ಸಾರಾಂಶ
ಬೆಂಗಳೂರು : ರಾಜ್ಯ ಸರ್ಕಾರ ಡಿಜಿಟಲ್ ಯುಗದ ಕಾರ್ಮಿಕರ ಸುರಕ್ಷತೆಗೆ ಸಹಕಾರಿಯಾಗುವ ಗಿಗ್ ವರ್ಕರ್ಸ್ ಕಾಯ್ದೆ ಜಾರಿಗೆ ತರಲಿದ್ದು, ಇದರಿಂದ ಗಿಗ್ ವರ್ಕರ್ಸ್ ಜೀವನದ ಗುಣಮಟ್ಟ ಸುಧಾರಣೆಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶುಕ್ರವಾರ ನಗರದ ಗಾಂಧಿಭವನದಲ್ಲಿ ಕರ್ನಾಟಕ ಬಂಜಾರ ಮಹಾಸಭಾ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಿಗ್ಗಿ, ಜೊಮಾಟೋದಂತಹ ಫುಡ್ ಡೆಲಿವರಿ ಸೇವೆಗಳು, ಇ-ಕಾಮರ್ಸ್ ಡೆಲಿವರಿ ಸ್ಟಾಫ್, ಪೂರ್ಣಕಾಲಿಕ, ಅರೆಕಾಲಿಕ ಡೆಲಿವರಿ ನೌಕರರು, ಓಲಾ, ಉಬರ್‌ನಂತ ರೈಡ್-ಶೇರಿಂಗ್ ಸೇವೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಉದ್ಯೋಗ ಭದ್ರತೆ ಜೊತೆಗೆ ಆರ್ಥಿಕ ಸ್ಥಿರತೆ ತರಲು ಗಿಗ್ ವರ್ಕರ್ಸ್ ಕಾಯ್ದೆ ತರಲಾಗುತ್ತಿದೆ. ಇದರಿಂದ ಕಾರ್ಮಿಕರಿಗೆ ಹೆಚ್ಚು ಲಾಭವಾಗಲಿದ್ದು, ಕಂಪನಿಗಳನ್ನು ನಿಯಂತ್ರಣಕ್ಕೆ ತರಲಾಗುವುದು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಇತಿಹಾಸದಲ್ಲಿ ಸಿಗಬೇಕಾದಂತ ಸ್ಥಾನಮಾನ 100 ವರ್ಷ ಕಳೆದರೂ ಸಿಕ್ಕಿಲ್ಲ. ಆಧುನಿಕ ಭಾರತವನ್ನು ಕಟ್ಟಿದ ವ್ಯಕ್ತಿ, ವಿಶ್ವದ ಅತ್ಯಂತ ದೊಡ್ಡ ಸಂವಿಧಾನವನ್ನು ಕೊಟ್ಟಂತ ಅಂಬೇಡ್ಕರ್ ಅವರನ್ನು ಮರೆತಿದ್ದೇವೆ. ಅಂಬೇಡ್ಕರ್ ಕಾನೂನು. ಆರ್ಥಿಕ ತಜ್ಞರು ಎನ್ನುವುದನ್ನು ಮರೆತಿದ್ದು, ಅವರನ್ನು ದಲಿತ ನಾಯಕ ಅನ್ನುವುದಕ್ಕೆ ಸೀಮಿತ ಮಾಡಿಟ್ಟಿದ್ದೇವೆ. ಇದು ನಾವು ಅವರಿಗೆ ಮಾಡುತ್ತಿರುವ ದೊಡ್ಡ ಮೋಸ ಎಂದು ಬೇಸರ ವ್ಯಕ್ತಪಡಿಸಿದರು.
