ಸಾರಾಂಶ
ಸೌರ್ ವಿದ್ಯುತ್ ಖರೀದಿ ಒಪ್ಪಂದ ಕುದುರಿಸುವ ಸಂಬಂಧ ಭಾರತದಲ್ಲಿ 5 ರಾಜ್ಯಗಳ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಸೇರಿದಂತೆ 8 ಜನರ ವಿರುದ್ಧ ಅಮೆರಿಕ ಸರ್ಕಾರ ಬಂಧನದ ವಾರಂಟ್ ಪಡೆಯುವ ಮತ್ತು ಗಡೀಪಾರಿಗೆ ಮನವಿ ಮಾಡುವ ಅವಕಾಶವನ್ನು ಹೊಂದಿದೆ
ನ್ಯೂಯಾರ್ಕ್: ಸೌರ್ ವಿದ್ಯುತ್ ಖರೀದಿ ಒಪ್ಪಂದ ಕುದುರಿಸುವ ಸಂಬಂಧ ಭಾರತದಲ್ಲಿ 5 ರಾಜ್ಯಗಳ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಸೇರಿದಂತೆ 8 ಜನರ ವಿರುದ್ಧ ಅಮೆರಿಕ ಸರ್ಕಾರ ಬಂಧನದ ವಾರಂಟ್ ಪಡೆಯುವ ಮತ್ತು ಗಡೀಪಾರಿಗೆ ಮನವಿ ಮಾಡುವ ಅವಕಾಶವನ್ನು ಹೊಂದಿದೆ ಎಂದು ಭಾರತೀಯ ಮೂಲದ ಅಮೆರಿಕನ್ ಅಟಾರ್ನಿ ರವಿ ಬಾತ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದಾನಿ ಮತ್ತು ಇತರರ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ ದಾಖಲಿಸಿರುವ ಸಿವಿಲ್ ಮತ್ತು ಕ್ರಿಮಿನಲ್ ದೋಷಾರೋಪದ ಕುರಿತು ಪ್ರತಿಕ್ರಿಯಿಸಿರುವ ರವಿ ಬಾತ್ರಾ, ‘ಪ್ರಕರಣದಲ್ಲಿ ಅಮೆರಿಕದ ಪರವಾಗಿ ವಾದ ಮಂಡಿಸುತ್ತಿರುವ ಅಟಾರ್ನಿ ಬ್ರಿಯಾನ್ ಪೀಸ್, ಅದಾನಿ ಮತ್ತು ಇತರರ ವಿರುದ್ಧ ಬಂಧನದ ವಾರಂಟ್ ಜಾರಿ ಕೋರುವ ಮತ್ತು ಅವಶ್ಯಕತೆ ಬಿದ್ದರೆ ಗಡೀಪಾರಿಗೆ ಕೋರುವ ಅವಕಾಶವನ್ನೂ ಹೊಂದಿದ್ದಾರೆ’ ಎಂದು ಹೇಳಿದ್ದಾರೆ.
‘ಅಮೆರಿಕದೊಂದಿಗೆ ಭಾರತದಂತೆ ಯಾವುದೇ ದೇಶ ಗಡೀಪಾರು ಒಪ್ಪಂದ ಹೊಂದಿದ್ದರೆ ಅಂಥ ದೇಶಗಳು ಇಂಥ ಗಡೀಪಾರು ಮನವಿಯನ್ನು ಪ್ರಸ್ತಾಪಿತ ಕಾನೂನುಗಳ ಅನ್ವಯ ಪುರಸ್ಕರಿಸಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಅತ್ಯಂತ ವಿಶೇಷ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳಲ್ಲಿ ಬಂಧನ ನಡೆಯುತ್ತದೆ’ ಎಂದು ಹೇಳಿದ್ದಾರೆ.
ಇದಕ್ಕೆ ಉದಾಹರಣೆಯೆಂಬಂತೆ ಈ ಹಿಂದೆ ಚಿಲಿಯ ಮಾಜಿ ಅಧ್ಯಕ್ಷ ಅಗಾಸ್ಟೋ ಪಿಂಚೋಟ್ ಅವರನ್ನು ಮಾನವೀಯ ನೆಲೆಯಲ್ಲಿ ಬ್ರಿಟನ್ ಗಡೀಪಾರು ಮಾಡದೇ ಇದ್ದ ಪ್ರಕರಣವನ್ನು ರವಿ ಬಾತ್ರಾ ಉಲ್ಲೇಖಿಸಿದ್ದಾರೆ.
