ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಎಲೆಕ್ಟ್ರಿಕಲ್ ಸ್ಕೂಟರ್‌ನ ಬ್ಯಾಟರಿ ಸಿಡಿದು ಶಾಮಿಯಾನ ಅಂಗಡಿಯಲ್ಲಿದ್ದ ಬಹುತೇಕ ವಸ್ತುಗಳು ಸುಟ್ಟು ಭಸ್ಮಗೊಂಡಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.ಪಟ್ಟಣದ ಅನಿತಾ ಕಾನ್ವೆಂಟ್ ರಸ್ತೆಯ ವರುಣ್ ಶಾಮಿಯಾನ ಸೆಂಟರ್‌ನಲ್ಲಿ ಮುಂಜಾನೆ 5 ಗಂಟೆ ಸಮಯದಲ್ಲಿ ಅಂಗಡಿ ಒಳಗೆ ನಿಲ್ಲಿಸಿದ್ದ ಎಲೆಕ್ಟ್ರಿಕಲ್ ಸ್ಕೂಟರ್‌ನಲ್ಲಿ ಹತ್ತಿಕೊಂಡ ಬೆಂಕಿ ಇಡೀ ಅಂಗಡಿಗೆ ವ್ಯಾಪಿಸಿದೆ ಎನ್ನಲಾಗಿದೆ.
ಸ್ಕೂಟರ್ ಸಂಪೂರ್ಣ ಸುಟ್ಟು ಕರಕಲಾಗುವುದರ ಜೊತೆಗೆ ಅಂಗಡಿಯಲ್ಲಿದ್ದ ಶಾಮಿಯಾನ, ಪ್ಲಾಸ್ಟಿಕ್ ಕುರ್ಚಿಗಳು ಸ್ಟವ್ ಗಳು ಸೇರಿದಂತೆ ಬೆಲೆ ಬಾಳುವ ಸಾಮಾನುಗಳು ಬೆಂಕಿಗೆ ಆಹುತಿಯಾಗಿದೆ. ಘಟನೆಯಿಂದ ಸುಮಾರು 4 ರಿಂದ 5 ಲಕ್ಷ ರು.ನಷ್ಟ ಉಂಟಾಗಿದೆ ಎಂದು ಶಾಮಿಯಾನ ಸೆಂಟರ್ ನ ಮಾಲೀಕ ಉಮೇಶ್ ಮಾಹಿತಿ ನೀಡಿದ್ದಾರೆ.ನೇಣು ಬಿಗಿದು ಅಪರಿಚಿತ ವ್ಯಕ್ತಿ ಸಾವು
ನಾಗಮಂಗಲ:ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ತಾಲೂಕಿನ ಬೆಳ್ಳೂರು ಹೋಬಳಿಯ ನಾಗಲಾಪುರ ಗ್ರಾಮದಲ್ಲಿ ನಡೆದಿದೆ.ಬಿಳಿ ಮಾಸಲು ಬಣ್ಣದ ತುಂಬು ತೋಳಿನ ಶರ್ಟ್, ಬಿಳಿ ಬಣ್ಣದ ಬನಿಯನ್, ಬಿಳಿ ಬಣ್ಣದ ಲಾಡಿ ನಿಕ್ಕರ್ ಮತ್ತು ಪಂಚೆ ಧರಿಸಿರುವ ಸುಮಾರು 70 ವರ್ಷದ ವಯೋವೃದ್ಧನ ಹೆಸರು ಹಾಗೂ ವಿಳಾಸ ಪತ್ತೆಯಾಗಿಲ್ಲ. ಕಣ್ಣಿಗೆ ಧರಿಸಿದ್ದ ಕನ್ನಡಕ ಮತ್ತು ವಾಕಿಂಗ್ ಸ್ಟಿಕ್ ಕೂಡ ಸ್ಥಳದಲ್ಲಿ ದೊರೆತಿದೆ.ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಈ ವಯೋವೃದ್ಧ ಎಲ್ಲಿಂದಲೋ ಬಂದು ಹುಣಸೆ ಮರದ ಕೊಂಬೆಗೆ ಪ್ಲಾಸ್ಟಿಕ್ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.ಜಮೀನಿನ ಮಾಲೀಕ ನಾಗಲಾಪುರ ಗ್ರಾಮದ ಕುಮಾರಸ್ವಾಮಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕಾಗಮಿಸಿದ ಬೆಳ್ಳೂರು ಠಾಣೆ ಪೊಲೀಸರು, ಮೃತದೇಹವನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆ ಶವಾಗಾರದಲ್ಲಿರಿಸಿದ್ದು, ವಾರಸುದಾರರಿದ್ದಲ್ಲಿ ಮೊ.9480804853, ಮೊ-8197962388ಗೆ ಸಂಪರ್ಕಿಸುವಂತೆ ಕೋರಿದ್ದಾರೆ.