ಶಾಸಕರ ಬಗ್ಗೆ ಸಚಿವರು ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ. ನಮ್ಮ ಮನವಿ, ಅಹವಾಲುಗಳನ್ನು ಸಚಿವರು ಪರಿಗಣಿಸುತ್ತಿಲ್ಲ ಎಂದು ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ವಿವಿಧ ಶಾಸಕರು ಮುಖ್ಯಮಂತ್ರಿಯವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ವಿಧಾನಸಭೆ ಅರ್ಜಿ ಸಮಿತಿ ಹಾಗೂ ವಸತಿ ಸೌಕರ್ಯಗಳ ಸಮಿತಿ ಅಧ್ಯಕ್ಷರೂ ಆಗಿರುವ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ಶಾಸಕರು ಉತ್ತರಪ್ರದೇಶದ ಅಧ್ಯಯನ ಪ್ರವಾಸದ ವೇಳೆ ಕುಂಭಮೇಳ ನಡೆಯುವ ಪ್ರಯಾಗ್‌ರಾಜ್ ಸೇರಿ ಕಾಶಿ ಮತ್ತಿತರ ಕಡೆ ಭೇಟಿ ಮಾಡಲು ಹೊರಟಿರುವುದು ವಿವಾದಕ್ಕೆ ಕಾರಣವಾಗಿದೆ.