ರಾಜಕೀಯ ವಿಶ್ಲೇಷಕ ಮತ್ತು ರೇಡಿಯೋ ಜಾಕಿ ಮೈಕೆಲ್ ಸ್ಯಾವೇಜ್ ಅವರ ಹೇಳಿಕೆಯನ್ನು ತಮ್ಮ ಸಾಮಾಜಿಕ ಜಾಲತಾಣ ಟ್ರುಥ್ ಸೋಷಿಯಲ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ವಾಷಿಂಗ್ಟನ್: ಭಾರತ, ಚೀನಾ, ಮತ್ತಿತರ ದೇಶಗಳನ್ನು ‘ನರಕದ ಕೂಪ’ ಎಂದು ಕರೆದು ಅಮೆರಿಕದ ಜನ್ಮಸಿದ್ಧ ಪೌರತ್ವದ ಕಾನೂನು ಬದಲಾವಣೆಗೆ ಆಗ್ರಹಿಸಿರುವ ರಾಜಕೀಯ ವಿಶ್ಲೇಷಕ ಮತ್ತು ರೇಡಿಯೋ ಜಾಕಿ ಮೈಕೆಲ್ ಸ್ಯಾವೇಜ್ ಅವರ ಹೇಳಿಕೆಯನ್ನು ತಮ್ಮ ಸಾಮಾಜಿಕ ಜಾಲತಾಣ ಟ್ರುಥ್ ಸೋಷಿಯಲ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಏಷ್ಯಾದ ಈ ಎರಡು ದೇಶಗಳಿಂದ ಒಂಬತ್ತನೇ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲೆಂದೇ ಅಮೆರಿಕಕ್ಕೆ ಆಗಮಿಸುತ್ತಾರೆ. ಅಮೆರಿಕದ ಕಾನೂನು ಅವರಿಗೆ ತಕ್ಷಣ ಪೌರತ್ವ ನೀಡುತ್ತದೆ. ಈ ಎರಡು ದೇಶಗಳಿಂದ ವಲಸೆ ಬರುವವರು ‘ಲ್ಯಾಪ್‌ಟಾಪ್ ಹಿಡಿದ ಗ್ಯಾಂಗ್‌ಸ್ಟರ್‌ಗಳು’ ಎಂದೂ ಸ್ಯಾವೇಜ್ ಜನಾಂಗೀಯ ನಿಂದನೆ ಮಾಡಿದ್ದಾರೆ. ಇಂಥ ಜನಾಂಗೀಯ ನಿಂದನೆಯ ಹೇಳಿಕೆಯನ್ನು ಪೋಸ್ಟ್ ಮಾಡುವ ಮೂಲಕ ಅವರ ವಾದವನ್ನು ಟ್ರಂಪ್ ಎತ್ತಿಹಿಡಿದಿದ್ದಾರೆ.
ಸ್ಯಾವೇಜ್ ಹೇಳಿದ್ದೇನು?:
ಜನ್ಮಸಿದ್ಧ ನಾಗರಿಕತ್ವದ ವಿಚಾರವಾಗಿ ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹಿಸಬೇಕು ಎಂದು ಕರೆದಿರುವ ಸ್ಯಾವೇಜ್, ಇಲ್ಲಿ ಹುಟ್ಟಿದ ಮಕ್ಕಳಿಗೆ ತಕ್ಷಣ ನಾಗರಿಕತ್ವ ಸಿಗುತ್ತದೆ. ಆ ಬಳಿಕ ಅವರು ಚೀನಾ, ಭಾರತ ಅಥವಾ ಜಗತ್ತಿನ ಇತರೆ ನರಕದ ಕೂಪಗಳಿಂದ ತಮ್ಮ ಕುಟುಂಬಗಳನ್ನು ಇಲ್ಲಿಗೆ ಕರೆತರುತ್ತಾರೆ. ಎಲ್ಲಾ ಮಾಫಿಯಾ ಕುಟುಂಬಗಳು ಒಟ್ಟು ಸೇರಿ ಮಾಡಿದ್ದಕ್ಕಿಂತಲೂ ಹೆಚ್ಚಿನ ಹಾನಿಯನ್ನು ಭಾರತ, ಚೀನಾ ಮತ್ತಿತರ ದೇಶಗಳ ಜನ ಅಮೆರಿಕಕ್ಕೆ ಮಾಡಿದ್ದಾರೆ. ಆ ದೇಶಗಳಿಂದ ಬರುವ ವಲಸಿಗರು ‘ಲ್ಯಾಪ್‌ಟಾಪ್ ಹೊಂದಿರುವ ಗ್ಯಾಂಗ್‌ಸ್ಟರ್‌ಗಳು’. ಅವರು ನಮ್ಮನ್ನು ಸಂಪೂರ್ಣವಾಗಿ ದೋಚಿದ್ದಾರೆ. 2ನೇ ದರ್ಜೆಯ ನಾಗರಿಕರಂತೆ ನಮ್ಮ ಜತೆ ವರ್ತಿಸುತ್ತಾರೆ. ತೃತೀಯ ಜಗತ್ತು ಗೆಲ್ಲುವಂತೆ ಮಾಡಿದ್ದಾರೆ, ನಮ್ಮ ಧ್ವಜದ ಮೇಲೆ ಕಾಲಿಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಟೆಕ್ ಕಂಪನಿಯಲ್ಲಿ ಭಾರತೀಯರಿಗಷ್ಟೇ ನೌಕರಿ
ಕ್ಯಾಲಿಫೋರ್ನಿಯಾದಲ್ಲಿ ಬಿಳಿಯರು ಉನ್ನತ ತಂತ್ರಜ್ಞಾನ ಕಂಪನಿಯಲ್ಲಿ ನೌಕರಿ ಗಳಿಸುವುದು ಅಸಾಧ್ಯವೆನ್ನುವ ಸ್ಥಿತಿ ಸೃಷ್ಟಿಗೂ ಮೊದಲು ನಾನು ಭಾರತೀಯರ ಅತಿದೊಡ್ಡ ಬೆಂಬಲಿಗನಾಗಿದ್ದೆ. ಈಗ ಟೆಕ್ ಕಂಪನಿಯಲ್ಲಿ ಭಾರತೀಯರಿಗಷ್ಟೇ ನೌಕರಿ. ಯಾಕೆಂದರೆ ಬಹುತೇಕ ಆಂತರಿಕ ವ್ಯವಸ್ಥೆ ಅವರಿಂದಲೇ ನಿರ್ವಹಿಸಲ್ಪಡುತ್ತಿದೆ ಎಂದು ಆರೋಪಿಸಿದ್ದಾರೆ.
ಜತೆಗೆ, ಅಮೆರಿಕದ ಸಂವಿಧಾನವನ್ನು ರೇಡಿಯೋ, ಟೀವಿ, ವಿಮಾನ, ಇಂಟರ್ನೆಟ್ ಕಂಡುಹಿಡಿಯುವ ಮೊದಲು ಬರೆಯಲಾಗಿದೆ. ಆಧುನಿಕ ವಲಸೆ ಪರಿಸ್ಥಿತಿಯಲ್ಲಿ ಅಮೆರಿಕದ ಸಂವಿಧಾನ ತನ್ನ ಅಸ್ವಿತ್ವ ಕಳೆದುಕೊಂಡಿದೆ. ಅದನ್ನು ಬದಲಾವಣೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿಕೊಂಡಿದ್ದಾರೆ.

