ಡಾ.ಸಿ.ಡಿ. ಪರಶುರಾಮ ಅವರು ಸಂಪಾದಿಸಿರುವ ಕೋಟೊಳಗಿನ ಮಾನವೀಯತೆ ಕೃತಿ ; ಅಭಿನಂದನಾ ಗ್ರಂಥ

| Published : Jul 18 2024, 01:43 AM IST / Updated: Jul 18 2024, 05:25 AM IST

books
ಡಾ.ಸಿ.ಡಿ. ಪರಶುರಾಮ ಅವರು ಸಂಪಾದಿಸಿರುವ ಕೋಟೊಳಗಿನ ಮಾನವೀಯತೆ ಕೃತಿ ; ಅಭಿನಂದನಾ ಗ್ರಂಥ
Share this Article
  • FB
  • TW
  • Linkdin
  • Email

ಸಾರಾಂಶ

ಯುವರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಸಿ.ಡಿ. ಪರಶುರಾಮ ಅವರು ಸಂಪಾದಿಸಿರುವ ‘ಕೋಟೊಳಗಿನ ಮಾನವೀಯತೆ’ ಕೃತಿಯು ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ರಾಮಸ್ವಾಮಿ ಅವರ ವ್ಯಕ್ತಿ ಚಿತ್ರಣವನ್ನು ಅನಾವರಣ ಮಾಡುವುದರ ಜೊತೆಗೆ ಸಾಹಿತ್ಯ ಮೌಲ್ಯದ ಮಂಥನಕ್ಕೂ ಕೂಡ ವೇದಿಕೆ ಕಲ್ಪಿಸಿದೆ.

 ಮೈಸೂರು :  ಯುವರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಸಿ.ಡಿ. ಪರಶುರಾಮ ಅವರು ಸಂಪಾದಿಸಿರುವ ‘ಕೋಟೊಳಗಿನ ಮಾನವೀಯತೆ’ ಕೃತಿಯು ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ರಾಮಸ್ವಾಮಿ ಅವರ ವ್ಯಕ್ತಿ ಚಿತ್ರಣವನ್ನು ಅನಾವರಣ ಮಾಡುವುದರ ಜೊತೆಗೆ ಸಾಹಿತ್ಯ ಮೌಲ್ಯದ ಮಂಥನಕ್ಕೂ ಕೂಡ ವೇದಿಕೆ ಕಲ್ಪಿಸಿದೆ.

ಡಾ.ಕೆ.ಸೌಭಾಗ್ಯವತಿ, ಡಾ.ಕೆ.ಎಸ್.ಕುಮಾರಸ್ವಾಮಿ, ಡಾ.ಬಿ.ವೆಂಕಟರಾಮಣ್ಣ, ಡಾ.ಆರ್.ನಿಂಗರಾಜು, ಎನ್.ಆರ್. ಮಧುಸೂದನ್ ಅವರು ಸಂಪಾದಕ ಮಂಡಳಿಯ ಸದಸ್ಯರಾಗಿ ಡಾ.ಸಿ.ಡಿ.ಪರಶುರಾಮ ಅವರಿಗೆ ಸಾಥ್ ನೀಡಿದ್ದಾರೆ.

ಈ ಕೃತಿಯು ಐದು ಭಾಗಗಳಲ್ಲಿ ವ್ಯಾಪಿಸಿದೆ. ‘ಒಳಮನಸ್ಸಿನ ಮಾತು’ ಎಂಬ ಮೊದಲ ಭಾಗದಲ್ಲಿ ಪ್ರೊ.ಸಿ.ರಾಮಸ್ವಾಮಿ ಅವರು ಹಿಂದಿನ ಹೆಜ್ಜೆಯ ಜಾಡನ್ನು ನೆನೆದಿದ್ದಾರೆ.

