17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಟಾಪ್‌-10 ಪದಕ ಭರವಸೆ ಯಾರು ಗೊತ್ತಾ?

| Published : Aug 26 2024, 01:33 AM IST / Updated: Aug 26 2024, 04:10 AM IST

ಸಾರಾಂಶ

ಪ್ಯಾರಿಸ್‌ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಲು ಭಾರತ ಕಾತರ. ಒಟ್ಟು 84 ಮಂದಿ ಸ್ಪರ್ಧೆ, 25 ಪದಕ ಗುರಿ.10 ಕ್ರೀಡಾಪಟುಗಳ ಮೇಲೆ ಹೆಚ್ಚಿನ ನಿರೀಕ್ಷೆ. ಅವನಿ, ಸುಹಾಸ್‌ ಸೇರಿ ಹಲವರ ಮೇಲಿದೆ ಬಂಗಾರ ಗೆಲ್ಲುವ ಭರವಸೆ

ಪ್ಯಾರಿಸ್: 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್‌ಗೆ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ ಸಜ್ಜಾಗುತ್ತಿದ್ದು, ಬಹುನಿರೀಕ್ಷಿತ ಕ್ರೀಡಾಕೂಟ ಆ.28ರಿಂದ ಆರಂಭಗೊಳ್ಳಲಿದೆ. ವಿಶ್ವದೆಲ್ಲೆಡೆಯ 4400ಕ್ಕೂ ಹೆಚ್ಚು ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. 

ಭಾರತದಿಂದ ಸಾರ್ವಕಾಲಿಕ ಗರಿಷ್ಠ 84 ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗೆದ್ದಿದ್ದ ಸಾರ್ವಕಾಲಿಕ ಶ್ರೇಷ್ಠ 19 ಪದಕಗಳ ದಾಖಲೆ ಮುರಿಯವ ಕಾತರದಲ್ಲಿದ್ದಾರೆ. ಈ ಬಾರಿ ಕ್ರೀಡಾಕೂಟದಲ್ಲಿ ಭಾರತ 25+ ಪದಕಗಳ ನಿರೀಕ್ಷೆ ಇಟ್ಟುಕೊಂಡಿದೆ. ಅದರಲ್ಲೂ ಪದಕ ಫೇವರಿಟ್‌ ಎನಿಸಿಕೊಂಡಿರುವ ಅಗ್ರ-10 ಕ್ರೀಡಾಪಟುಗಳಿದ್ದಾರೆ. ಅವರ ಪರಿಚಯ ಇಲ್ಲಿದೆ.

ಅವನಿ ಲೇಖರ(ಶೂಟಿಂಗ್‌)

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಡಬಲ್‌ ಪದಕ ಸಾಧನೆ ಮಾಡಿದ್ದ ತಾರಾ ಶೂಟರ್‌ ಅವನಿ ಲೇಖರ ಈ ಬಾರಿಯೂ ಚಿನ್ನದ ನಿರೀಕ್ಷೆಯಲ್ಲಿದ್ದಾರೆ. ರಾಜಸ್ಥಾನದ ಅವನಿ ಟೋಕಿಯೋದಲ್ಲಿ 10 ಮೀ. ಏರ್‌ ರೈಫಲ್‌ನಲ್ಲಿ ಚಿನ್ನ ಹಾಗೂ 50 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು. 2023ರ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಬಂಗಾರದ ಸಾಧನೆ ಮಾಡಿರುವ ಅವನಿ ಪ್ಯಾರಿಸ್‌ ಗೇಮ್ಸ್‌ನಲ್ಲೂ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.

ಸುಮಿತ್‌ ಅಂತಿಲ್‌(ಜಾವೆಲಿನ್‌ ಎಸೆತ)

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದ ಭಾರತದ ತಾರಾ ಜಾವೆಲಿನ್‌ ಎಸೆತಗಾರ ಸುಮಿತ್‌ ಅಂತಿಮ್‌, ಸತತ 2ನೇ ಬಾರಿಯೂ ಬಂಗಾರ ಗೆಲ್ಲುವ ಕಾತರದಲ್ಲಿದ್ದಾರೆ. ಎಫ್‌64 ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಸುಮಿತ್‌ ಸತತ 2 ಬಾರಿ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ. 2022ರ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲೂ ಚಿನ್ನ ಗೆದ್ದಿರುವ 26 ವರ್ಷದ ಸುಮಿತ್‌ ಈ ಬಾರಿ ಭಾರತದ ಬಂಗಾರ ಭರವಸೆ.

ಕೃಷ್ಣ ನಗರ್‌(ಬ್ಯಾಡ್ಮಿಂಟನ್‌)

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ತಾರಾ ಶಟ್ಲರ್‌ ಕೃಷ್ಣ ನಗರ್‌, ಪ್ಯಾರಾಲಿಂಪಿಕ್ಸ್‌ನಲ್ಲಿ ಈ ಸಾಧನೆ ಮಾಡಿದ ಭಾರತದ 2ನೇ ಶಟ್ಲರ್‌ ಎನಿಸಿಕೊಂಡಿದ್ದರು. ಅವರು ಈ ಬಾರಿಯೂ ಸ್ಪರ್ಧಿಸುತ್ತಿದ್ದು, ಮತ್ತೊಂದು ಚಿನ್ನದ ಕಾತರದಲ್ಲಿದ್ದಾರೆ. ಈ ವರ್ಷ ಚಿನ್ನ ಸೇರಿ ಒಟ್ಟಾರೆ 4 ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಸಾಧನೆ ಮಾಡಿದ್ದಾರೆ. ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲೂ 3 ಬಾರಿ ಪದಕ ಗೆದ್ದಿರುವ ಕೃಷ್ಣ ಪ್ಯಾರಿಸ್‌ನಲ್ಲಿ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ.

ಶೀತಲ್‌ ದೇವಿ(ಆರ್ಚರಿ)

2 ಕೈಗಳಿಲ್ಲದಿದ್ದರೂ ಕಳೆದ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ 2 ಚಿನ್ನ, 1 ಬೆಳ್ಳಿ ಪದಕ ಗೆದ್ದು ಎಲ್ಲರ ಹುಬ್ಬೇರಿಸಿದ್ದ ಪ್ಯಾರಾ ಆರ್ಚರಿ ಪಟು ಶೀತಲ್‌ ದೇವಿ ಮೊದಲ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಅವರು ಈ ಬಾರಿ ಭಾರತದ ಪರ ಪದಕ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದಾರೆ. ಕಾಶ್ಮೀರದ 17 ವರ್ಷದ ಶೀತಲ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಿ ಎನಿಸಿಕೊಂಡಿದ್ದು, ತಮ್ಮ ಅಭೂತಪೂರ್ವ ಪ್ರದರ್ಶನ ಮುಂದುವರಿಸುವ ಕಾತರದಲ್ಲಿದ್ದಾರೆ.

ಮರಿಯಪ್ಪನ್‌ ತಂಗವೇಲು(ಹೈಜಂಪ್‌)

ಭಾರತದ ಪ್ಯಾರಾ ಹೈಜಂಪ್‌ ಪಟು ಮರಿಯಪ್ಪನ್‌ ತಂಗವೇಲು ಕಳೆದ 2 ಪ್ಯಾರಾಲಿಂಪಿಕ್ಸ್‌ಗಳಲ್ಲೂ ಪದಕ ಗೆದ್ದಿದ್ದಾರೆ. 2016ರಲ್ಲಿ ಚಿನ್ನ ಗೆದ್ದಿದ್ದ ಅವರು, ಟೋಕಿಯೋದಲ್ಲಿ ಬೆಳ್ಳಿ ಜಯಿಸಿದ್ದರು. ವಿಶ್ವ ಚಾಂಪಿಯನ್‌ಶಿಪ್‌ ಚಿನ್ನ, ಏಷ್ಯನ್‌ ಗೇಮ್ಸ್‌ ಬೆಳ್ಳಿ ಪದಕ ಗೆದ್ದಿರುವ ತಮಿಳುನಾಡಿನ 29 ವರ್ಷದ ಮರಿಯಪ್ಪನ್‌ ಮೇಲೆ ಭಾರತ ಈ ಬಾರಿ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ. ಅವರು ಹ್ಯಾಟ್ರಿಕ್‌ ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದ ಅಪರೂಪದ ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಮಾನ್ಶಿ ನರ್ವಾಲ್‌(ಶೂಟಿಂಗ್‌)

ಕಳೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಶೂಟರ್‌ಗಳಲ್ಲಿ ಓರ್ವರು ಮಾನ್ಶಿ ನರ್ವಾಲ್‌. 2021ರ ಪ್ಯಾರಾ ಶೂಟಿಂಗ್‌ ವಿಶ್ವಕಪ್‌ನಲ್ಲಿ ಪಿ4 ಮಿಶ್ರ 50 ಮೀ. ಪಿಸ್ತೂಲ್‌ ಎಸ್‌ಎಚ್‌1 ವಿಭಾಗದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದರು. 2022ರ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರೂ, ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಸುಹಾಸ್‌ ಯತಿರಾಜ್‌(ಬ್ಯಾಡ್ಮಿಂಟನ್‌)

