ಕ್ಯಾಲಿಫೋರ್ನಿಯಾ: ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಡಿಜಿಟಲ್‌ ಪಾವತಿ ಆ್ಯಪ್‌ ‘ಕ್ರೆಡ್‌’ನ ಸ್ಥಾಪಕ ಕುನಾಲ್‌ ಶಾ ಅವರನ್ನು ಮೆಟಾ ಒಡೆತನದ ವಾಟ್ಸಾಪ್‌ನ ಸಿಇಒ ಆಗಿ ನೇಮಿಸಲಾಗಿದೆ.

ಈ ಬಗ್ಗೆ ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಭಾನುವಾರ ಮಾಹಿತಿ ನೀಡಿದ್ದಾರೆ.

ಇದರೊಂದಿಗೆ ಜಾಗತಿಕ ಕಂಪನಿಗಳ ಪ್ರಮುಖ ಹುದ್ದೆಗೆ ಮತ್ತೊಬ್ಬ ಭಾರತೀಯನ ನೇಮಕವಾದಂತಾಗಲಿದೆ. 7 ವರ್ಷಗಳಿಂದ ವಾಟ್ಸಾಪ್‌ ಸಿಇಒ ಹುದ್ದೆಯಲ್ಲಿದ್ದ ವಿಲ್ ಕ್ಯಾತ್‌ಕಾರ್ಟ್ ಸ್ಥಾನವನ್ನು ಕುನಾಲ್‌ ಅಲಂಕರಿಸಲಿದ್ದಾರೆ. ಮತ್ತೊಂದೆಡೆ ಮಿತೇನ್ ಸಂಪತ್ ಅವರು ಕ್ರೆಡ್‌ ಮುಖ್ಯಸ್ಥರಾಗಿ ನೇಮಕಗೊಳ್ಳಲಿದ್ದಾರೆ.


ಹೂಡಿಕೆ ಡೀಲ್‌:

2018ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಿದ್ದ ಕ್ರೆಡ್‌ನಲ್ಲಿ 8.5 ಕೋಟಿ ರು. ಹೂಡಿಕೆ ಮಾಡುವ ಮೂಲಕ ಫಿನ್‌ಟೆಕ್‌ ಕಂಪನಿಯಲ್ಲಿ ಶೇ.20ರಷ್ಟುಪಾಲನ್ನು ಮೆಟಾ ಖರೀದಿಸಲು ನಿರ್ಧರಿಸಿದೆ. ಈ ಒಪ್ಪಂದದ ಭಾಗವಾಗಿ ಕುನಾಲ್‌ ಶಾ ಅವರನ್ನು ವಾಟ್ಸಾಪ್‌ನ ನೂತನ ಸಿಇಒ ಆಗಿ ನೇಮಿಸಲಾಗಿದೆ ಎನ್ನಲಾಗಿದೆ. ಈ ಹೂಡಿಕೆ ಬಳಿಕ ಕ್ರೆಡ್‌ನ ಮಾರುಕಟ್ಟೆ ಮೌಲ್ಯ 42000 ಕೋಟಿ ರು. ದಾಟಿದೆ.

ಕ್ರೆಡ್‌ ಹಿನ್ನೆಲೆ:

ಕ್ರೆಡ್‌ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಗ್ರಾಹಕರಿಗೆ ವಿಶೇಷ ಸವಲತ್ತು, ಕ್ಯಾಶ್‌ಬ್ಯಾಕ್ ಮತ್ತು ಡೀಲ್‌ಗಳನ್ನು ನೀಡುವ ವೇದಿಕೆಯಾಗಿದೆ. ಇದಕ್ಕೂ ಮೊದಲು ಶಾ, ಫ್ರೀಚಾರ್ಜ್ ಎಂಬ ಡಿಜಿಟಲ್ ಪಾವತಿ ಮತ್ತು ಮೊಬೈಲ್ ರೀಚಾರ್ಜ್ ಆ್ಯಪ್‌ ಸ್ಥಾಪಿಸಿ ಬಳಿಕ ಅದನ್ನು ಮಾರಾಟ ಮಾಡಿದ್ದರು.

ಕುನಾಲ್‌ಗೆ ಪಟ್ಟ ಹೇಗೆ?

- 2018ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಿದ್ದ ಕ್ರೆಡ್‌ ಕಂಪನಿ

- ಡಿಜಿಟಲ್ ಪಾವತಿಯಲ್ಲಿ ಹೆಸರುವಾಸಿ ಕಂಪನಿಯಾದ ಕ್ರೆಡ್‌

- ಇದರಲ್ಲಿ ವಾಟ್ಸಾಪ್‌ ಮಾತೃ ಸಂಸ್ಥೆ ಮೆಟಾ 8.5 ಕೋಟಿ ಹೂಡಿಕೆ

- . ಒಪ್ಪಂದದ ಭಾಗವಾಗಿ ಕುನಾಲ್‌ ಶಾಗೆ ವಾಟ್ಸಾಪ್‌ ಸಿಇಒ ಹುದ್ದೆ

- ಇದರಿಂದ ಕ್ರೆಡ್‌ನ ಮಾರುಕಟ್ಟೆ ಮೌಲ್ಯ ಈಗ 42000 ಕೋಟಿ ರು.