ಸಮಾಜದಲ್ಲಿ ಸೌಹಾರ್ದತೆ ಕದಡಲು ಗೋವುಗಳು ಟಾರ್ಗೆಟ್‌ : ಸುನೀಲ್ ಕೆ.ಆರ್.

| N/A | Published : Jul 03 2025, 11:18 AM IST

Cow

ಸಾರಾಂಶ

ಗೋವುಗಳ ಮೇಲಿನ ದಾಳಿ ಹಿಂದೂಗಳಿಗೆ ನೋವುಂಟು ಮಾಡುತ್ತದೆ. ಪದೇ ಪದೆ ಇಂತಹ ಘಟನೆಗಳು ನಡೆಯುವುದರಿಂದ ಅಸಹಾಯಕತೆ ಭಾವನೆ ಮೂಡುತ್ತದೆ. ಎಲ್ಲಾ ಕಡೆಗಳಲ್ಲಿ ಪ್ರತಿಭಟನೆಗಳು ಜರುಗಬಹುದು. ರಾಜಕೀಯ ಪಕ್ಷಗಳು, ನಾಯಕರು, ಮುಖಂಡರು ಕೂಡ ಈ ನಿಟ್ಟಿನಲ್ಲಿ ಧ್ವನಿ ಎತ್ತಬೇಕು.

 ಗೋವುಗಳ ಮೇಲಿನ ದಾಳಿ ಬಹುಸಂಖ್ಯಾತ ಹಿಂದೂಗಳಿಗೆ ನೋವುಂಟು ಮಾಡುತ್ತದೆ. ಪದೇ ಪದೆ ಇಂತಹ ಘಟನೆಗಳು ನಡೆಯುವುದರಿಂದ ಅಸಹಾಯಕತೆ ಭಾವನೆ ಮೂಡುತ್ತದೆ. ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಎಲ್ಲಾ ಕಡೆಗಳಲ್ಲಿ ಪ್ರತಿಭಟನೆಗಳು ಜರುಗಬಹುದು. ರಾಜಕೀಯ ಪಕ್ಷಗಳು, ನಾಯಕರು, ಮುಖಂಡರು ಕೂಡ ಈ ನಿಟ್ಟಿನಲ್ಲಿ ಧ್ವನಿ ಎತ್ತಬೇಕು.

ದಾಳಿಕೋರರನ್ನು ಬಂಧಿಸಿ ಕಠಿಣವಾಗಿ ಶಿಕ್ಷೆಗೆ ಗುರಿಪಡಿಸಿದಾಗ, ಅಂತಹುದೇ ಮನಸ್ಥಿತಿಯ ಬೇರೆಯವರಿಗೆ ಬುದ್ಧಿಬರುತ್ತದೆ.

ಮಂಜುನಾಥ ನಾಗಲೀಕರ್

ಬಹುಸಂಖ್ಯಾತ ಹಿಂದೂಗಳು ಅತ್ಯಂತ ಪೂಜ್ಯ ಭಾವನೆಯಿಂದ ಕಾಣುವ, ಆರಾಧಿಸುವ, ಸಾಂಸ್ಕೃತಿಕವಾಗಿ ಜನ ಜೀವನದ ಭಾಗವಾಗಿರುವ ಗೋವುಗಳ ಮೇಲೆ ರಾಜ್ಯದಲ್ಲಿ ವಿಕೃತ ದಾಳಿಗಳು ಇತ್ತೀಚೆಗೆ ಹೆಚ್ಚಾಗಿವೆ. ಕೆಚ್ಚಲು ಕತ್ತರಿಸುವುದು, ಗೋವಿನ ರುಂಡವನ್ನು ಸಾರ್ವಜನಿಕ ಸ್ಥಳದಲ್ಲಿರಿಸುವುದು, ತಲವಾರ್‌ನಿಂದ ದಾಳಿ, ಅಮಾನವೀಯವಾಗಿ ಕಳ್ಳಸಾಗಣೆ ಸೇರಿ ವಿವಿಧ ರೀತಿಯ ದೌರ್ಜನ್ಯಗಳಿಂದ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ. ಇಂತಹ ಘಟನೆಗಳಿಂದಾಗಿ ದಾಳಿಕೋರರ ವಿರುದ್ಧ ಸಾತ್ವಿಕ ಆಕ್ರೋಶವೊಂದು ರಾಜ್ಯದಲ್ಲಿ ಭುಗಿಲೆದ್ದಿದೆ. ಹಲವು ವರ್ಷಗಳಿಂದ ಗೋರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವಿಶ್ವ ಹಿಂದು ಪರಿಷತ್‌ನ ರಾಜ್ಯ ಗೋರಕ್ಷಕ್ ಪ್ರಮುಖ ಸುನೀಲ್ ಕೆ.ಆರ್. ಅವರು ರಾಜ್ಯದಲ್ಲಿ ಗೋವುಗಳ ಮೇಲೆ ನಡೆಯುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.

