ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಾಲ್ಯದಲ್ಲಿ ಶಿಕ್ಷಣದ ಮಹತ್ವವನ್ನು ಅರಿಯದೆ ಇದ್ದಾಗ, ರಾಜಪ್ಪ ಮೇಷ್ಟ್ರು ಎಂಬ ಶಿಕ್ಷಕರು ಅವರನ್ನು ಶಾಲೆಗೆ ಸೇರಿಸಿ, ಅವರ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟರು. ಶಿಕ್ಷಕರು ಕೇವಲ ವೃತ್ತಿಪರರಲ್ಲ, ಬದಲಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವವರು ಎಂದು ಬಣ್ಣಿಸುತ್ತಾರೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಇಂದು ಶಿಕ್ಷಕರ ದಿನ ಸಿಎಂ ವಿಶೇಷ ಲೇಖನ
ನಮ್ಮ ಭಾರತದ ಎರಡನೇ ರಾಷ್ಟ್ರಪತಿಗಳು ಮತ್ತು ಸ್ವತಃ ಶಿಕ್ಷಕರೂ ಆಗಿದ್ದ ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಕರೆಕೊಟ್ಟಿದ್ದು ಅರ್ಥಪೂರ್ಣ ಎನ್ನಬಹುದು. ವಿಶೇಷವೆಂದರೆ, ರಾಧಾಕೃಷ್ಣನ್ ಅವರು ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದು, ನಮ್ಮದೇ ಕರ್ನಾಟಕದ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ. ಅವರ ಜನ್ಮದಿನದ ಸ್ಮರಣೆಯಲ್ಲಿ ಶಿಕ್ಷಕರಿಗೆ ಗೌರವ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ.
---
ನಮ್ಮ ಜೀವನದಲ್ಲಿ ಸರಿಯಾದ ಸಮಯದಲ್ಲಿ ಸೂಕ್ತ ಶಿಕ್ಷಕರೊಬ್ಬರು ಪ್ರವೇಶಿಸಿದರೆ ಏನೆಲ್ಲಾ ಅದ್ಭುತಗಳನ್ನು ಸಾಧ್ಯವಾಗಿಸಬಹುದು ಎನ್ನುವುದಕ್ಕೆ ನನ್ನ ಜೀವನವೇ ಸಾಕ್ಷಿ.
ಮೈಸೂರಿನಿಂದ ಹದಿಮೂರು ಮೈಲಿ ದೂರದ ಸಿದ್ದರಾಮನ ಹುಂಡಿ ಎಂಬ ಪುಟ್ಟಹಳ್ಳಿಯಲ್ಲಿ ನಾನು ಹುಟ್ಟಿದಾಗ, ಮುಂದೊಂದು ದಿನ ಈ ನಾಡಿನ ಮುಖ್ಯಮಂತ್ರಿ ಆಗಬಹುದೆಂದು ನನ್ನ ಹೆತ್ತವರೂ ಊಹಿಸಿರಲಿಲ್ಲ. ಸ್ವತಃ ನನಗೇ ಆ ಕನಸುಗಳಿರಲಿಲ್ಲ. ಆದರೆ ಅದನ್ನು ಸಾಧ್ಯವಾಗಿಸಿದ್ದು ಶಿಕ್ಷಣ. ಶಿಕ್ಷಣಕ್ಕೆ ಅಂತಹ ಪರಿವರ್ತನೆಯ ಶಕ್ತಿಯಿದೆ. ಅದಕ್ಕಾಗಿಯೇ ಬಾಬಾ ಸಾಹೇಬ್ ಅಂಬೇಡ್ಕರರು ಬಹಳ ಹಿಂದೆಯೇ ಸಂಘಟಿತರಾಗಿ, ಶಿಕ್ಷಿತರಾಗಿ, ಜಾಗೃತರಾಗಿ ಎಂದು ಕರೆ ಕೊಟ್ಟಿದ್ದಾರೆ.
