3.1 ಓವರಲ್ಲೇ 48 ರನ್‌ ಚೇಸ್‌: ಇಂಗ್ಲೆಂಡ್‌ ಸೂಪರ್‌-8 ಕನಸು ಜೀವಂತ

| Published : Jun 15 2024, 01:08 AM IST / Updated: Jun 15 2024, 05:02 AM IST

ಸಾರಾಂಶ

ಭರಪೂರ ನೆಟ್‌ ರನ್‌ರೇಟ್‌ ಹೆಚ್ಚಿಸಿಕೊಂಡಿರುವ ಇಂಗ್ಲೆಂಡ್‌ ತಂಡ ‘ಬಿ’ ಗುಂಪಿನಿಂದ 2ನೇ ತಂಡವಾಗಿ ಸೂಪರ್‌-8ಕ್ಕೇರುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಒಮಾನ್‌ ಸತತ 4 ಸೋಲು ಕಂಡಿತು.

ಆ್ಯಂಟಿಗಾ: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಗುರಿಯಾಗಿದ್ದ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌, ಶುಕ್ರವಾರ ಮುಂಜಾನೆ ನಡೆದ ಒಮಾನ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 8 ವಿಕೆಟ್‌ ಭರ್ಜರಿ ಜಯಗಳಿಸಿದೆ.

 ಇದರೊಂದಿಗೆ ಭರಪೂರ ನೆಟ್‌ ರನ್‌ರೇಟ್‌ ಹೆಚ್ಚಿಸಿಕೊಂಡಿರುವ ಇಂಗ್ಲೆಂಡ್‌, ‘ಬಿ’ ಗುಂಪಿನಿಂದ 2ನೇ ತಂಡವಾಗಿ ಸೂಪರ್‌-8ಕ್ಕೇರುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಒಮಾನ್‌ ಸತತ 4 ಸೋಲು ಕಂಡಿತು.ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಒಮಾನ್‌ 13.2 ಓವರ್‌ಗಳಲ್ಲಿ ಕೇವಲ 47 ರನ್‌ಗೆ ಸರ್ವಪತನ ಕಂಡಿತು. 

ಶೊಐಬ್‌ ಖಾನ್‌(11) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಸ್ಪಿನ್ನರ್‌ ಆದಿಲ್‌ ರಶೀದ್‌ 4 ಓವರಲ್ಲಿ 11 ರನ್‌ಗೆ 4 ವಿಕೆಟ್‌ ಕಿತ್ತರೆ, ಮಾರ್ಕ್‌ ವುಡ್‌ ಹಾಗೂ ಜೋಫ್ರಾ ಆರ್ಚರ್‌ ತಲಾ 3 ವಿಕೆಟ್‌ ಪಡೆದರು.ನೆಟ್‌ ರನ್‌ರೇಟ್ ಹೆಚ್ಚಿಸಲು ಸಿಕ್ಕ ಸುವರ್ಣಾವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಇಂಗ್ಲೆಂಡ್‌, ಸುಲಭ ಗುರಿಯನ್ನು 2 ವಿಕೆಟ್‌ ಕಳೆದುಕೊಂಡು ಕೇವಲ 3.1 ಓವರಲ್ಲೇ ಬೆನ್ನತ್ತಿ ಜಯಗಳಿಸಿತು. ಜೋಸ್‌ ಬಟ್ಲರ್‌ 8 ಎಸೆತಗಳಲ್ಲಿ ಔಟಾಗದೆ 24 ರನ್‌ ಗಳಿಸಿದರು.

