ಕ್ರೀಡಾ ಆಡಳಿತ ಮಸೂದೆ ಮೂಲಕ ಬಿಸಿಸಿಐಗೆ ಮೂಗುದಾರ ಹಾಕಲು ಮುಂದಾಗಿದ್ದ ಸರ್ಕಾರ. ಸರ್ಕಾರದ ನೆರವು ಪಡೆಯದ ಬಿಸಿಸಿಐಯನ್ನು ಆರ್‌ಟಿಐನಿಂದ ಹೊರಗಿಟ್ಟು ನಿಯಮ ಪರಿಷ್ಕರಣೆ

ನವದೆಹಲಿ: ವಿಶ್ವದ ಸಿರಿವಂತ ಕ್ರಿಕೆಟ್‌ ಸಂಸ್ಥೆ ಎನಿಸಿಕೊಂಡಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಮೇಲೆ ನಿಯಂತ್ರಣಕ್ಕೆ ಮುಂದಾಗಿದ್ದ ಕೇಂದ್ರ ಸರ್ಕಾರ, ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಮಂಡಳಿಯನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಸೇರಿಸುವ ನಿರ್ಧಾರವನ್ನು ಕೈಬಿಟ್ಟಿದೆ. 

ಖಾಸಗಿಯಾಗಿಯೇ ಉಳಿದಿರುವ ಬಿಸಿಸಿಐಅನ್ನು ಆರ್‌ಟಿಐ ವ್ಯಾಪ್ತಿಗೆ ಸೇರಿಸಲು ಕಳೆದ ಜು.23ರಂದು ಕ್ರೀಡಾ ಸಚಿವ ಮಾನ್ಸುಖ್‌ ಮಾಂಡವೀಯ ಅವರು ಸಂಸತ್‌ನಲ್ಲಿ ಮಸೂದೆ ಮಂಡಿಸಿದ್ದರು. ಮಸೂದೆ ಪ್ರಕಾರ ದೇಶದ ಎಲ್ಲಾ ಕ್ರೀಡಾ ಸಂಸ್ಥೆಗಳು ಆರ್‌ಟಿಐ ವ್ಯಾಪ್ತಿಗೆ ಬರಲಿದ್ದು, ಇದರಿಂದ ಬಿಸಿಸಿಐ ಕೂಡಾ ಹೊರತಾಗಿಲ್ಲ ಎಂದು ಸಚಿವರು ಹೇಳಿದ್ದರು. 

ಆದರೆ ಸರ್ಕಾರದಿಂದ ಯಾವುದೇ ಹಣಕಾಸು ನೆರವನ್ನು ಪಡೆಯದ ಬಿಸಿಸಿಐ, ಆರ್ಥಿಕ ಸ್ವಾವಲಂಬನೆ ಹೊಂದಿದೆ. ಹೀಗಾಗಿ, ಮಾಹಿತಿ ಹಕ್ಕು ಕಾಯ್ದೆಯಡಿ ಬರಲು ಬಿಸಿಸಿಐ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿತ್ತು. ಸದ್ಯ ಕ್ರೀಡಾ ಸಚಿವಾಲಯ ತನ್ನ ನಿಯಮದಲ್ಲಿ ಪರಿಷ್ಕರಣೆ ಮಾಡಿದ್ದು, ಸರ್ಕಾರದಿಂದ ನೆರವು ಪಡೆಯುವ ಸಂಸ್ಥೆಗಳನ್ನು ಮಾತ್ರ ಆರ್‌ಟಿಐ ವ್ಯಾಪ್ತಿಗೆ ತರಲು ನಿರ್ಧರಿಸಿದೆ. ಇದರೊಂದಿಗೆ ಬಿಸಿಸಿಐ ವ್ಯಾಪ್ತಿಯಿಂದ ಹೊರಗುಳಿಯಲಿದೆ. 

ಕೋರ್ಟ್‌ನಲ್ಲಿ ಪ್ರಶ್ನಿಸಲು ಮುಂದಾಗಿದ್ದ ಬಿಸಿಸಿಐ?

ಬಿಸಿಸಿಐ ಖಾಸಗಿ ಸಂಸ್ಥೆಯಾಗಿದ್ದು, ಸರ್ಕಾರದಿಂದ ಯಾವುದೇ ನೆರವು ಪಡೆಯಲ್ಲ. ಹೀಗಾಗಿ ಬಿಸಿಸಿಐ ‘ಸಾರ್ವಜನಿಕ ಪ್ರಾಧಿಕಾರ’ ಅಲ್ಲ ಎಂಬುದು ಮಂಡಳಿಯ ವಾದ. ಇದೇ ಕಾರಣಕ್ಕೆ ಹಿಂದಿನಿಂದಲೂ ಆರ್‌ಟಿಐ ವ್ಯಾಪ್ತಿಗೆ ಬರಲು ಬಿಸಿಸಿಐ ನಿರಾಕರಿಸುತ್ತಿತ್ತು. ಇತ್ತೀಚೆಗೆ ಸರ್ಕಾರ ಹೊಸ ಕ್ರೀಡಾ ಆಡಳಿತ ಮಸೂದೆ ಮಂಡಿಸಿದ್ದು, ಅದರಲ್ಲಿ ಬಿಸಿಸಿಐಅನ್ನು ಆರ್‌ಟಿಐ ವ್ಯಾಪ್ತಿಗೆ ಸೇರಿಸುವ ಅಂಶವಿತ್ತು. ಅದನ್ನು ಪ್ರಶ್ನಿಸಿ ಬಿಸಿಸಿಐ ನ್ಯಾಯಾಲಯದ ಮೊರೆ ಹೋಗಲು ಮುಂದಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದ್ದಾಗಿ ವರದಿಯಾಗಿದೆ.

ಬಿಸಿಸಿಐಗೆ ರಿಲೀಫ್‌

ಒಂದು ವೇಳೆ ಆರ್‌ಟಿಐ ವ್ಯಾಪ್ತಿಗೆ ಸೇರಿದ್ದರೆ ಬಿಸಿಸಿಐಗೆ ಮೂಗುದಾರ ಬೀಳುತ್ತಿತ್ತು. ತಾನು ನಿರ್ಧಾರಗಳನ್ನು ಕೈಗೊಳ್ಳುವ ವಿಧಾನ, ಹಣಕಾಸು ದಾಖಲೆಗಳ ನಿರ್ವಹಣೆ ಹಾಗೂ ಅವುಗಳಿಗೆ ಸಂಬಂಧಿಸಿದ ಸಾರ್ವಜನಿಕ ಪ್ರಕಟಣೆ ಹೊರಡಿಸುವಾಗ ಎಚ್ಚರಿಕೆ ವಹಿಸಬೇಕಿತ್ತು. ತಂಡಗಳ ಆಯ್ಕೆಗೆ ಅನುಸರಿಸುವ ಮಾದರಿ ಹಾಗೂ ಮಾನದಂಡ, ಆಂತರಿಕ ಆಡಳಿತ ರಚನೆ ವಿಚಾರದಲ್ಲೂ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಬೇಕಿತ್ತು.