‘ಆತ್ಮೀಯ ಆಪ್ತತೆ’ ಎಂಬ ಎರಡನೇ ಭಾಗದಲ್ಲಿ ಡಾ.ಬಿ.ವೆಂಕಟರಾಮಣ್ಣ, ಡಾ.ಕೆ.ಕಾಳಚನ್ನೇಗೌಡ, ಜಯರಾಂ ಕೀಲಾರ, ಡಾ.ಎಂ.ರುದ್ರಯ್ಯ, ಡಾ.ಬಿ.ಎನ್.ಯಶೋದಾ, ಬಿ.ಜಿ.ಪ್ರವೀಣ್ ಕುಮಾರ್, ಡಾ.ಎಸ್.ಮಹದೇವಮೂರ್ತಿ, ಎಂ.ಎಸ್. ರೇಖಾ, ಎಚ್.ಎಸ್.ಶಂಕರ, ಡಾ.ಸಿ.ಎ.ಶ್ರೀಧರ, ಡಾ.ಕೆ.ಎಸ್.ಕುಮಾರಸ್ವಾಮಿ, ಡಾ.ಹೇಮಮಾಲಿನಿ ಕೃಪಾಕರ್, ಸುಂದರ್ ರಾಜ್, ಎ.ಎಸ್.ಋತ್ವಿಕ್ ಸುಂದರ್, ಅಮ್ಮ ರಾಮಚಂದ್ರ, ಎ.ಎಸ್. ತೇಜಸ್ವಿನಿ, ಜಿ.ಎಸ್. ಸಂದೀಪ್, ಆರ್. ಶಿವಕುಮಾರ್, ಎಂ.ಡಿ.ಕಾರ್ತಿಕ್, ಎನ್.ಹೇಮಲತಾ, ಕೆ.ಜೆ.ವೈಢೂರ್ಯ, ಜೆ.ಮಂಜು, ಎಚ್.ಸಿ.ರಜತ್, ಡಾ.ಲೋಕೇಶ್ ಮೊಸಳೆ, ಡಾ.ಎಂ.ಬಿ. ಉಮೇಶ್, ವಿಜಯಲಕ್ಷ್ಮೀ, ಜಿ.ಎಸ್. ಪ್ರಭು, ಜಿ.ಎಸ್. ಗಣೇಶ್, ಡಾ. ನವೀನ್ ಮೌರ್ಯ, ಡಾ.ರಾಚಯ್ಯ ಕೋಟೆ, ಎಂ.ಡಿ. ಚನ್ನಬಸಪ್ಪ, ಎಸ್.ಗೋಪಾಲ್, ಮಹಾದೇವಸ್ವಾಮಿ ಪಿ. ಮಂಗಲ, ಎಂ. ಮಹೇಶಕುಮಾರ್, ಎಚ್.ಆರ್. ಕೀರ್ತಿಪ್ರಸಾದ್, ಡಾ.ಆರ್. ನಿಂಗರಾಜು, ಎನ್.ಆರ್. ಮಧುಸೂದನ್, ಡಾ.ಸಿ.ಡಿ. ಪರಶುರಾಮ, ಡಾ.ಎಂ. ಶ್ರೀನಿವಾಸಮೂರ್ತಿ, ಡಾ.ಪಿ.ಎಸ್. ಮಧುಸೂದನ, ಅಂಶಿ ಪ್ರಸನ್ನಕುಮಾರ್ ಅವರು ರಾಮಸ್ವಾಮಿ ಅವರನ್ನು ತಾವು ಕಂಡಂತೆ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಈ ವಿಭಾಗದಲ್ಲಿ ತಂದೆ ರಾಮಸ್ವಾಮಿ ಅವರನ್ನು ಕುರಿತು ಮಕ್ಕಳಾದ ಲಾವಣ್ಯ ಹಾಗೂ ಡಾ.ಶಿವರಂಜಿನಿ ಅವರ ಭಾವುಕ ಬರಹವೇ ಹೈಲೈಟ್ ಎನ್ನಬಹುದು.