ಹಿಂದುಗಳು ಪೂಜ್ಯ ಭಾವನೆಯಿಂದ ಕಾಣುವ ಗೋವುಗಳ ಕೆಚ್ಚಲು ಕೊಯ್ಯುವ, ದಾಳಿ ಮಾಡಿ ವಿಕೃತಿ ಮೆರೆಯುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆಯಲ್ಲ?

ಬಹುಸಂಖ್ಯಾತ ಹಿಂದುಗಳು ಗೋವುಗಳ ಜೊತೆ ಸಾವಿರಾರು ವರ್ಷಗಳಿಂದ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಗೋಮಾತೆ ಎಂದು ಪೂಜಿಸುತ್ತಾರೆ. ಹೀಗಾಗಿ, ಇಂತಹ ಮುಗ್ಧ ಜೀವಿಗಳ ಮೇಲೆ ದಾಳಿ ಮಾಡಿದರೆ ಸಮಾಜದ ಸೌಹಾರ್ದತೆ, ಶಾಂತಿ ಕದಡಬಹುದು ಎಂಬ ಸ್ಪಷ್ಟ ಗುರಿಯೊಂದಿಗೆ ಜಿಹಾದಿ ಮನಸ್ಥಿತಿಗಳು ಇಂತಹ ಕೃತ್ಯಗಳನ್ನು ಎಸಗುತ್ತಿವೆ.

ಗೋವುಗಳ ಹತ್ಯೆ, ಮಾರಾಟ ನಿಷೇಧವಿದೆ. ಈಗ ಇಂತಹ ಕೃತ್ಯಕ್ಕೆ ಬೇರೆ ರೀತಿಯ ಕಠಿಣವಾದ ಕಾನೂನುಗಳ ಅಗತ್ಯವಿದೆಯೇ?

ಗೋಹತ್ಯೆ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಕೃತ್ಯ ಎಸಗುವವರನ್ನು ಬಂಧನಕ್ಕೆ ಒಳಪಡಿಸಿ ಕಾನೂನು ಕ್ರಮ ಜರುಗಿಸಬೇಕು. ಆರೋಪಿಗಳನ್ನು ರೌಡಿ ಪಟ್ಟಿಗೆ ಸೇರಿಸಿ ನಿಗಾ ಇರಿಸಬೇಕು. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ಆದರೆ, ನಮ್ಮ ರಾಜ್ಯದಲ್ಲಿ ಈ ಕಾನೂನು ಪಾಲನೆ ಸರಿಯಾಗಿ ಆಗುತ್ತಿಲ್ಲ. ಗೋವುಗಳ ಮೇಲೆ ದಾಳಿ ಮಾಡುವವರು, ಗೋವುಗಳ ಕಳ್ಳಸಾಗಣೆದಾರರಿಗೆ ಭಯವೇ ಇಲ್ಲದಂತಾಗಿದೆ.

ಇಂತಹ ಕೃತ್ಯಗಳು ಮರುಕಳಿಸದಂತೆ ನಾಗರಿಕರು, ಸಮಾಜ ಏನು ಮಾಡಬಹುದು?

