ಭಾರತೀಯ ಮುಸ್ಲಿಮರಿಗೆ ಗೌರವ, ಆದರೆ ಭಾರತದ ಮುಸ್ಲಿಮರಿಗಲ್ಲ: ಅನಂತಕುಮಾರ್ ಹೆಗಡೆ

| Published : Feb 22 2024, 01:53 AM IST / Updated: Feb 22 2024, 11:31 AM IST

Ananthkumar Hegde
ಭಾರತೀಯ ಮುಸ್ಲಿಮರಿಗೆ ಗೌರವ, ಆದರೆ ಭಾರತದ ಮುಸ್ಲಿಮರಿಗಲ್ಲ: ಅನಂತಕುಮಾರ್ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಮುಸ್ಲಿಮರನ್ನು ಯಾವತ್ತೂ ಗೌರವಿಸುವೆ.ಆದರೆ ಪಾಕ್ ಜಿಂದಾಬಾದ್ ಎನ್ನುವ ಮುಸ್ಲಿಮರನ್ನಲ್ಲ. ನನಗೆ ಟಿಕೆಟ್‌ ಕೊಡದಿದ್ರೆ ಟಿಕೆಟ್ ಸಿಕ್ಕ ಬಿಜೆಪಿಗನನ್ನು ಗೆಲ್ಲಿಸುವೆ ಎಂದು ಕನ್ನಡಪ್ರಭದ ಸಹೋದರಸಂಸ್ಥೆ ಏಷ್ಯನೆಟ್ ಸುವರ್ಣ ನ್ಯೂಸ್‌ಗೆ ಅನಂತಕುಮಾರ್ ಹೆಗಡೆ ‘ಮುಖಾಮುಖಿ’ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ಲೋಕಸಭಾ ಚುನಾವಣೆ ಬ‍ಳಿಕ ಹೆಚ್ಚೂ ಕಡಮೆ ಸಾರ್ವಜನಿಕ ವಲಯದಿಂದ ಹಾಗೂ ಬಿಜೆಪಿ ಸಂಘಟನೆಯಿಂದ ದೂರ ಉಳಿದಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಅವರು ಈಗ ಮತ್ತೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಎಚ್ಚೆತ್ತುಕೊಂಡು ಓಡಾಡುತ್ತಿದ್ದಾರೆ. 

ಹಿಂದುತ್ವದ ಮಂತ್ರ ಮತ್ತೆ ಜೋರಾಗಿಯೇ ಪಠಿಸುತ್ತಿದ್ದಾರೆ. ಆರು ಬಾರಿ ಸಂಸದರಾಗಿರುವ ಅನಂತಕುಮಾರ್ ಹೆಗಡೆ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂಬ ಅಭಿಪ್ರಾಯ ಸ್ವಪಕ್ಷೀಯರಿಂದಲೇ ಕೇಳಿಬರುತ್ತಿದೆ. 

ಆದರೆ, ಅವರನ್ನು ಕಡೆಗಣಿಸಿ ಮತ್ತೊಬ್ಬರಿಗೆ ಟಿಕೆಟ್ ನೀಡುವುದು ಸುಲಭ ಅಲ್ಲ ಎಂಬ ಅತಂಕವೂ ವರಿಷ್ಠರನ್ನು ಕಾಡುತ್ತಿದೆ. ಚುನಾವಣೆ ಎದುರಾದ ಹಿನ್ನೆಲೆ ಅವರು ಕನ್ನಡಪ್ರಭದ ಸಹೋದರ ಸಂಸ್ಥೆ ಏಷ್ಯನೆಟ್ ಸುವರ್ಣ ನ್ಯೂಸ್‌ಗೆ ‘ಮುಖಾಮುಖಿ’ಯಾದಾಗ..

ನಾಲ್ಕೂವರೆ ವರ್ಷ ನಾಪತ್ತೆಯಾಗಿದ್ದಿರಿ. ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ ಕಾಣಿಸಿಕೊಂಡಿದ್ದೀರಿ ಎಂಬ ಟೀಕೆಗಳು ಕೇಳಿಬರುತ್ತಿವೆ?
ಜನ ಚರ್ಚೆ ಮಾಡುತ್ತಾರೆ. ಎಲ್ಲರಿಗೂ ಎಲ್ಲಾ ವಿಷಯಕ್ಕೂ ಎಲ್ಲಾ ಸಂದರ್ಭಗಳಲ್ಲಿ ಉತ್ತರ ಕೊಡುವ ಅಗತ್ಯ ಇದೆ ಎಂದು ನಾನು ಭಾವಿಸುವುದಿಲ್ಲ. ಚುನಾವಣೆ ನಂತರದ ದಿನಗಳಲ್ಲಿ ಎಲ್ಲರ ಜತೆಗೆ ನಮ್ಮ ಕ್ಷೇತ್ರದಲ್ಲಿ ಓಡಾಟ ಮಾಡಿದೆ. 

ಆನಂತರ ಕೋವಿಡ್‌ ಬಂದಿತು. ಬಳಿಕ ಅನಾರೊಗ್ಯದ ಕಾರಣದಿಂದ ಸುಮಾರು ಎರಡೂವರೆ ವರ್ಷಗಳ ಕಾಲ ಎಲ್ಲಿಯೂ ಓಡಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸ್ವಾಭಾವಿಕವಾಗಿ ಈ ವಿಚಾರ ತುಂಬಾ ಜನರಿಗೆ ಗೊತ್ತಿದೆ. 

ಈಗ ಸುಮಾರು ಒಂದು ವರ್ಷದಿಂದ ಈಚೆಗೆ ಕ್ಷೇತ್ರದಲ್ಲಿ ಓಡಾಟ ಶುರು ಮಾಡಿದ್ದೇನೆ. ನಾಲ್ಕೂವರೆ ವರ್ಷದಿಂದ ನಾಪತ್ತೆ ಎನ್ನುವುದು ಅವರವರ ಭಾವಕ್ಕೆ. ಅವರವರ ಭಕುತಿಗೆ.

ರಾಜಕೀಯ ಮರುಪ್ರವೇಶಕ್ಕೆ ನೀವು ಮುಸ್ಲಿಂ ವಿರೋಧಿ ಹೇಳಿಕೆ ಬಳಸಿಕೊಳ್ಳುತ್ತೀರಿ? ಈ ಬಾರಿಯೂ ಹಾಗೆ ಆಯಿತು ಅನಿಸುವುದಿಲ್ಲವೇ?
ನಾವು ಹೇಳುವ ಬಾಕಿ ವಿಷಯಗಳನ್ನು ಚರ್ಚೆ ಮಾಡುವುದಿಲ್ಲ. ಇದೊಂದೇ ವಿಷಯ ಚರ್ಚೆ ಮಾಡುತ್ತಾರೆ. ಅನೇಕ ವಿಷಯಗಳ ಬಗ್ಗೆ ನಾವು ಚರ್ಚಿಸುತ್ತೇವೆ. 

ಜನರ ಜತೆಗೆ ಮಾತನಾಡುತ್ತೇವೆ, ವಿಷಯಗಳನ್ನು ಹಂಚಿಕೊಳ್ಳುತ್ತೇನೆ. ಮಾಧ್ಯಮವರು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ, ಅಷ್ಟು ಮಾತ್ರ ಕತ್ತರಿಸಿ ಹೈಲೆಟ್‌ ಮಾಡುವುದು ತುಂಬಾ ಒಳ್ಳೆಯ ಕಲೆಗಾರಿಕೆ.

ನೀವು ಮತ್ತೆ ರಾಜಕೀಯ ಮುಖ್ಯವಾಹಿನಿಗೆ(ಲೈಮ್‌ಲೇಟ್‌) ಬರಲು ಇಂತಹ ಹೇಳಿಕೆಯ ಅಗತ್ಯ ಇತ್ತಾ?
ಮುಖ್ಯವಾಹಿನಿಗೆ ಬರಬೇಕು ಅಥವಾ ಬರಬಾರದು ಎಂದೇನಿಲ್ಲ. ನಾನು ಸ್ವಾಭಾವಿಕವಾಗಿಯೇ ಇದ್ದೆ. ಆದರೆ, ಮಾಧ್ಯಮದವರು ತಮಗೆ ಸಿಕ್ಕ ಅವಕಾಶದಲ್ಲಿ ನನ್ನನ್ನು ಹೈಲೆಟ್‌ ಮಾಡುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಅವರಿಗೆ ಧನ್ಯವಾದ ಹೇಳುತ್ತೇನೆ.

