ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಉಪಕರಣ ಅಳವಡಿಕೆ ತಪಾಸಣೆ ಹೆಸರಿನಲ್ಲಿ ನಿರ್ದೇಶಕ ವಿದೇಶ ಪ್ರವಾಸ : ನೌಕರರ ಆರೋಪ

| N/A | Published : Mar 06 2025, 01:30 AM IST / Updated: Mar 06 2025, 05:29 AM IST

ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಉಪಕರಣ ಅಳವಡಿಕೆ ತಪಾಸಣೆ ಹೆಸರಿನಲ್ಲಿ ನಿರ್ದೇಶಕ ವಿದೇಶ ಪ್ರವಾಸ : ನೌಕರರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಉಪಕರಣ ಅಳವಡಿಕೆ ತಪಾಸಣೆ ನೆಪದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮದ ತಂತ್ರಜ್ಞರ ಬದಲಾಗಿ ಹಣಕಾಸು ವಿಭಾಗದ ನಿರ್ದೇಶಕರೊಬ್ಬರು ತಮ್ಮ ಪತ್ನಿಯನ್ನು ಕರೆದುಕೊಂಡು ವಿದೇಶ ಪ್ರವಾಸ ಹೋಗಿ ಬಂದಿದ್ದಾರೆ ಎಂದು ಆರೋಪಿಸಿರುವ ಬಿಎಂಆರ್‌ಸಿಎಲ್‌ ನೌಕರರ ಸಂಘ 

 ಬೆಂಗಳೂರು :  ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಉಪಕರಣ ಅಳವಡಿಕೆ ತಪಾಸಣೆ ನೆಪದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮದ ತಂತ್ರಜ್ಞರ ಬದಲಾಗಿ ಹಣಕಾಸು ವಿಭಾಗದ ನಿರ್ದೇಶಕರೊಬ್ಬರು ತಮ್ಮ ಪತ್ನಿಯನ್ನು ಕರೆದುಕೊಂಡು ವಿದೇಶ ಪ್ರವಾಸ ಹೋಗಿ ಬಂದಿದ್ದಾರೆ ಎಂದು ಆರೋಪಿಸಿರುವ ಬಿಎಂಆರ್‌ಸಿಎಲ್‌ ನೌಕರರ ಸಂಘವು, ಇಲ್ಲಿ ದುಂದುವೆಚ್ಚಾಗಿದ್ದು ತನಿಖೆ ನಡೆಸುವಂತೆ ಒತ್ತಾಯಿಸಿದೆ.

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಸಂಘವು ಈ ಬಗ್ಗೆ ಪತ್ರ ಬರೆದು ದೂರು ನೀಡಿದೆ. 2022ರ ಸೆಪ್ಟೆಂಬರ್‌ನಲ್ಲಿ ಈ ಘಟನೆ ನಡೆದಿದೆ. ಮೆಟ್ರೋ ನಿಲ್ದಾಣಗಳಲ್ಲಿ ಟೆಲಿಕಮ್ಯೂನಿಕೇಶನ್‌ ಪರಿಕರಗಳ ಅಳವಡಿಕೆ ಸಂಬಂಧ ಉಪಗುತ್ತಿಗೆ ಪಡೆದಿದ್ದ ಜರ್ಮನಿಯ ಎಎಸ್‌ಎಲ್‌ ಕಂಪನಿಯು ಎಫ್‌ಎಟಿ (ಫ್ಯಾಕ್ಟರಿ ಎಕ್ಸೆಪ್ಟೆನ್ಸ್‌ ಟೆಸ್ಟ್‌ ) ತಪಾಸಣೆಗಾಗಿ ಬಿಎಂಆರ್‌ಸಿಎಲ್‌ನ್ನು ಆಹ್ವಾನಿಸಿತ್ತು.

ಆಡಿಯೋ ಸಿಸ್ಟಂ ಅಳವಡಿಕೆಗೂ ಮುನ್ನ ತಾಂತ್ರಿಕ ತಪಾಸಣೆ ನಡೆಸಬೇಕಾಗುತ್ತದೆ. ಆದರೆ, ತಾಂತ್ರಿಕ ಪರಿಣತರ ಬದಲಾಗಿ ಆರ್ಥಿಕ ವಿಭಾಗದ ನಿರ್ದೇಶಕರು ತಮ್ಮ ಪತ್ನಿಯನ್ನು ಕರೆದುಕೊಂಡು ಜರ್ಮನಿಗೆ ಹೋಗಿ ಬಂದಿದ್ದಾರೆ ಎಂದು ನೌಕರರ ಸಂಘ ದೂರಿದೆ.

ಈ ಬಗ್ಗೆ ಮಾತನಾಡಿದ ಸಂಘದ ಉಪಾಧ್ಯಕ್ಷ ಸೂರ್ಯ ನಾರಾಯಣ ಮೂರ್ತಿ, ‘ತಾಂತ್ರಿಕ ತಪಾಸಣೆಗೆ ಹೋಗಿಬರಲು ನಿರ್ದೇಶಕರು ಅರ್ಹರೆ? ಅವರಿಗೆ ಪರಿಕರಗಳ ತಪಾಸಣೆ ನಡೆಸಿ ಅಳವಡಿಕೆಗೆ ಒಪ್ಪಿಗೆ ನೀಡುವಷ್ಟು ಪರಿಣತಿ ಇರುತ್ತದೆಯೆ? ಅಲ್ಲದೆ, ನಿರ್ದೇಶಕರು ತಮ್ಮ ಪತ್ನಿಯನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದು ಯಾಕೆ’ ಎಂದು ಪ್ರಶ್ನಿಸಿದ್ದಾರೆ.

ಗುತ್ತಿಗೆ ಹಾಗೂ ಉಪಗುತ್ತಿಗೆ ಕಂಪನಿಗಳು ವ್ಯವಸ್ಥಾಪಕ ನಿರ್ದೇಶಕರ ಬದಲಾಗಿ ಹಣಕಾಸು ವಿಭಾಗದ ನಿರ್ದೇಶಕರಿಗೆ ಪತ್ರ ಬರೆದು ಆಹ್ವಾನಿಸಿದ್ದರ ಹಿನ್ನೆಲೆ ಬಗ್ಗೆ ತನಿಖೆಯಾಗಬೇಕು. ಎಫ್‌ಎಟಿ ತಪಾಸಣೆ ಬಳಿಕ ಅಳವಡಿಕೆಯಾದ ಪರಿಕರಗಳಲ್ಲಿ ತಾಂತ್ರಿಕ ದೋಷ ಕಂಡುಬಂದರೆ ಅಥವಾ ಪ್ರಯಾಣಿಕರಿಗೆ ತೊಂದರೆ ಆದಲ್ಲಿ ಅದಕ್ಕೆ ಹೊಣೆಗಾರರು? ಈ ಬಗ್ಗೆ ಬಾಹ್ಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ನೌಕರರ ಸಂಘ ಒತ್ತಾಯಿಸಿದೆ.