‘ಬರಹವೆಂಬ ಹೂಗುಚ್ಚ’ ಎಂಬ ಮೂರನೇ ಭಾಗದಲ್ಲಿ ಪ್ರೊ.ಸಿ.ರಾಮಸ್ವಾಮಿ ಅವರ ‘ಕಾಯಕಲ್ಪ’ ಕೃತಿ ಕುರಿತು ಡಾ.ಕೋಕಿಲಾ, ‘ಗುಡಿಸಲಿನಿಂದ ದುಬೈವರೆಗೆ’ ಕುರಿತು ಡಾ.ಕೆ. ಸೌಭಾಗ್ಯವತಿ, ‘ಕಡಲಾಚೆ ಕನ್ನಡತೇರು- ವಿಹಂಗಮ ನೋಟ’ ಕುರಿತು ಡಾ.ಕೆ.ತಿಮ್ಮಯ್ಯ, ಪ್ರೊ.ಸಿ.ರಾಮಸ್ವಾಮಿ ಅವರ ಸಾಹಿತ್ಯ ಮತ್ತು ಸಂಘಟನೆ ಕುರಿತು ಡಾ.ಪಿ.ಮಾದಪ್ಪ ಅವರ ವಿರ್ಮಶಾತ್ಮಕ ಲೇಖನಗಳಿವೆ.

ಈ ಗ್ರಂಥದಲ್ಲಿ ‘ಮೌಲ್ಯದ ಮಂಥನ’ ನಾಲ್ಕನೇ ಭಾಗ ಮುಖ್ಯವಾದುದು. ನಿಜವಾಗಿಯೂ ಕೂಡ ಇಲ್ಲಿ ಸಾಹಿತ್ಯ ಕುರಿತು ಮೌಲಿಕವಾದ, ಗಂಭೀರವಾದ ಲೇಖನಗಳಿವೆ. ಇದರಿಂದಾಗಿ ಈ ಕೃತಿ ಕೇವಲ ಅಭಿನಂದನಾ ಗ್ರಂಥವಾಗಿ ಉಳಿಯದೇ ಸಾಹಿತ್ಯಿಕ ವಿಚಾರಗಳ ಮಂಥನಕ್ಕೆ ವೇದಿಕೆ ಕಲ್ಪಿಸಿದೆ.

