ಸಾರಾಂಶ
ಟ್ರಿನಿಡಾಡ್: ವೇಗಿ ಫಜಲ್‌ಹಕ್ ಫಾರೂಖಿ ಮಾರಕ ದಾಳಿ ನೆರವಿನಿಂದ ಪಪುವಾ ನ್ಯೂ ಗಿನಿ ವಿರುದ್ಧ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ ಅಫ್ಘಾನಿಸ್ತಾನ, ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿ ಸೂಪರ್-8ಕ್ಕೆ ಪ್ರವೇಶ ಪಡೆದಿದೆ.
ಇದರೊಂದಿಗೆ ನ್ಯೂಜಿಲೆಂಡ್ ಅಧಿಕೃತವಾಗಿ ಟೂರ್ನಿಯಿಂದ ಹೊರಬಿತ್ತು. ಆಫ್ಘನ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ 6 ಅಂಕದೊಂದಿಗೆ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದ್ದು, ಪಪುವಾ ನ್ಯೂ ಗಿನಿ ಸತತ 3ನೇ ಸೋಲನುಭವಿಸಿತು.ಮೊದಲು ಬ್ಯಾಟ್ ಮಾಡಿದ ಪಪುವಾ ತಂಡ 19.5 ಓವರ್‌ಗಳಲ್ಲಿ 95 ರನ್‌ಗೆ ಗಂಟುಮೂಟೆ ಕಟ್ಟಿತು.
ತಂಡದ ಯಾವ ಬ್ಯಾಟರ್‌ಗೂ ಆಫ್ಘನ್ ವೇಗಿಗಳ ದಾಳಿ ಮುಂದೆ ಪ್ರತಿರೋಧ ತೋರಲು ಸಾಧ್ಯವಾಗಲಿಲ್ಲ. ಫಾರೂಖಿ(16 ರನ್‌ಗೆ 3 ವಿಕೆಟ್) ಸತತ 3ನೇ ಪಂದ್ಯದಲ್ಲೂ 3+ ಕಿತ್ತರು. ಮೊದಲ ಪಂದ್ಯದಲ್ಲಿ 5, 2ನೇ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿದ್ದರು. ಇನ್ನು ನವೀನ್‌ಗೆ 2 ವಿಕೆಟ್ ಲಭಿಸಿತು.ಸುಲಭ ಗುರಿ ಬೆನ್ನತ್ತಿದ ಆಫ್ಘನ್, 15.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಗಳಿಸಿತು.
22 ರನ್‌ಗೆ ಗಳಿಸುವಷ್ಟರಲ್ಲೇ ಇಬ್ರಾಹಿಂ ಜದ್ರಾನ್(11) ಹಾಗೂ ರಹ್ಮಾನುಲ್ಲಾ ಗುರ್ಬಾಜ್(00) ವಿಕೆಟ್ ಕಳೆದುಕೊಂಡ ತಂಡಕ್ಕೆ ಗುಲ್ಬದಿನ್ ನೈಬ್ ಆಸರೆಯಾದರು. ಅವರು 36 ಎಸೆತಗಳಲ್ಲಿ ಔಟಾಗದೆ 49 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿದರು.ಸ್ಕೋರ್: ಪಪುವಾ 19.5 ಓವರಲ್ಲಿ 95/10 (ಕಿಪ್ಲಿನ್ 27, ಫಾರೂಖಿ 3-16, ನವೀನ್ 2-4), ಅಫ್ಘಾನಿಸ್ತಾನ 15.1 ಓವರಲ್ಲಿ 101/3 (ಗುಲ್ಬದಿನ್ 49*, ಸೆಮೊ 1-16) ಪಂದ್ಯಶ್ರೇಷ್ಠ: ಫಜಲ್‌ಹಕ್ ಫಾರೂಖಿ
ಕಿವೀಸ್ ಹೊರಬಿದ್ದಿದ್ದು ಹೇಗೆ?
2021ರ ರನ್ನರ್-ಅಪ್ ಕಿವೀಸ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಅಫ್ಘಾನಿಸ್ತಾನ, ವೆಸ್ಟ್‌ಇಂಡೀಸ್ ವಿರುದ್ಧ ಸೋತಿತ್ತು. ತಂಡಕ್ಕಿನ್ನು ಟೂರ್ನಿಯಲ್ಲಿ 2 ಪಂದ್ಯ ಇದ್ದು, ಎರಡರಲ್ಲಿ ಗೆದ್ದರೂ ಕೇವಲ 4 ಅಂಕ ಆಗುತ್ತದೆ. ಆದರೆ ವಿಂಡೀಸ್ ಹಾಗೂ ಆಫ್ಘನ್ ಈಗಾಗಲೇ ಹ್ಯಾಟ್ರಿಕ್ ಗೆಲುವಿನೊದಿಗೆ 6 ಅಂಕ ಸಂಪಾದಿಸಿದ್ದರಿಂದ ಈ ಎರಡು ತಂಡಗಳೂ ‘ಸಿ’ ಗುಂಪಿನಿಂದ ಸೂಪರ್-8ಕ್ಕೇರಿವೆ. ಹೀಗಾಗಿ ಕಿವೀಸ್ ಹೊರಬಿತ್ತು.