ವಿಶ್ವದ ಕಣ್ಣು ಅಮೆರಿಕದ ಮೇಲೆ । ಟ್ರಂಪ್‌ ನಿಲುವಿನ ಮೇಲೆ ಜಾಗತಿಕ ಆರ್ಥಿಕತೆ ನಿರ್ಧಾರ

| Published : Jan 20 2025, 12:08 PM IST

Donald Trump
ವಿಶ್ವದ ಕಣ್ಣು ಅಮೆರಿಕದ ಮೇಲೆ । ಟ್ರಂಪ್‌ ನಿಲುವಿನ ಮೇಲೆ ಜಾಗತಿಕ ಆರ್ಥಿಕತೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಟ್ರಂಪ್ 2.0 ಆರಂಭ - ಅಮೆರಿಕದ ನೂತನ ಅಧ್ಯಕ್ಷರಾಗಿ ಇಂದು ಟ್ರಂಪ್ ಪ್ರಮಾಣ । 2ನೇ ಬಾರಿ ಅಧ್ಯಕ್ಷ ಹುದ್ದೆ

ವಿಶ್ವದ ಕಣ್ಣು ಅಮೆರಿಕದ ಮೇಲೆ । ಟ್ರಂಪ್‌ ನಿಲುವಿನ ಮೇಲೆ ಜಾಗತಿಕ ಆರ್ಥಿಕತೆ ನಿರ್ಧಾರ

ತನ್ನ ಹೊಸ ಅಧ್ಯಕ್ಷರ ಪದಗ್ರಹಕ್ಕೆ ಅಮೆರಿಕ ಸಜ್ಜಾಗಿದ್ದು, ಅಮೆರಿಕದ 47ನೇ ಅಧ್ಯಕ್ಷರಾಗಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಭಾರತೀಯ ಕಾಲಮಾನ ಇಂದು ರಾತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 2ನೇ ಅವಧಿಗೆ ಈ ಹುದ್ದೆ ಏರುತ್ತಿರುವ, ಅಮೆರಿಕದ ಕಂಡ ಅತ್ಯಂತ ವರ್ಣರಂಜಿತ, ವಿವಾದಿತ ನಾಯಕ ಟ್ರಂಪ್‌ ಮುಂದಿನ ದಿನಗಳಲ್ಲಿ ಇಡಲಿರುವ ಪ್ರತಿ ಹೆಜ್ಜೆ ಕೂಡಾ ಜಾಗತಿಕ ಆರ್ಥಿಕತೆ ಮೇಲೆ ಪ್ರಭಾವ ಬೀರುತ್ತದೆ. ಅಮೆರಿಕ ಕೇವಲ ಒಂದು ದೇಶವಾಗಿ ಗುರುತಿಸಿಕೊಳ್ಳದೇ ವಿಶ್ವದ ಬೃಹತ್‌ ಆರ್ಥಿಕ, ಮಿಲಿಟರಿ ಮತ್ತು ರಾಜತಾಂತ್ರಿಕ ಶಕ್ತಿಯೂ ಹೌದು. ಹೀಗಾಗಿ ಅಮೆರಿಕದ ನೂತನ ಅಧ್ಯಕ್ಷರ ಪದಗ್ರಹಣ ಇಡೀ ವಿಶ್ವದ ಕೇಂದ್ರಬಿಂದುವಾಗಿದೆ.

ಕಮಲಾ ಹ್ಯಾರಿಸ್ ಸೋಲಿಸಿ ಅಧಿಕಾರಕ್ಕೆ

ಕಳೆದ ವರ್ಷ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿ ಟ್ರಂಪ್‌ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 4 ವರ್ಷಗಳ ಹಿಂದೆ, ಹಾಲಿ ಅಧ್ಯಕ್ಷ ಜೋ ಬೈಡೆನ್‌ ವಿರುದ್ಧ ಸ್ಪರ್ಧಿಸಿ ಸೋಲುಕಂಡು, ಹಲವು ಹಗರಣಗಳಲ್ಲಿ ಸಿಲುಕಿ ಇನ್ನೇನು ಜೈಲು ಪಾಲಾದರು ಅನ್ನುವ ಹೊತ್ತಿನಲ್ಲೇ ಟ್ರಂಪ್ ಫೀನಿಕ್ಸ್‌ ಹಕ್ಕಿಯಂತೆ ಪುನರ್ಜನ್ಮ ಪಡೆದು ಮರಳಿದ್ದಾರೆ. ಹಾಗೆಂದು ಚುನಾವಣೆ ಹಾದಿ ಟ್ರಂಪ್‌ ಪಾಲಿಗೆ ಸುಗಮವಾಗಿರಲಿಲ್ಲ. ಪ್ರಚಾರದ ವೇಳೆ ಎರಡು ಬಾರಿ ಮಾರಣಾಂತಿಕ ದಾಳಿಯಿಂದ ಟ್ರಂಪ್‌ ಪಾರಾಗಿದ್ದರು.