ಪ್ರಧಾನಿ ನರೇಂದ್ರ ಮೋದಿ ಪರಿವರ್ತನೆಯ ಸಮಯದಲ್ಲಿ ಇದ್ದಾರೆ ಎನಿಸುತ್ತಿದೆ. ತಾನೊಬ್ಬ ಜಾತ್ಯಾತೀತ ವ್ಯಕ್ತಿಯಾಗಿ ಕಾಣಿಸಿಕೊಳ್ಳಬೇಕು ಎಂಬ ಹುರುಪಿನಲ್ಲಿ ಇದ್ದಾರೆ ಅನಿಸುತ್ತದೆ. ಹೀಗಿರುವಾಗ ನೀವು ಬಿಜೆಪಿ ಸಂಸದರಾಗಿ ಇಂತಹ ಹೇಳಿಕೆ ನೀಡುವುದರಿಂದ ಮೋದಿ ಅವರಿಗೆ ಮುಜುಗರ ಆಗುವುದಿಲ್ಲವೇ?
ನಮ್ಮ ಪಕ್ಷ ಬೆಳೆದಿರುವ ಹಿನ್ನೆಲೆ, ಸಂಸ್ಕೃತಿ ಹಾಗೂ ಪ್ರಧಾನಿ ಮೋದಿ ಅವರ ಬೆಳೆದು ಬಂದಿರುವ ಹಿನ್ನೆಲೆ ನೋಡಬೇಕು. ಇತ್ತೀಚಿನ ದಿನಗಳಲ್ಲಿ ದೇಶದ ಅಭಿವೃದ್ಧಿ ಓಘ ಹೆಚ್ಚಾಗಿದೆ. 

ಈ ಹಿಂದೆ ಹೇಳಿದ ಎಲ್ಲಾ ಘೋಷಣೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿರಲಿಲ್ಲ. ಕೆಲವು ಘೋಷಣೆಗಳಾಗಿಯೇ ಉಳಿಯುತ್ತಿದ್ದವು. ಇದಕ್ಕೆ ಕಾರಣ ದೇಶದ ಆರ್ಥಿಕತೆ. ಈಗ ದೇಶದ ಆರ್ಥಿಕತೆಗೆ ದೊಡ್ಡ ಶಕ್ತಿ ಬಂದಿದೆ. ಹೇಳಿದ್ದನ್ನು ಮಾಡಬಹುದಾಗಿದೆ. 

ಹೀಗಾಗಿ ದೇಶವನ್ನು ಅಭಿವೃದ್ಧಿಗೆ ಹೆಚ್ಚು ತೊಡಗಿಸುವ ಪ್ರಯತ್ನ ನಡೆದಿದೆ. ಅದು ಆಗಲೇಬೇಕು, ಆಗುತ್ತಿದೆ. ಬೇರು ಇಲ್ಲದ ಮರದ ಕಲ್ಪನೆ ಅಸಾಧ್ಯ. ಪ್ರಧಾನಿ ಮೋದಿ ಅವರು ತಮ್ಮತನ ಬಿಟ್ಟಿದ್ದಾರೆ. ನಮ್ಮ ಮಾತುಗಳಿಂದ ಅವರಿಗೆ ಮುಜುಗರವಾಗುತ್ತದೆ ಎಂದು ಹೇಳುವುದರಲ್ಲಿ ಸತ್ಯವಿಲ್ಲ.