ಸ್ಕೋರ್‌: ಒಮಾನ್‌ 13.2 ಓವರಲ್ಲಿ 47/10 (ಶೊಐಬ್‌ 11, ಆದಿಲ್‌ 4-11, ವುಡ್‌ 3-12, ಆರ್ಚರ್‌ 3-12), ಇಂಗ್ಲೆಂಡ್‌ 3.1 ಓವರಲ್ಲಿ 50/2 (ಬಟ್ಲರ್ 24*, ಕಲೀಮುಲ್ಲಾಹ್‌ 1-10) ಪಂದ್ಯಶ್ರೇಷ್ಠ: ಆದಿಲ್‌ ರಶೀದ್‌101 ಎಸೆತ: ಇಂಗ್ಲೆಂಡ್‌ 101 ಎಸೆತ ಬಾಕಿಯಿಟ್ಟು ಗೆಲುವು ಸಾಧಿಸಿತು. ಇದು ಟಿ20 ವಿಶ್ವಕಪ್‌ನಲ್ಲೇ ಗರಿಷ್ಠ. 2014ರಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಶ್ರೀಲಂಕಾ 90 ಎಸೆತ ಬಾಕಿ ಉಳಿಸಿ ಗೆದ್ದಿದ್ದು ಈ ವರೆಗಿನ ದಾಖಲೆ.

ಇಂದು ನಮೀಬಿಯಾ ಸವಾಲು: ಗೆದ್ದರಷ್ಟೇ ಸೂಪರ್‌-8 ಚಾನ್ಸ್‌

ಇಂಗ್ಲೆಂಡ್‌ ತಂಡ ಶನಿವಾರ ಗುಂಪು ಹಂತದ ಕೊನೆ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಸೆಣಸಲಿದೆ. ತಂಡ ಸದ್ಯ 3 ಪಂದ್ಯದಲ್ಲಿ 3 ಅಂಕ ಸಂಪಾದಿಸಿದ್ದು, ನಮೀಬಿಯಾ ವಿರುದ್ಧ ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕಿದೆ. ಆದರೆ ತಂಡದ ಸೂಪರ್‌-8 ಭವಿಷ್ಯ ಭಾನುವಾರದ ಆಸ್ಟ್ರೇಲಿಯಾ-ಸ್ಕಾಟ್ಲೆಂಡ್‌ ಪಂದ್ಯದ ಮೂಲಕ ನಿರ್ಧಾರವಾಗಲಿದೆ. ಆಸ್ಟ್ರೇಲಿಯಾ(6 ಅಂಕ) ಈಗಾಗಲೇ ಸೂಪರ್‌-8ಕ್ಕೇರಿದ್ದು, ಸ್ಕಾಟ್ಲೆಂಡ್‌(5 ಅಂಕ) ಕೂಡಾ ರೇಸ್‌ನಲ್ಲಿದೆ. ಆಸೀಸ್‌ ವಿರುದ್ಧ ಸ್ಕಾಟ್ಲೆಂಡ್‌ ಸೋತು, ನಮೀಬಿಯಾ ವಿರುದ್ಧ ಇಂಗ್ಲೆಂಡ್‌ ಗೆದ್ದರಷ್ಟೇ ತಂಡ ಸೂಪರ್‌-8ಕ್ಕೇರಲಿದೆ.

ಇನ್ನು, ಶನಿವಾರದ ಮತ್ತೆರಡು ಪಂದ್ಯಗಳಲ್ಲಿ ನೇಪಾಳ ಹಾಗೂ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ಹಾಗೂ ಉಗಾಂಡ ತಂಡಗಳು ಸೆಣಸಲಿವೆ. ನೇಪಾಳ-ದ.ಆಫ್ರಿಕಾ ಪಂದ್ಯ: ಬೆಳಗ್ಗೆ 5ಕ್ಕೆನ್ಯೂಜಿಲೆಂಡ್‌-ಉಗಾಂಡ ಪಂದ್ಯ: ಬೆಳಗ್ಗೆ 6ಕ್ಕೆಇಂಗ್ಲೆಂಡ್‌-ನಮೀಬಿಯಾ ಪಂದ್ಯ: ರಾತ್ರಿ 10.30ಕ್ಕೆನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.