ಸಾರಾಂಶ
ವಿಶಾಖಪಟ್ಟಣಂ: ಪ್ರೊ ಕಬಡ್ಡಿ 12ನೇ ಆವೃತ್ತಿಯಲ್ಲಿ 2ನೇ ಬಾರಿಗೆ ಪಂದ್ಯವೊಂದರ ಫಲಿತಾಂಶ ಗೋಲ್ಡನ್ ರೈಡ್‌ನಲ್ಲಿ ನಿರ್ಧಾರಗೊಂಡಿದೆ. ಮಂಗಳವಾರ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್, ಗೋಲ್ಡನ್ ರೈಡ್‌ನಲ್ಲಿ ಜಯಿಸಿ, ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿತು.
ನಿಗದಿತ 40 ನಿಮಿಷಗಳ ಆಟ ಮುಗಿದಾಗ ಉಭಯ ತಂಡಗಳು 30-30 ಅಂಕಗಳಲ್ಲಿ ಸಮಬಲ ಸಾಧಿಸಿದವು. ಆಗ ಟೈ ಬ್ರೇಕರ್ ಮೊರೆ ಹೋಗಲಾಯಿತು. ಟೈ ಬ್ರೇಕರ್‌ನಲ್ಲಿ ಎರಡೂ ತಂಡಗಳು ತಲಾ 5 ರೈಡ್ ನಡೆಸಿ 5-5ರಲ್ಲಿ ಸಮಬಲ ಸಾಧಿಸಿದಾಗ, ಫಲಿತಾಂಶಕ್ಕಾಗಿ ಗೋಲ್ಡನ್ ರೈಡ್ ನಡೆಸಲಾಯಿತು. ಅದರಲ್ಲಿ ಜೈಪುರ ಜಯಿಸಿತು.
ಏನಿದು ಗೋಲ್ಡನ್ ರೈಡ್?
ಪಂದ್ಯ ಟೈ ಆದಾಗ ತಲಾ 5 ರೈಡ್‌ಗಳ ಟೈ ಬ್ರೇಕರ್ ನಡೆಸಲಾಗುತ್ತದೆ. ಅದೂ ಟೈಗೊಂಡರೆ ಆಗ ಗೋಲ್ಡನ್ ರೈಡ್ ಮೊರೆ ಹೋಗಲಾಗುತ್ತೆ. ಗೋಲ್ಡನ್ ರೈಡ್‌ನಲ್ಲಿ ಟಾಸ್ ಗೆಲ್ಲುವ ತಂಡ ಮೊದಲು ರೈಡ್ ಮಾಡುವ ಅವಕಾಶ ಪಡೆಯಲಿದೆ. ಆ ರೈಡ್‌ನಲ್ಲಿ ಅಂಕ ಗಳಿಸಿದರೆ ಪಂದ್ಯ ಗೆದ್ದಂತೆ. ಒಂದು ವೇಳೆ ರೈಡರ್ ಅಂಕ ಗಳಿಸದಿದ್ದರೆ ಅಥವಾ ಔಟಾದರೆ ಎದುರಾಳಿ ತಂಡ ಗೆಲ್ಲಲಿದೆ.--
ಡೆಲ್ಲಿಗೆ ಜಯ
ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ 45-34ರಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯಿಸಿತು. ಸತತ 4ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು.