ತನ್ನ ತಂದೆಯ ಕೊಂದಿದ್ದ ಮಾವನ ಹತ್ಯೆ!

| N/A | Published : May 06 2025, 01:49 AM IST / Updated: May 06 2025, 04:43 AM IST

ಸಾರಾಂಶ

15 ವರ್ಷಗಳ ಹಿಂದೆ ತನ್ನ ತಂದೆಯನ್ನು ಕೊಂದು ಜೈಲಿನಿಂದ ಬಂದಿದ್ದ ಸೋದರ ಮಾವವನ್ನು ಅಳಿಯ ಕೊಲೆ ಮಾಡಿದ್ದಾನೆ.

 ಬೆಂಗಳೂರು : ತನ್ನ ತಂದೆಯ ಕೊಲೆಗೆ ಪ್ರತಿಕಾರವಾಗಿ ಪುತ್ರ ತನ್ನ ಸಹಚರರೊಂದಿಗೆ ಸೇರಿ ಸೋದರ ಮಾವನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಡಿ.ಜೆ.ಹಳ್ಳಿ ನಿವಾಸಿ ಸೈಯದ್‌ ಸಿರಾಜುದ್ದೀನ್‌(32) ಕೊಲೆಯಾದವರು. ಭಾನುವಾರ ರಾತ್ರಿ ಸುಮಾರು 7.30ಕ್ಕೆ ಟಿನ್‌ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ. ಈ ಸಂಬಂಧ ಕೊಲೆಯಾದ ಸಿರಾಜುದ್ದೀನ್‌ನ ಅಕ್ಕನ ಮಗನಾದ ಹಲಸೂರಿನ ಆರೋಪಿ ಫಹಾದ್‌(24), ಆತನ ಸಹಚರರಾದ ಶರೀಪುದ್ದೀನ್‌, ಮೊಹಮ್ಮದ್‌ ತೌಹಿದ್‌ ಹಾಗೂ ಇರ್ಷಾದ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:

ಕೊಲೆಯಾದ ಸೈಯದ್‌ ಸಿರಾಜುದ್ದೀನ್‌ ಮತ್ತು ಪ್ರಮುಖ ಆರೋಪಿ ಫಹಾದ್‌ನ ತಾಯಿಯ ಸಹೋದರ. 2010ನೇ ಸಾಲಿನಲ್ಲಿ ಕೌಟುಂಬಿಕ ವಿಚಾರಕ್ಕೆ ಸಿರಾಜುದ್ದೀನ್‌ ತನ್ನ ಅಕ್ಕನ ಪತಿ ಅನ್ವರ್‌ ಪಾಷಾನನ್ನು ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಪೊಲೀಸರು ಸಿರಾಜುದ್ದೀನ್‌ನನ್ನು ಬಂಧಿಸಿ ಜೈಲಿಗಟ್ಟಿದ್ದರು. ಸುಮಾರು 10 ವರ್ಷ ಜೈಲು ಶಿಕ್ಷೆ ಅನುಭವಿಸಿ ಮೂರು ವರ್ಷಗಳ ಹಿಂದೆ ಸಿರಾಜುದ್ದೀನ್‌ ಜೈಲಿನಿಂದ ಬಿಡುಗಡೆಯಾಗಿದ್ದ. ಬಳಿಕ ಟಿನ್‌ ಫ್ಯಾಕ್ಟರಿ ಬಳಿಯ ದರ್ಗಾಮೊಹಲ್ಲಾದ ರಸ್ತೆ ಬದಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದ.

15 ವರ್ಷದ ಬಳಿಕ ಪ್ರತಿಕಾರ

ತಂದೆಯ ಕೊಲೆ ಸಮಯದಲ್ಲಿ ಆರೋಪಿ ಫಹಾದ್‌ 9 ವರ್ಷದ ಬಾಲಕನಾಗಿದ್ದ. ತನ್ನ ಕಣ್ಣೆದುರೇ ತಂದೆಯನ್ನು ಕೊಲೆ ಮಾಡಿದ್ದ ಸಿರಾಜುದ್ದೀನ್‌ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ. ಅದರಂತೆ ಭಾನುವಾರ ರಾತ್ರಿ ಟಿನ್‌ಫ್ಯಾಕ್ಟರಿ ಬಳಿ ಸಿರಾಜುದ್ದೀನ್‌ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಫಹಾದ್‌, ತನ್ನ ಸಹಚರರೊಂದಿಗೆ ಬಂದು ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಿರಾಜುದ್ದೀನ್‌ನನ್ನು ಸ್ಥಳೀಯರ ನೆರವಿನಿಂದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ತಡರಾತ್ರಿ ಸಿರಾಜುದ್ದೀನ್‌ ಮೃತಪಟ್ಟಿದ್ದಾನೆ.

ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿದ ರಾಮಮಮೂರ್ತಿನಗರ ಠಾಣೆ ಪೊಲೀಸರು ಕ್ಷಿಪ್ತ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಫಹಾದ್‌ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.