ಸಾರಾಂಶ
ಲಾಡರ್‌ಹಿಲ್(ಮಯಾಮಿ): ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಸೋಲುಂಡಿರುವ ಪಾಕಿಸ್ತಾನ, ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲೇ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಪಾಕಿಸ್ತಾನಕ್ಕೆ ಬಾಕಿ ಇರುವ ಐರ್ಲೆಂಡ್ ವಿರುದ್ಧದ ಪಂದ್ಯ ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ನಡೆಯಬೇಕಿದ್ದು, ಆ ಪಂದ್ಯ ಮಳೆಗೆ ಬಲಿಯಾಗುವ ಸಾಧ್ಯತೆ ಇದೆ.
ಅದೊಂದೇ ಅಲ್ಲ, ಈ ಕ್ರೀಡಾಂಗಣದಲ್ಲಿ ನಡೆಯಬೇಕಿರುವ ಇನ್ನು ಮೂರೂ ಪಂದ್ಯಗಳು ವಾಶೌಟ್ ಆಗಲಿವೆ ಎಂದು ಹೇಳಲಾಗುತ್ತಿದೆ. ಇಲ್ಲಿ ಜೂ.12ರಂದು ನಡೆಯಬೇಕಿದ್ದ ಶ್ರೀಲಂಕಾ-ನೇಪಾಳ ಪಂದ್ಯವೂ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಗಿತ್ತು.
ಫ್ಲೋರಿಡಾದ ಮಯಾಮಿಯಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಮಯಾಮಿಯಿಂದ ಲಾಡರ್ ಹಿಲ್ ಕೇವಲ 29 ಕಿ.ಮೀ. ದೂರದಲ್ಲಿದ್ದು, ಮುಂದಿನ 4-5 ದಿನ ಭಾರಿ ಮಳೆ ಮುನ್ಸೂಚನೆ ಇದೆ. ಶುಕ್ರವಾರದ ಅಮೆರಿಕ-ಐರ್ಲೆಂಡ್ ಪಂದ್ಯಕ್ಕೆ ಶೇ.100ರಷ್ಟು ಮಳೆ ಸಾಧ್ಯತೆ ಇದ್ದು, ಜೂ.15ರ ಶನಿವಾರ ಭಾರತ ಹಾಗೂ ಕೆನಡಾ ನಡುವಿನ ಪಂದ್ಯ ಮಳೆಗೆ ಬಲಿಯಾಗುವ ಸಾಧ್ಯತೆ ಶೇ.86ರಷ್ಟಿದೆ ಎಂದು ಹೇಳಲಾಗುತ್ತಿದೆ. ಇನ್ನು ಜೂ.16ರಂದು ಪಾಕಿಸ್ತಾನ ಹಾಗೂ ಐರ್ಲೆಂಡ್ ಪಂದ್ಯ ನಡೆಯಬೇಕಿದ್ದು, ಆ ದಿನವೂ ಮಳೆ ಸುರಿಯುವ ಸಾಧ್ಯತೆ ಶೇ.80ಕ್ಕಿಂತ ಹೆಚ್ಚು ಎಂದು ಮುನ್ಸೂಚನೆ ನೀಡಲಾಗಿದೆ.
ಮೂರೂ ಪಂದ್ಯ ರದ್ದಾದರೆ ಯಾರಿಗೆ ಲಾಭ?
‘ಎ’ ಗುಂಪಿನಿಂದ ಈಗಾಗಲೇ ಭಾರತ ಸೂಪರ್-8 ಪ್ರವೇಶಿಸಿದೆ. ಇನ್ನು ಕೆನಡಾ ಬಹುತೇಕ ಹೊರಬಿದ್ದಿದೆ. ಹೀಗಾಗಿ ಭಾರತ ಹಾಗೂ ಕೆನಡಾ ನಡುವಿನ ಪಂದ್ಯ ರದ್ದಾದರೂ ಏನೂ ಪರಿಣಾಮ ಆಗದು. ಅಮೆರಿಕ-ಐರ್ಲೆಂಡ್ ಪಂದ್ಯ ರದ್ದಾದರೆ, ಅಮೆರಿಕದ ಅಂಕಗಳು 5ಕ್ಕೆ ಏರಿಕೆಯಾಗಲಿವೆ. ಐರ್ಲೆಂಡ್‌ಗೆ ಮೊದಲ ಅಂಕ ಸಿಗಲಿದೆ. ಪಾಕಿಸ್ತಾನ ಸದ್ಯ ಕೇವಲ 2 ಅಂಕ ಹೊಂದಿದ್ದು, ಪಂದ್ಯ ರದ್ದಾದರೆ ತಂಡ ಕೇವಲ 3 ಅಂಕದೊಂದಿಗೆ ಗುಂಪಿನಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯಲು ವಿಫಲವಾಗಲಿದೆ. ಹೀಗಾಗಿ ತಂಡ ಸೂಪರ್-8 ರೇಸ್‌ನಿಂದ ಹೊರಬೀಳಲಿದೆ. ಆಗ, ಭಾರತದ ಜೊತೆ ಅಮೆರಿಕ ಸೂಪರ್-8ಗೆ ಪ್ರವೇಶ ಪಡೆಯಲಿದೆ.