ಸಾರಾಂಶ
20 ವರ್ಷ ಬದುಕು ನೀಡಿದ್ದ ಪಂಚರ್ ಅಂಗಡಿಗೆ ಕೊರೋನಾ ಲಾಕ್‌ಡೌನ್‌ನಿಂದ ಬೀಗ ಬಿತ್ತು. ಆಗ ರೋಗ ನಿರೋಧಕ ಆಹಾರದ ಮಾತುಕತೆಯಲ್ಲಿ ಸಾವಯವ ಬೆಲ್ಲದ ಚರ್ಚೆ ಬೆಲ್ಲ ಉತ್ಪಾದನೆಗೆ ಪ್ರೇರೇಪಿಸಿತು.
ಎಸ್ಸೆಸ್ಸೆಲ್ಸಿ ಫೇಲ್ ಆಗಿತ್ತು. ಜೀವನ ನಿರ್ವಹಣೆಗಾಗಿ ಬಾಗಲಕೋಟೆ ಜಿಲ್ಲೆಯ ರಬಕವಿ ಸಮೀಪದ ಸಂಗಾನಟ್ಟಿ ಗ್ರಾಮದಲ್ಲಿ ಪಂಚರ್ ಅಂಗಡಿ ನಡೆಸುತ್ತಿದ್ದ ಮಹಾಲಿಂಗಪ್ಪ ಬಿ.ಇಟ್ನಾಳ್. ಬಾಡಿಗೆ ಮತ್ತಿತ್ಯಾದಿ ಖರ್ಚು ಕಳೆದರೆ ದಿನಕ್ಕೆ ₹300ರಿಂದ ₹400 ಉಳಿದರೆ ಅದೇ ದೊಡ್ಡದು. 20 ವರ್ಷ ಬದುಕು ನೀಡಿದ್ದ ಪಂಚರ್ ಅಂಗಡಿಗೆ ಕೊರೋನಾ ಲಾಕ್‌ಡೌನ್‌ನಿಂದ ಬೀಗ ಬಿತ್ತು. ಆಗ ರೋಗ ನಿರೋಧಕ ಆಹಾರದ ಮಾತುಕತೆಯಲ್ಲಿ ಸಾವಯವ ಬೆಲ್ಲದ ಚರ್ಚೆ ಇವರನ್ನು ಬೆಲ್ಲ ಉತ್ಪಾದನೆಗೆ ಪ್ರೇರೇಪಿಸಿತು.
ಕಪೆಕ್‌ನಿಂದ ಸಾಲ: ₹10 ಲಕ್ಷ ಸಾಲ ಮಾಡಿ ಬೆಲ್ಲ ಉತ್ಪಾದನೆ ಶುರು ಮಾಡಿದರು ಮಹಾಲಿಂಗಪ್ಪ. ರಸಾಯನಿಕ ಬಳಸದೆ ಅಚ್ಚು, ಬಕೆಟ್ ಬೆಲ್ಲ ಮಾಡಿ ಮಾರತೊಡಗಿದರು. ಪಂಚರ್ ಅಂಗಡಿಗಿಂತ ಪರವಾಗಿಲ್ಲ ಅನ್ನೋವಷ್ಟು ವ್ಯಾಪಾರ ನಡೆಸುತ್ತಾ 2 ವರ್ಷ ಕಳೆದಿದ್ದರು. ಆಗ ಕೃಷಿ ಇಲಾಖೆ ಅಧಿಕಾರಿಗಳು ಮಹಾಲಿಂಗಪ್ಪ ಅವರಿಗೆ ಪುಡಿ ಬೆಲ್ಲ ಉತ್ಪಾದಿಸಿ, ತಾಂತ್ರಿಕತೆ, ಸಾಲ ಕೊಡಿಸುತ್ತೇವೆ ಎಂದಾಗ ನಂಬಲಿಲ್ಲ. ಸರ್ಕಾರದ ಕೆಲಸ ಆಗಬೇಕು ಅಂದರೆ ಅಲೆಯಬೇಕು, ನಿಮ್ಮ ಸಹವಾಸವೇ ಬೇಡ ಎಂದರಂತೆ.
