ಅಣ್ಣ ತಂಗಿಯರ ಬಾಂಧವ್ಯ ಸಾರುವ ರಕ್ಷಾಬಂಧನ

| N/A | Published : Aug 09 2025, 12:31 PM IST

rakhi thali

ಸಾರಾಂಶ

ಈ ದಿನ ರಕ್ಷಾ ಬಂಧನದ ಹಬ್ಬ ಏನು ಹಾಗೆಂದರೆ? ಇದು ಅಣ್ಣತಂಗಿಯರ ಹಬ್ಬ, ಅಕ್ಕತಮ್ಮಂದಿರ ಹಬ್ಬ. ಅಕ್ಕತಂಗಿಯರ ರಕ್ಷಣೆಗಾಗಿ ನಡುಕಟ್ಟಿ ನಿಲ್ಲುವ ಅಣ್ಣತಮ್ಮಂದಿರನ್ನು ಪ್ರೀತಿಯಿಂದ ಹರಸಿ ಹಾರೈಸುವ ಹಬ್ಬ

-ವೀಣಾರಾವ್ ಚಿಂತಾಮಣಿ.

ಈ ದಿನ ರಕ್ಷಾ ಬಂಧನದ ಹಬ್ಬ ಏನು ಹಾಗೆಂದರೆ? ಇದು ಅಣ್ಣತಂಗಿಯರ ಹಬ್ಬ, ಅಕ್ಕತಮ್ಮಂದಿರ ಹಬ್ಬ. ಅಕ್ಕತಂಗಿಯರ ರಕ್ಷಣೆಗಾಗಿ ನಡುಕಟ್ಟಿ ನಿಲ್ಲುವ ಅಣ್ಣತಮ್ಮಂದಿರನ್ನು ಪ್ರೀತಿಯಿಂದ ಹರಸಿ ಹಾರೈಸುವ ಹಬ್ಬ. ದೇಶದಾದ್ಯಂತ ಈ ಹಬ್ಬವನ್ನು ಎಲ್ಲ ಅಕ್ಕತಂಗಿಯರು ತಮ್ಮ ಅಣ್ಣತಮ್ಮಂದಿರಿಗಾಗಿ ಆಚರಿಸುತ್ತಾರೆ. ಅಣ್ಣತಮ್ಮಂದಿರ ಕ್ಷೇಮ ಅವರ ಆರೋಗ್ಯ ಆಯಸ್ಸು ಚೆನ್ನಾಗಿರಲೆಂದು ಪ್ರಾರ್ಥಿಸುತ್ತಾರೆ. ಆ ಅಣ್ಣತಮ್ಮಂದಿರೂ ತಮ್ಮ ಸಹೋದರಿಯರ ರಕ್ಷಣೆಗಾಗಿ ಶಪಥ ಮಾಡುತ್ತಾರೆ. ಆಪತ್ಕಾಲದಲ್ಲಿ ಸಹೋದರಿಯರ ರಕ್ಷಣೆ ಮಾಡುವವನೇ ನಿಜವಾದ ಸಹೋದರ ಎಂಬ ಮಾತು ನಮ್ಮಲ್ಲಿ ಪ್ರಚಲಿತವಾಗಿದೆ.

ಈ ಹಬ್ಬವನ್ನು ಶ್ರಾವಣಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ರಾಜಸ್ಥಾನ, ಉತ್ತರಪ್ರದೇಶ, ಪಂಜಾಬ್, ಹರಿಯಾಣದಲ್ಲಿ ಈ ರಕ್ಷಾಬಂಧನದ ಅಥವಾ ರಾಖೀ ಹಬ್ಬ ಬಹಳ ಪ್ರಸಿದ್ಧ. ಅಲ್ಲಿಂದ ಇಡೀ ದೇಶಾದ್ಯಂತ ಪಸರಿಸಿದೆ. ಆ ದಿನ ಸಹೋದರಿಯರು ಅಣ್ಣನಿಗೆ ತಿಲಕವಿಟ್ಟು ಹೊಸಬಟ್ಟೆ ನೀಡಿ ಸಿಹಿ ತಿನಿಸಿ ಕೈಗೆ ರಾಖಿ ಎಂಬ ಕಂಕಣ ಕಟ್ಟುತ್ತಾರೆ. ಇದನ್ನು ಕಟ್ಟಿಸಿಕೊಂಡ ಸಹೋದರರಿಗೆ ತಂಗಿಯರ ಕ್ಷೇಮ ತಾವು ಕಾಪಾಡಬೇಕೆನ್ನುವ ಒಂದು ಬದ್ಧತೆ ಇರುತ್ತದೆ. ಸಹೋದರ ಸಹೋದರಿ ಬಾಂಧವ್ಯವನ್ನು ಗಟ್ಟಿ ಮಾಡುವ ಈ ರಕ್ಷಾಬಂಧನ ಎಲ್ಲರಿಗೂ ಮೆಚ್ಚು.

