ರಾಜ್ಯದ 470 ಕೆರೆಗಳು ಚಳಿಗಾಲದಲ್ಲೇ ಖಾಲಿ!

| Published : Dec 18 2023, 02:00 AM IST

ಸಾರಾಂಶ

ಕರ್ನಾಟಕದಲ್ಲಿ ಇನ್ನು ಬೇಸಿಗೆ ಕಾಲ ಶುರುವಾಗುವುದಕ್ಕೂ ಮುನ್ನವೇ ಚಳಿಗಾಲ ಆದಿಯಲ್ಲೇ 470 ಕೆರೆಗಳು ಬರಿದಾಗಿದೆ. ಜೊತೆಗೆ ಕೇವಲ 134 ಕೆರೆ ಮಾತ್ರ ಭರ್ತಿಯಾಗಿವೆ.

ಸಿದ್ದು ಚಿಕ್ಕಬಳ್ಳೇಕೆರೆಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯದಲ್ಲಿ ತಲೆದೋರಿರುವ ತೀವ್ರ ಬರಗಾಲದಿಂದ 470 ಕೆರೆಗಳಲ್ಲಿ ನೀರೇ ಇಲ್ಲದಂತಾಗಿದೆ. ಇದರಿಂದಾಗಿ ಅಂತರ್ಜಲ ಮಟ್ಟ ಕುಸಿದು ರೈತರ ಬೋರ್‌ವೆಲ್‌ಗಳಲ್ಲಿ ನೀರಿಗೆ ಕೊರತೆ ಕಂಡುಬಂದು ಅನ್ನದಾತರು ಸಂಕಷ್ಟ ಅನುಭವಿಸುವಂತಾಗಿದೆ.

ಸಣ್ಣ ನೀರಾವರಿ ಇಲಾಖೆಯಡಿ ರಾಜ್ಯದ ಉತ್ತರ ವಲಯದ 17 ಜಿಲ್ಲೆಯಲ್ಲಿ 1990 ಮತ್ತು ದಕ್ಷಿಣ ವಲಯದ 14 ಜಿಲ್ಲೆಯಲ್ಲಿ 1695 ಸೇರಿ ಒಟ್ಟಾರೆ 3685 ಕೆರೆಗಳಿವೆ. ಇದರಲ್ಲಿ ಬರೋಬ್ಬರಿ 470 ಕೆರೆ ನೀರಿಲ್ಲದೆ ಭಣಗುಡುತ್ತಿವೆ. ಕೇವಲ 134 ಕೆರೆ ಮಾತ್ರ ಭರ್ತಿಯಾಗಿವೆ. ಕೆರೆಗಳಲ್ಲಿ ನೀರು ಇಲ್ಲದಿರುವುದರಿಂದ ಅಂತರ್ಜಲದ ಮೇಲೆ ಪರಿಣಾಮ ಉಂಟಾಗಿ ರೈತರ ಪಂಪ್‌ಸೆಟ್‌ಗಳು ಬೇಸಿಗೆಗೂ ಮುನ್ನವೇ ‘ಆಕಾಶ’ ನೋಡುವಂತಾಗಿದೆ.

ಡಿಸೆಂಬರ್‌ ಮೊದಲ ವಾರದ ಅಂಕಿ-ಅಂಶಗಳ ಪ್ರಕಾರ, 1288 ಕೆರೆಯಲ್ಲಿ ಕೇವಲ ಶೇ.30ರಷ್ಟು ಭಾಗ ಮಾತ್ರ ನೀರಿದೆ. 1033 ಕೆರೆಯಲ್ಲಿ ಶೇ.31 ರಿಂದ 50 ರಷ್ಟು ನೀರಿದೆ. 760 ಕೆರೆಯಲ್ಲಿ ಶೇ.51 ರಿಂದ 99 ಭಾಗ ನೀರಿದೆ. ಒಟ್ಟಾರೆ ಹೇಳುವುದಾದರೆ ರಾಜ್ಯದ ಶೇ.24ರಷ್ಟು ಕೆರೆಗಳು ಮಾತ್ರ ಅರ್ಧಕ್ಕೂ ಅಧಿಕ ತುಂಬಿವೆ. ಶೇ.63ರಷ್ಟು (2321) ಕೆರೆ ಶೇ.30 ರಿಂದ 50ರ ಆಸುಪಾಸಿನಲ್ಲಿವೆ. ಇನ್ನುಳಿದಂತೆ ಶೇ.13ರಷ್ಟು ಕೆರೆಗಳು ನೀರಿಲ್ಲದೆ ಒಣಗಿವೆ.