ಆಗ ಬಂದಿದ್ದ ಅಧಿಕಾರಿಗಳಾದ ಗೀತಾ ಹಿರೇಮಠ, ಪ್ರವೀಣ್ ಪೂಜಾರಿ ಮತ್ತು ತಸ್ಕಿನ್ ಡಾಂಗೆ ಅವರು ದಾಖಲೆ ಕೊಡಿ 10 ದಿನದಲ್ಲಿ ಸಾಲ ಸಿಗುತ್ತೆ ಎಂದು ಮಹಾಲಿಂಗಪ್ಪ ಅವರನ್ನು ಒಪ್ಪಿಸಿದ್ದಾರೆ. ಅವರು ನೀಡಿದ ಮಾತಿನಂತೆ ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ, ರಫ್ತು ನಿಗಮದಿಂದ ಪಿಎಂಎಫ್ಎಂಇ ಯೋಜನೆಯಡಿ 10 ದಿನದೊಳಗೆ ₹22 ಲಕ್ಷ ಸಾಲ ಅಕೌಂಟಿಗೆ ಬಂದಿದೆ. ಪುಡಿ ಬೆಲ್ಲದ ಯಂತ್ರಗಳು, ತರಬೇತಿ ಎಲ್ಲ ತಿಂಗಳೊಳಗೆ ಮುಗಿದಿದೆ. ₹11 ಲಕ್ಷ ಸಬ್ಸಿಡಿಯೂ ಒಂದೂವರೆ ತಿಂಗಳಲ್ಲಿ ಜಮಾ ಆಗಿದೆ. 6 ದೇಶ, 10 ಪೇಟೆಂಟ್:
ಕಪೆಕ್ ಸಾಲ ಪಡೆದ 3 ವರ್ಷದಲ್ಲಿ ಮಹಾಲಿಂಗಪ್ಪ ಇಟ್ನಾಳ್, ಅವರ ಪತ್ನಿ ಮಹಾದೇವಿ ಇಟ್ನಾಳ್ ಕಟ್ಟಿರೋ ಆಲೆಮನೆ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಪ್ಯೂರ್ ನೇಚರ್ ಹೆಸರಿನಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಳೆದ ವರ್ಷ ₹8 ಕೋಟಿ ವಹಿವಾಟು ನಡೆಸಿದೆ. ಅಮೆರಿಕ, ಆಸ್ಟ್ರೇಲಿಯಾ, ಕಾಂಬೋಡಿಯಾ, ದುಬೈ, ಸ್ವಿಟ್ಜರ್ಲ್ಯಾಂಡ್, ಮಾರಿಷಸ್ ದೇಶಗಳಿಗೆ ರಫ್ತುದಾರ ಕಂಪನಿ ಮೂಲಕ ಬೆಲ್ಲ ರಫ್ತಾಗುತ್ತಿದೆ. ಬೆಂಗಳೂರು ಬುಲ್ ಟೆಂಪಲ್ ರಸ್ತೆಯಲ್ಲಿ ಕಾರ್ಪೋರೆಟ್ ಕಚೇರಿ ತೆರೆದಿದೆ. ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯಲ್ಲಿ ಗೋಡೌನ್ ಸ್ಥಾಪಿಸಿದೆ. 80 ಜನರಿಗೆ ನೇರ ಉದ್ಯೋಗ ನೀಡಿದೆ. ವಿವಿಧ ಬಗೆಯ ಬೆಲ್ಲ ತಯಾರಿಕೆಗೆ 10 ಪೇಟೆಂಟ್ ಪಡೆದುಕೊಂಡಿದೆ. ಕೇಂದ್ರ ಸರ್ಕಾರದಿಂದ ಬೆಸ್ಟ್ ಇನ್ನೋವೇಷನ್ ಇನ್ವೆನ್ಷನ್ ಅವಾರ್ಡ್ ಸಿಕ್ಕಿದೆ. ಈ ಆರ್ಥಿಕ ವರ್ಷದಲ್ಲಿ ₹12 ಕೋಟಿ ವಹಿವಾಟಿನ ಗುರಿಯೊಂದಿಗೆ ಮುನ್ನಡೆದಿದೆ. ಮಹಾದೇವಿ ಇಟ್ನಾಳ್ ಅವರು ಸಂಗಾನಟ್ಟಿಯಲ್ಲಿರುವ ಬೆಲ್ಲ ಉತ್ಪಾದನಾ ಘಟಕದ ಮೇಲುಸ್ತುವಾರಿ ನೋಡಿಕೊಂಡರೆ, ಪತಿ ಮಹಾಲಿಂಗಪ್ಪ ಅವರು ಮಾರ್ಕೆಟಿಂಗ್ ಕಡೆ ಗಮನ ಕೊಟ್ಟಿದ್ದಾರೆ.
