ಸಾರಾಂಶ
- ದಾದಾಪೀರ್ ಜೈಮನ್
ಚಿಕ್ಕವನಿರುವಾಗ ಊರಲ್ಲಿ ನಾವಿದ್ದ ಪುಟ್ಟ ಗುಡಿಸಲು ಯಾವ ಹೊತ್ತಿಗಾದರೂ ಬಿದ್ದು ಹೋಗುತ್ತದೆನ್ನುವ ಭಯವಾಗುತ್ತಿತ್ತು ನನಗೆ! ಮಳೆ, ಭೂಕಂಪ, ರಾತ್ರೋ ರಾತ್ರಿ ಗುಡಿಸಲನ್ನೇ ಧ್ವಂಸ ಮಾಡಿಬಿಡಬಹುದಾದ ಬುಲ್ಡೋಝರ್, ಕತ್ತಲಲ್ಲಿ ಬಂದು ಬಾಗಿಲು ಬಡಿವ ಕೂಗುಮಾರಿ ದೆವ್ವ ಹೀಗೆ ಹಲವು ಭಯಗಳಿದ್ದವು. ರಾತ್ರಿ ಹೊತ್ತು ಸೀರೆ ಪರದೆಯೊಳಗೆ ಅಜ್ಜಿಯ ಪಕ್ಕ ಮಲಗಿ ನನ್ನ ಭಯಗಳನ್ನು ಅಮ್ಮನಲ್ಲಿ ಹೇಳಿಕೊಳ್ಳುವಾಗ ಅವಳು ಗುಡಿಸಲ ಕತ್ತಲಿಗೆ ಒಂದು ಹದವಾದ ಲಾಟೀನಿನ ಬೆಳಕನ್ನು ಹೊಂದಿಸುತ್ತಾ, ‘ಚಿಂತಿ ಯಾಕ್ ಮಾಡ್ತಿಯಪಿ? ನಾವೆಲ್ಲಾ ನೆಲ ಅಗೆದು ಭೂಮಿತಾಯಿ ಹೊಟ್ಟೆಯೊಳಗ್ ಹೋಗಿ ಬಚ್ಚಿಟ್ಟುಕೊಂಡು ಬಿಡಾಣ!’ ಎಂದು ಹೊಳೆವ ಹಣ್ಣುಗಳಿಂದಲೇ ಹೇಳುತ್ತಿದ್ದಳು. ನನಗದು ಖುಷಿ ತರಿಸುತ್ತಿತ್ತು. ಸಮಾಧಾನ ತರಿಸುತ್ತಿತ್ತು. ಅವಳ ಮಾತಿನ ಅರ್ಥ ನನಗಾಗ ಆಗಿರಲೇ ಇಲ್ಲ. ಏಳನೇ ತರಗತಿಗೆ ನಾವು ಗುಡಿಸಲಿನಿಂದ ದೂರವಾಗಿ ಬೊಮ್ಮನಹಳ್ಳಿಯ ನಮ್ಮ ದೊಡ್ಡಪ್ಪನ ಮನೆಗೆ ಸ್ಥಳಾಂತರಗೊಳ್ಳುವುದು ಎಂದಾಯಿತು.