ಅಹಿಂಸೆ, ಸತ್ಯಾಗ್ರಹ ಮತ್ತು ಗಾಂಧೀಜಿ- ಸಿ.ಆರ್. ಪುಟ್ಟರಾಜು, ಅಂತರಂಗದ ಅಕ್ಷರಮಾಲೆ- ಕೆ.ಬಿ.ಪ್ರಮೋದ, ಶಿಶುನಾಳ ಷರೀಫರು ಮತ್ತು ಆಧುನಿಕ ಸಮಾಜ- ದಾವಲಸಾಬ ನರಗುಂದ, ನೇಮಿಚಂದ್ರ ಅವರ ಕಥಾ ಸಾಹಿತ್ಯಃ ಒಂದು ಅವಲೋಕನ- ಡಾ.ವಿನೋದಾ, ಜಾಹೀರಾತು ಮತ್ತು ಹೆಣ್ಣು- ಪಿ.ಆರ್. ಚಂದ್ರನಾಯಕ, ‘ಜಲಗಾರ’ ನಾಟಕದಲ್ಲಿ ವೈಚಾರಿಕತೆಯ ಪರಿಕಲ್ಪನೆ- ಡಾ.ಡಿ. ಚಿನ್ನಸ್ವಾಮಿ, ವೀರಗಲ್ಲು ಮತ್ತು ಮಾಸ್ತಿಗಲ್ಲು- ಕೆ.ಎಸ್. ಮಹೇಶಕುಮಾರ್, ಮಾನವತಾವಾದಿ ಕನಕದಾಸರು- ಡಾ.ಎಚ್. ಆನಂದಕುಮಾರ್, ಮೊಗಳ್ಳಿ ಗಣೇಶ್ ಅವರ ಮಣ್ಣುಃ ವಿವೇಚನೆ- ಡಾ.ಸಿ.ಎಸ್. ಕೆಂಡಗಣ್ಣೇಗೌಡ, ಅಂಬೇಡ್ಕರ್ಃ ಸಮಸಮಾಜದ ಕಲ್ಪನೆಗಳು- ಡಾ.ಗಣೇಶ, ಕುವೆಂಪು ಅವರ ರೈತಪರ ಕವಿತೆಗಳು- ಡಾ.ಡಿ. ಸರ್ವಮಂಗಳಾ, ರತ್ನಾಕರವರ್ಣಿಯ ‘ಭರತೇಶವ ವೈಭವ’ದಲ್ಲಿ ಮಾನವೀಯ ನೆಲೆಗಳು- ಡಾ.ಸಿ.ಡಿ. ಪರಶುರಾಮ, ಜಿಎಸ್ಎಸ್ ಅವರ ಸಾಮಗಾನಃ ಸಾಮಾಜಿಕ ಪ್ರಜ್ಞೆ- ಕೆ.ಎಂ.ನಾಗೇಶ, ವರ್ಗ ಸಂಘರ್ಷದ ನೆಲೆಯಲ್ಲಿ ಕಂಬಾರರ ನಾಯೀಕತೆ- ಶರಣಪ್ಪ ರಾ.ಆಡಕಾರ ರಂಗಭೂಮಿಯಲ್ಲಿ ಮಹಿಳೆ- ಶ್ರುತಿ ಆರ್.ಬಲ್ಲಾಳ್, ಚಿಕ್ಕಲ್ಲೂರು ಜಾತ್ರೆಯ ವಿಶೇಷತೆಗಳು- ಡಾ.ಸೋಮಣ್ಣ ಇಕ್ಕಡಹಳ್ಳಿ, ಬುದ್ಧನೆಂಬ ಮಹಾಬೆಳಕು- ಡಾ.ಪಿ. ಮಾದಪ್ಪ, ಬಾಪೂ ನೀವು ಅಮರ- ನಮ್ರತಾ ಎನ್. ಶೆಣೈ, ಜಾನಪದ ಸಂಸ್ಕೃತಿಃ ಸಂಕಟ- ಮಹೇಂದ್ರ ದೇವನೂರು, ಸಮಕಾಲೀನ ಭಾರತದಲ್ಲಿ ಮೌಢ್ಯಾರಾಧನೆ- ಡಾ.ಲೋಕೇಶ್ ಮೊಸಳೆ, ಡಾ.ಬಿ.ಪಿ. ಮಹೇಶಚಂದ್ರಗುರು, ಪ್ರಸ್ತುತ ಜಗತ್ತು- ಇಣುಕುನೋಟ- ಡಾ.ಆರ್. ಲತಾ, ಮಾನಸ ಗಂಗೋತ್ರಿ ಆತ್ಮಾವಲೋಕನ- ಡಾ,ಕೆ. ಸೌಭಾಗ್ಯವತಿ, ಕುವೆಂಪು- ದೇವರ ಪರಿಕಲ್ಪನೆ- ಡಾ.ಷಹಸೀನಾ ಬೇಗಂ, ಮೊಂಡರ ಸಂಸ್ಕೃತಿ- ಡಾ.ಬಿ. ವೆಂಕಟರಾಮಣ್ಣ, ಬಣಜಿಗರ ಜೀವನಾವರ್ತನ- ಡಾ. ನಾಗರತ್ನಮ್ಮ, ಬೇಂದ್ರೆ ಕಾವ್ಯದಲ್ಲಿ ಮಹಿಳಾ ಸಂವೇದನೆ- ಡಾ. ನಯನಾ, ಚತುರ್ಮುಖ ಬ್ರಹ್ಮ ಪಿ.ಆರ್. ತಿಪ್ಪೇಸ್ವಾಮಿ- ಕೆ.ಸಿ. ಮಹದೇವಶೆಟ್ಟಿ- ಸಮಾಜಮುಖಿ ಶ್ರೀಸಾಮಾನ್ಯರುಃ ಒಂದು ಅವಲೋಕನ- ಡಾ.ಸಿ.ಡಿ ಪರಶುರಾಮ ಲೇಖನಗಳಿವೆ.

ಐದನೇ ಭಾಗ ಚಿತ್ರಭಿತ್ತಿದಲ್ಲಿ ವರ್ಣಂಜಿತ ಫೋಟೋಗಳಿವೆ.

ವಿಜಯಲಕ್ಷ್ಮಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದ್ದು, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಮುನ್ನುಡಿ ಬರೆದಿದ್ದಾರೆ. ಆಸಕ್ತರು ಮೊ. 98860 69116 ಸಂಪರ್ಕಿಸಬಹುದು.