ಸಾಮಾನ್ಯವಾಗಿ ಶಿಕ್ಷಣ ಮನುಷ್ಯನ ಜೀವನದಲ್ಲಿ ಪ್ರವೇಶಿಸುವುದು ಆತನ/ಆಕೆಯ ಬಾಲ್ಯದಲ್ಲಿ. ಬಾಲ್ಯ ಸುಂದರವಾದುದು ಮತ್ತು ಮುಗ್ಧವಾದುದು ಎಂಬುದು ಎಷ್ಟು ಸತ್ಯವೋ, ಆ ವಯಸ್ಸಿನಲ್ಲಿ ಪ್ರಾಯೋಗಿಕ ಎನ್ನಬಹುದಾದ ಹೊಣೆಗಾರಿಕೆಗಳಿರುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಹಾಗಾಗಿ ಮಕ್ಕಳ ಬಾಲ್ಯದ ದಿಕ್ಕನ್ನು ರೂಪಿಸುವ ಜವಾಬ್ದಾರಿ ತಂದೆ-ತಾಯಿಗಳ ಮೇಲಿರುತ್ತದೆ. ಹೆತ್ತವರಿಗಂತೂ ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕು ಎಂಬ ಆಸೆಯಿರುತ್ತದೆ. ಹಾಗಾಗಿ ಅವರ ಶ್ರೇಯೋಭಿವೃದ್ಧಿಗಾಗಿ ತಮ್ಮ ಮಿತಿಯಲ್ಲಿ ಹೆತ್ತವರು ಶ್ರಮಿಸುತ್ತಾರೆ. ಆದರೆ ಇಂತಹ ಯಾವ ಜೈವಿಕ ನಂಟೂ ಇಲ್ಲದೆ, ಸಣ್ಣ ಸ್ವಾರ್ಥವೂ ಇಲ್ಲದೆ ಮಗುವಿನ ಭವಿಷ್ಯ ರೂಪಿಸಲು ಶ್ರಮ ಪಡುವ ಮತ್ತೋರ್ವ ವ್ಯಕ್ತಿಯೆಂದರೆ ಶಿಕ್ಷಕ.
ನನ್ನನ್ನು ಶಾಲೆಗೆ ಸೇರಿಸಿದ್ದು ರಾಜಪ್ಪ ಮೇಷ್ಟ್ರು
ನಾನು ಹುಟ್ಟಿದ್ದು ಬಡ ಕುಟುಂಬದಲ್ಲಿ. ಕೃಷಿಯೇ ನಮಗೆ ಜೀವನಾಧಾರ. ನನ್ನ ಅಪ್ಪ-ಅಮ್ಮನಿಗೆ ಶಿಕ್ಷಣದ ಬಗ್ಗೆ ಅಷ್ಟಾಗಿ ಅರಿವಿರಲಿಲ್ಲ. ಹಾಗಾಗಿ ನನ್ನನ್ನು ಶಾಲೆಗೆ ಸೇರಿಸಲಿಲ್ಲ. ವಾರಿಗೆ ಸ್ನೇಹಿತರ ಜೊತೆ ಆಟ ಆಡಿಕೊಂಡು, ಗದ್ದೆ ಬದುಗಳಲ್ಲಿ ಎಮ್ಮೆ ಮೇಯಿಸಿಕೊಂಡು ಚೆಲ್ಲಾಪಿಲ್ಲಿಯಾಗಿ ನನ್ನ ಬಾಲ್ಯ ಶುರುವಾಯಿತು.
ನಮ್ಮೂರ ಕಡೆ ವೀರಮಕ್ಕಳ ಕುಣಿತ ಎಂಬ ಜನಪದ ಶೈಲಿಯ ನೃತ್ಯವಿದೆ. ಸಾಮಾನ್ಯವಾಗಿ ಮಕ್ಕಳಿಗೆ ಅದನ್ನು ಕಲಿಸಲಾಗುತ್ತದೆ. ಅದನ್ನು ಕಲಿಸುವುದಕ್ಕೆಂದೇ ನಂಜೇಗೌಡರು ಎಂಬ ಮೇಷ್ಟ್ರಿದ್ದರು. ನನ್ನನ್ನು ಅವರ ಬಳಿ ಕುಣಿತ ಕಲಿಯಲು ಕಳಿಸಿದರು. ಕುಣಿತದ ಜೊತೆಗೆ ಅವರು ಮರಳಿನ ಮೇಲೆ ನಮಗೆ ಅಕ್ಷರಾಭ್ಯಾಸ ಕಲಿಸುತ್ತಿದ್ದರು. ನಾನು ಸ್ವಲ್ಪ ಚುರುಕು. ಅಕ್ಷರಗಳನ್ನು ಬೇಗ ಕಲಿತು ಬರೆಯುತ್ತಿದ್ದೆ. ಇದನ್ನು ನಮ್ಮೂರಿನ ಶಾಲೆಯ ರಾಜಪ್ಪ ಮೇಷ್ಟ್ರು ಎನ್ನುವವರು ಗಮನಿಸಿದರು. ನನ್ನಲ್ಲಿರುವ ಶಿಕ್ಷಣ ಆಸಕ್ತಿಯನ್ನು ಅವರು ಪತ್ತೆ ಹಚ್ಚಿದರು. ನಮ್ಮ ತಂದೆಯ ಬಳಿ ಮಾತಾಡಿ, ಅವರ ಮನವೊಲಿಸಿ, ನನ್ನನ್ನು ನೇರವಾಗಿ ಐದನೇ ತರಗತಿಗೆ ಸೇರಿಸಿಕೊಂಡರು. ಹಾಗೆ ಶುರುವಾದ ನನ್ನ ಶಿಕ್ಷಣದ ಹಾದಿ ಇಲ್ಲಿಯವರೆಗೆ ತಂದು ನಿಲ್ಲಿಸಿದೆ.