ಗುಡಿಸಲು ಬಿಡುವ ಮುನ್ನಾ ದಿನದ ಬೇಸಗೆಯ ರಾತ್ರಿ ಅಮ್ಮ ಮತ್ತು ನಾವು ನಾವಿದ್ದ ಊರಿನ ಬಜಾರಕ್ಕೆ ಹೋಗಿ ಮಾವಿನ ಹಣ್ಣನ್ನು ಕೊಂಡು ಬೀದಿ ದೀಪದ ಹಳದಿ ಬೆಳಕಿನಲ್ಲಿ ನಡೆಯುವಾಗ ಇದ್ದ ಮೌನದ ನಡಿಗೆಯ ಹೆಜ್ಜೆಯ ಸಪ್ಪಳಗಳು, ಅಮ್ಮ ಆ ರಾತ್ರಿ ನಾವಿದ್ದ ಜಾಗದ ಜೊತೆ ಋಣದ ಮಾತುಗಳನ್ನು ಆಡುತ್ತಿರಬಹುದೆಂಬ ಕಿಂಚಿತ್ ಸುಳಿವೂ ನನಗಿರಲಿಲ್ಲ. ಮನೆಗೆ ಬಂದು ಪೂರಿ ಶೀಕರಣಿ ಉಂಡು ಗಡದ್ದಾಗಿ ನಿದ್ದೆ ಹೊಡೆದಿದ್ದೆ. ಅಮ್ಮ ಒದ್ದಾಡುವುದು ಕೇಳಿಸುತ್ತಿತ್ತು. ಅವಳು ಆ ದಿನ ಪೂರ್ತಿ ನಿದ್ದೆ ಮಾಡಿರಲಿಲ್ಲ. ಬೆಳಿಗ್ಗೆ ಸಾಮಾನುಗಳನ್ನು ತುಂಬಿಕೊಳ್ಳಲು ಲಾರಿ ಬಂದಿತು. ಓಣಿಯವರೆಲ್ಲ ನಮಗೆ ಕೊನೆಯ ಬಾರಿ ಟಾಟಾ ಮಾಡಲು ಬಂದು ಕಣ್ಣು ತುಂಬಿಕೊಂಡರು.
ನನಗೆ ಹೊಸ ಊರಿಗೆ ಹೋಗುವ ಖುಷಿಯಾದಂತೆ ಅವಳ ಮುಖದಲ್ಲೇಕೆ ನಗುವಿಲ್ಲ ಎಂದು ಅಂದು ಅರ್ಥವಾಗಿರಲಿಲ್ಲ. ಆಗ ತಾನಿದ್ದ ಜಾಗ ಅವಳಿಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ನೆಮ್ಮದಿಯ ಇಂಬು ಕೊಟ್ಟಿತ್ತು.. ಹೊಸ ಅನೂಹ್ಯ ಜಾಗಗಳು ಕೆಲವೊಮ್ಮೆ ನಮ್ಮ ಸ್ವತಂತ್ರಗಳನ್ನು ಕಸಿದುಬಿಡುತ್ತವೆ. ಜಾಗಗಳನ್ನು ಬದಲಾಯಿಸುವುದು ಎಂದರೆ ಏನನ್ನೋ ಕಳೆದುಕೊಳ್ಳುವುದು.. ಮತ್ಯಾರ ಹಿತಕ್ಕೋ ಕಳೆದುಕೊಳ್ಳುವುದು! ಆ ಹಿತದಲ್ಲಿ ನನ್ನ ಓದು ಅವಳ ಕಣ್ಣ ಮುಂದಿತ್ತು.
ಕೆಲಸ ಹುಡುಕಲು ಬೆಂಗಳೂರಿಗೆ ಬಂದಾಗ ಮಲ್ಲೇಶ್ವರಮ್ಮಿನ ಸಂಪಿಗೆ ರಸ್ತೆಯ ಹದಿಮೂರನೆಯ ಕ್ರಾಸಿನ ನಾಲ್ಕನೇ ಮಹಡಿಯಲ್ಲಿರುವ ಯಾವುದೋ ಮೆನ್ಸ್ ಪೀಜಿಯಲ್ಲಿ ಒಂದು ಹಾಲನ್ನೇ ಕಟ್ಟಿಗೆಯ ಹಲಗೆಯಿಂದ ಬೇರ್ಪಡಿಸಿ ಮಾಡಿದ ರೂಮಿನಲ್ಲಿ ಮೇಲಿನ ಬಂಕರಿನಲ್ಲಿ ನನಗೊಂದು ಜಾಗ ಸಿಕ್ಕಿತು. ಬೆಂಗಳೂರೆಂಬ ವಿಶಾಲ ಊರಿನಲ್ಲಿ ನಮಗೆ ಬಿಟ್ಟುಕೊಡುವ ಜಾಗದ ಜುಗ್ಗುತನ ನೋಡಿ ದಿಗಿಲಾಗಿತ್ತು.
