ಸಾರಾಂಶ
ಹಂಪಿ (ಎಂ.ಪಿ. ಪ್ರಕಾಶ ಪ್ರಧಾನ ವೇದಿಕೆ) : ಹಂಪಿ ಉತ್ಸವಕ್ಕೆ ಇದೇ ಮೊದಲ ಬಾರಿಗೆ ಬಂದಿರುವೆ. ಉತ್ಸವ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ. ಈ ಉತ್ಸವದಲ್ಲಿ ಕನ್ನಡ ನಟ, ನಟಿಯರಿಗೆ ಅವಕಾಶ ನೀಡಿರುವುದು ಹೆಮ್ಮೆಯ ವಿಷಯ ಎಂದು ಚಿತ್ರನಟಿ ರಮ್ಯ ಹೇಳಿದರು.
ಹಂಪಿ ಉತ್ಸವದ ಎಂ.ಪಿ. ಪ್ರಕಾಶ ಪ್ರಧಾನ ವೇದಿಕೆಯಲ್ಲಿ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಂಪಿ ಉತ್ಸವ ನಡೆಯಬೇಕು. ಬೇರೆ ಕಡೆಯೂ ಉತ್ಸವ ಮಾಡುತ್ತಾರೆ. ಆದರೆ, ಇಲ್ಲಿ ಕನ್ನಡದ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಎಲ್ಲರೂ ಹಂಪಿ ಉತ್ಸವದ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಿರಿ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರ ಆಹ್ವಾನದ ಮೇರೆಗೆ ನಾನು ಬಂದಿರುವೆ. ಸಚಿವರು, ಜಿಲ್ಲಾಡಳಿತ ಹಾಗೂ ಶಾಸಕ ಎಚ್.ಆರ್. ಗವಿಯಪ್ಪನವರು ಅಚ್ಚುಕಟ್ಟಾಗಿ ಹಂಪಿ ಉತ್ಸವ ಆಯೋಜನೆ ಮಾಡಿದ್ದಾರೆ ಎಂದರು.
ಅಂಗವಿಕಲ ಅಭಿಮಾನಿ ರಾಜುಗೆ ಪ್ರಶಂಸೆ:
ಹಂಪಿ ಉತ್ಸವದ ಪ್ರಧಾನ ವೇದಿಕೆಗೆ ಅಂಗವಿಕಲ ರಾಜು ನಾಯ್ಕ ಅವರನ್ನು ಆಹ್ವಾನಿಸಿದ ನಟಿ ರಮ್ಯ ಅವರೊಂದಿಗೆ ಹಾಡು ಹಾಡಿದರು. ಅಂಗವಿಕಲ ಕಲಾವಿದ ರಾಜು ನಾಯ್ಕ ರಮ್ಯ ನಟನೆ ಸಂಜು ಮತ್ತು ಗೀತಾ ಚಿತ್ರದ ಹಾಡು ಹಾಡಿ ಎಲ್ಲರ ಗಮನ ಸೆಳೆದರು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅವರ ನೀನೇ ನೀನೇ ನನಗೆಲ್ಲ ನೀನೇ ಹಾಡನ್ನು ಹಾಡಿದ ಚಿತ್ರ ನಟಿ ರಮ್ಯ, ಪುನೀತ್ ರಾಜ್‌ಕುಮಾರ ಅಭಿಮಾನಿಗಳು ಕೂಡ ಬಂದಿದ್ದೀರಾ, ಎಲ್ಲರೂ ಸೇರಿ ಉತ್ಸವದಲ್ಲಿ ಎಂಜಾಯ್ ಮಾಡಿ ಎಂದರು.
ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ಹಂಪಿ ಉತ್ಸವ ಜನೋತ್ಸವ ಆಗಲಿ ಎಂದು ರಾಜ್ಯ ಸರ್ಕಾರ ಬಯಸಿದೆ. ಕಳೆದ ಎರಡು ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಜನರು ಹಂಪಿಯತ್ತ ಹರಿದು ಬರುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿ ಉತ್ಸವದ ಯಶಸ್ವಿಗೆ ಸಹಕಾರ ನೀಡಿದ್ದಾರೆ. ಈ ಬಾರಿ ಉತ್ಸವ ಅಚ್ಚುಕಟ್ಟಾಗಿ ನಡೆಸಲಾಗಿದೆ. ಜನರ ಸಹಕಾರ ಇದ್ದರೇ ಎಲ್ಲವೂ ಸಾಧ್ಯ ಆಗಲಿದೆ ಎಂದರು.
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಈ ಬಾರಿ ಬಿಸಿಲು ಜಾಸ್ತಿ ಇದೆ. ಹಂಪಿ ಉತ್ಸವ ತಡವಾಗಿದೆ ಎಂಬ ಆತಂಕ ಇತ್ತು. ಆದರೆ, ಬಿಸಿಲಿಗಾಗಿ ನಾವು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವು. ಹಂಪಿ ವಿರೂಪಾಕ್ಷ ದೇವರು ಹಾಗೂ ಉದ್ದಾನ ವೀರಭದ್ರೇಶ್ವರ ದೇವರ ಆಶೀರ್ವಾದದಿಂದ ಜನಸಾಗರವೇ ಹಂಪಿಗೆ ಹರಿದು ಬಂದಿದೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳ ಸಹಕಾರದಿಂದ ಉತ್ಸವ ಯಶಸ್ವಿ ಆಗಿದೆ ಎಂದರು.
ಹುಡಾ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖಗೌಡ, ಅಪರ ಜಿಲ್ಲಾಧಿಕಾರಿ
ಬಾಲಕೃಷ್ಣ, ಜಿಪಂ ಸಿಇಒ ಅಕ್ರಂ ಷಾ, ಎಸ್ಪಿ ಶ್ರೀಹರಿಬಾಬು ಮತ್ತಿತರರಿದ್ದರು.