ರಾಜಧಾನಿಯಲ್ಲಿ ಮಳೆ ಅಬ್ಬರ: ಯೋಧರಾದ ಸಂಚಾರಿ ಪೊಲೀಸರು

| Published : May 21 2025, 02:13 AM IST

ಸಾರಾಂಶ

ಕಳೆದ ಮೂರು ದಿನಗಳಿಂದ ವರುಣನ ಅಬ್ಬರದಿಂದ ರಾಜಧಾನಿಯಲ್ಲಿ ಸೃಷ್ಟಿಯಾಗಿರುವ ಜಲ ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿದ ನಾಗರಿಕರ ನೆರವಿಗೆ ‘ಜಲ ಯೋಧ’ರಂತೆ ಸಂಚಾರ ವಿಭಾಗದ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ಮೂರು ದಿನಗಳಿಂದ ವರುಣನ ಅಬ್ಬರದಿಂದ ರಾಜಧಾನಿಯಲ್ಲಿ ಸೃಷ್ಟಿಯಾಗಿರುವ ಜಲ ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿದ ನಾಗರಿಕರ ನೆರವಿಗೆ ‘ಜಲ ಯೋಧ’ರಂತೆ ಸಂಚಾರ ವಿಭಾಗದ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ.

ಮೂಲ ಸೌಲಭ್ಯಗಳ ಉಸ್ತುವಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಜಲಮಂಡಳಿ ಹೊಣೆಗಾರಿಕೆ ಇದೆ. ಆದರೆ ಮಳೆ ಸಂಕಷ್ಟದಲ್ಲಿ ಜನರ ಸುರಕ್ಷೆಗೆ ಸಮರೋಪಾದಿಯಲ್ಲಿ ಪೊಲೀಸರು ಕೆಲಸಕ್ಕಿಳಿದಿದ್ದಾರೆ.

ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರ ನೋಡಿಕೊಳ್ಳಬೇಕಾದ ಪೊಲೀಸರು, ಈಗ ಮಳೆಯಲ್ಲಿ ಧರೆಗುರಳಿದ ಮರಗಳು ಹಾಗೂ ರಸ್ತೆಯಲ್ಲಿ ನಿರ್ಮಾಣವಾಗಿರುವ ‘ಕಿರು ಕೆರೆ’ಗಳಲ್ಲಿ ನೀರಿನ ತೆರವಿಗೆ ಪ್ರಯಾಸಪಡಬೇಕಾಗಿದೆ. ರಸ್ತೆಯಲ್ಲಿ ಜನರ ಸುರಕ್ಷತೆ ಮಾತ್ರವಲ್ಲದೆ, ವಾಹನಗಳಿಗೂ ತೊಂದರೆಯಾಗದಂತೆ ಪೊಲೀಸರು ಜಾಗೃತೆವಹಿಸಿದ್ದಾರೆ. ಇನ್ನು ಸುರಿಯುವ ಮಳೆಯಲ್ಲಿ ಜನರೆಲ್ಲ ರಕ್ಷಣೆಗೆ ಸುರು ಹುಡುಕಿದರೆ, ಅತ್ತ ಪೊಲೀಸರು ಹನಿಗಳಿಂದ ಜನರ ರಕ್ಷಣೆಗೆ ರಸ್ತೆಗಿಳಿಯುತ್ತಾರೆ.

ಪ್ರತಿ ಮಳೆಗಾಲ ಸ್ವಾಗತಕ್ಕೆ ಸಂಚಾರ ವಿಭಾಗದ ಪೊಲೀಸರು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಾರೆ. ತಮ್ಮ ಠಾಣಾ ಸರಹದ್ದಿನಲ್ಲಿ ಯಾವ್ಯಾವ ರಸ್ತೆಯಲ್ಲಿ ನೀರು ನಿಲ್ಲುತ್ತದೆ ಎಂದು ಗುರುತಿಸಿ ಬಿಬಿಎಂಪಿಗೆ ಮಾಹಿತಿ ನೀಡುತ್ತಾರೆ. ಅಲ್ಲದೆ ಆ ರಸ್ತೆಗಳಲ್ಲಿ ಮಳೆ ನೀರಿನಿಂದ ಸಮಸ್ಯೆ ಉಂಟಾಗದಂತೆ ತಾವೂ ಮುಂಜಾಗ್ರತೆ ವಹಿಸುತ್ತಾರೆ. ಇನ್ನು ಗಾಳಿ-ಮಳೆಗೆ ಧರಾಶಾಯಿ ಆಗುವಂತಹ ಮರಗಳನ್ನು ಸಹ ಗುರುತಿಸಿ ಅವುಗಳ ತೆರವಿಗೆ ಕೂಡ ಪೊಲೀಸರು ನಿಗಾವಹಿಸುತ್ತಾರೆ.

ಕ್ಷಣ ಕ್ಷಣ ಮಾಹಿತಿ:

ಮಳೆ ಪರಿಣಾಮದ ಕುರಿತು ಹವಾಮಾನ ಇಲಾಖೆ ಅಥವಾ ಬಿಬಿಎಂಪಿಗಿಂತ ಕ್ಷಿಪ್ರಗತಿಯಲ್ಲಿ ಜನರಿಗೆ ಮಾಹಿತಿ ನೀಡುವ ಕೆಲಸವನ್ನು ಸಂಚಾರ ಪೊಲೀಸ್ ವಿಭಾಗ ಪರಿಣಾಮಕಾರಿ ನಡೆಸುತ್ತಿದೆ. ಮಳೆ ಶುರುವಾದ ಕೂಡಲೇ ತಮ್ಮ ವ್ಯಾಪ್ತಿಯಲ್ಲಿ ಯಾವ್ಯಾವ ರಸ್ತೆಯಲ್ಲಿ ನೀರು ನಿಲುಗಡೆಯಾಗಿ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸಾರ್ವಜನಿಕರಿಗೆ 24*7 ಸುದ್ದಿವಾಹಿನಿಗಳಂತೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡುತ್ತಾರೆ. ಈ ಮಾಹಿತಿ ಜತೆ ವಿಡಿಯೋ ಹಾಗೂ ಪೋಟೋ ಸಮೇತ ಸುದ್ದಿ ನೀಡುವುದು ಜನರಿಗೆ ಮಳೆ ಸಮಸ್ಯೆ ವಾಸ್ತವತೆ ಸಿಗುತ್ತದೆ.

ಟ್ವಿಟರ್‌, ಫೇಸ್ ಬುಕ್‌, ಇನ್‌ಸ್ಟಾಗ್ರಾಂ ಹಾಗೂ ವಾಟ್ಸಾಪ್‌ ಚಾನೆಲ್ ಮೂಲಕ ಪೊಲೀಸರು ವಿದ್ಯಮಾನ ತಲುಪಿಸುತ್ತಾರೆ. ಕೆಳಕಂಡ ಸ್ಥಳಗಳಲ್ಲಿ ಮಳೆ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರ ವಿರುತ್ತದೆ ಎಂದು ಹೇಳಿ ಆಯಾ ರಸ್ತೆಗಳ ವಿವರ ನೀಡುತ್ತಿದ್ದಾರೆ. ಮಂಗಳವಾರ ಮಳೆಯಲ್ಲಿ ಕುವೆಂಪುವೃತ್ತದ ಕಡೆಯಿಂದ ಹೆಬ್ಬಾಳ ವೃತ್ತ ಕಡೆಗೆ, ದೇವಿನಗರ ಕ್ರಾಸ್ ಕಡೆಯಿಂದ ಕುವೆಂಪು ವೃತ್ತದ ಕಡೆಗೆ, ದೊಮ್ಮಲೂರು ಅರಳಿಕಟ್ಟೆ ಕಡೆ-ಗನ್ ಟ್ರೂಪ್ ಕ್ವಾರ್ಟರ್ಸ್ ಕಡೆಗೆ, ಕೆ.ಆರ್.ಪುರ ರಸ್ತೆಯಿಂದ ಹೊಸಕೋಟೆ ರಸ್ತೆ ಹೀಗೆ ಸಾಗುವ ಮಾರ್ಗದಲ್ಲಿ ಮಳೆ ತೊಂದರೆ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಾರೆ.