ಟ್ರಂಪ್‌ ಯಾರು, ಅವರ ಹಿನ್ನೆಲೆಯೇನು?

ಡೊನಾಲ್ಡ್‌ ಟ್ರಂಪ್‌, ರಿಯಲ್‌ ಎಸ್ಟೇಟ್‌ ಉದ್ಯಮಿ ಫೆಡ್ರಿಕ್‌ ಟ್ರಂಪ್‌ ಹಾಗೂ ಮೇರಿ ದಂಪತಿಯ 4ನೇ ಮಗ. ಅರ್ಥಶಾಸ್ತ್ರದಲ್ಲಿ ಪದವೀಧರ. ಸೇನೆ ಸೇರುವ ಆಸಕ್ತಿ ಹೊಂದಿದ್ದರೂ, ದೈಹಿಕ ನ್ಯೂನತೆ ಅದಕ್ಕೆ ಅವಕಾಶ ನೀಡಿರಲಿಲ್ಲ. ಬಳಿಕ ಉದ್ಯಮದ ಕಡೆಗೇ ಪೂರ್ಣ ಗಮನ ಹರಿಸಿದರು. ಟ್ರಂಪ್‌ 3 ಮದುವೆಯಾಗಿದ್ದು, 5 ಮಕ್ಕಳನ್ನು ಹೊಂದಿದ್ದಾರೆ. 2000ದಲ್ಲಿ ರಿಫಾರ್ಮ್‌ ಪಕ್ಷದಿಂದ ಅಮೆರಿಕ ಅಧ್ಯಕ್ಷೀಯ ರೆಸ್‌ಗಿಳಿದ ಟ್ರಂಪ್‌, 2012ರಲ್ಲಿ ರಿಪಬ್ಲಿಕನ್‌ ಪಕ್ಷದಿಂದ ಸ್ಪರ್ಧಿಸಿದರು. 2017ರಲ್ಲಿ ಮೊದಲ ಬಾರಿ ಅಮೆರಿಕದ ಅಧ್ಯಕ್ಷ ಪಟ್ಟಕ್ಕೇರಿದಾಗ ಟ್ರಂಪ್‌ಗೆ 71 ವರ್ಷ. ಇದೀಗ ಮತ್ತೆ ಜನಬೆಂಬಲದೊಂದಿಗೆ ಜಯ ಗಳಿಸಿದ್ದು, ಕ್ರಿಮಿನಲ್‌ ಪ್ರಕರಣದಲ್ಲಿ ಅಪರಾಧಿ ಎನಿಸಿಕೊಂಡಿರುವ ಏಕೈಕ ಅಧ್ಯಕ್ಷ ಎಂಬ ಕುಖ್ಯಾತಿಗೂ ಪಾತ್ರರಾಗಿದ್ದಾರೆ.

ಮೊದಲ ದಿನವೇ ಟ್ರಂಪ್‌ 10 ಶಾಕ್‌

ಅಮೆರಿಕ ಮೊದಲು ಎಂಬುದೂ ಸೇರಿದಂತೆ ವಿವಿಧ ವಿಷಯಗಳಲ್ಲಿ ಕಠಿಣ ನಿಲುವು ಹೊಂದಿರುವ ಡೊನಾಲ್ಡ್‌ ಟ್ರಂಪ್‌, ಈ ಸಂಬಂಧ ಅಧಿಕಾರಕ್ಕೆ ಏರಿದ ಮೊದಲ ದಿನವೇ 10 ಪ್ರಮುಖ ನಿರ್ಧಾರಗಳನ್ನು ಘೋಷಿಸುವ ಸಾಧ್ಯತೆ ಇದೆ. ಇದು ಅಮೆರಿಕನ್ನರು, ಅಮೆರಿಕದ ಉದ್ಯಮ, ಜಾಗತಿಕ ಉದ್ಯಮ, ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅವುಗಳ ಪೈಕಿ ಪ್ರಮುಖವಾದುದೆಂದರೆ....

