ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ ಅಡಿಮೇಲಾದ ಟೀಂ ಇಂಡಿಯಾ : 10 ವಿಕೆಟ್‌ ಹೀನಾಯ ಸೋಲು

| Published : Dec 09 2024, 12:47 AM IST / Updated: Dec 09 2024, 05:39 AM IST

ಸಾರಾಂಶ

ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ಭಾರತಕ್ಕೆ ಸೋಲು. ಎರಡೂವರೆ ದಿನವೂ ನಡೆಯದ ಪಂದ್ಯ. 2ನೇ ಇನ್ನಿಂಗ್ಸ್‌ ಭಾರತ 175ಕ್ಕೆ ಆಲೌಟ್‌. 19 ರನ್‌ ಗುರಿ ಸುಲಭದಲ್ಲಿ ಬೆನ್ನತ್ತಿ ಗೆದ್ದ ಆಸೀಸ್‌. 5 ಪಂದ್ಯದ ಸರಣಿ 1-1ರಲ್ಲಿ ಸಮ

ಅಡಿಲೇಡ್‌: ಪರ್ತ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಬಗ್ಗುಬಡಿದಿದ್ದ ಭಾರತ, ಅಡಿಲೇಡ್‌ನಲ್ಲಿ ಅಕ್ಷರಶಃ ಅಡಿಮೇಲಾಗಿದೆ. ಪರ್ತ್‌ ಟೆಸ್ಟ್‌ ಫಲಿತಾಂಶಕ್ಕೆ ಸಂಪೂರ್ಣ ಉಲ್ಟಾ ಎಂಬಂತೆ ಅಡಿಲೇಡ್‌ ಟೆಸ್ಟ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದ ಟೀಂ ಇಂಡಿಯಾ 10 ವಿಕೆಟ್‌ಗಳಿಂದ ಸೋಲನುಭವಿಸಿದೆ. ಇದರೊಂದಿಗೆ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆತಿಥೇಯ ಕಾಂಗರೂ ಪಡೆ 1-1 ಸಮಬಲ ಸಾಧಿಸಿದೆ. 

ಮೊದಲ ಟೆಸ್ಟ್‌ನ ಭರ್ಜರಿ ಗೆಲುವು ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದರೆ, 2ನೇ ಪಂದ್ಯದ ಸೋಲು ತಂಡದ ದೌರ್ಬಲ್ಯಗಳನ್ನು ಹೊರಹಾಕಿದೆ. ಅತ್ತ ಆಸ್ಟ್ರೇಲಿಯಾ ಹಗಲು-ರಾತ್ರಿ ಟೆಸ್ಟ್‌ನಲ್ಲಿ ತನ್ನ ಪರಾಕ್ರಮ ಮುಂದುವರಿಸುವುದರ ಜೊತೆಗೆ, ಉಳಿದ 3 ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ಪರ್ತ್‌ನಲ್ಲಿ ಸಿಕ್ಕಷ್ಟು ಸುಲಭವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.

ನಡೆಯದ ಪವಾಡ: ರೋಹಿತ್‌ ಶರ್ಮಾ ನಾಯಕತ್ವದ ಭಾರತ, ಶನಿವಾರವೇ ಸೋಲಿನ ಸನಿಹಕ್ಕೆ ನೂಕಲ್ಪಟ್ಟಿತ್ತು. ಭಾನುವಾರ ರಿಷಭ್‌ ಪಂತ್‌ ಹಾಗೂ ನಿತೀಶ್‌ ರೆಡ್ಡಿ ಏನಾದರೂ ಪವಾಡ ಮಾಡಬಲ್ಲರು ಎಂಬ ವಿಶ್ವಾಸ ಮಾತ್ರ ತಂಡಕ್ಕಿತ್ತು. ಆದರೆ ಪವಾಡ ನಡೆಯಲಿಲ್ಲ. ಆಸೀಸ್‌ಗೆ ಭಾರತ ಸುಲಭ ತುತ್ತಾಯಿತು.2ನೇ ದಿನದಂತ್ಯಕ್ಕೆ 5 ವಿಕೆಟ್‌ ನಷ್ಟದಲ್ಲಿ 128 ರನ್‌ ಕಲೆಹಾಕಿದ್ದ ತಂಡ ಇನ್ನೂ 29 ರನ್‌ ಹಿನ್ನಡೆಯಲ್ಲಿತ್ತು. 

3ನೇ ದಿನ ಇನ್ನಿಂಗ್ಸ್‌ ಸೋಲು ತಪ್ಪಿಸಿದ್ದು ಮಾತ್ರ ಭಾರತದ ಸಾಧನೆ. ರಿಷಭ್‌ ಪಂತ್‌(28) ದಿನದ ಮೊದಲ ಓವರ್‌ನಲ್ಲೇ ಮಿಚೆಲ್‌ ಸ್ಟಾರ್ಕ್‌ ಎಸೆತದಲ್ಲಿ ಸ್ಮಿತ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಕೇವಲ 2ನೇ ಪಂದ್ಯವಾಡುತ್ತಿರುವ ನಿತೀಶ್‌ ರೆಡ್ಡಿ ಮತ್ತೊಮ್ಮೆ ಭಾರತಕ್ಕೆ ಆಸರೆಯಾದರೂ, ಇತರರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಅಶ್ವಿನ್‌ 9, ಹರ್ಷಿತ್‌ ರಾಣಾ ಶೂನ್ಯಕ್ಕೆ ಔಟಾದರು. 47 ಎಸೆತಗಳಲ್ಲಿ 42 ರನ್‌ ಸಿಡಿಸಿದ ನಿತೀಶ್‌ ಭಾರತದ ಪರ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರು. ಅವರನ್ನು ನಾಯಕ ಪ್ಯಾಟ್‌ ಕಮಿನ್ಸ್‌ ಪೆವಿಲಿಯನ್‌ಗೆ ಅಟ್ಟಿದರು. ಕಮಿನ್ಸ್‌ 5 ವಿಕೆಟ್‌ ಪಡೆದರೆ, ಬೋಲಂಡ್‌ 3, ಮಿಚೆಲ್‌ ಸ್ಟಾರ್ಕ್‌ 2 ವಿಕೆಟ್‌ ಕಬಳಿಸಿದರು.

3.2 ಓವರಲ್ಲೇ ಜಯ: ಆಸೀಸ್‌ಗೆ ಸಿಕ್ಕ ಗುರಿ ಕೇವಲ 19 ರನ್‌. ಇದನ್ನು ತಂಡ ಕೇವಲ 3.2 ಓವರಲ್ಲೇ ಬೆನ್ನತ್ತಿ ಗೆಲುವು ತನ್ನದಾಗಿಸಿಕೊಂಡಿತು. ಮೆಕ್‌ಸ್ವೀನಿ ಔಟಾಗದೆ 10, ಉಸ್ಮಾನ್‌ ಖವಾಜ ಔಟಾಗದೆ 9 ರನ್‌ ಗಳಿಸಿದರು.ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 180ಕ್ಕೆ ಆಲೌಟಾಗಿದ್ದರೆ, ಟ್ರ್ಯಾವಿಸ್‌ ಹೆಡ್‌ ಶತಕದ ನೆರವಿನಿಂದ ಆಸ್ಟ್ರೇಲಿಯಾ ಬರೋಬ್ಬರಿ 337 ರನ್‌ ಕಲೆಹಾಕಿ, 157 ರನ್‌ ಮುನ್ನಡೆ ಪಡೆದಿತ್ತು. ಸ್ಕೋರ್‌: ಭಾರತ ಮೊದಲ ಇನ್ನಿಂಗ್ಸ್‌ 180/10 ಮತ್ತು 2ನೇ ಇನ್ನಿಂಗ್ಸ್‌ 175/10 (ನಿತೀಶ್‌ 42, ರಿಷಭ್‌ 28, ಕಮಿನ್ಸ್‌ 5-57, ಬೋಲಂಡ್‌ 3-51, ಸ್ಟಾರ್ಕ್‌ 2-60), ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 337/10 ಮತ್ತು 2ನೇ ಇನ್ನಿಂಗ್ಸ್‌ 19/0 (ಮೆಕ್‌ಸ್ವೀನಿ 10*, ಉಸ್ಮಾನ್‌ ಖವಾಜ 9*)

ಪಂದ್ಯಶ್ರೇಷ್ಠ: ಟ್ರ್ಯಾವಿಸ್‌ ಹೆಡ್‌

12 ಜಯ: ಡೇ-ನೈಟ್‌ ಟೆಸ್ಟಲ್ಲಿ ಆಸ್ಟ್ರೇಲಿಯಾಗಿಲ್ಲ ಸರಿಸಾಟಿ!