ಇವಿ ಬಸ್‌ಗಳದ್ದೇ ತೊಂದರೆ

ಸರ್ಕಾರಿ ಹಾಗೂ ಖಾಸಗಿಯ ವಿದ್ಯುತ್ ಚಾಲಿತ ಬಸ್‌ಗಳದ್ದೇ ಮಳೆಯಲ್ಲಿ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ ಎಂದು ತಿಳಿದು ಬಂದಿದೆ. ಇವಿ ಬಸ್‌ಗಳಲ್ಲಿ ಬ್ಯಾಟರಿಗಳು ಕೆಳಭಾಗದಲ್ಲಿ ಅಳವಡಿಸಿರುತ್ತಾರೆ. ಇದರಿಂದ ಮಳೆ ಬಿದ್ದಾಗ ರಸ್ತೆ ನಿಂತ ನೀರಿನಲ್ಲಿ ಆ ಬಸ್‌ಗಳು ಸಾಗುವಾಗ ಬ್ಯಾಟರಿಗೆ ನೀರು ನುಗ್ಗಿದ್ದರೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಳ್ಳುತ್ತದೆ. ಕಿಡಿ ಹೊತ್ತಿದ ಕೂಡಲೇ ಚಕ್ರಗಳು ಲಾಕ್ ಆಗುತ್ತವೆ. ಇದರಿಂದ ರಸ್ತೆಯಲ್ಲೇ ಬಸ್ ಮುಂದೆ ಸಂಚರಿಸಲಾಗದೆ ನಿಲ್ಲುತ್ತದೆ. ಬೆಂಕಿ ನಂದಿಸಿ ರಸ್ತೆಯಿಂದ ಬಸ್ ತೆರವುಗೊಳಿಸಲು ಮಳೆಯಲ್ಲಿ ಸಂಕಷ್ಟ ಪಡಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಅಲ್ಲದೆ ಇವಿ ಬಸ್‌ಗಳನ್ನು ತೆರವುಗೊಳಿಸುವ ಯಂತ್ರಗಳು ಸಹ ಎಲ್ಲ ಠಾಣೆಯಲ್ಲಿ ಲಭ್ಯವಿರುವುದಿಲ್ಲ. ಹೀಗಾಗಿ ಈ ಸಂಬಂಧ ಬಿಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಗೆ ಪತ್ರ ಬರೆದು ಮುಂಜಾಗ್ರತೆ ವಹಿಸುವಂತೆ ಸೂಚಿಸಿದ್ದೇವೆ ಎಂದರು.

ಮರ ಕತ್ತರಿಸಲು ತರಬೇತಿ:

ರಸ್ತೆಯಲ್ಲಿ ಉರುಳಿ ಬೀಳುವ ಮರ ತೆರವುಗೊಳಿಸುವ ಕಾರಣಕ್ಕೆ ಪ್ರತಿ ಠಾಣೆಗೆ ಮರ ಕತ್ತರಿಸುವ ಯಂತ್ರಗಳನ್ನು ಒದಗಿಸಲಾಗಿದೆ. ಆದರೆ ಆ ಯಂತ್ರ ಬಳಸಲು ಪೊಲೀಸರಿಗೆ ತಿಳಿವಳಿಕೆ ಕಡಿಮೆ ಇದೆ. ಹೀಗಾಗಿ ಮರ ಕತ್ತರಿಸುವ ಬಗ್ಗೆ ತರಬೇತಿ ನೀಡುವಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈನ್ ಕೋಟ್, ಬೂಟ್ಸ್ ವಿತರಣೆ

ಮಳೆಯಲ್ಲಿ ಪೊಲೀಸರ ಸುರಕ್ಷತೆ ಬಗ್ಗೆ ಸಹ ಇಲಾಖೆ ಕಾಳಜಿ ವಹಿಸಿದೆ. ಇದಕ್ಕಾಗಿ ಸಿಬ್ಬಂದಿಗೆ ರೈನ್ ಕೋಟ್ ಹಾಗೂ ಬೂಟ್ಸ್ ಅನ್ನು ಇಲಾಖೆ ವಿತರಿಸಿದೆ.