ಕರ್ನಾಟಕದ, ಸದ್ಯ ಉತ್ತರ ಪ್ರದೇಶದಲ್ಲಿ ಐಎಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ಯಾರಾ ಬ್ಯಾಡ್ಮಿಂಟನ್‌ ಪಟು ಸುಹಾಸ್‌ ಯತಿರಾಜ್‌ ಸತತ 2ನೇ ಬಾರಿ ಪ್ಯಾರಾಲಿಂಪಿಕ್ಸ್‌ ಪದಕ ಗೆಲ್ಲುವ ಕಾತರದಲ್ಲಿದ್ದಾರೆ. ಟೋಕಿಯೋ ಗೇಮ್ಸ್‌ನಲ್ಲಿ ಪುರುಷರ ಸಿಂಗಲ್ಸ್‌ ಎಸ್‌ಎಲ್‌4 ವಿಭಾಗದಲ್ಲಿ ಸುಹಾಸ್‌ ಬೆಳ್ಳಿ ಜಯಿಸಿದ್ದರು. ವಿಶ್ವ ಚಾಂಪಿಯನ್‌ಶಿಪ್‌, ಏಷ್ಯನ್‌ ಚಾಂಪಿಯನ್‌ಶಿಪ್‌, ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಹಿರಿಮೆ ಸುಹಾಸ್‌ ಅವರದ್ದು.

ಮಾನಸಿ ಜೋಶಿ(ಬ್ಯಾಡ್ಮಿಂಟನ್‌)

2019ರಲ್ಲಿ ಚಿನ್ನದ ಪದಕ ಸೇರಿ ಈ ವರೆಗೂ 7 ಬಾರಿ ವಿಶ್ವ ಚಾಂಪಿಯನ್‌ಶಿಪನಲ್ಲಿ ಪದಕ ಸಾಧನೆ ಮಾಡಿದ ಭಾರತದ ಪ್ಯಾರಾ ಶಟ್ಲರ್‌ ಮಾನಸಿ ಜೋಶಿ, ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. 35 ವರ್ಷದ ಅನುಭವಿ ಮಹಿಳಾ ಶಟ್ಲರ್‌ ಜೋಶಿ, ಏಷ್ಯನ್‌ ಗೇಮ್ಸ್‌ನಲ್ಲಿ 3, ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ 1 ಪದಕ ಗೆದ್ದಿದ್ದಾರೆ. ಈ ಸಲ ಚೊಚ್ಚಲ ಪ್ಯಾರಾಲಿಂಪಿಕ್ಸ್‌ ಪದಕ ಗೆಲ್ಲುವ ಕಾತರದಲ್ಲಿದ್ದಾರೆ.

ನಿಶಾದ್‌ ಕುಮಾರ್‌(ಹೈ ಜಂಪ್‌)

ಟೋಕಿಯೋ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಐವರಲ್ಲಿ ಒಬ್ಬರು ನಿಶಾದ್‌ ಕುಮಾರ್‌. ಪುರುಷರ ಟಿ47 ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದರು. 2023, 2024ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸತತ 2 ಬಾರಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ 2ನೇ ಬಾರಿ ಪದಕ ಗೆಲ್ಲುವ ಕಾತರದಲ್ಲಿದ್ದಾರೆ.

ಮನೋಜ್ ಸರ್ಕಾರ್‌(ಬ್ಯಾಡ್ಮಿಂಟನ್‌)

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಮನೋಜ್‌ ಸರ್ಕಾರ್‌ ಕಂಚಿನ ಪದಕ ಜಯಿಸಿದ್ದರು. ಈ ಬಾರಿಯೂ ಪೋಡಿಯಂ ಏರುವ ಕಾತರದಲ್ಲಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 3 ಚಿನ್ನ ಸೇರಿ ಬರೋಬ್ಬರಿ 10 ಪದಕ ಸಾಧನೆ ಮಾಡಿದ್ದಾರೆ. 34 ವರ್ಷದ ಮನೋಜ್‌ ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಸೇರಿ 3 ಪದಕ, ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಸೇರಿ 2 ಪದಕ ಗೆದ್ದಿದ್ದಾರೆ.