ಸಾರಾಂಶ
ವಿಶ್ವ ಚಾಂಪಿಯನ್‌ಶಿಪ್ ಪಂದ್ಯಕ್ಕೆ ಅರ್ಹತೆ ಪಡೆಯಲು ನಡೆಯಲಿರುವ ಕ್ಯಾಂಡಿಡೇಟ್ಸ್ ಟೂರ್ನಿ. ಕೆನಡಾದ ಟೊರಂಟೊ ಆತಿಥ್ಯ. ಭಾರತೀಯರಿಗೆ ಐತಿಹಾಸಿಕ ಟೂರ್ನಿ. ಇದೇ ಮೊದಲ ಬಾರಿಗೆ ದೇಶದ ಐವರು ಚೆಸ್ ಪಟುಗಳು ಕಣಕ್ಕೆ
ಟೊರೊಂಟೊ(ಕೆನಡಾ): 2024ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಆಡಲು ಅರ್ಹತೆಗಾಗಿ ನಡೆಯುವ ಕ್ಯಾಂಡಿಡೇಟ್ಸ್ ಟೂರ್ನಿಯು ಬುಧವಾರದಿಂದ ಇಲ್ಲಿ ಆರಂಭಗೊಳ್ಳಲಿದ್ದು, ಇದೇ ಮೊದಲ ಬಾರಿಗೆ ಭಾರತದಿಂದ ಒಂದಕ್ಕಿಂತ ಹೆಚ್ಚಿನ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.
ಮುಕ್ತ (ಪುರುಷ) ವಿಭಾಗದಲ್ಲಿ ಆರ್.ಪ್ರಜ್ಞಾನಂದ, ಡಿ.ಗುಕೇಶ್, ವಿದಿತ್ ಗುಜರಾತಿ ಸ್ಪರ್ಧಿಸಲಿದ್ದು, ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ, ಆರ್.ವೈಶಾಲಿ ಆಡಲಿದ್ದಾರೆ. ಏ.22ರ ವರೆಗೂ ನಡೆಯಲಿರುವ ಟೂರ್ನಿಯಲ್ಲಿ ತಲಾ 8 ಪುರುಷ, ಮಹಿಳಾ ಚೆಸ್ ಪಟುಗಳು ಸ್ಪರ್ಧಿಸಲಿದ್ದಾರೆ. ಕಳೆದ ವರ್ಷ ನಡೆದ ವಿವಿಧ ಟೂರ್ನಿಗಳಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದ ಆಟಗಾರರಿಗೆ ಈ ಟೂರ್ನಿಯಲ್ಲಿ ಆಡಲು ಅರ್ಹತೆ ಸಿಕ್ಕಿದೆ.
ಪ್ರತಿ ಆಟಗಾರ, ಆಟಗಾರ್ತಿ ಇನ್ನುಳಿದ 7 ಮಂದಿಯ ವಿರುದ್ಧ ತಲಾ 2 ಬಾರಿ ಆಡಲಿದ್ದು, 14 ಸುತ್ತುಗಳ ಮುಕ್ತಾಯಕ್ಕೆ ಅಗ್ರಸ್ಥಾನ ಗಳಿಸುವವರಿಗೆ ವಿಶ್ವ ಚಾಂಪಿಯನ್‌ಶಿಪ್ ಪಂದ್ಯಕ್ಕೆ ಅರ್ಹತೆ ಸಿಗಲಿದೆ.
1950ರಲ್ಲಿ ಆರಂಭಗೊಂಡ ಈ ಟೂರ್ನಿಯಲ್ಲಿ 1991ರಿಂದ 2014 ನಡುವೆ ವಿಶ್ವನಾಥನ್ ಆನಂದ್ ಸ್ಪರ್ಧಿಸಿದ್ದರು. ಈ ಟೂರ್ನಿಯಲ್ಲಿ ಈ ವರೆಗೂ ಆಡಿರುವ ಏಕೈಕ ಭಾರತೀಯ ಆನಂದ್.