ವಿದೇಶದಿಂದ ಟ್ರಾಲಿ ಬ್ಯಾಗ್‌ನಲ್ಲಿ ತಂದಿದ್ದ ಆಮೆ, ಮೊಸಳೆ ಮರಿ, ಹಲ್ಲಿಗಳ ಸಂರಕ್ಷಣೆ

| Published : Nov 17 2024, 01:15 AM IST / Updated: Nov 17 2024, 05:00 AM IST

ಸಾರಾಂಶ

ವಿದೇಶದಿಂದ ವನ್ಯಜೀವಿಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪದಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(ಕೆಐಎ) ಕಸ್ಟಮ್ಸ್‌ ಅಧಿಕಾರಿಗಳು ಇಬ್ಬರು ಪ್ರಯಾಣಿಕರನ್ನು ಬಂಧಿಸಿ, ಕಳ್ಳ ಸಾಗಣೆ ಮಾಡಿದ್ದ 40 ಜೀವಂತ ವನ್ಯಜೀವಿಗಳನ್ನು ಸಂರಕ್ಷಿಸಿದ್ದಾರೆ.

 ಬೆಂಗಳೂರು : ವಿದೇಶದಿಂದ ವನ್ಯಜೀವಿಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪದಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(ಕೆಐಎ) ಕಸ್ಟಮ್ಸ್‌ ಅಧಿಕಾರಿಗಳು ಇಬ್ಬರು ಪ್ರಯಾಣಿಕರನ್ನು ಬಂಧಿಸಿ, ಕಳ್ಳ ಸಾಗಣೆ ಮಾಡಿದ್ದ 40 ಜೀವಂತ ವನ್ಯಜೀವಿಗಳನ್ನು ಸಂರಕ್ಷಿಸಿದ್ದಾರೆ.

ಆರೋಪಿಗಳಿಂದ ಜಪ್ತಿ ಮಾಡಲಾದ ಎರಡು ಟ್ರಾಲಿ ಬ್ಯಾಗ್‌ಗಳ ಪೈಕಿ ಒಂದರಲ್ಲಿ 24 ವನ್ಯಜೀವಿಗಳು ಮತ್ತೊಂದರಲ್ಲಿ 16 ಸೇರಿ ಒಟ್ಟು 40 ವನ್ಯ ಜೀವಿಗಳು ಪತ್ತೆಯಾಗಿವೆ. ಇದರಲ್ಲಿ ಕೆಂಪು ಕಾಲಿನ ಆಮೆಗಳು, ದೈತ್ಯ ಆಮೆಗಳು, ಮಣಿ ಹಲ್ಲಿಗಳು, ಆಲ್ಬಿನೋ ಬಾವಲಿಗಳು, ಅಮೇರಿಕನ್‌ ಮೊಸಳೆ ಮರಿಗಳು ಸೇರಿದಂತೆ ವಿವಿಧ ವನ್ಯ ಜೀವಿಗಳು ಸೇರಿವೆ.

ಕಳೆದ ಸೋಮವಾರ ರಾತ್ರಿ 11 ಗಂಟೆಗೆ ಕೌಲಾಲಂಪುರದಿಂದ ವಿಮಾನದಲ್ಲಿ (ಸಂಖ್ಯೆ ಎಂಎಚ್‌0192) ಕೆಐಎ ವಿಮಾನ ನಿಲ್ದಾಣದ ಟರ್ಮಿನಲ್‌-2ಕ್ಕೆ ಬಂದ ಪ್ರಯಾಣಿಕರನ್ನು ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಈ ವೇಳೆ ಇಬ್ಬರು ಪ್ರಯಾಣಿಕರ ಟ್ರಾಲಿ ಬ್ಯಾಗ್‌ನಲ್ಲಿ ಶಬ್ಧವಾಗಿದೆ. ಕೂಡಲೇ ಆ ಬ್ಯಾಗ್‌ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಜೀವಂತ ವಿವಿಧ ವನ್ಯಜೀವಿಗಳು ಇರುವುದು ಕಂಡು ಬಂದಿದೆ. ತಕ್ಷಣ ಇಬ್ಬರು ಪ್ರಯಾಣಿಕರನ್ನು ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ.

ಇಬ್ಬರು ಆರೋಪಿಗಳ ವಿರುದ್ಧ ಕಸ್ಟಮ್ಸ್‌ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯವು ಇಬ್ಬರು ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ತನಿಖೆ ಮುಂದುವರೆದಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.