ಅಣ್ಣತಮ್ಮಂದಿರು ಇಲ್ಲದವರೂ ಸಹ ತಮಗೆ ಸಹೋದರ ವಾತ್ಸಲ್ಯ ನೀಡುವ ಹಿತೈಷಿಗಳಿಗೆ ಈ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ. ರಾಖಿ ಕಟ್ಟಿಸಿಕೊಂಡ ಸಹೋದರರೂ ತಮ್ಮ ಶಕ್ತ್ಯಾನುಸಾರ ಅಕ್ಕತಂಗಿಯರಿಗೆ ಕಾಣಿಕೆ ಕೊಟ್ಟು ಹರಸಿ ಹಾರೈಸುತ್ತಾರೆ. ಈ ರಾಖಿಹಬ್ಬದ ಮೂಲದ ಬಗ್ಗೆ ಅನೇಕ ಪೌರಾಣೀಕ ಕಥೆಗಳು ಇವೆ.

ರಕ್ಷಾ ಬಂಧನಕ್ಕೆ ಪೌರಾಣಿಕ ಹಿನ್ನೆಲೆ

ಯಮ ತನ್ನ ತಂಗಿ ಯಮುನೆಯ ಮನೆಗೆ 12 ವರ್ಷಗಳು ಭೇಟಿ ನೀಡಿರಲಿಲ್ಲವಂತೆ, ದೇವನದಿ ಗಂಗಾದೇವಿ ಯಮನಿಗೆ ‘ನಿನ್ನ ತಂಗಿ ನಿನಗಾಗಿ ಕಾಯುತ್ತಿದ್ದಾಳೆ. ಅವಳ ಮನೆಗೆ ಹೋಗಿ ಬಾ’ ಎಂದು ನೆನಪು ಮಾಡುತ್ತಾಳೆ. ಯಮ ಯಮುನೆಯ ಮನೆಗೆ ಬಂದಾಗ ಯಮುನೆಗೆ ಅತ್ಯಂತ ಸಂಭ್ರಮವಾಗುತ್ತದೆ. ಅವಳು ಯಮನಿಗೆ ಪ್ರಿಯವಾದ ಅಡುಗೆ ಮಾಡಿ ಬಡಿಸಿ 12 ವರ್ಷದ ನಂತರ ಬಂದ ಅಣ್ಣನಿಗೆ ನೆನಪಿನ ಕಾಣಿಕೆ ಎಂದು ಈ ರಕ್ಷಾಬಂಧನವನ್ನು ಕಟ್ಟುತ್ತಾಳೆ. ಅಂದಿನಿಂದ ಈ ಹಬ್ಬ ಚಾಲ್ತಿಗೆ ಬಂದಿತೆಂದು ಹೇಳುತ್ತಾರೆ.