ಅಕ್ರಮ ಗೋವು ಸಾಗಣೆದಾರರ ಕುರಿತು ಗೋರಕ್ಷಣೆ ಮಾಡುವ ವಿಶ್ವ ಹಿಂದು ಪರಿಷತ್, ಬಜರಂಗದಳ ಸೇರಿ ಅನೇಕ ಸಂಘ-ಸಂಸ್ಥೆಗಳು ಪೊಲೀಸರಿಗೆ ಮಾಹಿತಿ ನೀಡುತ್ತಿವೆ. ಪೊಲೀಸರು ಬರುವುದು ವಿಳಂಬವಾದಾಗ ಅಥವಾ ತುರ್ತು ಮಾಹಿತಿ ಸಿಕ್ಕಾಗ ಸ್ವತಃ ಕಳ್ಳಸಾಗಣೆ ವಾಹನಗಳನ್ನು ತಡೆಯುತ್ತಿದ್ದಾರೆ. ಇತ್ತೀಚೆಗೆ ಸಾರ್ವಜನಿಕರಲ್ಲೂ ಜಾಗೃತಿ ಹೆಚ್ಚಾಗಿದೆ. ಸ್ವತಃ ನಾಗರಿಕರು ಕೂಡ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಕುರಿತು ಗಮನ ಹರಿಸಬೇಕು. ಶಾಂತಿ ಕದಡುವ ಪ್ರಯತ್ನಗಳು ನಡೆಯುವ ಚಟುವಟಿಕೆಗಳ ಕುರಿತು ಪೊಲೀಸ್ ಇಲಾಖೆ ಮತ್ತು ರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳಿಗೆ ಮಾಹಿತಿ ಹಂಚಿಕೊಳ್ಳಬೇಕು.

ಗೋರಕ್ಷಕರಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರಣ ಇಂತಹ ಕೃತ್ಯಗಳ ಹಿಂದಿರುವ ದುಷ್ಕರ್ಮಿಗಳ ಉದ್ದೇಶ ಏನಿರಬಹುದು?

ಕೆಚ್ಚಲು ಕತ್ತರಿಸುವುದು, ತಲವಾರ್, ಮಚ್ಚುಗಳಿಂದ ದಾಳಿ ಮಾಡಿ ದೌರ್ಜನ್ಯ ಎಸಗುವುದು, ಕತ್ತು ಕತ್ತರಿಸಿ ದೇವಸ್ಥಾನದ ಬಳಿ ಇರಿಸುವುದು ಅಥವಾ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಎಲ್ಲರಿಗೂ ಕಾಣುವಂತೆ ಇಟ್ಟು ಹೋಗುವ ಘಟನೆಗಳು ಪದೇ ಪದೆ ನಡೆಯುತ್ತಿವೆ ಎಂದಾದರೆ ಅದರ ಹಿಂದಿನ ಮನಸ್ಸುಗಳು ಎಂತಹವು? ಮತ್ತು ಯಾರು ಮಾಡುತ್ತಿದ್ದಾರೆ ಎಂಬುದನ್ನು ಯಾರು ಬೇಕಾದರೂ ಊಹಿಸಬಲ್ಲರು.

ಇಂತಹ ಕೃತ್ಯ ನಡೆದಾಗ ಸಹಜವಾಗಿ ನಿರ್ದಿಷ್ಟ ಕೋಮಿನ ಮೇಲೆ ಅನುಮಾನ, ದ್ವೇಷದ ಭಾವನೆ ಹೆಚ್ಚಾಗುತ್ತದೆ. ಈ ರೀತಿ ಆಗದಂತೆ ಯಾರು ಹೊಣೆ ಹೊರಬೇಕು?