1. ಸಾವಿರಾರು ಪ್ರಮಾಣದಲ್ಲಿ ಅಕ್ರಮ ವಲಸಿಗರ ಸಾಮೂಹಿಕ ಗಡಿಪಾರು.

2. ಅಮೆರಿಕದಲ್ಲಿ ಜನಿಸಿದ ವಿದೇಶಿಯರ ಮಕ್ಕಳಿಗೆ ಪೌರತ್ವ ಹಕ್ಕು ನಿಯಮ ರದ್ದು

3. ಈಗಾಗಲೇ 2 ವರ್ಷ ಪೂರೈಸಿರುವ ಉಕ್ರೇನ್ ಯುದ್ಧ ಕೊನೆಗಾಣಿಸುವಿಕೆ,

4. ಮೆಕ್ಸಿಕೋ , ಕೆನಡಾ ಸೇರಿ ವಿವಿಧ ದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ಸುಂಕ ಹೆಚ್ಚಳ

5. ಅಮೆರಿಕದಲ್ಲೇ ಇನ್ನಷ್ಟು ಕಚ್ಚಾತೈಲ ಉತ್ಪಾದನೆಗೆ ಹೆಚ್ಚಿನ ಆದ್ಯತೆ. ಇದಕ್ಕೆ ಅಗತ್ಯ ನೆರವು.

6. ಸೇನೆ ಸೇರಿದಂತೆ ವಿವಿಧ ಕರ್ತವ್ಯದ ಸ್ಥಳಗಳಲ್ಲಿ ತೃತೀಯ ಲಿಂಗಿಗಳ ಹಕ್ಕುಗಳಿಗೆ ನಿರ್ಬಂಧ

7. ಎಲೆಕ್ಟ್ರಿಕ್‌ ವಾಹನ ಕಡ್ಡಾಯ ಎಂಬ ಮಾಜಿ ಅಧ್ಯಕ್ಷ ಜೋ ಬೈಡೆನ್‌ ನೀತಿಗೆ ತಿಲಾಂಜಲಿ

8. ರಾಷ್ಟ್ರದ ಭದ್ರತಾ ದೃಷ್ಟಿಯಿಂದ ಮುಕ್ತ ಗಡಿ ನೀತಿಗೂ ಬ್ರೇಕ್ ಹಾಕುವ ಸಾಧ್ಯತೆ

9. ಅಮೆರಿಕನ್‌ ಕಂಪನಿಗಳು ಸ್ಥಳೀಯರನ್ನೇ ಹೆಚ್ಚು ಉದ್ಯೋಗಕ್ಕೆ ನೇಮಿಸಿಕೊಳ್ಳುವುದು ಕಡ್ಡಾಯ

10. ಅಮೆರಿಕ ವೀಸಾ ವಿತರಣೆಗೆ ಮತ್ತಷ್ಟು ಕಠಿಣ ನಿಯಮ ಜಾರಿಗೊಳಿಸುವ ಸಂಭವ

ಭಾರತದ ಮೇಲೆ ಟ್ರಂಪ್‌ ನಿರ್ಧಾರದ ಪರಿಣಾಮಗಳೇನು?