ಪಿಂಕ್‌ ಬಾಲ್‌ ಅಂದರೆ ಹಗಲು-ರಾತ್ರಿ ನಡೆಯುವ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಮತ್ತೊಮ್ಮೆ ಪರಾಕ್ರಮ ಮೆರೆದಿದೆ. ತಂಡ ಈ ವರೆಗೂ 13 ಹಗಲು-ರಾತ್ರಿ ಟೆಸ್ಟ್‌ ಆಡಿದ್ದು, 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಪೈಕಿ ಅಡಿಲೇಡ್‌ನಲ್ಲಿ ಆಡಿರುವ 8 ಪಂದ್ಯಗಳಲ್ಲೂ ತಂಡಕ್ಕೆ ಗೆಲುವು ಲಭಿಸಿದೆ. ಈ ವರ್ಷದ ಆರಂಭದಲ್ಲಿ ಬ್ರಿಸ್ಬೇನ್‌ನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಸೋತಿದ್ದು, ಆಸೀಸ್‌ಗೆ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಎದುರಾದ ಏಕೈಕ ಸೋಲು.

2ನೇ ಸಲ ಪಿಂಕ್‌ ಟೆಸ್ಟಲ್ಲಿ ಭಾರತದ ಪ್ಲಾಫ್‌ ಶೋ!

ಭಾರತ ತಂಡ ಸತತ 2ನೇ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲೂ ಹಗಲು-ರಾತ್ರಿ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಅವಮಾನಕರ ಸೋಲನುಭವಿಸಿದೆ. 2020ರ ಡಿಸೆಂಬರ್‌ನಲ್ಲಿ ಭಾರತ ತಂಡ ಅಡಿಲೇಡ್‌ನಲ್ಲಿ 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗೆ ಆಲೌಟಾಗಿತ್ತು. ಅದರ ಕಹಿ ನೆನಪು ಮರೆಯುವ ಮುನ್ನ, 10 ವಿಕೆಟ್‌ ಸೋಲು ಎದುರಾಗಿದೆ. ಇನ್ನು, 2020ರ ಅಡಿಲೇಡ್‌ ಸೋಲಿನ ಬಳಿಕ ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಟೆಸ್ಟ್‌ ಪಂದ್ಯ ಸೋತಿದೆ.

19ನೇ ಬಾರಿ: ಭಾರತ ಟೆಸ್ಟ್‌ನಲ್ಲಿ 19ನೇ ಬಾರಿ 10 ವಿಕೆಟ್‌ ಸೋಲನುಭವಿಸಿದೆ. ಇದು 2ನೇ ಗರಿಷ್ಠ. ಇಂಗ್ಲೆಂಡ್‌(25) ಅತಿ ಹೆಚ್ಚು ಬಾರಿ ಈ ರೀತಿ ಸೋಲು ಕಂಡಿವೆ.32ನೇ ಸಲ: ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 32ನೇ ಬಾರಿ 10 ವಿಕೆಟ್‌ ಜಯಗಳಿಸಿದೆ. ಇದು ಗರಿಷ್ಠ. ವಿಂಡೀಸ್‌ 28 ಬಾರಿ ಈ ಸಾಧನೆ ಮಾಡಿದೆ. 12ನೇ ಬಾರಿ: ಕಮಿನ್ಸ್‌ 2018ರ ಬಳಿಕ 12ನೇ ಬಾರಿ 5 ವಿಕೆಟ್‌ ಗೊಂಚಲು ಪಡೆದರು. ಇದು ಯಾವುದೇ ಆಟಗಾರನ ಪೈಕಿ ಗರಿಷ್ಠ.02ನೇ ಸೋಲು: ಭಾರತ ಹಗಲು-ರಾತ್ರಿ ಟೆಸ್ಟ್‌ನಲ್ಲಿ 2ನೇ ಸೋಲನುಭವಿಸಿತು. ತಂಡ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದೆ.