ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ಗ್ರಾಸ್ ರೂಟ್ಸ್ ರಿಸರ್ಚ್ ಅಂಡ್ ಅಡ್ವಕಸಿ ಮೂವ್‌ಮೆಂಟ್ (ಗ್ರಾಮ್) ಡಾ.ಆರ್. ಬಾಲಸುಬ್ರಹ್ಮಣ್ಯಂ ಅವರ ‘ಅಭಿವೃದ್ಧಿಯ ಕಥೆಗಳು’.- ಸಮುದಾಯದ ಸಮುತ್ಥಾನ ಕೃತಿಯನ್ನು ಪ್ರಕಟಿಸಿದೆ. ಇದು ಲೇಖಕರ ಆಂಗ್ಲ ಲೇಖನಗಳ ಅನುವಾದಿತ ಸಂಕಲನ.
ಈ ಸಂಕಲನದಲ್ಲಿ ಅಂತರಾಳದ ಉತ್ತೇಜನ. ನಂಬಿಕೆಟ್ಟವರಿಲ್ಲವೋ ತಮ್ಮಯ್ಯ, ನಂಬದೇ ಅನ್ಯ ಮಾರ್ಗವಿಲ್ಲವೋ!, ಒಂದು ಸಮತಟ್ಟಾದ ಅಖಾಡವನ್ನು ಸೃಷ್ಟಿಸಬೇಕಿದೆ.., ನಿಂಗಮಣಿಯ ಮೌನಕ್ರಾಂತಿ, ಕೆಂಪಯ್ಯ ಕಲಿಸಿದ ನಾಯಕತ್ವದ ಪಾಠ, ನಿನ್ನಾತ್ಮ ದೇವಾತ್ಮ ಕಣಾ, ಜೇನುಕುರುಬರ ಮಾನವೀಯ ಅರ್ಥಶಾಸ್ತ್ರ, ನಮ್ಮ ಚಿಕ್ಕಪುಟ್ಟಿಯ ದೊಡ್ಡ ಚಿಂತನೆ, ಅಭಿವೃದ್ಧಿಯ ದಾರಿ ಯಾವುದು?, ಹೆಸರಿಗಷ್ಟೇ ಅಲ್ಲ ಈ ‘ಸುಶೀಲ’ ಅಮ್ಮ, ಒಂಗೂಡಿಸುವ ವೈರಸ್, ಆರ್ಥಿಕ ಒಳಗೊಳ್ಳುವಿಕೆ ಹಣಕಾಸಿನ ವ್ಯವಹಾರಕ್ಕೆ ಮಾತ್ರವೇ?, ಸ್ವಯಂ ಸೇವಾ ಸಂಸ್ಥೆಗಳಿಗೆ ಹೊಸ ಅಧ್ಯಾಯ!, ಒಂದು ಹೊಸ ಆರಂಭ.. ಹೊಸ ವ್ಯಾಖ್ಯಾನ. ಮತ್ತು ಹೊಸ ಭವಿಷ್ಯ..- 14 ಲೇಖನಗಳಿವೆ.ಮೊದಲ ಲೇಖನ ಅಂತರಾಳದ ಉತ್ತೇಜನ ಓದಿದಾಗ ಕಣ್ಣಾಲಿಗಳು ಒದ್ದೆಯಾದವು. ಟಿ. ನರಸೀಪುರದ ಬಳಿ ಅಡುಗೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ, ಮೃತಪಟ್ಟ. ಅಂದು ರೋದಿಸುತ್ತಿದ್ದ ಆತನ ತಾಯಿಯನ್ನು ವಿಚಾರಿಸಿದಾಗ ಟಆತ ಚಿಕಿತ್ಸೆಗೆ ಸ್ಪಂದಿಸದ ರೋಗದಿಂದ ಬಳಲುತ್ತಿರಲಿಲ್ಲ, ಬದಲಿಗೆ ಚಿಕಿತ್ಸೆಗೆ ಡಾಕ್ಟರ್‌ಗಳು ಬರೆದುಕೊಡುತ್ತಿದ್ದ ಔಷಧಿ ಚೀಟಿಗಳಿಗೆ ಹಣ ಹೊಂದಿಸಲಾಗದೇ ಸತ್ತಟ ಎಂಬುದನ್ನು ತಿಳಿಯುತ್ತದೆ. ಇದು ಅಂದು ಮೂರನೇ ವರ್ಷದ ವೈದ್ಯ ವಿದ್ಯಾರ್ಥಿಯಾಗಿದ್ದ ಲೇಖಕರ ಮೇಲೆ ಅಪಾರ ಪರಿಣಾಮ ಬೀರುತ್ತದೆ, ಇದಾಗಿ ನಾಲ್ಕು ದಶಕಗಳೇ ಕಳೆದಿದ್ದರೂ ಇವತ್ತಿಗೂ ಕೂಡ ಡಾ.ಬಾಲಸುಬ್ರಹ್ಮಣ್ಯಂ ಅದೇ ಕಾಳಜಿಯಿಂದ ಬುಡಕಟ್ಟು ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚೀಟಿ ಬರೆದುಕೊಡುವ, ಅದನ್ನು ತರಲು ರೋಗಿಗಳ ಸಂಬಂಧಿಕರ ಪರಿಪಾಟಲು ಪಡುವ ಪರಿಸ್ಥಿತಿ ಇವತ್ತಿಗೂ ಬದಲಾಗಿಲ್ಲ ಎಂಬುದು ಚೋದ್ಯದ ಸಂಗತಿ.