ಒಂದು ವೇಳೆ ರಾಜಪ್ಪ ಮೇಷ್ಟ್ರು ನನ್ನ ಬದುಕಿನಲ್ಲಿ ಪ್ರವೇಶಿಸಿ, ನನ್ನನ್ನು ಶಾಲೆಗೆ ಸೇರಿಸುವ ಪ್ರಯತ್ನ ಮಾಡದೇ ಇದ್ದಿದ್ದರೆ ನನ್ನ ಕನಸುಗಳು ಸಿದ್ದರಾಮನ ಹುಂಡಿಯಿಂದ ಆಚೆಗೆ ಹಿಗ್ಗುತ್ತಿದ್ದವೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಸರಿಯಾದ ಸಮಯದಲ್ಲಿ, ಸೂಕ್ತ ಶಿಕ್ಷಕರ ಪ್ರವೇಶದಿಂದ ನಮ್ಮ ಬದುಕಿಗೆ ನಿರ್ದಿಷ್ಟ ದಾರಿ ಮತ್ತು ಸ್ಪಷ್ಟ ಗುರಿಗಳು ಲಭಿಸುತ್ತವೆ. ನನ್ನಂತಹ ಅದೆಷ್ಟೋ ಸಾವಿರ ಸಹಸ್ರ ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಇವತ್ತಿನ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ವಂದನೆಗಳನ್ನು ಸಲ್ಲಿಸುತ್ತೇನೆ.
ನಮ್ಮ ಭಾರತದ ಎರಡನೇ ರಾಷ್ಟ್ರಪತಿಗಳು ಮತ್ತು ಸ್ವತಃ ಶಿಕ್ಷಕರೂ ಆಗಿದ್ದ ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಕರೆಕೊಟ್ಟಿದ್ದು ಅರ್ಥಪೂರ್ಣ ಎನ್ನಬಹುದು. ವಿಶೇಷವೆಂದರೆ, ರಾಧಾಕೃಷ್ಣನ್ ಅವರು ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದು, ನಮ್ಮದೇ ಕರ್ನಾಟಕದ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ. ಅವರ ಜನ್ಮದಿನದ ಸ್ಮರಣೆಯಲ್ಲಿ ಶಿಕ್ಷಕರಿಗೆ ಗೌರವ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ.
ಶೂಭಾಗ್ಯ, ವಿದ್ಯಾಸಿರಿಗೆ ಪ್ರೇರಣೆ
ಒಂದು ಕಾಲದಲ್ಲಿ ಶಿಕ್ಷಣಕ್ಕೆ ಸಾಕಷ್ಟು ಸೌಲಭ್ಯಗಳಿರಲಿಲ್ಲ. ದೂರದ ಊರಿಗೆ ನಡೆದುಕೊಂಡು ಹೋಗಿ ಶಿಕ್ಷಣ ಪಡೆಯಬೇಕಿತ್ತು. ನಾವೆಲ್ಲ ಆ ರೀತಿಯೆ ಓದಿದವರು. ನಡೆದು ಹೋಗುವಾಗ ನಮ್ಮ ಕಾಲಿಗೆ ಸರಿಯಾದ ಚಪ್ಪಲಿಯೂ ಇರುತ್ತಿರಲಿಲ್ಲ. ಇದನ್ನು ಮನಗಂಡೇ ನಮ್ಮ ಸರ್ಕಾರದ ಕಳೆದ ಅವಧಿಯಲ್ಲಿ ಶೂಭಾಗ್ಯ ಯೋಜನೆಯನ್ನು ಜಾರಿಗೆ ತಂದೆವು.