ಸಿನಿಮಾಗಳಲ್ಲಿ ಕಂಡಂತೆ ಯಾವುದೋ ಜೈಲರ್ ನಮ್ಮನ್ನು ಕರೆದುಕೊಂಡು ಹೋಗಿ ಒಂದು ಜಾಗಕ್ಕೆ ಬಿಟ್ಟು ಬೆಡ್ ನಂಬರ್ ಹೇಳಿ ಹೋದಂತೆ ಆ ಪೀಜಿ ಓನರ್ ನನಗೆ ಕಂಡಿದ್ದರು. ಊರಿನಿಂದ ತಪ್ಪಿಸಿಕೊಂಡು ಬಂದ ಅಪರಾಧಿಯ ಭಾವ ಬಂದಿತ್ತೇನೋ ಆಗ ನನಗೆ ನೆನಪಿಲ್ಲ ಈಗ! ಬೆಂಗಳೂರಿನ ರಸ್ತೆಗಳಲ್ಲಿ ಅಡ್ಡಾಡುವಾಗ, ಉದ್ದುದ್ದ ಬಿಲ್ಡಿಂಗುಗಳನ್ನು ತಲೆಯೆತ್ತಿ ನೋಡುವಾಗ ಇವರೆಲ್ಲಾ ಯಾವಾಗ ಇಲ್ಲಿಗೆ ಬಂದರು? ಹೇಗೆ ಇಷ್ಟು ದೊಡ್ಡ ದೊಡ್ಡ ಅರಮನೆಗಳನ್ನು ಕಟ್ಟಿಕೊಂಡರು? ಇಷ್ಟು ದುಡ್ಡು ಇವರಿಗೆ ಎಲ್ಲಿಂದ ಬಂತು ಎನಿಸುತ್ತಿತ್ತು!
ಸರ್ಕಾರೀ ಆಸ್ಪತ್ರೆಯ ಜನರಲ್ ವಾರ್ಡಿನ ಹಾಗಿರುವ ಪೀಜಿಯ ಬೆಡ್ಡುಗಳು ಒಮ್ಮೆ ರೂಢಿಯಾಗಿಬಿಟ್ಟರೆ ಅದಕ್ಕೆ ಒಗ್ಗಿಕೊಂಡು ಹೋಗಿಬಿಡುತ್ತೇವೆ. ರೂಢಿಯೇ ಹಾಗಲ್ಲವೇ? ಒಮ್ಮೆ ಹೈದರಾಬಾದ್ ಸಾಹಿತ್ಯೋತ್ಸವಕ್ಕೆ ಹೋಗುವ ಮುನ್ನಾ ದಿನ ಎಂ. ಜಿ ರೋಡಿನಲ್ಲಿ ಒಳ್ಳೆಯ ಅಪಾರ್ಟ್ಮೆಂಟಿನಲ್ಲಿರುವ ನನ್ನ ಕವಿ ಗೆಳೆಯನ ಮನೆಯಲ್ಲಿ ರಾತ್ರಿ ಉಳಿದು ಬೆಳಗಿನ ಜಾವ ನಾಲ್ಕಕ್ಕೆ ವಿಮಾನ ನಿಲ್ದಾಣಕ್ಕೆ ಹೊರಡುವುದು ಎಂದು ನಿರ್ಧರಿಸಿದ್ದೆ.