ಟ್ರಂಪ್ ನಿರ್ಧಾರಗಳಲ್ಲಿ ಎಷ್ಟು ಒಳಿತುಗಳಿವೆಯೋ, ಅಷ್ಟೇ ಕೆಡುಕುಗಳೂ ಇವೆ. ಉಭಯ ದೇಶಗಳ ನಡುವಿನ ಸಂಬಂಧ ಉತ್ತಮವಾಗಿದ್ದರೂ ಟ್ರಂಪ್ ಹಲವು ಸಲ ನೇರಾನೇರಾ ಭಾರತ ವಿರೋಧಿ ನಿಲುವನ್ನು ತಾಳಿದ್ದ ಇತಿಹಾಸ ಹೊಂದಿದ್ದಾರೆ. ಇದೀಗ ಅವರ ಈ ಅವಧಿಯಲ್ಲಿ ತರಲು ಹೊರಟಿರುವ ಪೌರತ್ವ ನೀತಿ ಭಾರತಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ. ಇದರ ಪ್ರಕಾರ ಅಮೆರಿಕದಲ್ಲಿ ಹುಟ್ಟಿದ ವಲಸಿಗರ ಮಕ್ಕಳಿಗೆ ದೇಶದ ಪೌರತ್ವ ಸಿಗುವುದಿಲ್ಲ. ಒಂದು ವೇಳೆ ಸ್ಥಳೀಯರಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಟ್ರಂಪ್‌ ನಿಯಮ ರೂಪಿಸಿದರೆ ಭಾರತೀಯ ಟೆಕ್ಕಿಗಳಿಗೆ ಸಂಕಷ್ಟ ಆಗಬಹುದು. ಭಾರತದ ಜೊತೆಗಿನ ರಕ್ಷಣಾ ಸಂಬಂಧ ಸುಧಾರಿಸಲು, ರಷ್ಯಾ ಜೊತೆಗಿನ ರಕ್ಷಣಾ ಸಂಬಂಧಕ್ಕೆ ಕಡಿವಾಣ ಹಾಕಲು ಯತ್ನಿಸಬಹುದು.

ಮೋದಿ-ಟ್ರಂಪ್‌ ಬಾಂಧವ್ಯದಿಂದ ಭಾರತಕ್ಕೆ ಅನುಕೂಲ

ಭಾರತ ಅಮೆರಿಕದ ದ್ವಿಪಕ್ಷೀಯ ಸಂಬಂಧ ಟ್ರಂಪ್‌ 2.0 ಸರ್ಕಾರದಲ್ಲಿ ಮತ್ತಷ್ಟು ಬಲಗೊಳ್ಳಬಹುದು. ''ಕೊಡು- ಕೊಳ್ಳುವಿಕೆ''ಯ ನೀತಿಯನ್ನು ಅನುಸರಿಸುವ ಟ್ರಂಪ್‌, ಭಾರತದ ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸಬಹುದು. ಆದರೆ, ರಷ್ಯಾದೊಂದಿಗೆ ಯಾವುದೇ ಸಂಬಂಧ ಕೂಡದು ಎಂಬ ಒತ್ತಡ ಇಲ್ಲವಾಗಬಹುದು. ಚೀನಾ ವಿರುದ್ಧದ ಅಮೆರಿಕದ ವಾಣಿಜ್ಯ ಸಮರ ಭಾರತಕ್ಕೆ ವರವಾಗಿ ಪರಿಣಮಿಸಬಹುದು. ಮಾನವ ಹಕ್ಕುಗಳು, ಪ್ರಜಾಪ್ರಭುತ್ವದ ಮೌಲ್ಯಗಳ ವಿಷಯದಲ್ಲಿ ಅಮೆರಿಕದ ಅನವಶ್ಯ ಪಾಠ ತಪ್ಪಬಹುದು. ಟ್ರಂಪ್ ಆರ್ಥಿಕತೆಯ ಬಗ್ಗೆ ಪ್ರತ್ಯೇಕತಾವಾದಿ ಮತ್ತು ರಕ್ಷಣಾತ್ಮಕ ಮನೋಭಾವವನ್ನು ಹೊಂದಿದ್ದಾರೆ. ಅಮೆರಿಕವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿರುವುದರಿಂದ, ಶಸ್ತ್ರಾಸ್ತ್ರ, ಗುಪ್ತಚರ ಸಹಕಾರ, ತಂತ್ರಜ್ಞಾನ ಮತ್ತು ರಕ್ಷಣಾ ಯಂತ್ರಾಂಶದಲ್ಲಿ ಅಮೆರಿಕದ ಸಹಕಾರದಲ್ಲಿ ಹೆಚ್ಚಿನ ಬದಲಾವಣೆಯಾಗುವುದಿಲ್ಲ ಅನ್ನೋದು ಗಮನಾರ್ಹ. ಒಟ್ಟಾರೆ ಟ್ರಂಪ್‌ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹೊಂದಿರುವ ಉತ್ತಮ ಸಂಬಂಧ, ಎರಡೂ ದೇಶಗಳ ಸಂಬಂಧವನ್ನು ಇನ್ನಷ್ಟು ಸುಧಾರಣೆ ಮಾಡಲು ನೆರವಾಗಬಹುದು ಎಂದು ಅಂದಾಜಿಸಲಾಗಿದೆ.