ಕಣ್ಣೀರು ತರಿಸುವ ಒಳ ಮನಸ್ಸಿನ ಮಾತು...

ಈ ಕೃತಿಯ ಆರಂಭದಲ್ಲಿ ಸ್ವತಃ ಪ್ರೊ.ಸಿ.ರಾಮಸ್ವಾಮಿ ಅವರು ಹಿಂದಿನ ಹೆಜ್ಜೆಯ ಜಾಡನು ನೆನೆದು.. ಶೀರ್ಷಿಕೆಯಲ್ಲಿ ಒಳ ಮನಸ್ಸಿನ ಮಾತುಗಳನ್ನು ದಾಖಲಿಸಿದ್ದಾರೆ. ಅದನ್ನು ಓದಿದರೆ ಎಂಥವ ಕಲ್ಲು ಹೃದಯವೂ ಕರಗಿ ನೀರಾಗುತ್ತದೆ. ಏಕೆಂದರೆ ಮಂಡ್ಯ ಜಿಲ್ಲೆ ಗಾಣದಾಳು ಎಂಬ ಗ್ರಾಮದ ಪೌರಕಾರ್ಮಿಕ ಜನಾಂಗದ ಚಿಕ್ಕರಂಗಯ್ಯ- ಮಂಗಮ್ಮ. ಗುಡಿಸಲು ವಾಸಿಗಳಾದ ಈ ದಂಪತಿ ಪ್ರತಿದಿನ ಊರನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರು. ಚಿಕ್ಕರಂಗಯ್ಯ ರಾತ್ರಿ ವೇಳೆ ಊರಿನ ಸಹಕಾರ ಸಂಘದ ವಾಚ್ಮನ್ ಕೆಲಸ ಕೂಡ ಮಾಡುತ್ತಿದ್ದರು. ಮಧ್ಯಾಹ್ನ ಬುಟ್ಟಿ, ಪಾತ್ರೆಯೊಂದಿಗೆ ಮನೆ ಮನೆಗಳಿಗೆ ಹೋಗಿ ಹಿಟ್ಟು,ಅನ್ನ, ಸಾಂಬಾರ್ ಬೇಡುತ್ತಿದ್ದರು. ಯಾರಾದರೂ ಕೊಟ್ಟರೆ ಉಂಟು ಇಲ್ಲ ಎಂದರೆ ಇಲ್ಲ ಎಂಬ ಪರಿಸ್ಥಿತಿ. ಆಗ ಮನೆಗೆ ಬಂದು ಅಕ್ಕಿ, ರಾಗಿ ಹಿಟ್ಟನ್ನು ಗಂಜಿ ಮಾಡಿಕೊಂಡು ಕುಡಿಯುತ್ತಿದ್ದರು.ಗುಡಿಸಲು ಸುತ್ತಮುತ್ತ ಸಿಗುತ್ತಿದ್ದ ವಿವಿಧ ಜಾತಿಯ ಸೊಪ್ಪನ್ನು ತಂದು ಉಪ್ಪಾಗಿ ಬೇಯಿಸಿಕೊಂಡು ತಿನ್ನುತ್ತಿದ್ದರು.