‘ಅದಾನಿ ವಿರುದ್ಧ ಅಮೆರಿಕದ ತನಿಖೆ, ಭಾರತದ ಸಾರ್ವಭೌಮತೆಗೆ ದಕ್ಕೆ’
ನವದೆಹಲಿ: ಉದ್ಯಮಿ ಗೌತಮ್ ಅದಾನಿ ಅವರು ಸೌರಶಕ್ತಿ ವ್ಯವಹಾರದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಅಮೆರಿಕ ಸರ್ಕಾರ, ಭಾರತದ ವ್ಯಾಪ್ತಿಯಲ್ಲಿ ತನಿಖೆ ನಡೆಸಿರುವುದನ್ನು ಅಮೆರಿಕದಲ್ಲಿನ ಭಾರತದ ಮಾಜಿ ರಾಯಭಾರಿ ಕನ್ವಲ್ ಸಿಬಲ್ ಕಟುವಾಗಿ ಟೀಕಿಸಿದ್ದಾರೆ.
ಶುಕ್ರವಾರ ಮಾತನಾಡಿದ ಕನ್ವಲ್, ‘ಅದಾನಿ ಸಮೂಹದ ಕುರಿತು ಭಾರತದ ವ್ಯಾಪ್ತಿಯಲ್ಲಿ ಅಮೆರಿಕದ ತನಿಖೆ ಸರಿಯಲ್ಲ. ಇದು ಅತಿಯಾದ ದರ್ಪ ಮತ್ತು ಅಮೆರಿಕದ ಅಧಿಕಾರದ ದುರುಪಯೋಗಕ್ಕೆ ಉದಾಹರಣೆ. ಒಂದು ವೇಳೆ ಅಮೆರಿಕದ ಬಳಿ ಲಂಚದ ಆರೋಪಕ್ಕೆ ಯಾವುದೇ ಸಾಕ್ಷಿ ಇದ್ದರೆ ಅದು ಅದನ್ನು ಭಾರತದ ಜೊತೆಗೆ ಹಂಚಿಕೊಳ್ಳಬೇಕಿತ್ತು. ಭಾರತೀಯ ನಾಗರಿಕ, ಭಾರತದ ನೆಲದಲ್ಲಿ ಯಾವುದೇ ಅಪರಾಧ ಎಸಗಿದ್ದರೆ ಈ ಕುರಿತು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೊರೆ ಹೋಗಬೇಕಿತ್ತು. ಅದನ್ನು ಬಿಟ್ಟು ಭಾರತದಲ್ಲಿ ನಡೆದ ವಿಷಯದ ಕುರಿತು ಅಮೆರಿಕ ತನಿಖೆ ನಡೆಸುತ್ತಿರುವುದು ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ಪ್ರಯತ್ನವಾಗಿದೆ’ ಎಂದು ಆರೋಪಿಸಿದರು.
ಇದೇ ವೇಳೆ, ‘ಭ್ರಷ್ಟಾಚಾರದ ವಿಷಯದಲ್ಲಿ ಅಮೆರಿಕ ದ್ವಂದ ನಿಲುವು ಪ್ರದರ್ಶಿಸುತ್ತಿದೆ. ಅಮೆರಿಕದ ತನ್ನದೇ ರಾಜಕೀಯ ವ್ಯವಸ್ಥೆಯಲ್ಲಿ ಭಾರೀ ಭ್ರಷ್ಟಾಚಾರ ಹೊಂದಿದೆ. ಅಮೆರಿಕದ ದೊಡ್ಡ ಉದ್ಯಮಿಗಳು ಮತ್ತು ರಾಜಕೀಯದ ನಡುವೆ ದೊಡ್ಡ ನಂಟು ಇರುವಾಗ ಅದು ಬೇರೊಂದು ದೇಶದ ವ್ಯಾಪ್ತಿಯಲ್ಲಿ ತನಿಖೆ ನಡೆಸುವ ವಿಶ್ವಾಸಾರ್ಹತೆ ಉಳಿಸಿಕೊಂಡಿರುವುದಿಲ್ಲ. ಹೀಗಾಗಿ ಅಮೆರಿಕ ಮೊದಲಿಗೆ ತನ್ನ ಮನೆಯನ್ನು ಸ್ವಚ್ಚಗೊಳಿಸುವ ಕೆಲಸ ಮಾಡಬೇಕು’ ಎಂದು ಕನ್ವಲ್ ಸಿಬಲ್ ಅಮೆರಿಕದ ನ್ಯಾಯಾಂಗ ಇಲಾಖೆಗೆ ಕಿವಿ ಮಾತು ಹೇಳಿದರು.‘ಅಮೆರಿಕದ ಇಂಥ ನಿಲುವುಗಳು ಭವಿಷ್ಯದಲ್ಲಿ ಭಾರತ-ಅಮೆರಿಕ ನಡುವಣ ಸಂಬಂಧಕ್ಕೆ ಧಕ್ಕೆ ತರಬಹುದು’ ಎಂದೂ ಸಿಬಲ್ ಎಚ್ಚರಿಸಿದರು.