ಅಮೇರಿಕಾ, ಲಂಡನ್ ಸೇರಿದಂತೆ ಇತರೆ ಹೊರ ದೇಶಗಳಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡಲಾಗಿದ್ದು, ಅದೇ ನಮ್ಮ ಕರ್ನಾಟಕದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಈಗಲು ಹಿಂದೇಟು ಹಾಕುತ್ತಿದ್ದಾರೆ. ಅಂಬೇಡ್ಕರ್ ಅವರು, ದೇಶದ ಮೊದಲ ಕಾನೂನು ಸಚಿವರಾಗಿ ನೀಡಿದ ಅತ್ಯಂತ ಗಮನಾರ್ಹ ಕೊಡುಗೆ, ಹಿಂದೂ ವೈಯಕ್ತಿಕ ಕಾನೂನನ್ನು ಕ್ರೋಢೀಕರಿಸಲು ಮತ್ತು ಸುಧಾರಿಸಲು ಹಾಗೂ ಮಹಿಳೆಯರಿಗೆ ವೈಯಕ್ತಿಕ ವಿಷಯಗಳಲ್ಲಿ ಸಮಾನ ಹಕ್ಕುಗಳನ್ನು ನೀಡಲು ಪ್ರಯತ್ನಿಸುವ ಹಿಂದೂ ಸಂಹಿತೆ ಮಸೂದೆಯನ್ನು ಮಂಡಿಸಿದ್ದು ಎಂದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಸಂವಿಧಾನದ ವಿವಿಧ ಅಂಶಗಳ ಕುರಿತು ಅಂಬೇಡ್ಕರ್ ಅವರ ಮಧ್ಯಸ್ಥಿಕೆಗಳು ಮತ್ತು ಭಾಷಣಗಳು ಒಳನೋಟವುಳ್ಳವು, ತಾರ್ಕಿಕ ಮತ್ತು ಸೂಕ್ಷ್ಮವಾಗಿ ಸಂಶೋಧಿಸಲ್ಪಟ್ಟವು ಆಗಿದ್ದವು. ಅಂಬೇಡ್ಕರ್ ಅವರ ತತ್ವ, ಸಿದ್ಧಾಂತ ಮತ್ತು ಶೋಷಿತರ ಅಭಿವೃದ್ಧಿಗೆ ಹಾಕಿಕೊಟ್ಟ ಯೋಜನೆಗಳು ಮಾರ್ಗದರ್ಶನೀಯ ಎಂದು ಹೇಳಿದರು.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಜಯದೇವ ನಾಯ್ಕ್, ವಿಧಾನ ಪರಿಷತ್ತು ಮಾಜಿ ಮುಖ್ಯಸಚೇತಕ ಪ್ರಕಾಶ ರಾಥೋಡ್, ಕಾಂತಾ ನಾಯ್ಕ್, ತಾಂಡಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಜಲಜಾ ನಾಯ್ಕ್, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ, ವಕೀಲ ಅನಂತ ನಾಯ್ಕ್ ಇದ್ದರು.
ಗೌರವ ಸನ್ಮಾನ:
ರಾಜ್ಯಕ್ಕೆ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಪಡೆದ ಸಂಜನಾ ಬಾಯಿ, ರಾಷ್ಟ್ರಪತಿ ಪದಕ ಪಡೆದ ಡಿವೈಎಸ್ಪಿ ಜಯರಾಜ್, ಮತ್ತು ಡಿವೈಎಸ್ಪಿ ಪದೋನ್ನತಿ ಪಡೆದ ಕೃಷ್ಣ ಲಮಾಣಿ ಅವರನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರು ಸನ್ಮಾನಿಸಿದರು. ಇದೇ ವೇಳೆ ವಿದ್ಯಾರ್ಥಿನಿಯ ಉನ್ನತ ವಿದ್ಯಾಭ್ಯಾಸಕ್ಕಾಗಿ ಸಮುದಾಯದಿಂದ ₹2 ಲಕ್ಷ ಶಿಷ್ಯವೇತನ ನೀಡಿ ಗೌರವಿಸಲಾಯಿತು.
)
)
;Resize=(128,128))
;Resize=(128,128))
;Resize=(128,128))
;Resize=(128,128))