ಹಾಲಿನಲ್ಲಿರುವ ಸೋಫಾದ ಮೇಲೆಯೇ ಮಲಗುತ್ತೇನೆ ಎಂದು ನಿರ್ಧರಿಸಿದರೂ ಒಂದು ಕ್ಷಣವೂ ಕಣ್ಣಿಗೆ ನಿದ್ದೆ ಹತ್ತದೆ ಒದ್ದಾಡಿದ್ದೆ. ಇದ್ದಕ್ಕಿದ್ದಂತೆ ಅಷ್ಟೊಂದು ವಿಶಾಲ ಜಾಗದಲ್ಲಿ ಮಲಗುವುದು ಹೇಗೆ ಎಂದು ದಿಗಿಲಾಗಿತ್ತು! ಮರುದಿನ ಪೂರ್ತಿ ಹ್ಯಾಂಗೋವರಿನ ಕಿರಿಕಿರಿಯಂತಹ ತಲೆನೋವಿನಲ್ಲಿ, ಮಂಪರು ಮಂಪರು ನಿದ್ದೆಯಲ್ಲಿಯೇ ದಿನ ಕಳೆದೆ. ಊರು ಬಿಟ್ಟು ಶಹರಕ್ಕೆ ಬಂದವರ ಜಾಗದ ಜೊತೆಗಿನ ಗುದ್ದಾಟಗಳೂ ಅಂತದ್ದೇ ಕಿರಿಕಿರಿಯನ್ನು ಹೊಂದಿರುತ್ತವೆ ಎನಿಸುತ್ತದೆ. ಅಲ್ಲಿಂದ ಮುಂದಕ್ಕೆ ನನ್ನಲ್ಲಿದ್ದ ಗುದ್ದಾಟವೆಂದರೆ ಒಂದಷ್ಟು ಜಾಗಗಳಲ್ಲಿ, ಯಾರನ್ನೂ ಬಿಟ್ಟುಕೊಳ್ಳದ ಅಬೇಧ್ಯ ಕೋಟೆಗಳಲ್ಲಿ ಕೇವಲ ಪ್ರಾಮಾಣಿಕತೆ ಮತ್ತು ಪ್ರತಿಭೆಯ ಕಾರಣದಿಂದ ಮಾತ್ರ ಪ್ರವೇಶ ಪಡೆಯುವುದು ಹೇಗೆ ಎಂಬುದು! ಆ ಜಾಗಗಳಲ್ಲಿ ನಮಗೆ ಪ್ರವೇಶವಿರುತ್ತದೆಯೇ?
ನಾವು ಉಡುವ ಬಟ್ಟೆಗಳು, ನಮ್ಮ ಬಣ್ಣ, ಲಾಲಿತ್ಯವಿಲ್ಲದ ಇಂಗ್ಲಿಷ್ ಭಾಷೆ, ಜಾತಿ, ವರ್ಗದ ಕಾರಣಗಳಿಂದಾಗಿ ಅವರು ನಮ್ಮನ್ನು ಸದಾ ಅಳೆಯುತ್ತಿರುತ್ತಾರೆಯೇ?! ಅಥವಾ ಇವೆಲ್ಲಾ ನನ್ನ ಊಹೆಯ ಕಾರಣದಿಂದ ಮಾತ್ರ ಹುಟ್ಟಿದ ಭಯಗಳೇ?! ಅದಷ್ಟೇ ಆಗಿರಲಾರದು ಎನ್ನುವುದೂ ನನ್ನ ಈಗಿನ ಗಟ್ ಫೀಲಿಂಗ್! ಒಂದೊಂದು ಕಾರ್ಯಕ್ರಮಗಳಿಗೆ ಹೋಗುವ ಮುಂಚಿನ ಅರ್ಧ ಒಂದು ತಾಸು ಯೋಚನೆಯಲ್ಲಿ ಮುಳುಗೆದ್ದು ಧೈರ್ಯ ತಂದುಕೊಂಡಿದ್ದೇನೆ! ಅವು ಕಾರ್ಯಕ್ರಮಗಳಷ್ಟೇ ಅಲ್ಲ ಸ್ನೇಹದ ತಾಣಗಳು, ಪ್ರೇಮ ಸಂಬಂಧಗಳು ಇತ್ಯಾದಿ ಇಂಟಿಮೇಟ್ ಜಾಗ ಮತ್ತು ಸಂದರ್ಭಗಳಲ್ಲಿಯೂ ತಮ್ಮದೇ ಚಮತ್ಕಾರ ಮಾಡಿಬಿಡುತ್ತವೆ.