ಎಲ್‌ಎಲ್‌ಬಿ ವ್ಯಾಸಂಗ ಮಾಡುವಾಗ ಮೈಸೂರಿನಲ್ಲಿ ಒಂದು ಚಿಕ್ಕ ರೂಮು ಬಾಡಿಗೆ ಪಡೆದು ತಂಗಿದ್ದೆ. ಆಗ ಮೈಸೂರು ಶಿಕ್ಷಣದ ಕಾಶಿಯಂತಿತ್ತು. ರಾಜ್ಯದ ಮೂಲೆಮೂಲೆಯಿಂದ ಓದಲಿಕ್ಕೆಂದು ಇಲ್ಲಿಗೆ ಬರುತ್ತಿದ್ದ ನನ್ನಂತಹ ಸಹಸ್ರಾರು ವಿದ್ಯಾರ್ಥಿಗಳು ಹಾಸ್ಟೆಲ್ ಸಿಗದ ಕಾರಣ ರೂಮು ಮಾಡಿ, ತಾವೇ ಅಡುಗೆ ಮಾಡಿ, ಕಷ್ಟಪಟ್ಟು ಓದುತ್ತಿದ್ದರು. ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಹೀಗೆ ರೂಮಿನಲ್ಲಿದ್ದು ಓದುವುದು ಕೂಡಾ ಹೊರೆಯಾಗುತ್ತಿತ್ತು. ಅದನ್ನು ತಾಳದೆ ಅರ್ಧಕ್ಕೆ ಓದುಬಿಟ್ಟ ಸಾಕಷ್ಟು ವಿದ್ಯಾರ್ಥಿಗಳನ್ನೂ ಕಂಡಿದ್ದೇನೆ.
ಮುಂದೆ ಮುಖ್ಯಮಂತ್ರಿಯಾದಾಗ ನನಗೆ ಇದು ಕಾಡಿತು. ಸರ್ಕಾರದ ಮಿತಿಯಲ್ಲಿ ಎಲ್ಲರಿಗೂ ನಾವು ಹಾಸ್ಟೆಲ್ ಸೌಲಭ್ಯ ಕಲ್ಪಿಸುವುದು ಕಷ್ಟವಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಅಡ್ಡಿಯಾಗಬಾರದು ಎಂದೇ ವಿದ್ಯಾಸಿರಿ ಯೋಜನೆಯನ್ನು ಅನುಷ್ಠಾನಕ್ಕೆ ತಂದೆವು. ಹಾಸ್ಟೆಲ್ ಸೌಲಭ್ಯ ಸಿಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ, ಅವರ ಹೊರೆಯನ್ನು ತಗ್ಗಿಸಲು ನಮ್ಮ ಸರ್ಕಾರ ಮುಂದಾಗಿತ್ತು. ಆ ಯೋಜನೆ ಇವತ್ತಿಗೂ ಮುಂದುವರೆದಿದೆ.
ಶಿಕ್ಷಕ ವೃತ್ತಿ ಪವಿತ್ರ ಕಾಯಕ
ಕಲಿಯುವ ಮಕ್ಕಳಿಗೆ ಪೂರಕವಾದ ವಾತಾವರಣ ಸೃಷ್ಟಿಸಿದಾಗ, ಶಿಕ್ಷಕರ ಶ್ರಮಕ್ಕೂ ನಾವು ಗೌರವ ಸಲ್ಲಿಸಿದಂತಾಗುತ್ತದೆ. ಯಾಕೆಂದರೆ ಶಿಕ್ಷಕ ಎನ್ನುವುದು ಕೇವಲ ಒಂದು ವೃತ್ತಿ ಮಾತ್ರವಲ್ಲ. ಮಗುವಿನ ಭವಿಷ್ಯದ ಬಗ್ಗೆ ಕನಸು ಮತ್ತು ಕಾಳಜಿ ತೋರುವ ಪವಿತ್ರ ಕಾಯಕ. ತಾನು ಕಲಿಸಿದ ಮಕ್ಕಳು, ಬೆಳೆದು ದೊಡ್ಡವರಾಗಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡು, ಶಿಕ್ಷಕನ ಮುಂದೆ ನಿಂತಾಗ ಅವರಿಗೆ ಸಿಗುವ ಆತ್ಮತೃಪ್ತಿ, ಧನ್ಯತಾ ಭಾವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂತಹ ನಿಸ್ವಾರ್ಥ ಕಾಯಕ ಶಿಕ್ಷಕರದು.
