ತನ್ನ ಜೊತೆ ಒಪ್ಪಂದ ಮಾಡಿಕೊಳ್ಳುವಂತೆ ಪದೇ ಪದೇ ಇರಾನ್‌ಗೆ ಡೆಡ್‌ಲೈನ್ ವಿಧಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಇದೀಗ ಡೆಡ್‌ಲೈನ್‌ಗೆ ಸಿಲುಕುವಂತಾಗಿದೆ. ಮೇ1ರೊಳಗೆ ಯುದ್ಧ ಕುರಿತು ಸಂಸತ್‌ನಿಂದ ಟ್ರಂಪ್ ಅನುಮೋದನೆ ಪಡೆಯದೇ ಹೋದರೆ ಯುದ್ಧ ಅಸಾಂವಿಧಾನಿಕ ಎನ್ನಿಸಿಕೊಳ್ಳಲಿದೆ
ವಾಷಿಂಗ್ಟನ್: ತನ್ನ ಜೊತೆ ಒಪ್ಪಂದ ಮಾಡಿಕೊಳ್ಳುವಂತೆ ಪದೇ ಪದೇ ಇರಾನ್‌ಗೆ ಡೆಡ್‌ಲೈನ್ ವಿಧಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಇದೀಗ ಡೆಡ್‌ಲೈನ್‌ಗೆ ಸಿಲುಕುವಂತಾಗಿದೆ. ಮೇ1ರೊಳಗೆ ಯುದ್ಧ ಕುರಿತು ಸಂಸತ್‌ನಿಂದ ಟ್ರಂಪ್ ಅನುಮೋದನೆ ಪಡೆಯದೇ ಹೋದರೆ ಯುದ್ಧ ಅಸಾಂವಿಧಾನಿಕ ಎನ್ನಿಸಿಕೊಳ್ಳಲಿದ್ದು, ಟ್ರಂಪ್ ತಮ್ಮ ದೇಶದಲ್ಲೇ ಕಾನೂನಿನ ಜಟಾಪಟಿಗೆ ಸಿಕ್ಕಿಕೊಳ್ಳಬೇಕಾಗಿ ಬರಲಿದೆ.
ಅಮೆರಿಕ ಕಾನೂನಿನ ಪ್ರಕಾರ, ಅಧ್ಯಕ್ಷರು ಸಂಸತ್ತಿನ ಅನುಮತಿ ಇಲ್ಲದೆ ಯುದ್ಧ ಅಥವಾ ಸೈನಿಕ ಕಾರ್ಯಾಚರಣೆಯನ್ನು ಆರಂಭಿಸಬಹುದು ಮತ್ತು ಅದನ್ನು ಕೇವಲ 60 ದಿನಗಳವರೆಗೆ ಮಾತ್ರ ಮುಂದುವರಿಸಬಹುದು. ಈ ಅವಧಿ ಮುಗಿದ ನಂತರ ಸಂಸತ್ತು ಯುದ್ಧವನ್ನು ಅನುಮೋದಿಸದಿದ್ದರೆ ಅಧ್ಯಕ್ಷರು ಯುದ್ಧವನ್ನು ಕೊನೆಗೊಳಿಸಬೇಕು. ಪ್ರಸ್ತುತ ಕಾನೂನಿನ ಅನ್ವಯ ಮೇ 1ಕ್ಕೆ ಯುದ್ಧದ ಗಡುವು ಮುಗಿಯಲಿದೆ. ಆ ಬಳಿಕ ಟ್ರಂಪ್ ಯಾವ ನಡೆ ಅನುಸರಿಸಲಿದ್ದಾರೆ ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ.