ಇದು ಕೇವಲ ಸ್ವರತಿಯ ಲಹರಿಯಲ್ಲ! ಹಳ್ಳಿಗಳನ್ನು ಬಿಟ್ಟು ಪೇಟೆಗೆ ಬಂದು ಅವಕಾಶಗಳಿಗಾಗಿ, ಜ್ಞಾನದ ಜಾಗಗಳಿಗಾಗಿ ಹುಡುಕುತ್ತಾ ಒಂಟಿ ಒಂಟಿಯಾಗಿ ಚಲಿಸುವ ಅಲೆದಾಡುವ ಎಲ್ಲರ ಪಾಡೂ ಆಗಿ ನನಗೆ ಕಾಣಿಸುತ್ತದೆ! ಈ ಎಲ್ಲದರ ನಡುವೆ ನನ್ನ ಬಡತನವನ್ನು, ಗಾಯಗಳನ್ನೂ ಯಾವೊಂದು ಕಾರಣಕ್ಕೂ ಹರಾಜಿಗೆ ಮುಲಾಜಿಗೆ ಮುಂದಿನವರ ಉದಾರ ಕರುಣೆಗೆ ಹರಾಜಿಗೆ ಇಡಲಾರೆ ಎನ್ನುವ ಆತ್ಮಾಭಿಮಾನ ಕಣ್ಣಲ್ಲಿ ನೀರು ತರಿಸಿದ್ದೂ ಇದೆ.
ಹಾಗೆ ಕಣ್ಣಲ್ಲಿ ನೀರು ತರಿಸಿದ ಮತ್ತೊಂದು ಘಟನೆಯೆಂದರೆ ಕೋವಿಡ್ ಕಾಲದಲ್ಲಿ ಬರಿಗಾಲಲ್ಲಿ ಊರು ತಲುಪಬೇಕೆಂದು ತಾವಿದ್ದ ತಾವುಗಳನ್ನು ತೊರೆದು ಊರು ತಲುಪುತ್ತಿದ್ದ ವಲಸೆ ಕಾರ್ಮಿಕರ ಹೆಜ್ಜೆಗಳು! ಪೇಟೆಯೊಂದು ತಣ್ಣಗೆ ತಟ್ಟೆ ಬಡಿತದ ಹಿಮ್ಮೇಳದಲ್ಲಿ ಅವರನ್ನು ಅಳುತ್ತಾ ಸರ್ಕಾರದ ಮತ್ತು ವಿಧಿಯ ಕ್ರೌರ್ಯಕ್ಕೆ ಮೂಕ ಸಾಕ್ಷಿಯಾದ ಹೊತ್ತಾಗಿ ಆ ದೃಶ್ಯಗಳು ನನಗೆ ಕಂಡಿದೆ. ಆ ಹೊತ್ತು ಪೇಟೆಯ ಬಿಕೋ ಎನ್ನುವ ಬೀದಿಗಳು ಅನಾಥವಾಗಿ ನರಳಿವೆ.. ಪೇಟೆಯ ಜಾಗಗಳು ಖಿನ್ನವಾಗಿ ಮತ್ತೆ ಎದ್ದುಬಂದಿವೆ.
