ಕಲೆ, ಕಲಾವಿದರನ್ನು ಪೋಷಿಸುವ ಗುಣವನ್ನು ಬೆಳೆಸಿಕೊಳ್ಳಬೇಕು : ಹಿರಿಯ ನಟ ಶ್ರೀನಾಥ್‌

| N/A | Published : Mar 06 2025, 01:32 AM IST / Updated: Mar 06 2025, 05:23 AM IST

ಸಾರಾಂಶ

ಕಲೆ, ಕಲಾವಿದರನ್ನು ಪೋಷಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂಬ ರಂಗ ಕಲಾವಿದೆ, ಶಿಕ್ಷಣ ತಜ್ಞೆ ವಿಮಲಾ ರಂಗಾಚಾರ್‌ ಅವರ ಸಂದೇಶವನ್ನು ಪಾಲಿಸಬೇಕಾಗಿದೆ ಎಂದು ಹಿರಿಯ ನಟ ಶ್ರೀನಾಥ್‌ ಹೇಳಿದರು.

 ಬೆಂಗಳೂರು :  ಕಲೆ, ಕಲಾವಿದರನ್ನು ಪೋಷಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂಬ ರಂಗ ಕಲಾವಿದೆ, ಶಿಕ್ಷಣ ತಜ್ಞೆ ವಿಮಲಾ ರಂಗಾಚಾರ್‌ ಅವರ ಸಂದೇಶವನ್ನು ಪಾಲಿಸಬೇಕಾಗಿದೆ ಎಂದು ಹಿರಿಯ ನಟ ಶ್ರೀನಾಥ್‌ ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿ, ಸಂಗೀತ ಮತ್ತು ನೃತ್ಯ ಅಕಾಡೆಮಿಯಿಂದ ‘ರಂಗಕಲಾವಿದೆ, ಶಿಕ್ಷಣ ತಜ್ಞೆ ವಿಮಲಾ ರಂಗಾಚಾರ್ ಅವರ ನುಡಿನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಮಲಾ ರಂಗಾಚಾರ್‌ ಅವರು‌ ತಮ್ಮ ಕಲಾಸೇವೆಯಿಂದ ಆಲದಮರ ಆಚಾರ್‌‌ ಎಂದೇ ಕರೆಸಿಕೊಂಡವರು. ಮಾತೃ ಹೃದಯದಿಂದ ಎಲ್ಲರ ಒಳಿತನ್ನು ಬಯಸಿ ನೆರವು ನೀಡುತ್ತಿದ್ದರು. ಎಲ್ಲರೂ ಮಾತೃ‌ಹೃದಯ ಬೆಳೆಸಿಕೊಳ್ಳಿ‌ ಎಂಬ ಸಂದೇಶವನ್ನು ಅವರು ನೀಡಿ ಹೋಗಿದ್ದಾರೆ. ಭೌತಿಕವಾಗಿ ಇಲ್ಲದಿರಬಹುದು, ಮಾನಸಿಕವಾಗಿ ನೂರಾರು ವರ್ಷಗಳ ಕಾಲ ಇರುತ್ತಾರೆ ಎಂದರು.

ಹಿರಿಯ ರಂಗಭೂಮಿ ಕಲಾವಿದ ಶ್ರೀನಿವಾಸ ಜಿ. ಕಪ್ಪಣ್ಣ, ರಂಗಭೂಮಿಗೆ ವಿಮಲಾ ರಂಗಾಚಾರ್‌ ಅವರು ಮಾಡಿದಷ್ಡು ಕೆಲಸವನ್ನು ಬೇರೆ ಯಾರೂ ಮಾಡಿಲ್ಲ.‌ ತೆರೆಮರೆಯಲ್ಲಿದ್ದೇ ಯೋಜನಾಬದ್ಧವಾಗಿ ಕಾರ್ಯ ಮಾಡುತ್ತಿದ್ದರು. ಬಾಲಭವನ ಅಧ್ಯಕ್ಷರಾಗಿ ಯಾವುದೇ ರೀತಿಯ ವಿವಾದಕ್ಕೆ ಸಿಲುಕದೆ ಹೆಸರು ಪಡೆದಿದ್ದರು. ಎಡಿಎ ರಂಗಮಂದಿರ, ಸೇವಾಸದನ, ಎಂಇಎಸ್ ಥಿಯೇಟರ್‌ಗೆ ಅವರ ಕೊಡುಗೆ ಅಪಾರ ಎಂದರು.

ವಿಮರ್ಶಕಿ ಡಾ। ವಿಜಯಾ ಮಾತನಾಡಿ, ಬೆಂಗಳೂರಿನ ಪ್ರತಿ ರಂಗಭೂಮಿಯ ಬೆಳವಣಿಗೆಯ ವಿಮಲಾ ಅವರಿದ್ದಾರೆ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಮೂಲತಃ ಅನ್ಯಭಾಷಿಕರಾದರೂ ಗಾಂಧೀಜಿಯವರು ನಂದಿ ಬೆಟ್ಟದಲ್ಲಿ ಉಳಿದುಕೊಂಡಿದ್ದಾಗ‌ ಅವರು ಇಂಗ್ಲೀಷ್ ನಲ್ಲಿ ಮಾತನಾಡಿಸಿದರೆ ಇವರು ಕನ್ನಡದಲ್ಲಿ ಉತ್ತರ ಕೊಟ್ಟಿದ್ದರು ಎಂದು ಸ್ಮರಿಸಿದರು.

ಹಿರಿಯ ಕಲಾವಿದ ಶ್ರೀನಿವಾಸ ಜಿ. ಸೇರಿ ಇತರರು ತಮ್ಮ ನುಡಿನಮನ ಸಲ್ಲಿಸಿದರು.