ಸಾರಾಂಶ
ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಕ್ರಿಕೆಟ್ ಸರಣಿಗೆ ಭಾನುವಾರ ಚಾಲನೆ ಸಿಗಲಿದ್ದು, 3 ಪಂದ್ಯಗಳ ಏಕದಿನ ಸರಣಿಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಈ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಹಾಗೂ ಟಿ20 ಸರಣಿ ಸೋತಿದ್ದ ಹರ್ಮನ್‌ಪ್ರೀತ್ ಕೌರ್ ಬಳಗ, ಇತ್ತೀಚೆಗಷ್ಟೇ ಟಿ20 ಸರಣಿಯಲ್ಲಿ ಬಾಂಗ್ಲಾದೇಶವನ್ನು ಅವರದೇ ತವರಿನಲ್ಲಿ 5-0 ಅಂತರದಲ್ಲಿ ಸೋಲಿಸಿತ್ತು.
ಈಗ ತವರಿನಲ್ಲೇ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಗುರಿ ಇಟ್ಟುಕೊಂಡಿದೆ. ಹರ್ಮನ್ ಜೊತೆ ಸ್ಮೃತಿ ಮಂಧನಾ, ಶಫಾಲಿ ವರ್ಮಾ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಸರಣಿಯ ಇನ್ನೆರಡು ಪಂದ್ಯಗಳು ಜು.19 ಹಾಗೂ 23ಕ್ಕೆ ನಡೆಯಲಿವೆ. ಬಳಿಕ ಉಭಯ ತಂಡಗಳ ನಡುವೆ ಚೆನ್ನೈ ಕ್ರೀಡಾಂಗಣದಲ್ಲಿ 3 ಟಿ20, ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ಒಲಿಂಪಿಕ್ಸ್ ಅರ್ಹತಾ ಆರ್ಚರಿ ಕೂಟ: ಭಾರತಕ್ಕೆ ಸೋಲು
ಅಂಟಾಲ್ಯ(ಟರ್ಕಿ): ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಅರ್ಹತಾ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷರ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನುಭವಿಸಿದೆ. ಮಹಿಳಾ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿತ್ತು. ಶನಿವಾರ ವಿಶ್ವ ನಂ.2 ಪುರುಷರ ತಂಡ ಅಂತಿಮ 8ರ ಘಟ್ಟದ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ 4-5 ಅಂತರದಲ್ಲಿ ಸೋಲನುಭವಿಸಿತು.
ಹೀಗಾಗಿ ಸದ್ಯ ಪುರುಷ ಹಾಗೂ ಮಹಿಳಾ ತಂಡಗಳೂ ಕೊನೆಯ ಅರ್ಹತಾ ಕೂಟದಲ್ಲೂ ಒಲಿಂಪಿಕ್ಸ್ ಕೋಟಾ ಗೆಲ್ಲಲು ವಿಫಲವಾಗಿದ್ದು, ಇನ್ನು ರ್‍ಯಾಂಕಿಂಗ್ ಆಧಾರದ ಮೇಲೆ ಒಲಿಂಪಿಕ್ಸ್‌ಗೇರುವ ನಿರೀಕ್ಷೆಯಲ್ಲಿವೆ. ಮಹಿಳಾ ತಂಡ ಶುಕ್ರವಾರ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಉಕ್ರೇನ್ ವಿರುದ್ಧ ಸೋತಿತ್ತು.