ಬ್ಯಾಡ್ಮಿಂಟನ್‌ ಏಷ್ಯಾ: ಐತಿಹಾಸಿಕ ಪದಕ ಖಚಿತಪಡಿಸಿಕೊಂಡ ಭಾರತ ವನಿತಾ ತಂಡ

| Published : Feb 17 2024, 01:16 AM IST

ಬ್ಯಾಡ್ಮಿಂಟನ್‌ ಏಷ್ಯಾ: ಐತಿಹಾಸಿಕ ಪದಕ ಖಚಿತಪಡಿಸಿಕೊಂಡ ಭಾರತ ವನಿತಾ ತಂಡ
Share this Article
  • FB
  • TW
  • Linkdin
  • Email

ಸಾರಾಂಶ

ಸೆಮಿಫೈನಲ್‌ ಪ್ರವೇಶಿಸಿ ಪದಕ ಖಚಿತಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ಪುರುಷರ ತಂಡಕ್ಕೆ ಆಘಾತ ಎದುರಾಯಿತು. ಕ್ವಾರ್ಟರ್‌ ಫೈನಲ್‌ನಲ್ಲಿ ಚೀನಾ ವಿರುದ್ಧ 2-3ರಿಂದ ಸೋತು ಅಭಿಯಾನ ಕೊನೆಗೊಳಿಸಿತು.

ಶಾಹ್‌ ಆಲಮ್‌(ಮಲೇಷ್ಯಾ): ಬ್ಯಾಡ್ಮಿಂಟನ್‌ ಏಷ್ಯಾ ತಂಡ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮಹಿಳಾ ತಂಡ ಚೊಚ್ಚಲ ಪದಕ ಖಚಿತಪಡಿಸಿಕೊಂಡಿದೆ. ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ಹಾಂಕಾಂಗ್‌ ತಂಡವನ್ನು 3-0 ಅಂತರದಿಂದ ಬಗ್ಗು ಬಡಿದ ಭಾರತ ವನಿತೆಯರು ಉಪಾಂತ್ಯಕ್ಕೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡಿದ್ದಾರೆ. ಸೆಮಿಫೈನಲ್‌ನಲ್ಲಿ ಭಾರತಕ್ಕೆ ಜಪಾನ್‌ ಸವಾಲು ಎದುರಾಗಲಿದೆ. ಆದರೆ ಪುರುಷರ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಚೀನಾ ವಿರುದ್ಧ 2-3ರಿಂದ ಸೋತು ಅಭಿಯಾನ ಕೊನೆಗೊಳಿಸಿತು.ಗಾಯದ ಸಮಸ್ಯೆಯಿಂದಾಗಿ ದೀರ್ಘ ಕಾಲ ಅಂಕಣದಿಂದ ದೂರವಿದ್ದ ತಾರಾ ಆಟಗಾರ್ತಿ ಪಿ.ವಿ.ಸಿಂಧು ಶುಕ್ರವಾರ ಮಹಿಳಾ ಸಿಂಗಲ್ಸ್‌ ಪಂದ್ಯದಲ್ಲಿ ಲೊ ಸಿನ್‌ ಯಾನ್‌ ವಿರುದ್ಧ 21-7, 16-21, 21-12 ಗೇಮ್‌ಗಳಲ್ಲಿ ಜಯಭೇರಿ ಬಾರಿಸಿದರು. ಬಳಿಕ ನಡೆದ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೋ-ಕರ್ನಾಟಕದ ಅಶ್ವಿನಿ ಪೊನ್ನಪ್ಪ ಜೋಡಿ ವಿಶ್ವ ನಂ.18 ಯೂಂಗ್‌ ಟಿಂಗ್‌- ಯೂಂಗ್‌ ಲಾಮ್‌ ಜೋಡಿಯನ್ನು 21-10, 21-14ರಿಂದ ಪರಾಭವಗೊಳಿಸಿತು. 2-0 ಮುನ್ನಡೆಯೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಭಾರತ, 3ನೇ ಪಂದ್ಯವನ್ನೂ ತನ್ನದಾಗಿಸಿಕೊಂಡಿತು.ಸಿಂಗಲ್ಸ್‌ನಲ್ಲಿ ಅಶ್ಮಿತಾ ಚಾಲಿಹಾ ಅವರು ಯೂಂಗ್‌ ಯಿ ಅವರನ್ನು 21-12, 21-13ರ ಅಂತರದಿಂದ ಸೋಲಿಸುವ ಮೂಲಕ ಭಾರತಕ್ಕೆ ಪದಕ ಖಚಿತಪಡಿಸಿದರು.ಪುರುಷರಿಗೆ ಶಾಕ್‌: ಇದೇ ವೇಳೆ ಪುರುಷರ ತಂಡ ಅಂತಿಮ 8ರ ಘಟ್ಟದಲ್ಲೇ ಸೋತು ಹೊರಬಿತ್ತು. ಸಿಂಗಲ್ಸ್‌ನಲ್ಲಿ ಎಚ್‌.ಎಸ್‌.ಪ್ರಣಯ್‌ ಸೋತು ಭಾರತದ ಹಿನ್ನಡೆಗೆ ಕಾರಣರಾದರೆ, ಡಬಲ್ಸ್‌ನಲ್ಲಿ ವಿಶ್ವ ನಂ.1 ಜೋಡಿ ಸಾತ್ವಿಕ್‌-ಚಿರಾಗ್‌ ಗೆಲುವು ಸಾಧಿಸಿದ ಸಮಬಲಗೊಳಿಸಿತು. ಬಳಿಕ 3ನೇ ಪಂದ್ಯದಲ್ಲಿ ಲಕ್ಷ್ಯ ಸೇನ್‌ ಜಯಭೇರಿ ಬಾರಿಸಿದರು. ಆದರೆ ಕೊನೆ 2 ಪಂದ್ಯಗಳಲ್ಲಿ ಭಾರತ ಸೋಲನುಭವಿಸಿತು. ಡಬಲ್ಸ್‌ನಲ್ಲಿ ಅರ್ಜುನ್-ಧೃವ್‌ ಕಪಿಲಾ, ನಿರ್ಣಾಯಕ ಸಿಂಗಲ್ಸ್‌ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್‌ ಸೋತರು.