ಈ ದಂಪತಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು.ಈ ಪೈಕಿ ಎರಡನೇವರು ಸಿ. ರಾಮಸ್ವಾಮಿ. ಉಳಿದವರೆಲ್ಲಾ ಜೀತ, ಕೂಲಿ ಎಂದು ಹೋಗುತ್ತಿದ್ದರು. ರಾಮಸ್ವಾಮಿ ಒಬ್ಬರು ಮಾತ್ರ ಓದಿನ ಕಡೆ ಗಮನ ನೀಡಿದರು. ಅವರನ್ನು ಕೂಡ ವರ್ಷಕ್ಕೆ 300 ರು.ಗೆ ಎಮ್ಮೆ ಕಾಯಲು ಜೀತಕ್ಕಿರುವಂತೆ ಊರ ಗೌಡರು ಕೇಳುತ್ತಾರೆ. ಆದರೆ ರಾಮಸ್ವಮಿ ಅವರ ತಾಯಿ ಒಪ್ಪದೇ ಇವನೊಬ್ಬನಾದರೂ ಓದಲಿ ಎಂದು ಆಸೆ ಪಡುತ್ತಾರೆ. ಅದರಂತೆ ರಾಮಸ್ವಾಮಿ ಸ್ವಗ್ರಾಮದಲ್ಲಿ ಪ್ರಾಥಮಿಕ, ವಿ.ಸಿ. ಫಾರಂನಲ್ಲಿ ಪ್ರೌಢ, ಮಂಡ್ಯದಲ್ಲಿ ಪಿಯು ಹಾಗೂ ಬಿಎ ಓದುತ್ತಾರೆ. ಮೈಸೂರು ಮಾನಸ ಗಂಗೋತ್ರಿಯಲ್ಲಿ ಎಂ.ಎ ಮನಶಾಸ್ತ್ರವನ್ನು ದ್ವಿತೀಯ ದರ್ಜೆಯಲ್ಲಿ ಪಾಸು ಮಾಡುತ್ತಾರೆ. 1987 ರಲ್ಲಿ ಮಹಾರಾಜ ಕಾಲೇಜಿನಲ್ಲಿ ತಾತ್ತಾಲಿಕ ಉಪನ್ಯಾಸಕ, ಅದೇ ವರ್ಷ ಸೆ.9 ರಿಂದ ಕಾಯಂ ಉಪನ್ಯಾಸಕರಾದರು. ಇದಕ್ಕೆ ಅಂದಿನ ಕುಲಪತಿ ಡಾ.ವೈ.ಪಿ. ರುದ್ರಪ್ಪ, ಅವರಿಗೆ ಪರಿಚಯಿಸಿದ ಪ್ರೊ.ಪಾರ್ವತಮ್ಮ ಕಾರಣರು. ಮುಂದೆ 1994 ರಲ್ಲಿ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರಾದರು.2012 ರಲ್ಲಿ ಪಿಎಚ್.ಡಿ ಪದವಿ ಪಡೆದರು.ನಂತರ ಪ್ರೊ.ಜೆ. ಶಶಿಧರಪ್ರಸಾದ್ ಕುಲಪತಿಯಾಗಿದ್ದಾಗ ವಿವಿಯ ವಿದ್ಯಾರ್ಥಿ ಕ್ಷೇಮಪಾಲಕ, ಪ್ರೊ.ಕೆ.ಎಸ್. ರಂಗಪ್ಪ ಕುಲಪತಿಯಾಗಿದ್ದಾಗ ಮಾನಸ ಗಂಗೋತ್ರಿ ಆಡಳಿತಾಧಿಕಾರಿಯಾಗಿ ಹತ್ತು ಹಲವು ಬದಲಾವಣೆಗೆ ಕಾರಣಕರ್ತರಾದರು. ಅದರಲ್ಲಿ ಹೌಸ್ ಕೀಪಿಂಗ್ , ಸಫಾಯಿ ಕರ್ಮಚಾರಿ, ಸೆಕ್ಯೂರಿಟಿ ಸಿಬ್ಬಂದಿಗಳ ಸಮಸ್ಯೆಯನ್ನು ಬಗೆಹರಿಸಿ, ಅವರ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದು ಪ್ರಮುಖವಾದರು. ಪ್ರವೇಶ ಪರೀಕ್ಷೆ, ಅಧ್ಯಾಪಕರು, ಅಧ್ಯಾಪಕೇತರರ, ಮಾನಸ ಗಂಗೋತ್ರಿ ಶಾಲೆಯ ಹಲವು ಸಮಸ್ಯೆಗಳನ್ನು ಕುಲಪತಿ, ಕುಲಸಚಿವರ ಗಮನಕ್ಕೆ ತಂದು ಪರಿಹರಿಸಿದರು.

ವೈಯಕ್ತಿಕ ಜೀವನದಲ್ಲಿ ನೋವು...ನಲಿವು...