ಶಿಕ್ಷಕರಾದವರಿಗೆ ಮಣ್ಣಿನ ಮುದ್ದೆಗೆ ಆಕಾರ ಕೊಡುವ ಕುಂಬಾರನ ಶ್ರದ್ಧೆ ಇರಬೇಕು; ಕಗ್ಗಲ್ಲನ್ನು ಕಟೆದು ಕಲೆಯಾಗಿಸುವ ಶಿಲ್ಪಿಯ ಕಾಠಿಣ್ಯತೆ-ನೈಪುಣ್ಯತೆಗಳಿರಬೇಕು; ಜಗದ ಕೊಳೆಯನು ಕಳೆಯುವ ಜಲಗಾರನ ಮಮತೆಯಿರಬೇಕು; ಮೈಲಿಗೆಗೆ ಮಡಿಯ ಸ್ಪರ್ಶ ನೀಡುವ ಮಡಿವಾಳನ ವಿಶಾಲತೆ ಇರಬೇಕು; ಉತ್ತು, ಬಿತ್ತಿ, ಬೆಳೆದು ಅನ್ನವ ನೀಡುವ ಒಕ್ಕಲಿಗನ ಕಾಳಜಿ ಇರಬೇಕು. ಈ ಗುಣಗಳಿರುವ ಕಾರಣದಿಂದಲೆ ಶಿಕ್ಷಕರನ್ನು ನಮ್ಮ ಸಮಾಜ ಗೌರವಯುತವಾಗಿ ಕಾಣುತ್ತದೆ.
ಮಕ್ಕಳು ನಾಳೆಯ ಭವಿಷ್ಯ
ಮಕ್ಕಳು ಕೇವಲ ನಮ್ಮ ಸಂತತಿಗಳು ಮಾತ್ರವಲ್ಲ. ದೇಶದ ನಾಳೆಯ ಭವಿಷ್ಯ ಕೂಡಾ ಹೌದು. ಹಾಗಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವುದೆಂದರೆ ದೇಶದ ಭವಿಷ್ಯವನ್ನು ರೂಪಿಸಿದಂತೆ. ಆ ಹೊಣೆ ಶಿಕ್ಷಕರ ಮೇಲಿರುತ್ತದೆ. ಶಿಕ್ಷಣ ಎಂದರೆ ಕೇವಲ ಅಕ್ಷರಜ್ಞಾನ ಮಾತ್ರವಲ್ಲ. ಅರಿವು, ಆತ್ಮವಿಶ್ವಾಸ, ತರ್ಕಶೀಲತೆಗಳ ಜೊತೆಗೆ ನಮ್ಮ ಸಂವಿಧಾನದ ಮೌಲ್ಯಗಳಾದ ಸಮಾನತೆ, ಸೋದರತೆ, ಸೌಹಾರ್ದತೆಯ ಪರಂಪರೆಯನ್ನು ಮಕ್ಕಳಿಗೆ ಕಲಿಸಿಕೊಡುವುದು ನಿಜವಾದ ಶಿಕ್ಷಣ.
ಪಠ್ಯದ ಜೊತೆಗೆ ಶಿಕ್ಷಣದ ಈ ವಿಶಾಲ ವ್ಯಾಪ್ತಿಯನ್ನು ಒಳಗೊಳ್ಳುವುದು ಶಿಕ್ಷಕರಾದವರ ಜವಾಬ್ದಾರಿಯಾಗಿರುತ್ತದೆ. ಆಗ ಮಾತ್ರ ನಾವು ಸುಭದ್ರ, ಸುಸ್ಥಿರ ಆಲೋಚನಾ ಸಾಮರ್ಥ್ಯದ ಹೊಸ ಪೀಳಿಗೆಯನ್ನು ಕಟ್ಟಬಹುದು. ಆದರೆ ಇವತ್ತು ಪ್ರಕ್ಷುಬ್ಧ ಸಮಾಜದ ಸೆಳೆತಗಳು, ಅತಿ-ಸ್ಪರ್ಧಾತ್ಮಕತೆಯ ಒತ್ತಡಗಳು, ಅಧಃಪತನಗೊಂಡ ಕೌಟುಂಬಿಕ-ನೈತಿಕ ಮೌಲ್ಯಗಳ ಪ್ರಭಾವಗಳು ಮಕ್ಕಳನ್ನು ಮಾನಸಿಕ ತೊಳಲಾಟಗಳಿಗೆ ತಳ್ಳುತ್ತಿವೆ. ಮುಂಜಾನೆಯ ಮೊಗ್ಗುಗಳು ಅರಳುವ ಮೊದಲೇ ತೊಟ್ಟುಕಳಚಿ ಬೀಳುತ್ತಿವೆ. ಅಂದರೆ ಆತ್ಮಹತ್ಯೆ, ಮಾದಕದ್ರವ್ಯ ವ್ಯಸನ, ಬಾಲಾಪರಾಧ ಕೃತ್ಯಗಳ ಹಾದಿ ಹಿಡಿಯುತ್ತಿದ್ದಾರೆ.