ಇಂತಹ ಕೃತ್ಯ ಎಸಗುವವರ ಮೂಲ ಉದ್ದೇಶವೇ ಜನರ ನಡುವೆ ವೈಮನಸ್ಸು ಉಂಟು ಮಾಡುವುದು, ಅಶಾಂತಿ ಸೃಷ್ಟಿಸುವುದು, ಗಲಭೆ ಎಬ್ಬಿಸುವುದು ಆಗಿದೆ. ಅಂತಿಮವಾಗಿ ಗೋಮಾಂಸ ವಿಚಾರವಾಗಿ ನಮ್ಮ ಮೇಲೆ ದಾಳಿ ನಡೆದಿದೆ ಎಂದು ದೊಡ್ಡಮಟ್ಟದಲ್ಲಿ ಗುಲ್ಲೆಬ್ಬಿಸಿ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನವಾಗಿದೆ. ಜಿಹಾದಿಗಳು ಮಾಡುತ್ತಿರುವ ಈ ಹೀನ ಕೃತ್ಯಗಳು, ವಿಕೃತಿಗಳನ್ನು ಪೊಲೀಸ್ ಇಲಾಖೆ ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ವಯಸ್ಸಾದ ಗೋವುಗಳನ್ನು ಸಾಕಲು ಆಗದೆ ರೈತರು ಕಸಾಯಿಖಾನೆಗೆ ಮಾರಾಟ ಮಾಡುವುದು ಅನೇಕ ಕಡೆ ಕಂಡು ಬರುತ್ತಿದೆಯಲ್ಲ?

ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಗೋಮಾಳ, ಗೋಶಾಲೆಗಳನ್ನು ನಡೆಸುತ್ತಿವೆ. ಸರ್ಕಾರದ ಇಂತಹ ಸಂಸ್ಥೆಗಳಿಗೆ ಅಗತ್ಯ ಅನುದಾನ ಒದಗಿಸಬೇಕು. ಅಗತ್ಯಕ್ಕೆ ತಕ್ಕಂತೆ ಗೋಶಾಲೆಗಳನ್ನು ಹೆಚ್ಚಿಸಬೇಕು. ಹಾಲು, ಕೃಷಿ ಚಟುವಟಿಕೆಗೆ ಸಂಬಂಧಿಸಿದ ಜಾನುವಾರು ಮಾತ್ರವಲ್ಲದೆ ಸಾಂಸ್ಕೃತಿಕವಾಗಿಯೂ ಗೋವು ನಮ್ಮ ನಾಡಿನ ಜನರ ಜೀವನದ ಭಾಗ. ಹೀಗಾಗಿ, ಗೋವುಗಳ ನಿರ್ವಹಣೆ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸಬೇಕು.

ಗೋವುಗಳನ್ನು ರಕ್ಷಿಸಲು ರೈತರು, ಮಾಲೀಕರು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು?

ಗೋವುಗಳನ್ನು ಸಾಮಾನ್ಯವಾಗಿ ರೈತರು, ಮಾಲೀಕರು ಅತ್ಯಂತ ಕಾಳಜಿಯಿಂದ ಸಾಕುತ್ತಾರೆ. ಸಂಜೆಯಾದರೆ ತಮ್ಮ ಮನೆಯ ಆವರಣ, ತೋಟದಲ್ಲಿರುವ ಕೊಟ್ಟಿಗೆಗೆ ಕಟ್ಟುತ್ತಾರೆ. ಕೆಲವೊಮ್ಮೆ ಆಕಸ್ಮಿಕವಾಗಿ ಗೋವುಗಳು ಕಾಣೆಯಾದರೆ, ಬೇರೆ ಕಡೆ ಹೋದಾಗ ಹುಡುಕಾಡುತ್ತಾರೆ. ಆದರೆ, ಹೀಗೆ, ಮಾಲೀಕರಿಂದ ತಪ್ಪಿಸಿಕೊಂಡಿರುವ ಹಸುಗಳನ್ನು ಕಳ್ಳರು ಕಳ್ಳಸಾಗಣೆ ಮಾಡುತ್ತಾರೆ. ಹೀಗಾಗಿ, ಹಸು, ಜಾನುವಾರಗಳ ಬಗ್ಗೆ ರೈತರು, ಮಾಲೀಕರು ಹೆಚ್ಚು ಜಾಗ್ರತೆ ವಹಿಸಬೇಕು. ರಕ್ಷಣೆಗೆ ಅನುಸರಿಸಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು.

ಇಂಥ ಘಟನೆಗಳಿಂದ ಸಾಂಸ್ಕೃತಿಕವಾಗಿ ಸಮಸ್ಯೆ, ಗೊಂದಲಗಳು ಸೃಷ್ಟಿಯಾಗಬಹುದಲ್ಲವೇ?

