ಸಾರಾಂಶ
ಬೆಂಗಳೂರು : ಬೀದಿ ನಾಯಿಗಳನ್ನು ಗುರುತಿಸುವ, ಸಂತಾನಹರಣ ಚಿಕಿತ್ಸೆ, ಆ್ಯಂಟಿ ರೇಬಿಸ್ ಲಸಿಕೆ ನೀಡಿರುವುದು ಸೇರಿ ವಿವಿಧ ಮಾಹಿತಿಗಳಿರುವ ಮೈಕ್ರೋ ಚಿಪ್‌ಗಳನ್ನು ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಅಳವಡಿಸುವ ಕಾರ್ಯವನ್ನು ಬಿಬಿಎಂಪಿ ಆರಂಭಿಸಿದೆ.
ನಗರದ ಮಲ್ಲೇಶ್ವರ ಹಾಗೂ ಮತ್ತಿಕೆರೆಯ ಪ್ರದೇಶದಲ್ಲಿನ ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಕೆ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿದೆ.
ಬಿಬಿಎಂಪಿ ಪಶುಪಾಲನೆ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಚಾಲನೆ ನೀಡಿದರು. ಖಾಸಗಿ ಸಂಸ್ಥೆಯ ಸಹಭಾಗಿತ್ವದೊಂದಿಗೆ ಬಿಬಿಎಂಪಿ ಮೈಕ್ರೋ ಚಿಪ್ ಅಳವಡಿಕೆ ಮಾಡಲಾಗುತ್ತಿದ್ದು, ಮೈಕ್ರೋ ಚಿಪ್ ಅಳವಡಿಕೆಯಿಂದ ಉತ್ತಮ ಫಲಿತಾಂಶ ಬಂದರೆ ನಗರದ ಎಲ್ಲ ಪ್ರದೇಶದ ಬೀದಿ ನಾಯಿಗಳಿಗೆ ಅಳವಡಿಸಲು ಪಾಲಿಕೆ ನಿರ್ಧರಿಸಿದೆ.
ಮೈಕ್ರೋ ಚಿಪ್‌ಗಳನ್ನು ಈಗಾಗಲೇ ಗೋವಾ, ರಾಜಕೋಟ್, ಅಹಮದಾಬಾದ್ ಸೇರಿದಂತೆ ದೇಶದ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಬೀದಿ ನಾಯಿಗಳಿಗೆ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಾಯಿಯ ಚರ್ಮದಲ್ಲಿ ಅಳವಡಿಕೆ:
ಮೈಕ್ರೋ ಚಿಪ್ ಒಂದು ಅಕ್ಕಿಕಾಳು ಗಾತ್ರದ ಸಾಧನವಾಗಿದೆ. ಇದು ಬೀದಿ ನಾಯಿಯನ್ನು ಶಾಶ್ವತವಾಗಿ ಗುರುತಿಸುವ ವಿಧಾನವಾಗಿದೆ. ಇದನ್ನು ನಾಯಿಯ ಭುಜದ ಭಾಗದ ಚರ್ಮದ ಒಳಗೆ ಇಂಜೆಕ್ಷನ್ ಮೂಲಕ ಇರಿಸಲಾಗುವುದು. ಇದರಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಈ ಚಿಪ್ ಅನ್ನು ಎಲ್ಲ ವಯಸ್ಸಿನ ನಾಯಿಗಳಿಗೆ ಅಳವಡಿಸಬಹುದಾಗಿದೆ.
ಮೈಕ್ರೋ ಚಿಪ್‌ನಲ್ಲಿ ಹಲವು ಮಾಹಿತಿ
ಚಿಪ್‌ನಲ್ಲಿ ಸಂತಾನಹರಣ ಚಿಕಿತ್ಸೆ, ಆ್ಯಂಟಿ ರೇಬಿಸ್ ಲಸಿಕೆ ನೀಡಿದ ವಿವರ ಸೇರಿದಂತೆ ನಾಯಿ ಗಂಡು ಅಥವಾ ಹೆಣ್ಣು, ನಾಯಿಯ ವಯಸ್ಸು, ನಾಯಿಯ ಫೋಟೋ ಸೇರಿದಂತೆ ಮೊದಲಾದ ಮಾಹಿತಿಯನ್ನು ದಾಖಲು ಮಾಡಲಾಗುತ್ತದೆ. ನಾಯಿಯನ್ನು ಹಿಡಿದು ಮೈಕ್ರೋ ಚಿಪ್ ಅನ್ನು ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿದರೆ, ಎಲ್ಲ ಮಾಹಿತಿ ಮೊಬೈಲ್‌ಗೆ ಲಭ್ಯವಾಗಲಿದೆ. ಈ ಮಾಹಿತಿ ಪರಿಷ್ಕರಣೆ, ಬದಲಾವಣೆ, ಹೆಚ್ಚಿನ ಮಾಹಿತಿ ದಾಖಲು ಮಾಡುವುದಕ್ಕೆ ಅವಕಾಶ ಇರಲಿದೆ.
ಉಪಯೋಗವೇನು?:
ಪ್ರಸ್ತುತ ಲಸಿಕೆ ಹಾಕಿದ ಬೀದಿನಾಯಿಗಳಿಗೆ ಬಣ್ಣ ಹಚ್ಚಿ ಗುರುತಿಸಲಾಗುತ್ತಿದ್ದು, ಒಂದು ವಾರ ಮಾತ್ರ ಬಣ್ಣದ ಗುರುತು ಪತ್ತೆ ಮಾಡಬಹುದಾಗಿದೆ. ನಂತರ ಬಣ್ಣ ಮಾಸಿ ಹೋಗಲಿದೆ. ಇದರಿಂದ ಯಾವ ಬೀದಿನಾಯಿಗಳಿಗೆ ಲಸಿಕೆ, ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಪತ್ತೆ ಮಾಡುವುದು ಕಷ್ಟವಾಗಿದೆ. ಇದರಿಂದ ಪದೇ ಪದೇ ಲಸಿಕೆ ಹಾಕುವ ಸಾಧ್ಯತೆಯಿರುತ್ತದೆ. ಈ ರೀತಿ ಪದೇ ಪದೇ ಲಸಿಕೆ ನೀಡುವುದು, ಶಸ್ತ್ರ ಚಿಕಿತ್ಸೆಗೆ ಒಳಪಡಿಸುವ ವೆಚ್ಚವನ್ನು ಕಡಿಮೆಯಾಗಲಿದೆ. ಸಂತಾನಹರಣ ಶಸ್ತ್ರ ಚಿಕಿತ್ಸೆಯಲ್ಲಿ ಪಾರದರ್ಶಕತೆ ಹೆಚ್ಚಾಗಲಿದೆ.
ನಮ್ಮಲ್ಲೆ ಮೊದಲು
ಒಂದು ವರ್ಷದ ಹಿಂದೆ ಸುದ್ದಿ ಪ್ರಕಟ
ಬಿಬಿಎಂಪಿಯಿಂದ ನಗರದ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡುವ ಕುರಿತು ‘ಕನ್ನಡಪ್ರಭ’ ಕಳೆದ 2023ರ ಜುಲೈ 29 ರಂದು ಪ್ರಕಟಿಸಿತ್ತು.