ಕಾನೂನು ಹೇಳುವುದೇನು?:
ವಿಯೆಟ್ನಾಂ ಯುದ್ಧದ ನಂತರ 1973ರಲ್ಲಿ ಸಂಸತ್ತು ‘ಯುದ್ಧಾಧಿಕಾರ ನಿಯಂತ್ರಣ ತೀರ್ಮಾನ’ ಎಂಬ ಕಾನೂನನ್ನು ಜಾರಿಗೆ ತಂದಿತು. ಇದರನ್ವಯ ಅಧ್ಯಕ್ಷರು ಸಂಸತ್ತಿನ ಅನುಮತಿ ಇಲ್ಲದೆ ಯುದ್ಧ ಆರಂಭಿಸಬಹುದು. ಆದರೆ ಅದು ಕೇವಲ 60 ದಿನಗಳವರೆಗೆ ಮಾತ್ರ ಮಾನ್ಯ. 60 ದಿನಗಳಲ್ಲಿ ಸಂಸತ್ತು ಯುದ್ಧವನ್ನು ಅನುಮೋದಿಸದಿದ್ದರೆ ಅಥವಾ ಮತ್ತೆ 30 ದಿನಗಳಿಗೆ ಅದನ್ನು ವಿಸ್ತರಿಸದಿದ್ದರೆ, ಅಧ್ಯಕ್ಷರು ಯುದ್ಧವನ್ನು ಕೊನೆಗೊಳಿಸಬೇಕು. ಜತೆಗೆ, 48 ಗಂಟೆಗಳಲ್ಲಿ ಸಂಸತ್ತಿಗೆ ವರದಿ ಸಲ್ಲಿಸಬೇಕು. ಪ್ರಸ್ತುತ ಯುದ್ಧದ ಸಂದರ್ಭದಲ್ಲಿ, ಫೆ.28ರಂದು ಇರಾನ್ ಮೇಲೆ ಅಮೆರಿಕ ಸಮರ ಆರಂಭಿಸಿತು. ಟ್ರಂಪ್ ಮಾ.2ರಂದು ಸಂಸತ್ತಿಗೆ ವರದಿ ಸಲ್ಲಿಸಿದರು. ಅಂದಿನಿಂದ ಪ್ರಾರಂಭವಾದ 60 ದಿನಗಳ ಗಡುವು ಮೇ 1ಕ್ಕೆ ಮುಗಿಯಲಿದೆ.
ಗಡುವು ಮೀರಿದರೆ ಏನಾಗುತ್ತದೆ?:
60 ದಿನಗಳ ಗಡುವು ಮುಗಿದ ನಂತರ ಅಧ್ಯಕ್ಷರು ಯುದ್ಧನ್ನು ಕೊನೆಗೊಳಿಸಬೇಕು. ಇದನ್ನು ಪಾಲಿಸದಿದ್ದರೆ ಕಾನೂನು ಉಲ್ಲಂಘನೆ ಆಗುತ್ತದೆ. ವಿಪಕ್ಷಗಳು ಮಸೂದೆ ತಂದು ಯುದ್ಧವನ್ನು ನಿಲ್ಲಿಸುವ ಪ್ರಯತ್ನ ಮಾಡಬಹುದು. ಕೋರ್ಟ್‌ಗೆ ಹೋಗಿ ಟ್ರಂಪ್ ವಿರುದ್ಧ ಮೊಕದ್ದಮೆ ಹೂಡಬಹುದು. ಆದರೆ ಈ ಕಾನೂನು ಹಿಂದೆ ಹಲವು ಬಾರಿ ಅಸಮರ್ಥವಾಗಿದೆ. ಏಕೆಂದರೆ ಅಧ್ಯಕ್ಷರು ಕಾನೂನಿನ ಲೋಪದೋಷಗಳನ್ನು ಬಳಸಿಕೊಂಡು ಬಚಾವಾಗುವ ಸಾಧ್ಯತೆಯಿದೆ. ಇತ್ತ ಟ್ರಂಪ್ ಕೂಡ ಕಾನೂನನ್ನು ಅಸಾಂವಿಧಾನಿಕ ಎಂದು ವಾದಿಸಿ ಕೋರ್ಟ್‌ಗೆ ಹೋಗಬಹುದು. ಪ್ರತ್ಯಕ್ಷ ಯುದ್ಧ ನಡೆಯುತ್ತಿಲ್ಲ ಎಂದು ವಾದಿಸಬಹುದು.