ಆರ್‌ಎಸ್‌ಎಸ್‌ನ ಸರಸಂಘ ಚಾಲಕರೇ ಪ್ರತಿ ಮಸೀದಿ ಕೆಳಗೆ ಶಿವಲಿಂಗ ಹುಡುಕುವುದು ಬೇಡ ಎನ್ನುತ್ತಾರೆ. ನೀವು ನಿಮ್ಮ ಭಾಷಣದಲ್ಲಿ ಒಂದು ಮಸೀದಿಯನ್ನು ಬಿಡುವುದಿಲ್ಲ, ಎಲ್ಲಾ ಮಸೀದಿಗಳನ್ನು ವಾಪಾಸ್‌ ಪಡೆಯುತ್ತೇವೆ ಎಂದು ಹೇಳುತ್ತೀರಿ?
ಮಸೀದಿ ಕೆಳಗೆ ಶಿವಲಿಂಗ ಹುಡುಕಬೇಕು ಎಂದೇನಿಲ್ಲ. ಅದು ಕಾಣುತ್ತದೆ. ಶಿವಲಿಂಗ ಕಂಡಾಗ ಕೈ ಮುಗಿಯುವುದು ಸದ್ಭಾವ. ಹೀಗಾಗಿ ಕೈ ಮುಗಿಯುತ್ತೇವೆ. 

ಕಾಶಿ, ಅಯೋಧ್ಯೆ, ಮಥುರ ಆಯಿತು. ದೇಶದಲ್ಲಿ ಇನ್ನೂ ಲಕ್ಷಾಂತರ ಸಂಖ್ಯೆಯಲ್ಲಿ ದೇವಸ್ಥಾನಗಳು, ಮಠ-ಮಂದಿರಗಳು ಇವೆ. ಇಸ್ಲಾಂ ಆಕ್ರಮಣದಿಂದ ಧ್ವಂಸ ಆಗಿವೆ. 

ಈ ಬಗ್ಗೆ ಇತಿಹಾಸ ನೋಡಿದಾಗ, ಓದಿದಾಗ ಹೃದಯಕ್ಕೆ ಬೆಂಕಿ ಬೀಳುತ್ತದೆ. ನಾವು ಇಷ್ಟೊಂದು ಕಳೆದುಕೊಂಡೆವಾ? ಇಷ್ಟು ದಯಾನೀಯ ಸ್ಥಿತಿ ಬಂದಿತ್ತಾ ಎನಿಸುತ್ತದೆ. 

ಒಮ್ಮೊಮ್ಮೆ ವಾಪಸ್‌ ಪಡೆದುಕೊಳ್ಳಬೇಕು ಎನಿಸುತ್ತದೆ. ಇದು ಸ್ವಾಭಿಮಾನಿ ಪೌರುಷದ ಲಕ್ಷಣ. ಧರ್ಮ, ಸಂಸ್ಕೃತಿ ಅರಿವು ಹಾಗೂ ಇತಿಹಾಸದ ಪರಿಚಯ ಇದ್ದವರಿಗೆ ಸ್ವಾಭಾವಿಕವಾಗಿ ಹೀಗೆ ಅನಿಸುತ್ತದೆ. 

ಹಿಂದೂ-ಮುಸ್ಲಿಂ ಭಾವೈಕ್ಯತೆ ಶಬ್ದ ನಿಮ್ಮ ಕಿವಿಗೆ ಬಿದ್ದಾಗ ಏನನಿಸುತ್ತದೆ?
ಏನೋ ನಮಗೆ ಗೊತ್ತಿಲ್ಲದ ವಿಷಯವನ್ನು ಹೊಸದಾಗಿ ತುರುಕುವ ಪ್ರಯತ್ನ ನಡೆಯುತ್ತಿದೆಯೇನೋ ಅನಿಸುತ್ತದೆ. ಇದು ನಾಟಕ ಅನಿಸುತ್ತದೆ. ಹಿಂದುತ್ವ ಎಂಬುದೇ ಭಾವೈಕ್ಯತೆ. 

ಹಿಂದುತ್ವ ಪೂಜಾ ಪದ್ಧತಿ ಅಲ್ಲ. ಸಂಕುಚಿತ ಕಲ್ಪನೆ ಅಲ್ಲ. ಹಿಂದುತ್ವ ಎಂಬುದು ಸಮಷ್ಟಿ ಕಲ್ಪನೆ. ಇದು ಅರ್ಥವಾಗದವರು ಹಿಂದುತ್ವದೊಳಗೆ ಭಾವೈಕ್ಯತೆ ತುರುಕುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. 

