ಹಿರೇಬೆಣಕಲ್ ಶಿಲಾಸಮಾಧಿ ಶೀಘ್ರ ವಿಶ್ವ ಸ್ಮಾರಕ ಪಟ್ಟಿಗೆ!

| N/A | Published : Oct 26 2025, 02:00 AM IST / Updated: Oct 26 2025, 04:58 AM IST

 Hirebeṇakal Koppal

ಸಾರಾಂಶ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಬಳಿಯ ಮೊರೇರ ಬೆಟ್ಟದಲ್ಲಿರುವ ಶಿಲಾಸಮಾಧಿಗಳು ಶೀಘ್ರದಲ್ಲಿಯೇ ವಿಶ್ಪಪಾರಂಪರಿಕ ತಾಣವಾಗಲಿದೆ ಎಂದು ಪ್ರವಾಸೋದ್ಯಮ ಮತ್ತು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಕೊಪ್ಪಳ :  ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಬಳಿಯ ಮೊರೇರ ಬೆಟ್ಟದಲ್ಲಿರುವ ಶಿಲಾಸಮಾಧಿಗಳು ಶೀಘ್ರದಲ್ಲಿಯೇ ವಿಶ್ಪಪಾರಂಪರಿಕ ತಾಣವಾಗಲಿದೆ ಎಂದು ಪ್ರವಾಸೋದ್ಯಮ ಮತ್ತು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿಯೇ ಆದಿ ಮಾನವನ ನೆಲೆಯ ಕುರುಹು ಹೊಂದಿರುವ ಹಿರೇಬೆಣಕಲ್‌ ಶಿಲಾಸಮಾಧಿ, ವಿಶ್ವಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಇವುಗಳನ್ನು ಕ್ರಿ.ಪೂ.800 ರಿಂದ ಕ್ರಿ.ಪೂ.200ರ ಅವಧಿಯಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಇಷ್ಟೊಂದು ಭವ್ಯ ಇತಿಹಾಸ ಹೊಂದಿದ್ದರೂ ಈ ತಾಣ ನಿರ್ಲಕ್ಷ್ಯಕ್ಕೆ ತುತ್ತಾಗಿತ್ತು. ಆದರೆ, 2023ರಲ್ಲಿ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ನ ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿ ಆಯ್ಕೆಯಾದ ಬಳಿಕ, ಸರ್ಕಾರ ಈ ತಾಣದ ಅಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದು, ಸುಮಾರು ₹80 ಲಕ್ಷದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದೆ. ಮೊದಲ ಹಂತದಲ್ಲಿ ರಸ್ತೆ, ಕುಡಿಯುವ ನೀರು, ಆಸನಗಳ ವ್ಯವಸ್ಥೆಗೆ ಕ್ರಮ ಕೈಗೊಂಡಿದೆ.

ಕೊಪ್ಪಳದಲ್ಲಿ  ಈ ಕುರಿತು ಮಾಹಿತಿ ನೀಡಿದ ಸಚಿವರು

ಕೊಪ್ಪಳದಲ್ಲಿ ಶನಿವಾರ ಈ ಕುರಿತು ಮಾಹಿತಿ ನೀಡಿದ ಸಚಿವರು, ವಿಶ್ವ ಪಾರಂಪರಿಕ ತಾಣಗಳ ಕಾಯಂ ಪಟ್ಟಿಯಲ್ಲಿ ಸ್ಥಾನ ಪಡೆಯಲು ಬೇಕಾಗುವ ಎಲ್ಲಾ ಕೆಲಸಗಳನ್ನು ಸರ್ಕಾರದಿಂದಲೇ ಮಾಡಲಾಗುವುದು. ಈ ಸ್ಥಳವನ್ನು ವಿಶ್ವದರ್ಜೆಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಹಲವಾರು ಅಭಿವೃದ್ಧಿ ಯೋಜನೆಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅತ್ಯಂತ ಪುರಾತನ ಮಾನವ ನೆಲೆಗೆ ಸಾಕ್ಷಿಯಾಗಿರುವ ಈ ತಾಣದ ಸಂರಕ್ಷಣೆ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ನಾನೂ ಸಹ ಈ ಸ್ಥಳಕ್ಕೆ ಇತ್ತೀಚಿಗೆ ಭೇಟಿ ನೀಡಿದ್ದು, ಅಲ್ಲಿಯ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇನೆ ಎಂದರು.

ಚಿತ್ರಪ್ರದರ್ಶನದಲ್ಲಿ ಈ ಶಿಲಾಸಮಾಧಿಗಳು ಮತ್ತು ಗುಹಾಚಿತ್ರಗಳ ಪ್ರದರ್ಶನ

ಈಗಾಗಲೇ ಬೆಂಗಳೂರಿನ ವಿಧಾಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪ್ರವಾಸೋದ್ಯಮ ಮತ್ತು ಪುರಾತತ್ವ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಿತ್ರಪ್ರದರ್ಶನದಲ್ಲಿ ಈ ಶಿಲಾಸಮಾಧಿಗಳು ಮತ್ತು ಗುಹಾಚಿತ್ರಗಳ ಪ್ರದರ್ಶನ ಮಾಡಲಾಗಿದ್ದು, ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ಈಗ ಇದನ್ನು ತುರ್ತಾಗಿ ಅಭಿವೃದ್ಧಿ ಮಾಡಿ, ವಿಶ್ವಪಾರಂಪರಿಕ ತಾಣವಾಗಿ ಮಾಡುವ ದಿಸೆಯಲ್ಲಿ ಸರ್ಕಾರ ಹಲವಾರು ರೀತಿಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಹಿರೇಬೆಣಕಲ್ ಬಳಿಯ ಮೊರೇರ ಬೆಟ್ಟದಲ್ಲಿರುವ ಕ್ರಿ.ಪೂ.200 ಅವಧಿಯ ಶಿಲಾಸಮಾಧಿ

ಕನ್ನಡಪ್ರಭ ಆಯ್ಕೆ ಮಾಡಿದ್ದ ರಾಜ್ಯದ 7 ಅದ್ಭುತಗಳಲ್ಲಿ ಹಿರೇಬೆಣಕಲ್‌ ಹೊರಹೊಮ್ಮಿದ ಬಳಿಕ ಈ ಬಗ್ಗೆ ಸರ್ಕಾರದ ಗಮನ

ಶಿಲಾಸಮಾಧಿ ಸ್ಥಳದಲ್ಲಿ ಈಗ ಸುಸಜ್ಜಿತ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಆಸನಗಳ ವ್ಯವಸ್ಥೆ ಮಾಡಿರುವ ರಾಜ್ಯ ಸರ್ಕಾರ

ಈಗಾಗಲೇ ವಿಶ್ವಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಿರೇಬೆಣಕಲ್. ಶಾಶ್ವತ ಸ್ಥಾನಕ್ಕೆ ಕ್ರಮ

Read more Articles on