ಯುದ್ಧದ ಕುರಿತು ಅಮೆರಿಕನ್ನರಲ್ಲಿ ಅಸಮಾಧಾನವಿದೆ. ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಡೆಮಾಕ್ರಟ್‌ಗಳು ಯುದ್ಧ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಟ್ರಂಪ್‌ಗೆ ರಾಜಕೀಯ ಒತ್ತಡ ಹೆಚ್ಚುತ್ತಿದೆ. ಅಮೆರಿಕದಲ್ಲಿ ಮಧ್ಯಂತರ ಚುನಾವಣೆ ಬೇರೆ ಸಮೀಪಿಸುತ್ತಿರುವುದರಿಂದ, ಸಂಸತ್ ಸದಸ್ಯರು ತಮ್ಮ ಮತದಾರರ ಅಭಿಪ್ರಾಯಕ್ಕೆ ಸ್ಪಂದಿಸುವ ಸಾಧ್ಯತೆ ಇದೆ. ಹೀಗಾದರೆ ಟ್ರಂಪ್‌ಗೆ ಸವಾಲು ಎದುರಾಗಲಿದೆ.
ಏನ್ಮಾಡ್ತಾರೆ?!
- ಇರಾನ್ ಯುದ್ಧದ ವಿರುದ್ಧ ಸಿಡಿದಿದ್ದೆರುವ ಅಮೆರಿಕ ಆಡಳಿತ- ವಿಪಕ್ಷಗಳಿಗೆ ಅಧ್ಯಕ್ಷರ ವಿರುದ್ಧ ಪ್ರಬಲ ಅಸ್ತ್ರ
ಡೆಡ್‌ಲೈನ್ ಅಸ್ತ್ರ
1. ಅಮೆರಿಕದ ಕಾನೂನಿನ ಪ್ರಕಾರ, ಸಂಸತ್ತಿನ ಅನುಮತಿ ಇಲ್ಲದೆ ಅಧ್ಯಕ್ಷರು ಯುದ್ಧ/ಸೈನಿಕ ಕಾರ್ಯಾಚರಣೆ ಆರಂಭಿಸಬಹುದು
2. ಅದನ್ನು 60 ದಿನ ಕಾಲ ಮುಂದುವರಿಸಬಹುದು. ಆ ಅವಧಿ ಬಳಿಕ ಅಧ್ಯಕ್ಷರು ಆರಂಭಿಸಿದ ಯುದ್ಧಕ್ಕೆ ಸಂಸತ್ತಿನ ಅನುಮತಿ ಬೇಕು
3. ಸಂಸತ್ತು ಒಪ್ಪಿಕೊಳ್ಳದಿದ್ದರೆ ಅಧ್ಯಕ್ಷರು ಯುದ್ಧ ನಿಲ್ಲಿಸಬೇಕು. ಇರಾನ್ ವಿರುದ್ಧದ ಟ್ರಂಪ್ ಸಮರಕ್ಕೆ ಮೇ 1ರಂದು 60 ದಿನ ತುಂಬುತ್ತೆ
4. ಅಮೆರಿಕದಲ್ಲಿ ಇರಾನ್ ಮೇಲಿನ ಯುದ್ಧಕ್ಕೆ ವಿರೋಧವಿದೆ. ಸಂಸತ್ತಿನ ಒಪ್ಪಿಗೆ ಕಷ್ಟ. ಹೀಗಾಗಿ ಟ್ರಂಪ್ ಏನು ಮಾಡುತ್ತಾರೆ? ಕುತೂಹಲ