ಯಾರು ಕೆಟ್ಟದ್ದನ್ನು ದೂಷಿಸುತ್ತಾನೋ ಆತ ಹಿಂದು. ಇದು ಹಿಂದುತ್ವದ ಕಲ್ಪನೆ. ಹಿಂದುತ್ವ ಪೂಜಾ ಪದ್ಧತಿ ಅಲ್ಲ. ಸಾಂಪ್ರಾದಾಯಿಕ ಚೌಕಟ್ಟು ಇಲ್ಲ. ಮತವೂ ಅಲ್ಲ. ಇದೊಂದು ಧರ್ಮ. ಇದೊಂದು ಜೀವನ ಪದ್ಧತಿ. ಸಿದ್ಧಾಂತ. ನಂಬಿಕೆ. ಇದನ್ನು ಸೀಮಿತ ಚೌಕಟ್ಟಿನಲ್ಲಿ ಕೂಡಿ ಹಾಕಲು ಸಾಧ್ಯವಿಲ್ಲ. 

ಪ್ರಧಾನಿ ಮೋದಿ ಅವರು ಅರಬ್‌ ನೆಲದ ಮೇಲೆ ನಿಂತು ಅರಬ್‌ ದೊರೆಯನ್ನು ಮೈ ಬ್ರದರ್‌ ಎಂದು ಕರೆದಾಗ ವಿಶ್ವಗುರು, ಮಹಾನಾಯಕ ಎನ್ನುತ್ತೀರಿ. ಅದೇ ಕಾಂಗ್ರೆಸ್‌ ನಾಯಕರು ಬ್ರದರ್ಸ್‌ ಎಂದರೆ ಮುಸ್ಲಿಂ ತುಷ್ಟೀಕರಣ ಎನ್ನುತ್ತೀರಿ. ಈ ಬಗ್ಗೆ ಏನು ಹೇಳುವಿರಿ?
ನಾವು ವಸುಧೈವ ಕುಟುಂಬದ ಪರಂಪರೆಯ ಜನ. 33 ಕೋಟಿ ದೇವರ ಪೂಜೆ ಮಾಡುವ ನಮಗೆ ಅಲ್ಲಾ, ಏಸುವಿನ ಫೋಟೋದಲ್ಲಿ ವ್ಯತ್ಯಾಸ ಕಾಣುವುದಿಲ್ಲ. ಆದರೆ, ಮುಸ್ಲಿಂರು ಮತ್ತು ಕ್ರಿಶ್ಚಿಯನ್‌ರು ಇದೇ ಭಾವನೆ ಇರಿಸಿಕೊಂಡಿದ್ದಾರಾ? ಅವರು ನಮ್ಮ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೋ ನಾವು ಅವರ ಬಗ್ಗೆ ಅಷ್ಟೇ ತಿಳಿದುಕೊಂಡಿದ್ದೇವೆ. 

ಅವರು ಎಷ್ಟರ ಮಟ್ಟಿನ ಪ್ರೀತಿ, ವಿಶ್ವಾಸ ತೋರಿಸುತ್ತಾರೋ ನಾವೂ ಅಷ್ಟೇ ಪ್ರೀತಿ, ವಿಶ್ವಾಸ ತೋರಿಸುತ್ತೇವೆ. ಪ್ರಧಾನಿ ಮೋದಿ ಅವರು ಅರಬ್‌, ಸೌದಿಯ ದೊರೆಯನ್ನು ತಬ್ಬಿಕೊಂಡರು. ನಮ್ಮ ಕಣ್ಣಿಗೆ ಕಾಣುವ ಜಗತ್ತಿನ ಜತೆಗೆ ಕಾಣದ ಜಗತ್ತೂ ಇದೆ. 