ಶುಂಠಿ ಬೆಲ್ಲ, ಮೆಣಸು, ಚಾಕ್ಲೇಟ್, ಅರಿಶಿಣ, ಏಲಕ್ಕಿ ಬೆಲ್ಲ ಹೀಗೆ 18 ಬಗೆಯ ಬೆಲ್ಲಗಳು ಮಾರುಕಟ್ಟೆಯಲ್ಲಿವೆ. ಜೊತೆಗೆ ಪಂಚತಾರಾ ಹೋಟೆಲ್‌ಗಳಲ್ಲಿ ನೀಡುವ ಸಕ್ಕರೆ ಕ್ಯೂಬ್ ರೀತಿ 5 ಗ್ರಾಮಿನ ಬೆಲ್ಲದ ಕ್ಯೂಬ್ ದೊರೆಯುತ್ತಿದೆ. ಲಿಕ್ವಿಡ್ ಬೆಲ್ಲದಲ್ಲೂ ಹಲವು ಫ್ಲೇವರ್ ಪರಿಚಯಿಸಿದ್ದಾರೆ. ಇವುಗಳನ್ನು ಮೊದ ಮೊದಲಿಗೆ ಬೆಂಗಳೂರಿನ ಅಪಾರ್ಟ್ಮೆಂಟ್‌ಗಳಿಗೆ ಸ್ವತಃ ಮಹಾಲಿಂಗಪ್ಪ ಅವರೇ ಒಯ್ದು ಮಾರುತ್ತಿದ್ದರು. ನಮ್ಮ ಮೆಟ್ರೋದಲ್ಲಿ, ಬೆಂಗಳೂರು ಏರ್ಪೋರ್ಟ್‌ನಲ್ಲೂ ಮಾರಿದ್ದೇನೆ. ಆ ರೀತಿ ಮೊದಲ ವರ್ಷ ಸೃಷ್ಟಿಯಾದ ಗ್ರಾಹಕರು ಪುನರಾವರ್ತಿತವಾಗಿ ಇತರರಿಗೂ ತಿಳಿಸಿದ್ದೇ ಯಶಸ್ಸಿಗೆ ಕಾರಣ ಎನ್ನುತ್ತಾರೆ ಮಹಾಲಿಂಗಪ್ಪ ಇಟ್ನಾಳ್.
ಆನ್‌ಲೈನ್‌ನಲ್ಲಿ ಲಭ್ಯ: ನಾವು ಬೆಲ್ಲ ಉತ್ಪಾದನೆಯಲ್ಲಿ ರಸಾಯನಿಕ ಬಳಸುವುದಿಲ್ಲ. ಇಷ್ಟು ದಿನ ಆಫ್‌ಲೈನ್‌ನಲ್ಲಿಯೇ ಮಾರಾಟ ನಡೀತು. ಇದೀಗ ವೆಬ್‌ಸೈಟ್ ರೆಡಿಯಾಗುತ್ತಿದೆ. 10 ರಿಂದ 15 ದಿನದಲ್ಲಿ ಅದು ಲಾಂಚ್ ಆಗಲಿದೆ. ಸ್ವಿಗ್ಗಿ, ಬ್ಲಿಂಕಿಂಟ್, ಝೆಪ್ಟೋ ಹಾಗೂ ಅಮೆಜಾನ್‌ನಲ್ಲೂ ಆಗಸ್ಟ್ 15ರ ನಂತರ ಪ್ಯೂರ್ ನೇಚರ್ (www.purenaturefarms.com) ಉತ್ಪನ್ನಗಳು ದೊರೆಯಲಿವೆ ಎಂದು ವಿವರಿಸಿದರು ಮಹಾಲಿಂಗಪ್ಪ.
ನೀವು ಎಸ್ಸೆಸ್ಸೆಲ್ಸಿ ಫೇಲ್. ನಿಮ್ ಪತ್ನಿ ಓದಿದ್ದಾರ ಎಂಬ ಪ್ರಶ್ನೆಗೆ, ಆಕೆ ನನಗಿಂತ ಕಡಿಮೆ ಓದ್ಯಾಳ. ಆದ್ರೆ, ಫುಲ್ ಬೆಲ್ಲ ತಯಾರಿ ಅವಳೇ ನೋಡ್ಕತಾಳೆ. ಹಂಗೆ ತಿಳಿದೋರ ಹತ್ರ ತಿಳ್ಕೊಂಡು ಕಲ್ತಕೊಂಡು ಮಾಡಿಕೊಂಡು ಬಂದೀವಿ. ಮಾರ್ಕೆಟಿಂಗ್ ವಿಷಯದಲ್ಲಿ ಸೋದರಮಾವ ಶ್ರೀಶೈಲ ದಲಾಲ್ ಸಹಕಾರ ನೀಡಿದ್ದಾರೆ ಅನ್ನೋ ಮಹಾಲಿಂಗಪ್ಪ, ಕಪೆಕ್‌ನವರು ನಮಗೆ ಏರ್ಪೋರ್ಟ್‌ನಲ್ಲಿ ಉತ್ಪನ್ನ ಮಾರಲು ಅಂಗಡಿಗೆ ಅವಕಾಶ ಮಾಡಿಸಿಕೊಡಬೇಕು ಎನ್ನೋ ಬೇಡಿಕೆ ಇಟ್ಟಿದ್ದಾರೆ. ಕಬ್ಬಿನಿಂದ ಉತ್ಪನ್ನ ಮಾಡಿ ಮಾರುವುದು ಲಾಭ ಎಂದು ಜಾಗೃತಿ ಕಾರ್ಯಕ್ರಮವನ್ನು ರೈತರಿಗೆ ಹಮ್ಮಿಕೊಳ್ಳೋ ಆಶಯ ಅವರದು.
ಪ್ಯೂರ್ ನೇಚರ್ ಉತ್ಪನ್ನಗಳಿಗೆ ಸಂಪರ್ಕಿಸಿ - 9019251111.
15 ಲಕ್ಷ ರೂ. ಸಬ್ಸಿಡಿ ಪಡೆಯಿರಿ
ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ
ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ.
ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ
ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ
22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ.
www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.