ನಂಬಿಕೆಟ್ಟವರಿಲ್ಲವೋ.. ಲೇಖನ ಅಸಹಾಯಕರು ಹಾಗೂ ರಾಜಕಾರಣಿಗಳ ನಂಬಿಕೆ ಬೇರೆ ಬೇರೆಯಾಗಿರುವುದನ್ನು ಸೂಚಿಸುತ್ತದೆ. ಶಿವಕುಮಾರ್ ಮತ್ತು ಇಮ್ತಿಯಾಜ್ ಎಂಬ ಕ್ಯಾಬ್ ಚಾಲಕರ ನಿದರ್ಶನಗಳ ಮೂಲಕ ಸಾಮಾಜಿಕ ಅಭಿವೃದ್ಧಿಯ ಕಾರ್ಯಸೂಚಿಯನ್ನು ರೂಪಿಸಬೇಕಾದ ಅಗತ್ಯತತೆಯನ್ನು ಒತ್ತಿ ಹೇಳಿದ್ದಾರೆ.ಮಾಹಿತಿ ಹಕ್ಕು ಕಾಯ್ದೆ ಕುರಿತ 10 ರು.ಗಳ ಪುಸ್ತಕ ಓದಿ, ಸತ್ತೇಗಾಲದ ನಿಂಗಮಣಿ ಎಂಬ ಅಜ್ಜಿಯು ವೃದ್ಧಾಪ್ಯವೇತನವನ್ನು ಪಡೆದುಕೊಂಡ ಕತೆಯೂ ಸ್ಫೂರ್ತಿದಾಯಕವಾಗಿದೆ. ಭಾವನೆಗಳಿಗಿಂತ ಆಗಬೇಕಾದ ಕೆಲಸ ಮುಖ್ಯ ಎಂಬುದನ್ನು ಕೆಂಪಯ್ಯ ಕಲಿಸಿದ ನಾಯಕತ್ವದ ಪಾಠ ತಿಳಿಸಿಕೊಡುತ್ತದೆ.
‘ನಿನ್ನಾತ್ಮ ದೇವಾತ್ಮ ಕಣಾ’ ಲೇಖನವು ಚೌಕಾಸಿ ಮಾಡುವ ಗ್ರಾಹಕನಿಗೆ ಒಂದು ಬಾಳೆ ಹಣ್ಣು ಹೆಚ್ಚು ಕೊಡಲು ತಕರಾರು ತೆಗೆಯುವ ವ್ಯಾಪಾರಿ ಮಹಿಳೆಯು ಅದೇ ಹಸಿವಿನಿಂದ ಅಳುತ್ತಿದ್ದ ಬಾಲಕಿಗೆ ಎರಡು ಬಾಳೆಹಣ್ಣನ್ನು ನೀಡಿದ್ದು ಗಮನಾರ್ಹ. ಜೇನಕುರುಬರ ಮಾನವೀಯ ಅರ್ಥಶಾಸ್ತ್ರವನ್ನು ಎಲ್ಲರೂ ಅರ್ಥಮಾಡಿಕೊಂಡರೆ ಸಾಕು ಪರಿಸರ ಉದ್ಧಾರವಾಗುತ್ತದೆ. ಶಾಲೆಗೆ ಹೋಗಲು ತಕರಾರು ಮಾಡುತ್ತಿದ್ದ ಚಿಕ್ಕಪುಟ್ಟಿ ನಂತರ ಬದಲಾಗಿದ್ದು ಕೂಡ ಚೆನ್ನಾಗಿದೆ.ಇತರೆ ಲೇಖನಗಳು ಕೂಡ ಗಮನ ಸೆಳೆಯುತ್ತದೆ. ಒಟ್ಟಾರೆ ಜನಸಮುದಾಯ ಅದದರಲ್ಲೂ ಬುಡಕಟ್ಟು ಜನರ ಸಂಕಷ್ಟಗಳು, ಅವರ ಆಕಾಂಕ್ಷೆಗಳು ಮತ್ತು ಹೋರಾಟಗಳು, ತಮ್ಮನ್ನ ತಾವು ಹೇಗೆ ಬದಲಾವಣೆಗೆ ಒಗ್ಗಿಸಿಕೊಂಡರು ಎಂಬುದನ್ನು ಸಣ್ಣ, ಸಣ್ಣ ಕಥೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಎಲ್ಲವೂ ನೈಜ ಘಟನೆಗಳಾಗಿರುವುದರಿಂದ ಓದುಗರ ಆಸಕ್ತಿಯನ್ನು ಕೆರಳಿಸುತ್ತವೆ. ಇದು ಅಭಿವೃದ್ಧಿಯ ವಿವಿಧ ಮುಖಗಳನ್ನು ಪರಿಚಯಿಸುತ್ತದೆ. ಪ್ರತಿಯೊಂದು ಜೀವನಗಾಥೆಗಳು ಕೂಡ ವಾಸ್ತವದ ಪ್ರತಿಬಿಂಬವಾಗಿವೆ.
ಅಭಿವೃದ್ಧಿಯ ಬಗ್ಗೆ ಚಿಂತಿಸುವವರು, ಅನುಷ್ಠಾನಗೊಳಿಸುವವರು ಹಾಗೂ ಫಲಾನುಭವಿಗಳಿಗೆ ಇದೊಂದು ಉಪಯುಕ್ತ ಕೈಪಿಡಿಯಂತಿದೆ.ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಅವರ ಮುನ್ನುಡಿ ಇದ್ದು, ಗ್ರಾಮ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಬಸವರಾಜ ಆರ್. ಶ್ರೇಷ್ಠ ಕೃತಿಯನ್ನು ಸಂಪಾದಿಸಿದ್ದಾರೆ. ಆಸಕ್ತರು ಮೊ. 96069 50305 ಸಂಪರ್ಕಿಸಬಹುದು.