ನಮ್ಮದೇ ಕದಂಬ ಎಂಬ ಸಂಸ್ಥೆ ಇದೆ. ಈ ಸಂಸ್ಥೆಯಲ್ಲಿ 2 ಸಾವಿರ ಸ್ವಸಹಾಯ ಗುಂಪುಗಳಿವೆ. ಇದರಲ್ಲಿ 300 ಮುಸ್ಲಿಂ ಮಹಿಳೆಯರು ಇದ್ದಾರೆ. ತುಂಬಾ ಕಷ್ಟಪಟ್ಟು ಹೊಟ್ಟೆಪಾಡು ನಡೆಸುತ್ತಿದ್ದಾರೆ. 

ಮನೆಯವರ ವಿರೋಧದ ನಡುವೆಯೂ ಈ ಮಹಿಳೆಯರು ಸ್ವಸಹಾಯ ಸಂಘಗಳಲ್ಲಿ ಇದ್ದಾರೆ. ಮುಸ್ಲಿಂರು ಎಂಬ ಕಾರಣಕ್ಕೆ ಬರುವುದು ಬೇಡ ಎಂದು ನಾವು ಹೇಳಿಲ್ಲ. ಸಂಘಗಳಲ್ಲಿ ಸಾಲ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. 

ಅನಂತ ಕುಮಾರ್‌ ಹೆಗಡೆ ಯಾವತ್ತೂ ತೂಕ ತಪ್ಪಿ ಮಾತಾಡಿಲ್ಲ. ನಾನು ಹೇಳಿದ್ದನ್ನು ಅಪಾರ್ಥ, ತಿದ್ದಿ, ತಿರುಚಲಾಗಿದೆ. ನಾನು ಹೇಳಿದ್ದನ್ನು ಒಪ್ಪಿಕೊಂಡಿದ್ದೇನೆ. ಸಮರ್ಥನೆ ಮಾಡಿಕೊಂಡಿದ್ದೇನೆ. 

ಮುಸ್ಲಿಮರನ್ನು ಈ ದೇಶದಿಂದ ಓಡಿಸಿ ಎಂದು ನಾನು ಯಾವತ್ತೂ ಹೇಳಿಲ್ಲ. ಈ ದೇಶದ ನೆಲ, ಜಲ, ಸಂಸ್ಕೃತಿ ಕಾನೂನಿಗೆ ಗೌರವ ಕೊಟ್ಟು ಬದುಕಿ ಎಂದಿದ್ದೇನೆ. ಇಲ್ಲಿನ ಅನ್ನ ತಿಂದು, ನೀರು ಕುಡಿದು ಪಾಕಿಸ್ತಾನ ಜಿಂದಾಬಾದ್‌ ಎನ್ನುವ ಹಾಗೂ ರೋಮ್‌ಗೆ ಜೈಕಾರ ಕೂಗುವವರ ಬಗ್ಗೆ ನನಗೆ ತಕರಾರಿದೆ. 

ಭಾರತೀಯ ಮುಸ್ಲಿಮರನ್ನು ಯಾವತ್ತೂ ಗೌರವಿಸುತ್ತೇವೆ. ಆದರೆ, ಭಾರತದ ಮುಸ್ಲಿಮರನ್ನು ಅಲ್ಲ. ಈ ದೇಶದ ಅನ್ನ, ನೆಲ, ನೀರಿಗೆ ದ್ರೋಹ ಮಾಡಿದವರನ್ನು ನಾವು ಈ ದೇಶದ ಮುಸ್ಲಿಮರು ಎಂದು ಪರಿಗಣಿಸುವುದಿಲ್ಲ.

ಹಾಗಾದರೆ, ನಿಮಗೆ ಮುಸ್ಲಿಮರ ಬಗ್ಗೆ ಸಮಸ್ಯೆ ಇಲ್ಲ. ಇಸ್ಲಾಂ ಬಗ್ಗೆ ಸಮಸ್ಯೆ ಇದೆ?
ಸಿದ್ಧಾಂತ ವ್ಯಕ್ತಿಯನ್ನು ರೂಪಿಸುತ್ತದೆ. ಯಾವುದೇ ವ್ಯಕ್ತಿ ಇದ್ದಕ್ಕಿದ್ದಂತೆ ಬೆಳೆಯುವುದಿಲ್ಲ. ಮದರಸ, ಮಸೀದಿಗಳಲ್ಲಿ ಹೇಳಿಕೊಟ್ಟಂತೆ ಅವರು ಬೆಳೆಯುತ್ತಾರೆ. ಅದು ಅವರ ತಪ್ಪಲ್ಲ. ಆದರೆ, ಪೂರ್ವಾಗ್ರಹ ಎಂಬುದು ತಪ್ಪು. 