ಟ್ರಂಪ್‌ ಸಂಪುಟದಲ್ಲಿ ಯಾರ್‍ಯಾರು?

ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌

ವಿದೇಶಾಂಗ ಮ್ಯಾಕ್ರೋ ರುಬಿಯೋ

ಹಣಕಾಸು ಸ್ಕಾಟ್‌ ಬೆಸ್ಸೆಂಟ್‌

ರಕ್ಷಣೆ ಪೀಟೆ ಹೆಗ್ಸೇತ್‌

ಆರೋಗ್ಯ ರಾಬರ್ಟ್‌ ಎಫ್‌. ಕೆನಡಿ

ಟ್ರಂಪ್‌ ಮುಂದಿನ ಸವಾಲುಗಳು

ಹಣದುಬ್ಬರ ನಿಯಂತ್ರಣ, ಉತ್ಪಾದನೆ ಹೆಚ್ಚಳ

ಗಡಿಯಲ್ಲಿ ಅಕ್ರಮ ಒಳನುಸುಳುವಿಕೆ ತಡೆ

ರಷ್ಯಾ- ಉಕ್ರೇನ್‌ ಯುದ್ಧ ಸ್ಥಗಿತಕ್ಕೆ ಕ್ರಮಗಳು

ವಿದೇಶಾಂಗ ನೀತಿಯಲ್ಲಿ ಆಮೂಲಾಗ್ರ ಬದಲಾವಣೆ

ತೆರಿಗೆ ನೀತಿಯಲ್ಲಿ ಸುಧಾರಣೆ, ತೆರಿಗೆ ಇಳಿಕೆ

ವಿದೇಶಗಳ ಜೊತೆಗಿನ ವ್ಯಾಪಾರ ವಹಿವಾಟು ನೀತಿ

ಆರೋಗ್ಯ ವಿಮೆ ಸಬ್ಸಿಡಿ ಕಡಿತ ಸವಾಲುಗಳು

ಹೆಚ್ಚುತ್ತಿರುವ ಅಪರಾಧ ನಿಯಂತ್ರಣಕ್ಕೆ ಕ್ರಮ

ಅಮೆರಿಕ ಅಧ್ಯಕ್ಷರಿಗೆ ವರ್ಷಕ್ಕೆ 2.70 ಕೋಟಿ ವೇತನ

ವಿಶ್ವದ ದೊಡ್ಡಣ್ಣ ಅಂತಲೇ ಕರೆಯಲ್ಪಡುವ ಅಮೆರಿಕದ ಅಧ್ಯಕ್ಷರಾಗುವವರಿಗೆ ಸಿಗುವ ವೇತನ, ಭತ್ಯೆ, ಸೌಲಭ್ಯಗಳು ಕೂಡ ಅಷ್ಟೇ ಪವರ್‌ಫುಲ್‌. ಅಮೆರಿಕ ಅಧ್ಯಕ್ಷರ ಸಂಬಳ ವರ್ಷಕ್ಕೆ 4 ಲಕ್ಷ ಡಾಲರ್‌(ಸರಿಸುಮಾರು 2 ಕೋಟಿ 70 ಲಕ್ಷ ರು.). ಜೊತೆಗೆ, ಪ್ರತ್ಯೇಕ ಬಂಗಲೆ, ಖಾಸಗಿ ವಿಮಾನ, ಹೆಲಿಕಾಪ್ಟರ್‌ ಸೇರಿದಂತೆ ಹಲವಾರು ಸೌಲಭ್ಯಗಳು ಸಿಗುತ್ತದೆ. ಅಮೆರಿಕದ ಅಧ್ಯಕ್ಷರಿಗೆ ಬೃಹತ್‌ ಬಂಗಲೆ ಶ್ವೇತಭವನದ ಸೌಲಭ್ಯ, ಬ್ಲೇರ್ ಹೌಸ್‌ ಅತಿಥಿಗೃಹ, ಅವರಿಗಾಗಿಯೇ ಮೀಸಲಿರುವ ಅತ್ಯಾಧುನಿಕ ವಿಮಾನ ಏರ್‌ಫೋರ್ಸ್‌ ಒನ್‌, ಅಮೆರಿಕ ಅಧ್ಯಕ್ಷರ ಅಧಿಕೃತ ಹೆಲಿಕಾಪ್ಟರ್‌ ಮರೈನ್‌ ಒನ್, ಯಾವುದೇ ದಾಳಿಯನ್ನು ತಡೆಯುವ ಶಕ್ತಿಯುಳ್ಳ ಲಿಮೋಸಿನ್‌ ಕಾರು ಸಿಗುತ್ತದೆ. ಜೊತೆಗೆ 19 ಸಾವಿರ ಡಾಲರ್‌ ಮನರಂಜನಾ ಭತ್ಯೆ, 50 ಸಾವಿರ ಡಾಲರ್ ವೆಚ್ಚ ಭತ್ಯೆ ಹಾಗೂ 1 ಲಕ್ಷ ಡಾಲರ್‌ ಸಾರಿಗೆ ಭತ್ಯೆ ದೊರೆಯುತ್ತದೆ. ನಿವೃತ್ತರಾದ ಬಳಿಕ ವಾರ್ಷಿಕ 2 ಲಕ್ಷ ಅಮೆರಿಕನ್‌ ಡಾಲರ್‌ ಪಿಂಚಣಿ ಸಿಗಲಿದೆ. ಅಧ್ಯಕ್ಷರ ನಿಧನದ ಬಳಿಕ ಅವರ ಪತ್ನಿಗೆ 1 ಲಕ್ಷ ಡಾಲರ್‌ ಪಿಂಚಣಿ ದೊರೆಯಲಿದೆ.