ಇನ್ನೊಂದು ಕಥೆ ಹೀಗೆ ಹೇಳುತ್ತದೆ: ಒಮ್ಮೆ ಶ್ರೀಕೃಷ್ಣನಿಗೆ ಕೈ ಬೆರಳು ಗಾಯವಾಗಿ ರಕ್ತ ಸುರಿಯುತ್ತದೆ. ಎಲ್ಲರೂ ಗಡಿಬಿಡಿಯಲ್ಲಿ ಗಾಬರಿಯಲ್ಲಿ ಬೆರಳಿಗೆ ಮದ್ದು ತರಲು ಓಡುತ್ತಾರೆ. ಆದರೆ ಅಲ್ಲಿಯೇ ಇದ್ದ ದ್ರೌಪದಿ ತನ್ನ ಸೀರೆಯ ಸೆರಗನ್ನು ಹರಿದು ಕೃಷ್ಣನ ಬೆರಳಿಗೆ ಪಟ್ಟಿಕಟ್ಟುತ್ತಾಳೆ. ರಕ್ತ ಸೋರುವುದು ನಿಲ್ಲುತ್ತದೆ. ಆಗ ಸುಪ್ರೀತನಾದ ಕೃಷ್ಣ ದ್ರೌಪದಿಗೆ ‘ಈ ಸೀರೆಯೆ ಋಣ ಎಂದಾರೂ ತೀರಿಸುತ್ತೇನೆ’ ಎಂದು ಹೇಳುತ್ತಾನೆ. ಅದರಂತೆ ಹಸ್ತಿನಾವತಿಯಲ್ಲಿ ನಡೆದ ದ್ಯೂತದಲ್ಲಿ ಧರ್ಮರಾಯ ಸೋತಾಗ ದುಃಶ್ಯಾಸನ ದ್ರೌಪದಿಯನ್ನು ಅಂತಃಪುರದಿಂದ ಸೆಳೆದು ತಂದು ವಸ್ತ್ರಾಪಹರಣ ಮಾಡುವಾಗ ದ್ರೌಪದಿ ‘ಕೃಷ್ಣಾ’ ಎಂದು ಆರ್ತಳಾಗಿ ಮೊರೆಯಿಡುತ್ತಾಳೆ. ಆಗ ಶ್ರೀಕೃಷ್ಣ ಅಸಂಖ್ಯ ಸೀರೆಗಳನ್ನು ದ್ರೌಪದಿಗೆ ಇತ್ತು ಅವಳ ಮಾನ ಕಾಪಾಡುತ್ತಾನೆ. ತನ್ನ ಬೆರಳ ಗಾಯಕ್ಕೆ ಕಟ್ಟಿದ ದ್ರೌಪದಿಯ ಸೀರೆಯ ಋಣ ತೀರಿಸುತ್ತಾನೆ. ಈಗಲೂ ಉತ್ತರ ಭಾರತದಲ್ಲಿ ಈ ಹಬ್ಬದ ದಿನ ರಾಖಿಯನ್ನು ಶ್ರೀಕೃಷ್ಣನ ವಿಗ್ರಹದ ಕೈಗೆ ಕಟ್ಟಿ ನಂತರ ಅಣ್ಣತಮ್ಮಂದಿರಿಗೆ ಕಟ್ಟುವ ಪದ್ಧತಿ ಇದೆ. ಶ್ರೀಕೃಷ್ಣನೇ ಎಂದೂ ನಮ್ಮ ಹೆಣ್ಣುಮಕ್ಕಳಿಗೆ ಆಪತ್ಭಾಂಧವ ರಕ್ಷಕ ಹಾಗೂ ಸಹೋದರ. ಕಾಲಾಂತರದಲ್ಲಿ ಶ್ರೀಕೃಷ್ಣನಿಗೆ ಕಟ್ಟಿದ ದ್ರೌಪದಿಯ ಸೀರೆಯ ತುಂಡು ಒಂದು ಪವಿತ್ರ ಕಂಕಣವಾಗಿ ರಾಖಿ ಎಂದು ಪ್ರಸಿದ್ಧವಾಗುತ್ತದೆ.

ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ನಾಗರಪಂಚಮಿ ಹೇಗೆ ಅಣ್ಣತಮ್ಮಂದಿರ ಕ್ಷೇಮಕ್ಕಾಗಿ ಆಚರಿಸುತ್ತಾರೋ ಹಾಗೆಯೇ ಉತ್ತರದಲ್ಲಿ ರಾಖಿ ಹಬ್ಬವನ್ನು ಸಹೋದರ ಬಾಂಧವ್ಯದ ಪ್ರತೀಕವಾಗಿ ಆಚರಿಸುತ್ತಾರೆ.

ಜಾನಪದದಲ್ಲಿ ಸೋದರತ್ವ

ನಮ್ಮ ಜನಪದದಲ್ಲೂ ಅಣ್ಣತಮ್ಮಂದಿರ ಬಗ್ಗೆ ಸುಂದರವಾದ ಉಲ್ಲೇಖಗಳು ಇವೆ. ಅನಾದಿ ಕಾಲದಿಂದಲೂ ಹೆಣ್ಣಿಗೆ ತನ್ನ ತವರು ಹಾಗೂ ತನ್ನ ಸಹೋದರರು ಎಂದರೆ ಅಭಿಮಾನ ಪ್ರೀತಿ ಗೌರವ. ತನ್ನ ಅಣ್ಣತಮ್ಮಂದಿರ ಅಪಮಾನವನ್ನು ಅವಳೆಂದೂ ಸಹಿಸಳು. ತನ್ನ ಸಹೋದರರ ಹಿರಿಮೆಯನ್ನು ಹೀಗೆ ಹಾಡಿ ಹೊಗಳುತ್ತಾಳೆ.