ನಿಮ್ಮ ಜಾಗ ಇದಲ್ಲ ಎಂದು ಸಾಕ್ಷಿ ಕೇಳಿದ ಘನ ಸರ್ಕಾರಗಳು ಅದೆಷ್ಟೋ ಅಲ್ಪ ಸಂಖ್ಯಾತರ ಮಿದುಳೊಳಗೆ ನನ್ನ ಜಾಗ ಎಲ್ಲಿ ಎನ್ನುವ ಭಾವ ಮೂಡಿಸಿವೆ! ನೆಲಕುಸಿಯೇ ಪದವೆಲ್ಲಿ ಎಂಬ ಭಾವ ಮೂಡಿಸಿವೆ. ಈ ಕುರಿತಾಗಿ ಮತ್ತು ಇಂತಹ ಅದೆಷ್ಟೋ ಹೋರಾಟಗಳಿಗೆ ಜಾಗವಾಗಿದ್ದ ಟೌನ್ ಹಾಲನ್ನು ಹೋರಾಟದ ಜಾಗದಿಂದ ರದ್ದು ಮಾಡಿ ಯಾರೂ ನೋಡದ ಫ್ರೀಡಂ ಪಾರ್ಕ್‌ನತ್ತ ಎಸೆದಾಗ ಹೋರಾಟದ ಕ್ರಾಂತಿಯ ಬದಲಾವಣೆಯ ಸೊಲ್ಲುಗಳು ಗಾಳಿಯಲ್ಲೇ ಕಳೆದುಹೋಗುವಂತೆ ಮಾಡಿವೆ! ಪ್ರೇಮ ಪಕ್ಷಿಗಳು ಮುದ್ದು ಮಾಡಿಕೊಳ್ಳುವ ಜಾಗಗಳು ಹೀಗೆ ಒಲವನ್ನು ಉಲಿವ ಜಾಗಗಳಾಗಿದ್ದ, ಅದೆಷ್ಟೋ ಸೆಕ್ಸ್ ವರ್ಕರ್ಸ್‌ಗೆ ತಮ್ಮ ಉದ್ಯೋಗದ ತಾಣವಾಗಿದ್ದ, ಅದೆಷ್ಟೋ ಬೀದಿ ಬದಿ ವ್ಯಾಪಾರಿಗಳು ಆರಾಮಾಗಿ ಬಂದು ಬಲೂನುಗಳು, ಪುರಿ, ಗಿರ್ಮಿಟ್ ಇತ್ಯಾದಿಗಳನ್ನು ಮಾರಬಹುದಾಗಿದ್ದ ಜಾಗವಾಗಿದ್ದ ಕಬ್ಬನ್ ಪಾರ್ಕ್ ಅಂತಹ ಎಷ್ಟೋ ಪಾರ್ಕುಗಳು ಕೊಬ್ಬಿದ ಶ್ರೀಮಂತರ ನಾಯಿಗಳು ಅಡ್ಡಾಡುವ ಸ್ಯಾನಿಟೈಸ್ಡ್ ಜಾಗಗಳಾಗಿ ಮಾತ್ರ ಬದಲಾಗಿವೆ.