ಅಮೆರಿಕ ಉಪಾಧ್ಯಕ್ಷರ ಪತ್ನಿಯ ಮೂಲ ಭಾರತ

ಟ್ರಂಪ್‌ 2.0 ಸರ್ಕಾರದಲ್ಲಿ ಓಹಿಯೋ ಸೆನೆಟರ್ ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೆಡಿ ವ್ಯಾನ್ಸ್‌ ಪತ್ನಿ ಉಷಾ ಚಿಲುಕುರಿ ಅಮೆರಿಕದ ಎರಡನೇ ಮಹಿಳೆ ಎನ್ನುವ ಗೌರವಕ್ಕೆ ಪಾತ್ರರಾಗಲಿದ್ದಾರೆ. ಉಷಾ ಮೂಲತಃ ಭಾರತದವರು. ಅವರು ಅಮೆರಿಕಾದ ಸ್ಯಾನ್‌ ಡಿಯಾಗೋ ಉಪನಗರದಲ್ಲಿ ಹುಟ್ಟಿ ಬೆಳೆದರೆ, ಅವರ ತಂದೆಯ ಪೂರ್ವಜರು ಆಂಧ್ರಪ್ರದೇಶದ ವಡ್ಲೂರು ಮೂಲದವರು. ಯೇಲ್‌ನಲ್ಲಿ ಸಹಪಾಠಿಯಾಗಿದ್ದ ಉಷಾ, ಅಲ್ಲಿ ಸಭೆಗಳನ್ನು ಆಯೋಜಿಸಲು ವ್ಯಾನ್ಸ್‌ಗೆ ಸಹಾಯ ಮಾಡಿದರು. ಈ ಸಮಯದಲ್ಲಿ, ಇಬ್ಬರೂ ಹತ್ತಿರವಾಗಿದ್ದು ಪ್ರೀತಿಸಿ, 2014ರಲ್ಲಿ ಮದುವೆಯಾದರು.