ಗೋವುಗಳ ಮೇಲಿನ ದಾಳಿ ಬಹುಸಂಖ್ಯಾತ ಹಿಂದೂಗಳಿಗೆ ನೋವುಂಟು ಮಾಡುತ್ತದೆ. ಪದೇ ಪದೆ ಇಂತಹ ಘಟನೆಗಳು ನಡೆಯುವುದರಿಂದ ಅಸಹಾಯಕತೆ ಭಾವನೆ ಮೂಡುತ್ತದೆ. ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಎಲ್ಲಾ ಕಡೆಗಳಲ್ಲಿ ಪ್ರತಿಭಟನೆಗಳು ಜರುಗಬಹುದು. ರಾಜಕೀಯ ಪಕ್ಷಗಳು, ನಾಯಕರು, ಮುಖಂಡರು ಕೂಡ ಈ ನಿಟ್ಟಿನಲ್ಲಿ ಧ್ವನಿ ಎತ್ತಬೇಕು.

ಇಂತಹ ದಾಳಿಗಳನ್ನು ತಡೆಯಲು ಸ್ಥಳೀಯ ಪೊಲೀಸರು, ಸ್ಥಳೀಯ ಆಡಳಿತ ಯಾವ ರೀತಿಯ ಕ್ರಮ ಕೈಗೊಳ್ಳಬಹುದು?

ಗೋವಿನ ಮೇಲೆ ದಾಳಿ ನಡೆಯುವ ಘಟನೆಗಳನ್ನು ತಡೆಯಲು ಜಿಲ್ಲಾಡಳಿತ, ಸ್ಥಳೀಯ ಆಡಳಿತ, ಪೊಲೀಸರಿಗೆ ಸಾಕಷ್ಟು ಅವಕಾಶಗಳು ಇವೆ. ಅದರಲ್ಲೂ ಗೋವಿನ ಕುರಿತು ಬಹುಸಂಖ್ಯಾತರ ಭಾವನೆಗಳು ಹಾಗೂ ಕಳ್ಳಸಾಗಣೆ ಮತ್ತು ದಾಳಿಯಿಂದ ಉಂಟಾಗುವ ಅಶಾಂತಿಯ ಘಟನೆಗಳ ಕುರಿತಾಗಿ ಮಾಧ್ಯಮ ಪ್ರಕಟಣೆ, ಪತ್ರಿಕಾಗೋಷ್ಠಿ ನಡೆಸುವ ಮೂಲಕ ಕೃತ್ಯ ಎಸಗುವವರಿಗೆ ಎಚ್ಚರಿಕೆ ನೀಡಬೇಕು. ಇಂತಹ ದಾಳಿಕೋರರನ್ನು ಬಂಧಿಸಿ ಕಠಿಣವಾಗಿ ಶಿಕ್ಷೆಗೆ ಗುರಿಪಡಿಸಿದಾಗ, ಅಂತಹುದೇ ಮನಸ್ಥಿತಿಯ ಬೇರೆಯವರಿಗೆ ಬುದ್ಧಿಬರುತ್ತದೆ. ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚುತ್ತಿರುವ ಕಾರಣ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಳ್ಳಬೇಕು.

ಗೋವುಗಳ ಮೇಲಿನ ದಾಳಿಯಿಂದ ಆಗಬಹುದಾದ ಕೋಮು ಘಟನೆಗಳ ಕುರಿತು ಜನರನ್ನು ಎಚ್ಚರಿಸಬಹುದೇ?

ಗೋ ಹತ್ಯೆ ಮತ್ತು ಗೋ ರಕ್ಷಣೆ ವಿಚಾರವಾಗಿ ಗಲಭೆಗಳು, ಕಲ್ಲು ತೂರಾಟ, ಕೊಲೆಯಂತಹ ಅನೇಕ ಘಟನೆಗಳು ನಡೆದು ಹೋಗಿವೆ. ಹೀಗಾಗಿ, ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರನ್ನು ಉದಾಹರಣೆ ಸಮೇತ ಎಚ್ಚರಿಸಬಹುದು.

Read more Articles on