ರೈತರು ಪಂಚೆ ಉಟ್ಟು ಹೋಗದ ಜಾಗಗಳಾಗಿ ಝಗಮಗ ಬೆಳಕಿನ ಮಾಲುಗಳು ಬದಲಾಗಿವೆ. ಈ ತಿರಸ್ಕೃತರ ಜನರ ಆತ್ಮದ ಛಾಯೆ ನಮ್ಮ ಆತ್ಮಗಳ ಛಾಯೆಯ ಪ್ರತಿಬಿಂಬದಂತೆ ಹೋಲುತ್ತವೆ. ದಿಗಿಲಾಗುತ್ತದೆ. ಈ ಎಲ್ಲದರ ಲೆನ್ಸಿನಲ್ಲಿ ನೋಡುವಾಗ ಮಹಾಭಾರತದಲ್ಲಿ ಬರುವ ಸೂಜಿಮೊನೆಯಷ್ಟರ ಜಾಗದ ಮಹತ್ವ ನಮಗೆ ಅರ್ಥವಾಗುತ್ತದೆ. ಈ ಎಲ್ಲದರ ನಡುವೆ ಕ್ರಾಂತಿಯೊಂದು ಸದ್ದಿಲ್ಲದೇ ನಡೆಯುತ್ತಿರುತ್ತದೆ. ಅದು ಪ್ರೀತಿಯಿಂದ ಸಮುದಾಯದ ಭೇಟಿಯ ಜಾಗಗಳನ್ನು ಕಟ್ಟಿಕೊಳ್ಳುವಾಗ, ಹೊಸ ರೂಪದ ಪ್ರತಿರೋಧದ ಮಾರ್ಗಗಳನ್ನು ಹುಡುಕಿಕೊಳ್ಳುವುದರ ಮೂಲಕ, ನಮ್ಮದೂ ಒಂದು ಜಾಗವನ್ನು ಮಾಡಿಕೊಳ್ಳುವ ಜಿದ್ದನ್ನು ಚೂಪುಗೊಳಿಸಿಕೊಳ್ಳುವುದರ ಮೂಲಕ ಅದೆಲ್ಲವೂ ಆಗುತ್ತಿರುತ್ತದೆ.
ಮತ್ತೆ ವೈಯಕ್ತಿಕ್ಕೆ ಮರಳಿ ನೋಡುವುದಾದರೆ ನನಗೆ ಬಾಲ್ಯದಿಂದ ಈಗಲೂ ಈ ರೂಲ್ಡ್ ಪೇಪರಿನಲ್ಲಿ ಬರೆಯಲು ಅದೇಕೋ ಹಿಂಸೆಯಾಗುತ್ತದೆ. ನಮ್ಮನ್ನು ಈ ಗೆರೆಗಳ ಮೂಲಕ ಸದಾ ನಿಯಂತ್ರಿಸುತ್ತಿದ್ದಾರೆ ಎನಿಸುತ್ತದೆ. ಆದ್ದರಿಂದ ನನಗೆ ಬಿಳಿ ಪೇಪರಿನ ನೋಟ್ ಪುಸ್ತಕಗಳೇ ಮೆಚ್ಚು. ನಾನು ನಾನಂತೆ ಬದುಕುವಾಗ ಖಾಲಿ ಬಯಲಿನ ಒಳಗಿನ ಹೊರಗಿನ ಜಾಗ ಮೆಚ್ಚಾಗುತ್ತದೆ. ಆದರೂ ಅದೆಷ್ಟೇ ಬಯಲೆಂದರೂ ಒಂದು ಮಾರ್ಜಿನ್ನಿನ ಗೆರೆ ಕಂಡೆ ಕಾಣುತ್ತದೆ. ಒಮ್ಮೊಮ್ಮೆ ಇಲ್ಲದಿದ್ದರೂ ಇದ್ದಂತೆ ಭಾಸವಾಗುತ್ತದೆ. ಅದನ್ನು ನಾನು ನನಗಷ್ಟೇ ನಮಗಷ್ಟೇ ಕೊಟ್ಟುಕೊಳ್ಳಬೇಕಾದ ಉಸಿರು ಬಿಡುವ ನೆಮ್ಮದಿಯ ಹುಡುಕುವ ಗೆರೆಯಾಗಿ ಕಲ್ಪಿಸಿಕೊಳ್ಳುತ್ತೇನೆ. ಸಮಾಧಾನವಾಗುತ್ತದೆ. ಉಸಿರುಗಟ್ಟಿಸುವ ಗೆರೆಗಳಿದ್ದರೂ ಗೆರೆಗಳ ನಡುವಿನ ಜಾಗಗಳಿಗಾದರೂ ಹುಡುಕುವ ಮಾನವ ಚೈತನ್ಯವನ್ನು ಸದಾ ಎಚ್ಚರದಲ್ಲಿಟ್ಟಿರುತ್ತೇನೆ!