ಹೆಣ್ಣಿನ ಜನುಮಕೆ ಅಣ್ಣತಮ್ಮರು ಬೇಕು

ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ

ಹೊನ್ನುಕಟ್ಟುವರು ಉಡಿಯೊಳಗೆ

ಅಣ್ಣತಮ್ಮಂದಿರು ಸೋದರಿಯರ ಬೆನ್ನಿಗೆ ರಕ್ಷಣೆಗೆ ನಿಲ್ಲುತ್ತಾರೆ ಮತ್ತು ತಮ್ಮ ಮಡಿಲಿಗೆ ಹೊನ್ನನ್ನೇ ತಂದು ಸುರಿಯುತ್ತಾರೆ ಎನ್ನುತ್ತಾಳೆ ನಮ್ಮ ಜನಪದ ಹೆಣ್ಣು.

ಎನಗೆ ಯಾರಿಲ್ಲಂತ ಮನದಾಗ ಮರುಗಿದರು

ಪರನಾಡಲ್ಲೊಬ್ಬ ಪ್ರತಿಸೂರ್ಯ ನನ್ನಣ್ಣ

ಬಿದಿಗೆ ಚಂದ್ರಾಮ ಉದಿಯಾದ

ತನಗೆ ಯಾರೂ ಇಲ್ಲವೆಂಬ ಭಾವನೆ ಬರದಂತೆ ಅಣ್ಣ ಸದಾ ತಮ್ಮ ಬಾಳಿನಲ್ಲಿ ಸೂರ್ಯನಂತೆ ಇದ್ದೇ ಇರುತ್ತಾನೆ. ಬಿದಿಗೆ ಚಂದ್ರ ಬಹು ಸುಂದರ ಹಾಗಾಗಿ ತನ್ನಣ್ಣನನ್ನು ಬಿದಿಗೆ ಚಂದ್ರಮನಿಗೆ ಹೋಲಿಸುತ್ತಾಳೆ.

ಮನೆಯ ಹಿಂದಲಮಾವು ನೆನೆದರೆ ಘಮ್ಮೆಂದು

ನೆನೆದಂಗೆ ಬಂದ ನನ ಅಣ್ಣ ಬಾಳೆ

ಗೊನೆಯಾಂಗೆ ತೋಳ ತಿರುವೂತ

ತನ್ನಣ್ಣ ತಾನು ನೆನೆದೊಡನೆ ಬರುತ್ತಾನೆಂದು ಹೆಮ್ಮೆ ಅವಳಿಗೆ. ಅವನನ್ನು ನೆನೆದಾಗ ಮಾವಿನಂತೆ ಘಂ ಎನ್ನುತ್ತಾನೆ ಎಂದು ತನ್ನ ಅತಿಶಯ ಪ್ರೀತಿಯನ್ನು ತೋರುತ್ತಾಳೆ.

ಬಗೆಬಗೆಯ ರಾಖಿ ಕಂಕಣಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ರಾಖಿ ಕಂಕಣಗಳು ರಾಜಸ್ಥಾನದಲ್ಲಿ ಬಹಳ ಪ್ರಸಿದ್ಧಿ. ಅದರಲ್ಲೂ ಜೈಪುರ ರಾಖಿಗಳ ತವರೂರು.