2021ರ ಎನ್‌ಸಿಆರ್‌ಬಿ ದತ್ತಾಂಶವನ್ನು ಪರಿಗಣಿಸುವುದಾದರೆ 10 ರಿಂದ 18 ವಯೋಮಾನದ 10,730 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಸರ್ವೋಚ್ಚ ನ್ಯಾಯಾಲಯ 2022ರಲ್ಲಿ ಉಲ್ಲೇಖಿಸಿದಂತೆ 10 ರಿಂದ 15 ವಯೋಮಿತಿಯ 1.58 ಕೋಟಿ ಮಕ್ಕಳು ಮದ್ಯವ್ಯಸನಕ್ಕೆ ತುತ್ತಾಗಿದ್ದಾರೆ. ಇನ್ನು 2023ರಲ್ಲಿ ದೇಶಾದ್ಯಂತ 30,555 ಬಾಲಾಪರಾಧಿಗಳ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ.
ಇವತ್ತಿನ ಅಂತರ್ಜಾಲ ಯುಗದಲ್ಲಿ ಮಕ್ಕಳಿಗೆ ಪ್ರಚೋದನಾಕಾರಿ ಅಂಶಗಳು ಸುಲಭವಾಗಿ ಎಟಕುತ್ತಿರುವುದು ಕೂಡಾ ಸವಾಲಿನ ಸಂಗತಿ. ಇಂಥ ಸಂದರ್ಭದಲ್ಲಿ ಶಿಕ್ಷಕರ ಪಾತ್ರ ಮೊದಲಿಗಿಂತಲೂ ಮುಖ್ಯವೆನಿಸುತ್ತದೆ. ಶಿಕ್ಷಕರಾದವರು ಇದನ್ನೊಂದು ವೃತ್ತಿ ಎಂದು ಪರಿಗಣಿಸದೆ, ಸಾಮಾಜಿಕ ಹೊಣೆಗಾರಿಕೆ ಎಂದ ಕಾಯಕಶೀಲರಾದಾಗ ಮಾತ್ರ ನಮ್ಮ ವಿದ್ಯಾರ್ಥಿ ಯುವಪೀಳಿಗೆಯನ್ನು ಈ ಇಳಿಜಾರಿನಿಂದ ಮೇಲಕ್ಕೆತ್ತಲು ಸಾಧ್ಯ. ಒಬ್ಬ ಶಿಕ್ಷಕ ಸರಿಯಾದ ಒಂದು ಹೆಜ್ಜೆ ಇಟ್ಟರೆ, ನೂರು ವಿದ್ಯಾರ್ಥಿಗಳ ಭವಿಷ್ಯ ಸರಿಯಾದ ದಾರಿಯಲ್ಲಿರುತ್ತದೆ. ಈ ಎಚ್ಚರ ಮತ್ತು ಕಾಯಕಪ್ರಜ್ಞೆ ಇಂದಿನ ಶಿಕ್ಷಕರಿಗೆ ಅತಗತ್ಯ ಎನ್ನುವುದು ನನ್ನ ಅನಿಸಿಕೆ.
ಈ ಎಲ್ಲಾ ಸವಾಲುಗಳನ್ನು ಮೀರಿ ನಿಲ್ಲುವ ಸಾಮರ್ಥ್ಯ ನಮ್ಮ ಶಿಕ್ಷಕ ವರ್ಗಕ್ಕಿದೆ. ಅದಕ್ಕೆ ಬೇಕಾದ ಪೂರಕ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ನಮ್ಮ ಸರ್ಕಾರ ಸದಾ ಸಿದ್ಧವಿರಲಿದೆ. ನನಗೆ ಸಿಕ್ಕ ರಾಜಪ್ಪ ಮೇಷ್ಟ್ರಂತಹ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗೆ ಸಿಗುವಂತಾಗಲಿ ಎಂಬುದು ನನ್ನ ಆಶಯ.