ಮಾಜಿ ಸಚಿವ ಡಿ.ಮಂಜುನಾಥ್ ಅವರ ಸಹೋದರನ ಪುತ್ರಿ ಚಂದ್ರಕಲಾ ಅವರೊಂದಿಗೆ ರಾಮಸ್ವಾಮಿ ಅವರ ವಿವಾಹ ನೆರವೇರಿತು. ನಂತರ ಇಬ್ಬರು ಮಕ್ಕಳು ಜನಿಸಿದರು.

ಚಂದ್ರಕಲಾ ಅವರಿಗೆ ಕಿಡ್ನಿ ವಿಫಲವಾಯಿತು. ಕಿಡ್ನಿ ಕಸಿಯನ್ನು ಮಾಡಿಸಿದರು. ಸುಮಾರು ಐದು ವರ್ಷ ಆಸ್ಪತ್ರೆಯಲ್ಲಿದ್ದರು. ಆಗ ರಕ್ತ ಬೇದಾರೆ ವಿದ್ಯಾರ್ಥಿಗಳು, ಹಣ ಬೇಕಾದರೆ ಸಹೋದ್ಯೋಗಿಗಳು ನೆರವಾದರು. ಮೊದಲ ಪುತ್ರಿಗೆ ಆರು, ಎರಡನೇ ಪುತ್ರಿಗೆ ಐದು ವರ್ಷ ಇರುವಾಗ ಅಂದರೆ 2001 ರಲ್ಲಿ ಚಂದ್ರಕಲಾ ನಿಧನರಾದರು. ಸಾಯುವುದಕ್ಕಿಂತ ಮುನ್ನಾ ಪತಿಯ ಕೈಹಿಡಿದು ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮತ್ತೊಂದು ಮದುವೆಯಾಗಬಾರದು. ಮೊದಲ ಪುತ್ರಿಯನ್ನು ಡಾಕ್ಟರ್, ಎರಡನೇ ಪುತ್ರಿಯನ್ನು ಎಂಜಿನಿಯರ್ ಮಾಡಬೇಕು ಎಂದು ಭಾಷೆ ತೆಗೆದುಕೊಂಡರು. ಅದರಂತೆ ರಾಮಸ್ವಾಮಿ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ವೈಯಕ್ತಿಕ ಆಸೆ-ಆಕಾಂಕ್ಷೆ ತ್ಯಾಗ ಮಾಡಿದರು. ಮೊದಲ ಪುತ್ರಿ ಶಿವರಂಜಿನಿ ವೈದ್ಯೆ, ಎರಡನೇ ಪುತ್ರಿ ಲಾವಣ್ಯ ಎಂಜಿನಿಯರ್ ಆಗಿದ್ದಾರೆ.

ಶಿವರಂಜಿನಿಗೆ ಇಲ್ಲಿ ವೈದ್ಯಕೀಯ ಸೀಟು ಸಿಗದಿದ್ದಾಗ ಉಕ್ರೇನ್ ದೇಶಕ್ಕೆ ಕಳುಹಿಸಿ ಓದಿಸಿದರು. ಈಗ ಆಕೆ ಮೈಸೂರಿನ ಜಯದೇವ ಹಾಗೂ ಜಯನಗರ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ. ಲಾವಣ್ಯ ಬೆಂಗಳೂರಿನ ಒರೆಕಾಲ್ ಕಂಪನಿಯಲ್ಲಿ ಎಂಜಿನಿಯರ್ ಕೊನೆಗೆ ಲಲಿತಕಲಾ ಕಾಲೇಜು ಪ್ರಾಂಶುಪಾಲರಾಗಿ ಅಲ್ಲಿ ಕೂಡ ಒಂದಷ್ಟು ಸುಧಾರೆ ಮಾಡಿದರು. ಅಂತಿಮವಾಗಿ ತಾನು ಓದಿದ, ಉಪನ್ಯಾಸಕನಾಗಿ, ಪ್ರವಾಚಕ, ಪ್ರಾಧ್ಯಾಪಕನಾಗಿ ಕೆಲಸ ಮಾಡಿದ ಮಹಾರಾಜ ಕಾಲೇಜಿನ ಪ್ರಾಂಶುಪಾಲರ ಹುದ್ದೆಗೇರಿ ನಿವೃತ್ತರಾದರು.