ವಸುಧೈವ ಕುಟುಂಬ ನಮ್ಮದು. ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲರೂ ಹಿಂದೂಗಳೇ ಎಂದು ಪರಿಗಣಿಸುತ್ತೇವೆ. ನಾವು ರಾಮ ಅಥವಾ ಕೃಷ್ಣ ಅಥವಾ ಗಣಪತಿ ಒಬ್ಬನೇ ದೇವರು ಎಂದು ಹೇಳಿಲ್ಲ. ಸೀಮಿತ ಚೌಕಟ್ಟಿನ ಸಂಪ್ರದಾಯ ನಮ್ಮದಲ್ಲ.

ನಾನು ಕಾಂಗ್ರೆಸ್‌ ಪಾರ್ಟಿ ವಿರೋಧಿ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿ ಎಂದಿದ್ದೀರಿ?
ಕಾಂಗ್ರೆಸ್‌ನಲ್ಲಿ ದೇವರು, ಧರ್ಮ ಎನ್ನುವ ತುಂಬಾ ಜನ ಇದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಹಿಂದೂ ರಾಷ್ಟ್ರದ ಕಲ್ಪನೆಯನ್ನು ಬಹಿರಂಗವಾಗಿ ವಿರೋಧಿಸುತ್ತಾರೆ. ವಿರೋಧಿಸಲಿ, ಅದರ ಬಗ್ಗೆ ತಕರಾರಿಲ್ಲ. 

ಮತ್ತೊಂದು ಕಡೆ ಅಲ್ಪಸಂಖ್ಯಾತರರನ್ನು ಮಿತಿ ಮೀರಿ ತುಷ್ಟೀಕರಣ ಮಾಡುತ್ತಾರೆ. ದೇವಸ್ಥಾನಗಳಿಗೆ ಹೋಗುವಾಗ ಅಲಕ್ಷ್ಯ. ಮಸೀದಿಗಳಿಗೆ ಹೋಗುವಾಗ ಬಹಳ ಗೌರವದಿಂದ ಅರಬ್ಬರ ಪೋಷಾಕಿನಲ್ಲಿ ಹೋಗುತ್ತಾರೆ. 

ಈ ದಗಲ್‌ ಭಾಜಿತನ ಏಕೆ? ಹೇಗಿದ್ದಾರೋ ಹಾಗೆ ಇರಬೇಕು. ಅವರನ್ನು ಮಸೀದಿಗಳಿಗೆ ಹೋಗಬೇಡಿ ಎಂದು ನಾವು ಹೇಳುವುದಿಲ್ಲ. ಅದೇ ಗೌರವದಲ್ಲಿ ದೇವಸ್ಥಾನಕ್ಕೂ ಬನ್ನಿ. 

ಮುಸ್ಲಿಮರಿಗೆ ಕೊಡುವಷ್ಟು ಅನುದಾನವನ್ನು ಹಿಂದೂಗಳಿಗೂ ಕೊಡಿ. ರಾಜಕಾರಣಕ್ಕಾಗಿ ಅಲ್ಲಿ ಇಲ್ಲಿ ಕೊಟ್ಟಿದ್ದೇವೆ ಎಂದು ಹೇಳಬಾರದು. ಅವರ ಸಿದ್ಧಾಂತ, ನಡವಳಿಕೆಯಲ್ಲಿ ತೋರಿಸಿಕೊಟ್ಟರೆ ನಾವು ಒಪ್ಪುತ್ತೇವೆ.