ತುಮಕೂರು, ಬೆಳಗಾವಿ ಕೆರೆ ಭಣಭಣ:ರಾಜ್ಯದಲ್ಲಿ ತುಮಕೂರು ಜಿಲ್ಲೆಯಲ್ಲಿ ಅತ್ಯಧಿಕ, ಅಂದರೆ 371 ಕೆರೆಗಳಿದ್ದು 68 ಕೆರೆಯಲ್ಲಿ ನೀರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 290 ಕೆರೆಗಳಿದ್ದು 113 ಕೆರೆಯಲ್ಲಿ ನೀರಿಲ್ಲವಾಗಿದೆ. ವಿಜಯಪುರ, ಬಾಗಲಕೋಟೆ, ಚಾಮರಾಜನಗರ, ಕಲಬುರಗಿ, ಬಳ್ಳಾರಿ, ವಿಜಯನಗರ ಮತ್ತಿತರ ಜಿಲ್ಲೆಗಳಲ್ಲೂ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲ.ಇದ್ದುದರಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ರಾಮನಗರ, ಶಿವಮೊಗ್ಗ ಮತ್ತಿತರ ಜಿಲ್ಲೆಗಳ ಕೆರೆಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯೇನೂ ಆಗಿಲ್ಲ. ಮುಂಗಾರು ಮತ್ತು ಹಿಂಗಾರು ವೈಫಲ್ಯದಿಂದಾಗಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಕೆರೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಹರಿವು ಉಂಟಾಗದೆ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆರೆ, ಕಟ್ಟೆ ತುಂಬದೇ ಇರುವುದರಿಂದ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿ ರೈತರ ಬೋರೆವೆಲ್‌ಗಳಲ್ಲಿ ಕೆಲವೆಡೆ ನೀರಿನ ಕೊರತೆ ಕಂಡುಬರುತ್ತಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ, ಇನ್ನೂ ಡಿಸೆಂಬರ್‌ನಲ್ಲೇ ಈ ಪರಿಸ್ಥಿತಿ ನಿರ್ಮಾಣವಾದರೆ ಗತಿಯೇನು ಎಂದು ಅನ್ನದಾತರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಕಳೆದ ವರ್ಷ ಅತಿವೃಷ್ಟಿಯಿಂದ ಅಂತರ್ಜಲ ಹೆಚ್ಚಾಗಿ ಬೋರ್‌ವೆಲ್‌ಗಳು ನೀರನ್ನು ಹೊರಹಾಕುವ ಪ್ರಮಾಣವೂ ಗಣನೀಯವಾಗಿ ಹೆಚ್ಚಳವಾಗಿತ್ತು. ಆದರೆ ಈ ಭಾರಿ ರೈತರು ಈಗಲೇ ಪ್ರತೀಕೂಲ ಪರಿಸ್ಥಿತಿ ಎದುರಿಸುವಂತಾಗಿದೆ.ಕಳೆದ ವರ್ಷ ಅಂತರ್ಜಲ ಹೆಚ್ಚಿದ್ದರಿಂದ ಭೂಮಿಯ ಮೇಲ್ಭಾಗದಲ್ಲೇ ನೀರಿದ್ದು ಹೊಸದಾಗಿ ಬೋರ್‌ವೆಲ್‌ ಕೊರೆಸಿದವರು ಆಳಕ್ಕೆ ಮೋಟರ್‌ ಬಿಟ್ಟಿರಲಿಲ್ಲ. ಮತ್ತೆ ಕೆಲವರು ಮೋಟರ್‌ ರಿಪೇರಿಗೆಂದು ಹೊರಗೆ ತೆಗೆದವರೂ ಹೆಚ್ಚು ಕೇಸಿಂಗ್‌ ಪೈಪ್‌ಗಳನ್ನು ಬಿಡುವ ಗೊಡವೆಗೆ ಹೋಗಿರಲಿಲ್ಲ. ಆದರೆ ಇದೀಗ ಕೆಲವೆಡೆ ಅಂತರ್ಜಲ ಮಟ್ಟ ಕುಸಿತ ಕಂಡಿರುವುದರಿಂದ ಬೋರ್‌ವೆಲ್‌ಗಳು ಎಂದಿನಂತೆ ನೀರನ್ನು ಹೊರಹಾಕುತ್ತಿಲ್ಲ. ಮತ್ತೆ ಕೆಲವು ಬಿಟ್ಟು ಬಿಟ್ಟು ನೀರನ್ನು ಹೊರಹಾಕುತ್ತಿವೆ. ಇದರಿಂದ ರೈತರು ತೊಂದರೆಗೆ ಒಳಗಾಗಿದ್ದಾರೆ.