ಹಿಂದಿನ ಅವಧಿಯಲ್ಲಿ ತಪ್ಪುಗಳಿಂದ ದೋಷಿ, ಆದರೂ ಶಿಕ್ಷೆಯಿಂದ ಪಾರು

‘ದೋಷಿ’ ಎನ್ನುವ ಹಣೆಪಟ್ಟಿ ಹೊತ್ತು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೇರುತ್ತಿರುವ ಮೊದಲ ಪ್ರಧಾನಿ ಎನ್ನುವ ಅಪಕೀರ್ತಿಗೆ ಟ್ರಂಪ್ ಪಾತ್ರರಾಗುತ್ತಿದ್ದಾರೆ. 2006ರಲ್ಲಿ ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಜತೆ ಟ್ರಂಪ್‌ ಲೈಂಗಿಕ ಸಂಬಂಧ ಬೆಳೆಸಿದ್ದರು. ಆದರೆ ಇದನ್ನು ಮುಚ್ಚಿಹಾಕಲು ಆಕೆಗೆ 1.30 ಲಕ್ಷ ಡಾಲರ್‌ ಹಣ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದು ಸುಳ್ಳು, ಹೆಸರು ಕೆಡಿಸುವ ಯತ್ನ ಎಂದು ಟ್ರಂಪ್‌ ಆರೋಪಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮ್ಯಾನ್‌ಹ್ಯಾಟನ್‌ ನ್ಯಾಯಾಲಯ ನಿಯೋಜಿತ ಟ್ರಂಪ್‌ ಅವರನ್ನು ದೋಷಿ ಎಂದು ಘೋಷಿಸಿದೆ. ಆದರೆ ಯಾವುದೇ ಶಿಕ್ಷೆ ನೀಡಲಿಲ್ಲ.

ಟ್ರಂಪ್‌ ಎಂಬ ವಿವಾದಿತ ವ್ಯಕ್ತಿತ್ವ

ಚುನಾವಣಾ ಫಲಿತಾಂಶ ಬುಡಮೇಲಿಗೆ ಯತ್ನ;

2020ರಲ್ಲಿ ಟ್ರಂಪ್, ಬೈಡೆನ್ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದು, ಸೋಲು ಕಂಡಿದ್ದರು. ಈ ಹಿನ್ನೆಲೆಯಲ್ಲಿ ಇಡೀ ಚುನಾವಣೆ ಪದ್ಧತಿಯಲ್ಲೇ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಡೊನಾಲ್ಡ್‌ ಟ್ರಂಪ್ ಬೆಂಬಲಿಗರು ಪ್ರತಿಭಟನೆ ನಡೆಸಿ, ದೊಡ್ಡ ಮಟ್ಟಿಗಿನ ಹಿಂಸಾಚಾರ ಸೃಷ್ಟಿಸಿದ್ದರು. ಜ.6ರಂದು ಅಧಿಕಾರ ಹಸ್ತಾಂತರದ ವೇಳೆ ಟ್ರಂಪ್ ಬೆಂಬಲಿಗರು ಕ್ಯಾಪಿಟೊಲ್‌ ಕಟ್ಟಡಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ್ದರು.

ಹಿಂದಿನ ಅವಧಿಯ ವಿವಾದಿತ ನಿರ್ಧಾರಗಳು

ಕಳೆದ ಬಾರಿ ಅಧ್ಯಕ್ಷರಾಗಿದ್ದಾಗ ಟ್ರಂಪ್ ಹಲವು ವಿವಾದಾತ್ಮಕ ಯೋಜನೆಗಳನ್ನು ಜಾರಿಗೆ ತರಲು ಹೊರಟು ಸುದ್ದಿಯಾಗಿದ್ದರು. ಅಕ್ರಮ ವಲಸೆ ತಡೆಯಲು ಅಮೆರಿಕ- ಮೆಕ್ಸಿಕೊ ಗಡಿಯಲ್ಲಿ ಗೋಡೆ ಕಟ್ಟುವ ಯೋಜನೆ ರೂಪಿಸಿದರು. ಮುಸ್ಲಿಂ ರಾಷ್ಟ್ರಗಳಿಂದ ಅಮೆರಿಕಕ್ಕೆ ಬರುವ ವಲಸಿಗರ ಪ್ರವೇಶದ ಮೇಲೆ ನಿರ್ಬಂಧ ವಿಧಿಸಿದರು. 2017ರಲ್ಲಿನ ತೆರಿಗೆ ಕಡಿತ, ಉದ್ಯೋಗ ಕಾಯ್ದೆಯು ದೊಡ್ಡ ಕಂಪನಿಗಳಿಗೆ ವರದಾನವಾಯಿತು. ಟ್ರಂಪ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 2019, 2021ರಲ್ಲಿ 2 ಸಲ ದೋಷಾರೋಪಣೆಗೆ ಗುರಿಯಾಗಿದ್ದರು. ಅಮೆರಿಕದ ಕೆಲ ವಿದೇಶಾಂಗ ನೀತಿ ಕೂಡ ವಿವಾದಗಳನ್ನು ಸೃಷ್ಟಿಸಿತ್ತು.