿವಿ ಕೃಷಿ ಯಾಂತ್ರೀಕರಣಕ್ಕೆ ಆದ್ಯತೆ ನೀಡುತ್ತಿದೆ.
-ಡಾ. ಎಸ್.ವಿ ಸುರೇಶ್, ಕೃಷಿ ವಿವಿ ಉಪಕುಲಪತಿ
;Resize=(128,128))
;Resize=(128,128))
;Resize=(128,128))
;Resize=(128,128))