ನೀವು ರಾಜ್ಯ ರಾಜಕಾರಣದ ಬಗ್ಗೆ ಏಕೆ ಗಮನ ಕೊಡಲಿಲ್ಲ. ವ್ಯವಸ್ಥೆಯಿಂದ ಭ್ರಮನಿರಸನಗೊಂಡಿದ್ದೀರಾ?
ನಾನು ಮಹತ್ವಾಕಾಂಕ್ಷೆ ಇರಿಸಿಕೊಂಡು ರಾಜಕಾರಣಕ್ಕೆ ಬಂದವನಲ್ಲ. ಸಂಘದ ಹಿರಿಯ ತೀರ್ಮಾನದಂತೆ ರಾಜಕಾರಣಕ್ಕೆಬಂದೆ. ಇಲ್ಲಸಲ್ಲದ ಭ್ರಮೆ ಹೊತ್ತಿಕೊಂಡು ತಿರುಗುವ ವ್ಯಕ್ತಿ ನಾನಲ್ಲ. 

ನನಗೆ ಸಿಎಂ, ಮಂತ್ರಿ ಆಗುವ ಕನಸಿಲ್ಲ. ಸಂಘಟನೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಕನಸು ಕಂಡು ಆ ಕನಸಿನಲ್ಲಿ ಬದುಕು ವ್ಯಕ್ತಿ ನಾನಲ್ಲ. ಭಾವನೆಗಳನ್ನು ಗೌರವಿಸುತ್ತೇನೆ. 

ಧರ್ಮದ ಕೆಲಸ ಮಾಡಲು ರಾಜಕಾರಣವೇ ಬೇಕು ಎಂದೇನಿಲ್ಲ. ಅದರ ಹೊರತಾಗಿಯೂ ಕೆಲಸ ಮಾಡಿದ್ದೇವೆ.

ಸಂವಿಧಾನ ಬದಲಾವಣೆ ಬಗ್ಗೆ ನಿಮ್ಮ ಹೇಳಿಕೆ ವಿವಾದವಾದ ಬಳಿಕ ನೀವು ರಾಜಕಾರಣದ ಬಗ್ಗೆ ಭ್ರಮನಿರಸನಗೊಂಡಿರಾ?
ಸಂವಿಧಾನ ಬದಲಿಸಬೇಕು ಎಂದು ನಾನು ಯಾವತ್ತೂ ಹೇಳಿಲ್ಲ. ಕೆಲ ಬದಲಾವಣೆ ತರಬೇಕು ಎಂದು ಹೇಳಿದ್ದೇನೆ. ಈ ಬಗ್ಗೆ ಸಂಸತ್‌ನಲ್ಲಿ ನನ್ನ ಹೇಳಿಕೆ ತೆಗೆದು ನೋಡಬಹುದು. 

ರಾಜಕಾರಣದಲ್ಲಿ ಭ್ರಮನಿರಸನವಾಗಿಲ್ಲ. ನಾನು ಮೊದಲಿನಿಂದಲೂ ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡುತ್ತಾ ಬಂದಿದ್ದೇನೆ. ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ನೀವು ಟಿಕೆಟ್‌ ಆಕಾಂಕ್ಷಿಯೇ? ಅಭ್ಯರ್ಥಿ ಬದಲಾದರೆ ಏನು ಮಾಡುವಿರಿ?
ನಾನು ಸಂಘಟನೆ ನೀಡುವ ಕೆಲಸ ಮಾಡುವವನು. ನಾನೂ ಎಂದೂ ಟಿಕೆಟ್‌ ಕೇಳಿಲ್ಲ. ಇದು ನನಗೆ 8ನೇ ಚುನಾವಣೆ. ಪಕ್ಷ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ. ನಾನು ಅಭ್ಯರ್ಥಿ ಆಗದಿದ್ದರೆ, ಕಣಕ್ಕಿಳಿಯುವ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ. 

ಅಂತಿಮವಾಗಿ ಪಕ್ಷದ ತೀರ್ಮಾನ ಒಪ್ಪಿಕೊಳ್ಳುವೆ. ಆದರೆ, ಇದುವರೆಗೂ ನನ್ನ ಸ್ವಾತಂತ್ರ್ಯ ಮತ್ತು ಅನಿಸಿಕೆಗೆ ಧಕ್ಕೆ ಬಂದಿಲ್ಲ. ಯಾರೂ ಒತ್ತಡ ತರುವ ಪ್ರಯತ್ನ ಮಾಡಿಲ್ಲ.