ಮೇವಾಡಕ್ಕೆ ಹುಮಾಯೂನ್‌ ರಕ್ಷೆ

ಈ ರಾಖಿಯ ಬಗ್ಗೆ ಬಹಳ ಪ್ರಸಿದ್ಧವಾದ ಐತಿಹಾಸಿಕ ಕತೆಯಿದೆ. ಹದಿನೈದನೇ ಶತಮಾನದಲ್ಲಿ ಮೇವಾಡದ ರಾಣಿ ಕರ್ಣಾವತಿ ತನ್ನ ಪತಿ ಸಂಗ್ರಾಮ್ ಸಿಂಗನ ಮರಣಾನಂತರ ಮೇವಾಡವನ್ನು ತಾನೇ ಆಳುತ್ತಿರುತ್ತಾಳೆ. ತನ್ನ ರಾಜ್ಯದ ಮೇಲೆ ದಾಳಿ ಮಾಡಿದ ಗುಜರಾತಿನ ಬಹಾದೂರ್ ಶಾ ನಿಂದ ರಕ್ಷಿಸಿಕೊಳ್ಳಲು ಆಗಿನ ಮೊಘಲ್ ದೊರೆ ಹುಮಾಯೂನನಿಗೆ ರಾಖಿ ಕಳುಹಿಸಿ ರಕ್ಷಣೆಯನ್ನು ಬೇಡುತ್ತಾಳೆ. ಹುಮಾಯೂನ್ ಕರ್ಣಾವತಿಯ ಈ ಬೇಡಿಕೆಗೆ ಮೂಕನಾಗುತ್ತಾನೆ. ತನ್ನ ಸೇನಾ ಪಡೆಯೊಂದಿಗೆ ಕರ್ಣಾವತಿಯ ಸಹಾಯಕ್ಕಾಗಿ ಧಾವಿಸುತ್ತಾನೆ. ಅಷ್ಟರಲ್ಲಿ ಬಹಾದೂರ್ ಶಾನ ಕೈ ಮೇಲಾಗಿ ಕರ್ಣಾವತಿ ಅಗ್ನಿಪ್ರವೇಶ (ಜೋಹರ್) ಮಾಡಿರುತ್ತಾಳೆ. ಆದರೆ ಹುಮಾಯೂನ್ ಬಹಾದೂರ್ ಷಾನನ್ನು ಸೋಲಿಸಿ ಮೇವಾಡದ ಸಿಂಹಾಸನದಲ್ಲಿ ಕರ್ಣಾವತಿಯ ಮಗನನ್ನು ಕೂಡಿಸಿ ಪಟ್ಟಾಭಿಷೇಕ ಮಾಡಿ ಹಿಂತಿರುಗುತ್ತಾನೆ. ಈ ಘಟನೆ ಇತಿಹಾಸದಲ್ಲಿ ದಾಖಲಿಸಲ್ಪಟ್ಟಿದೆ. ರಾಖಿಯ ಮಹತ್ವವನ್ನು ಈ ಘಟನೆ ಎತ್ತಿಹಿಡಿಯುತ್ತದೆ.

ಇತಿಹಾಸಗಳು ಪುರಾಣಗಳು ಏನೇ ಕತೆ ಹೇಳಲಿ ಈ ರಾಖಿ ಹಬ್ಬ ಮನುಷ್ಯ ಮನುಷ್ಯನನ್ನು ಬೆಸೆಯುವ ಹಬ್ಬ. ಸೋದರ ಸೋದರಿಯರ ಸಂಬಂಧ ಅನುಬಂಧವನ್ನು ಗಟ್ಟಿಪಡಿಸುವ ಹಬ್ಬ. ಇಂದಿನ ದಿನಮಾನದಲ್ಲಿ ಹರಿದು ಹಂಚಿಹೋದ ಸಂಸಾರಗಳು ವೇಗದ ಜೀವನ ಶೈಲಿ ಆಧುನಿಕತೆಗೆ ಮಾರುಹೋದ ಜನ ಹೀಗೆಲ್ಲ ಇದ್ದರೂ ಇಂಥ ಹಬ್ಬಗಳು ಜನರನ್ನು ಬಂಧು ಬಾಂಧವರೊಡನೆ ಒಗ್ಗೂಡಿಸಿ ಸಂಭ್ರಮಾಚರಣೆಗಳಲ್ಲಿ ಭಾಗವಹಿಸುವಂತೆ ಮಾಡುತ್ತದೆ. ಬಾಂಧವ್ಯಗಳನ್ನು ಗಟ್ಟಿಮಾಡುತ್ತದೆ. ತಮ್ಮ ನಂತರ ತಮ್ಮ ಮಕ್ಕಳು ಹೀಗೆಯೇ ಪ್ರೀತಿ ವಿಶ್ವಾಸದಿಂದ ಇರಲಿ ಎಂದು ತಂದೆತಾಯಿಯರು ಮಾಡಿದ ಆಚರಣೆಯೇ ಇರಬಹುದು. ಇದೇ ಮುಂದುವರೆದು ಸಂಭ್ರಮ ಸಡಗರದ ಹಬ್ಬವಾಗಿರಬಹುದು. ಅಣ್ಣತಮ್ಮಂದಿರನ್ನು ಹರಸಿ ಹಾರೈಸಲು ಇದಕ್ಕಿಂತ ಒಳ್ಳೆಯ ವಿಧಾನ ಯಾವುದಿದೆ? ರಾಖಿ ತವರಿನ ಋಣ ತೀರಿಸುವ ಹಬ್ಬ. ಸೋದರರಿಗೆ ತಮ್ಮ ಸೋದರಿಯರ ಬಗ್ಗೆ ಬದ್ಧತೆಯನ್ನು ಜವಾಬ್ದಾರಿಯನ್ನೂ ಕಲಿಸುವ ಹಬ್ಬ.

Read more Articles on